ಮಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮತ್ತು ಕುಟುಂಬ ಸದಸ್ಯರು ಖಾಸಗಿ ಹೆಲಿಕಾಪ್ಟರ್‌ನಲ್ಲಿ ಧರ್ಮಸ್ಥಳಕ್ಕೆ ಬಂದಿಳಿದ ವೇಳೆ ಚುನಾವಣ ಅಧಿಕಾರಿಗಳು ಹೆಲಿಕಾಪ್ಟರ್ ತಪಾಸಣೆ ನಡೆಸಿದ್ದು ಈ ವೇಳೆ ಮಾತಿನ ಚಕಮಕಿ ನಡೆದಿದ್ದು, ರಾಜಕೀಯ ಆರೋಪ ಪ್ರತ್ಯಾರೋಪಕ್ಕೆ ಕಾರಣವಾಗಿದೆ.
ಶನಿವಾರ ಮತ್ತು ಭಾನುವಾರ ಡಿಕೆ ಶಿವಕುಮಾರ್ ಮತ್ತು ಕುಟುಂಬ ಸದಸ್ಯರು ದಕ್ಷಿಣ ಕನ್ನಡ ಮತ್ತು ಉಡುಪಿ ಜೆಲ್ಲೆಯ ವಿವಿಧ ದೇವಸ್ಥಾನಗಳಿಗೆ ಭೇಟಿ ನೀಡುತ್ತಿದ್ದಾರೆ.
ಮಂಜುನಾಥ ಸ್ವಾಮಿಯ ದರ್ಶನಕ್ಕೆ ಶಿವಕುಮಾರ್ ಅವರು ಪತ್ನಿ ಉಷಾ,ಪುತ್ರಿ,ಅಳಿಯ ಮತ್ತು ಪುತ್ರನೊಂದಿಗೆ ಖಾಸಗಿ ಹೆಲಿಕಾಪ್ಟರ್‌ನಲ್ಲಿ ಬಂದಿಳಿದಿದ್ದರು. ಈ ವೇಳೆ ಹೆಲಿಪ್ಯಾಡಿನಲ್ಲಿ ಲ್ಯಾಂಡ್ ಆಗುತ್ತಿದ್ದಂತೆ ಚುನಾವಣ ಅಧಿಕಾರಿಗಳು ತಪಾಸಣೆಗೆ ಮುಂದಾಗಿದ್ದಾರೆ. ಅವರು ಪ್ರಯಾಣಿಸಬೇಕಾಗಿದ್ದ ಕಾರನ್ನೂ ಕೂಡ ಪರಿಶೀಲನೆ ನಡೆಸಿದ್ದಾರೆ. ಚುನಾವಣ ಅಧಿಕಾರಿ ಮತ್ತು ಪೈಲೆಟ್ ನಡುವೆ ಮಾತಿನ ಚಕಮಕಿ ನಡೆದಿದೆ.
ಘಟನೆಯ ಬಳಿಕ ಕಾಂಗ್ರೆಸ್ ಬಿಜೆಪಿಯ ವಿರುದ್ಧ ಆಕ್ರೋಶ ಹೊರ ಹಾಕಿದ್ದು, ಕರ್ನಾಟಕ ಸಿಎಂ ಬಸವರಾಜ ಬೊಮ್ಮಾಯಿ ಅವರು ಕಾಂಗ್ರೆಸ್ ಅಭ್ಯರ್ಥಿಗಳನ್ನು ಅನರ್ಹಗೊಳಿಸಲು ಸಿಎಂ ಕಚೇರಿ ಚುನಾವಣಾಧಿಕಾರಿಗಳನ್ನು ಕರೆಸುತ್ತಿದೆ ಎಂದು ಡಿ.ಕೆ.ಶಿವಕುಮಾರ್ ಅವರು ಆರೋಪ ಮಾಡಿದ್ದಾರೆ.
“ಚುನಾವಣ ಆಯೋಗವು ಸಾಂವಿಧಾನಿಕವಾಗಿ ರೂಪುಗೊಂಡ ಸ್ವತಂತ್ರ ಸಂಸ್ಥೆಯಾಗಿದೆ. ಇದು ಚುನಾವಣಾ ಆಯೋಗದ ನಿಯಮಗಳ ಪ್ರಕಾರ ನಡೆಯುತ್ತದೆ. ಹಾಗಾಗಿ ಹಸ್ತಕ್ಷೇಪ ಮಾಡುವ ಪ್ರಶ್ನೆಯೇ ಇಲ್ಲ. ಅವರು ತಮ್ಮ ಸೋಲಿನ ಭಯದಿಂದ ಅವರು ಪ್ರತಿದಿನ ಬೆಳಗ್ಗೆ ಆಧಾರರಹಿತ, ಅನುಪಯುಕ್ತ ಆರೋಪಗಳನ್ನು ಮಾಡುತ್ತಿದ್ದಾರೆ. ಅದೆಲ್ಲದಕ್ಕೂ ಉತ್ತರ ನೀಡುವುದಿಲ್ಲ ಎಂದು ಸಿಎಂ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯಿಸಿದ್ದಾರೆ.
‘ಸಿದ್ದರಾಮಯ್ಯನವರು ಏನು ಮಾಡುತ್ತಿದ್ದಾರೆ ಎಂಬುದು ರಾಜ್ಯದಲ್ಲಿ ಗೊತ್ತಿದೆ, ಮೊದಲು ಅವರು ತಮ್ಮ ಪಕ್ಷವನ್ನು ನೋಡಲಿ’ ಎಂದು ಸಿಎಂ ತಿರುಗೇಟು ನೀಡಿದ್ದಾರೆ.