Advertisement

Karnataka Election 2023; ಕೊಪ್ಪಳ ಕ್ಷೇತ್ರದಲ್ಲಿ ಕಮಲ ಕಲಿಗಳು ಯಾರು?

06:25 PM Apr 05, 2023 | Team Udayavani |

ಕೊಪ್ಪಳ: ರಾಜ್ಯ ವಿಧಾನಸಭಾ ಚುನಾವಣೆಯ ಕಾವು ಭರ್ಜರಿ ರಂಗೇರಿದೆ. ಆದರೆ ಕೊಪ್ಪಳ ವಿಧಾನಸಭಾ ಕ್ಷೇತ್ರದ ಕಮಲದ ಕಲಿಗಳು ಯಾರೆನ್ನುವುದೇ ಇನ್ನೂ ಅಂತಿಮವಾಗುತ್ತಿಲ್ಲ. ಟಿಕೆಟ್‌ಗಾಗಿ ಸಿವಿಸಿ-ಸಂಗಣ್ಣ ಕರಡಿ ಟಿಕೆಟ್‌ಗಾಗಿ ಭರ್ಜರಿ ಫೈಟ್‌ ನಡೆಸುತ್ತಿದ್ದಾರೆ.

Advertisement

ಹೈಕಮಾಂಡ್‌ ಮಾತ್ರ ಗೆಲ್ಲುವ ಸಾಮರ್ಥ್ಯ, ಸರ್ವೇಗಳ ವರದಿ ಹಾಗೂ ಪಕ್ಷದ ಆಂತರಿಕ ವರದಿಯನ್ನು ತುಲನೆ ಮಾಡುತ್ತಿದೆ. ಹೌದು. ಕೊಪ್ಪಳ ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್‌ ಕಗ್ಗಂಟಾಗಿ ಪರಿಣಿಸಿದೆ.

ಕಳೆದ ಬಾರಿ ಸಿ.ವಿ. ಚಂದ್ರಶೇಖರ ಅವರಿಗೆ ಬಿಜೆಪಿ ಟಿಕೆಟ್‌ ಘೋಷಣೆ ಮಾಡಿದ್ದರೂ ಕೊನೆಯ ಗಳಿಗೆಯಲ್ಲಿ ಸಂಸದ ಸಂಗಣ್ಣ ಕರಡಿ ಅವರ ಪ್ರಯತ್ನದಿಂದ ತಮ್ಮ ಪುತ್ರ ಅಮರೇಶ ಕರಡಿ ಅವರಿಗೆ ಬಿ ಫಾರಂ ದೊರೆಯುವಂತೆ ಮಾಡಿದ್ದರು. ಆದರೂ ಕ್ಷೇತ್ರದಲ್ಲಿ ಸೋಲಾಗಿತ್ತು.

ಹಾಗಾಗಿ ಈ ಬಾರಿ ಕ್ಷೇತ್ರದಲ್ಲಿ ತಾವೇ ಸ್ಪರ್ಧಿಸಬೇಕೆನ್ನುವ ಇಂಗಿತ ವ್ಯಕ್ತಪಡಿಸಿದ್ದಾರೆನ್ನುವ ಮಾತುಗಳು ಅವರ ಆಪ್ತ ವಲಯದಲ್ಲಿ ಕೇಳಿ ಬರುತ್ತಿವೆ. ಆದರೆ ಪ್ರಸ್ತುತ ಸಂಸದಾಗಿರುವ ಹಿನ್ನೆಲೆಯಲ್ಲಿ ಟಿಕೆಟ್‌ ಪಡೆಯುವುದು ಅವರಿಗೆ ಕಗ್ಗಂಟಾಗಿ ಪರಿಣಿಸಿದೆ. ಪಕ್ಷ ಸಹಿತ ಒಬ್ಬರಿಗೆ ಒಂದೇ ಹುದ್ದೆ ಎನ್ನುವ ನೀತಿ ಜಾರಿ ಮಾಡಿದ್ದಲ್ಲದೇ ಸಂಸದರಿಗೆ ಈ ಬಾರಿ ಟಿಕೆಟ್‌ ಇಲ್ಲ ಎನ್ನುವ ಸ್ಪಷ್ಟ ನಿಲುವು ಸಂಗಣ್ಣ ಕರಡಿ ಅವರಿಗೆ ಬಿಸಿ ತುಪ್ಪವಾಗಿ ಪರಿಣಿಸಿದೆ.

