ಬೆಂಗಳೂರು: ಚುನಾವಣೆ ಹಿನ್ನೆಲೆಯಲ್ಲಿ ಸಾಮಾಜಿಕ ಮಾಧ್ಯಮಗಳ ಮೇಲೆ ತೀವ್ರ ನಿಗಾ ಇರಿಸಲಾಗಿದ್ದು, ಯಾವುದೇ ರೀತಿಯ ಉಲ್ಲಂಘನೆಗಳ ವಿರುದ್ಧ ಕಾನೂನು ರೀತಿ ಕ್ರಮ ಜರುಗಿಸಲಾಗುವುದು ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಕಚೇರಿಯ ಮಾಧ್ಯಮ ವಿಶೇಷ ಅಧಿಕಾರಿ ಎ.ವಿ. ಸೂರ್ಯಸೇನ್ ತಿಳಿಸಿದ್ದಾರೆ.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಯೋಗದೊಂದಿಗೆ ರಾಜ್ಯ ಮುಖ್ಯ ಚುನಾವಣಾಧಿಕಾರಿಗಳ ಕಚೇರಿ ಗುರುವಾರ ಹಮ್ಮಿಕೊಂಡಿದ್ದ ಮಾಧ್ಯಮ ಪ್ರತಿನಿಧಿಗಳ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
ದೃಶ್ಯ ಮತ್ತು ಮುದ್ರಣ ಮಾಧ್ಯಮಗಳ ಜತೆಗೆ ಈಗ ಸಾಮಾಜಿಕ ಮಾಧ್ಯಮಗಳೂ ಸೇರಿಕೊಂಡಿವೆ. ಚುನಾವಣ ಪ್ರಚಾರ ಸೇರಿ ನೀತಿ ಸಂಹಿತೆಗೆ ಸಂಬಂಧಿಸಿದ ಅನೇಕ ವಿಷಯಗಳು ಸಾಮಾಜಿಕ ಮಾಧ್ಯಮಗಳಿಗೂ ಅನ್ವಯವಾಗುತ್ತವೆ. ಈ ನಿಟ್ಟಿನಲ್ಲಿ ಫೇಸ್‌ಬುಕ್, ಟ್ವಿಟರ್, ಇನ್‌ಸ್ಟಾಗ್ರಾಂ, ಗೂಗಲ್ ಮತ್ತಿತರ ಬಳಕೆದಾರರ ಸಂಖ್ಯೆ ಹೆಚ್ಚಿರುವ ಸಾಮಾಜಿಕ ಮಾಧ್ಯಮಗಳ ಮೇಲೆ ನಿಗಾ ಇಡಲಾಗುವುದು. ವಾಟ್ಸಪ್ ವೈಯಕ್ತಿಕ ಹಾಗೂ ಖಾಸಗಿ ಅಪ್ಲಿಕೇಷನ್ ಆಗಿದ್ದು, ಅದನ್ನು ಸಾಮಾಜಿಕ ಮಾಧ್ಯಮ ಎಂದು ಪರಿಗಣಿಸುವ ಬಗ್ಗೆ ಒಂದಿಷ್ಟು ಗೊಂದಲವಿದೆ. ಆದರೆ ವಾಟ್ಸಪ್ ಗ್ರೂಪ್ ಆಡ್ಮಿನ್‌ಗಳ ವಿಚಾರದಲ್ಲಿ ಸುಪ್ರೀಂ ಕೋರ್ಟ್ ನೀಡಿರುವ ಮಾರ್ಗಸೂಚಿಯಂತೆ ಸ್ಪಷ್ಟತೆ ಇದೆ. ಉಲ್ಲಂಘನೆಗಳ ವಿರುದ್ಧ ಮಾಹಿತಿ ತಂತ್ರಜ್ಞಾನ ಕಾಯ್ದೆ ಅನ್ವಯ ಕ್ರಮ ಜರುಗಿಸಲಾಗುವುದು ಎಂದು ಸೂರ್ಯಸೇನ್ ಹೇಳಿದರು.
ರಾಜಕೀಯ ಪಕ್ಷಗಳು ಮತ್ತು ಅಭ್ಯರ್ಥಿಗಳು ಅಥವಾ ಅವರ ಪರವಾಗಿ ಚುನಾವಣ ಪ್ರಚಾರ ಮಾಡುವ ವ್ಯಕ್ತಿ ಇಲ್ಲವೇ ವ್ಯಕ್ತಿಗಳ ಗುಂಪುಗಳು ಬಳಸುವ ವಿಷಯ, ಭಾಷೆ, ವೈಯಕ್ತಿಕ ಪೋಸ್ಟ್ ಇತ್ಯಾದಿಗಳ ಮೇಲೆ ನಿಗಾ ಇಡಲು ತಂಡಗಳನ್ನು ರಚಿಸಲಾಗಿದೆ. ಡಿಜಿಟಲ್ ಮೀಡಿಯಾಗಳಲ್ಲಿ ಬರುವ ಜಾಹೀರಾತುಗಳ ಬಗ್ಗೆಯೂ ಗಮನಹರಿಸಲಾಗುತ್ತದೆ. ಸಾಮಾಜಿಕ ಮಾಧ್ಯಮ ಸಂಸ್ಥೆಗಳು 2019ರಲ್ಲಿ ಖುದ್ದು ಒಪ್ಪಿಕೊಂಡಿರುವ ಸ್ವಯಂಪ್ರೇರಿತ ನೀತಿ ಸಂಹಿತೆಗೆ ಬದ್ಧವಾಗಿರಬೇಕು ಮತ್ತು ಅಗತ್ಯ ಸಹಕಾರ ನೀಡಬೇಕೆಂದು ಈಗಾಗಲೇ ಚುನಾವಣ ಆಯೋಗ ಮನವಿ ಮಾಡಿದೆ ಎಂದು ಮಾಹಿತಿ ನೀಡಿದರು.