ಆದರೂ ತಮಗೆ ಇದೊಂದು ಕೊನೆಯ ಅವಕಾಶ ಕೊಡುವಂತೆ ಹೈಕಮಾಂಡ್‌ ಮುಂದೆ ಪ್ರಸ್ತಾಪಿಸಿದ್ದಾರೆನ್ನಲಾಗಿದೆ. ಬಿಎಸ್‌ವೈ ಮೂಲಕ ಹೈಕಮಾಂಡ್‌ ಮಟ್ಟದಲ್ಲಿ ಟೆಕೆಟ್‌ ಪಡದೇ ತೀರಬೇಕೆನ್ನುವ ಹಠಕ್ಕೆ ಬಿದ್ದಿದ್ದಾರೆನ್ನುವ ಮಾತುಗಳು ಕೇಳಿ ಬರುತ್ತಿವೆ. ಅವರು ಎಲ್ಲೂ ಬಹಿರಂಗವಾಗಿ ನಾನು ಸ್ಪರ್ಧಿಸುವೆ ಎಂದು ಹೇಳಿಲ್ಲ. ಪಕ್ಷ ಟಿಕೆಟ್‌ ಕೊಟ್ಟರೆ ಸ್ಪರ್ಧಿಸುವೆ. ಕ್ಷೇತ್ರದ ಜನರು ಸ್ಪರ್ಧಿಸುವಂತೆ ಅಭಿಮಾನದ ಅಭಿಪ್ರಾಯ ಹೇಳುತ್ತಿದ್ದಾರೆನ್ನುವ ಹೇಳಿಕೆ ನೀಡಿದ್ದಾರೆ.

Advertisement

ಇನ್ನು ಬಿಜೆಪಿಯಲ್ಲಿ ಕಳೆದ ಬಾರಿ ಟಿಕೆಟ್‌ ಕೈ ತಪ್ಪಿದ್ದರೂ ಸಹಿತ ಪಕ್ಷದಲ್ಲೇ ಉಳಿದು ಐದು ವರ್ಷಗಳ ಕಾಲ ಪಕ್ಷದ ನಿರ್ದೇಶನ, ನಿಯಮಗಳನ್ನು ಪಾಲಿಸಿಕೊಂಡು ಬಂದಿರುವ ಸಿ.ವಿ. ಚಂದ್ರಶೇಖರ ಅವರು ತಮಗೆ ಈ ಬಾರಿ ಟಿಕೆಟ್‌ ಬೇಕೆಂದು ಹೈಕಮಾಂಡ್‌ ಮಟ್ಟದಲ್ಲಿ ಪ್ರಯತ್ನ ನಡೆಸಿದ್ದಾರೆ. ಸಂಘ ಪರಿವಾರದ ಕೆಲ ನಾಯಕರು ಸೇರಿದಂತೆ ಸಿ.ಟಿ. ರವಿ ಅವರ ಮೂಲಕವೂ ಟಿಕೆಟ್‌ಗೆ ಭಾರಿ ಪ್ರಯತ್ನ ನಡೆಸುತ್ತಿದ್ದಾರೆ. ಹಿಂದೆ ಎಂಎಲ್‌ಸಿ ಟಿಕೆಟ್‌ ಬಯಸಿ ಬಂದರೂ ತಾವು ಎಂಎಲ್‌ಸಿಗೆ ಸ್ಪರ್ಧೆ ಮಾಡಲ್ಲ.ನಿಂತರೆ ವಿಧಾನಸಭಾ ಕ್ಷೇತ್ರಕ್ಕೆ ಸ್ಪರ್ಧಿಸುವೆ ಎಂದು ನೇರವಾಗಿಯೇ ನುಡಿದಿದ್ದರು. ಈ ಬಾರಿ ತಮಗೆ ಟಿಕೆಟ್‌ ಸಿಕ್ಕೇ ಸಿಗಲಿದೆ ಎನ್ನುವ ಅತ್ಯುತ್ಸಾಹದಲ್ಲಿ ಬಿಜೆಪಿಗೆ ಬೆಂಬಲಿಸಿ ಎಂದು ಈಗಾಗಲೇ ತಿಂಗಳ ಹಿಂದೆಯೇ ಅವರು ಕ್ಷೇತ್ರದ ತುಂಬೆಲ್ಲ ಪ್ರಚಾರ ನಡೆಸಿ ಬದಲಾವಣೆ ಬಯಸಿ ಎನ್ನುವ ಸಂದೇಶ ನೀಡುತ್ತಿದ್ದಾರೆ.

ಪಕ್ಷದಲ್ಲಿ ನಿಷ್ಠೆಯಿಂದಿದ್ದು ತಮಗೆ ಟಿಕೆಟ್‌ ಸಿಗಲಿದೆ ಎನ್ನುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಕೆಲವು ಸಂಘ ಪರಿವಾರ ನಾಯಕರು ಸಹಿತ ಇವರ ಹೆಸರಿನ ಮೇಲೆ ಇಂಗಿತ ವ್ಯಕ್ತಪಡಿಸಿದ್ದಾರೆನ್ನುವ ಮಾತು ಕೇಳಿ ಬಂದಿವೆ. ಇತ್ತೀಚೆಗೆ ಜಿಲ್ಲಾ ಕೋರ್‌ ಕಮೀಟಿಯಲ್ಲಿ ಹಾಗೂ ಆಂತರಿಕ ಮತದಾನದಲ್ಲಿ ನಾಲ್ವರ ಹೆಸರು ಪ್ರಸ್ತಾಪಕ್ಕೆ ಬಂದಿದ್ದರೂ ಪೈಪೋಟಿಯಲ್ಲಿ ಸಿವಿಸಿ ಹಾಗೂ ಸಂಸದ ಸಂಗಣ್ಣ ಕರಡಿ ಅವರ ಹೆಸರೇ ಹೆಚ್ಚು ಚರ್ಚೆಯಲ್ಲಿವೆ.

ಹೈಕಮಾಂಡ್‌ ಸಹಿತ ಈಗಾಗಲೇ ಕ್ಷೇತ್ರದಲ್ಲಿ ಆಂತರಿಕವಾಗಿ ಮೂರು ಸರ್ವೇ ನಡೆಸಿದೆ ಎನ್ನುವ ಮಾತು ಕೇಳಿ ಬಂದಿವೆ. ಮೂರು ಸರ್ವೇಯಲ್ಲಿ ಯಾರ ಹೆಸರು ಮುಂಚೂಣಿಯಲ್ಲಿದೆ. ಆಂತರಿಕ ಮತದಾನದಲ್ಲಿ ಯಾರಿಗೆ ಹೆಚ್ಚು ಮತದಾನ ಬಂದಿವೆ ಎನ್ನುವ ಲೆಕ್ಕಾಚಾರ ಹಾಕುತ್ತಿದ್ದಾರೆ. ಇದಲ್ಲದೇ ರಾಜ್ಯದಲ್ಲಿ ಬಿಜೆಪಿ ಅ ಧಿಕಾರಕ್ಕೆ ತರಲು 150 ವಿಜನ್‌ ಗುರಿ ಹೊಂದಿರುವ ಹೈಕಮಾಂಡ್‌, ಗೆಲ್ಲುವ ಕಲಿಗಳು ಯಾರೆನ್ನುವ ಲೆಕ್ಕಾಚಾರ ಹಾಕಿಯೇ ಅಭ್ಯರ್ಥಿಗಳ ಹೆಸರು ಅಂತಿಮ ಮಾಡುವ ತಯಾರಿಯಲ್ಲಿದ್ದಾರೆ ಎಂಬ ಮಾತುಗಳು ಕೇಳಿ ಬಂದಿವೆ.

ಒಟ್ಟಿನಲ್ಲಿ ಈಗಾಗಲೇ ಕೊಪ್ಪಳದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ರಾಘವೇಂದ್ರ ಹಿಟ್ನಾಳ ಅವರು ತಮ್ಮ ಎದುರಾಳಿ ಅಭ್ಯರ್ಥಿ ಇಲ್ಲದೇ ಪ್ರಚಾರ ಕಾರ್ಯ ಆರಂಭಿಸಿದ್ದಾರೆ. ಆದರೆ ಕಮಲ ಪಾಳೆಯದಲ್ಲಿ ಅಭ್ಯರ್ಥಿ ಘೋಷಣೆ ಮಾಡದೇ ವಿಳಂಬ ಮಾಡುತ್ತಿರುವುದು ಕ್ಷೇತ್ರದ ತುಂಬೆಲ್ಲಾ ನಾನಾ ರೀತಿಯ ಚರ್ಚೆಗೆ ಎಡೆ ಮಾಡಿಕೊಟ್ಟಿದೆ. ಕೊನೆ ಹಂತದಲ್ಲಿ ಯಾರಿಗೆ ಟಿಕೆಟ್‌ ಘೋಷಣೆ ಮಾಡಲಿದೆ ಎಂಬುದನ್ನು ಕಾದು ನೋಡಬೇಕಿದೆ.

ಕೊಪ್ಪಳ ವಿಧಾನಸಭಾ ಕ್ಷೇತ್ರದ ಟಿಕೆಟ್‌ ನನಗೆ ದೊರೆಯಲಿದೆ ಎನ್ನುವ ಆತ್ಮವಿಶ್ವಾಸವಿದೆ. ಈ ಬಾರಿ ಗ್ಯಾರಂಟಿ ನಮಗೆ ದೊರೆಯಲಿದೆ. ಇದರಲ್ಲಿ ಯಾವುದೇ ಅನುಮಾನವಿಲ್ಲ. ಪಕ್ಷದಲ್ಲಿ ಟಿಕೆಟ್‌ ಆಕಾಂಕ್ಷಿಗಳು ಇರುವುದು ಸಹಜ. ನಮ್ಮದು ದೊಡ್ಡ ಪಕ್ಷವಾಗಿದೆ. ನಾನೂ ಒಬ್ಬ ಆಕಾಂಕ್ಷಿಯಾಗಿದ್ದೇನೆ. ಪಕ್ಷ ಸೂಕ್ತ ತೀರ್ಮಾನ ಕೈಗೊಳ್ಳಲಿದೆ.
ಸಿ.ವಿ.ಚಂದ್ರಶೇಖರ, ಕೊಪ್ಪಳ ಬಿಜೆಪಿ ಟಿಕೆಟ್‌ ಆಕಾಂಕ್ಷಿ.

ಕೊಪ್ಪಳ ಬಿಜೆಪಿ ಅಭ್ಯರ್ಥಿ ಯಾರೆಂದು ಪಕ್ಷದ ಹೆ„ಕಮಾಂಡ್‌ ನಿರ್ಧರಿಸಲಿದೆ. ಇನ್ನು ಬೆಂಗಳೂರಿನಲ್ಲಿ ಕೋರ್‌ ಕಮೀಟಿ ಸಭೆ ನಡೆಯಲಿದೆ. ಆ ಸಭೆಯಲ್ಲಿ ಚರ್ಚೆ ನಡೆಯಲಿದೆ. ಪಕ್ಷ ನನಗೆ ಟಿಕೆಟ್‌ ಕೊಟ್ಟರೆ ಸ್ಪರ್ಧಿಸುವೆ. ಎಲ್ಲವೂ ಪಕ್ಷದ ತೀರ್ಮಾನದ ಮೇಲಿದೆ. ಜಿಲ್ಲೆಯಿಂದ ನಾಲ್ವರ ಹೆಸರು ಶಿಫಾರಸ್ಸಾಗಿವೆ ಎನ್ನುವ ವಿಷಯ ಕೇಳಿದ್ದೇನೆ. ಕ್ಷೇತ್ರದಲ್ಲಿ ಹಲವಾರು ಚರ್ಚೆಗಳು ನಡೆದಿರುವುದು ಸಹಜ.
ಸಂಗಣ್ಣ ಕರಡಿ, ಕೊಪ್ಪಳ ಸಂಸದ.

*ದತ್ತು ಕಮ್ಮಾರ

Advertisement

Udayavani is now on Telegram. Click here to join our channel and stay updated with the latest news.

Next