ಉಡುಪಿ: ವಿಧಾನಸಭಾ ಚುನಾವಣೆ ಪ್ರಯುಕ್ತ ಮುಚ್ಚಿರುವ ಸರಕಾರಿ ಶಾಲೆಗಳು ಮತ್ತೆ ತೆರೆದುಕೊಂಡಿವೆ. ವಿದ್ಯಾರ್ಥಿಗಳ ಕೊರತೆ ಸೇರಿದಂತೆ ಹಲವಾರು ಕಾರಣಗಳಿಂದಾಗಿ ಶಾಲೆಗಳು ಮುಚ್ಚಿದರೂ ಅದೇ ಶಾಲೆಗಳು ಮತಗಟ್ಟೆಗಳಾಗಿ ಕಾರ್ಯನಿರ್ವಹಿಸುವುದರಿಂದ ಚುನಾವಣೆ ಬರುವಾಗ ಸಾವಿರ, ಲಕ್ಷ ರೂ. ವ್ಯಯಿಸಿ ದುರಸ್ತಿ ಮಾಡುವಂತಾಗಿದೆ.
ಜಿಲ್ಲೆಯಲ್ಲಿ ಪ್ರಸ್ತುತ 578 ಸರಕಾರಿ ಪ್ರಾಥಮಿಕ ಶಾಲೆ ಹಾಗೂ 106 ಪ್ರೌಢಶಾಲೆಯಿದೆ. ಒಟ್ಟು 59 ಸರಕಾರಿ ಶಾಲೆಗಳು ಮುಚ್ಚುಗಡೆಯಾಗಿದ್ದವು. ಕಾಪು ತಾಲೂಕಿನಲ್ಲಿ ಅತೀ ಹೆಚ್ಚು ಅಂದರೆ 23 ಶಾಲೆಗಳು ಮುಚ್ಚುಗಡೆಯಾಗಿದ್ದವು. ಉಡುಪಿ
10, ಕುಂದಾಪುರ 8, ಬೈಂದೂರು 7, ಬ್ರಹ್ಮಾವರ 6 ಹಾಗೂ ಕಾರ್ಕಳ ತಾ|ನಲ್ಲಿ 5 ಸರಕಾರಿ ಶಾಲೆಗಳು ಮುಚ್ಚಿದ್ದವು.
ವಿವಿಧ ಸರಕಾರಿ ಶಾಲೆಗಳನ್ನು ಪರಿಶೀಲನೆ ನಡೆಸಿ ದುರಸ್ತಿಪಡಿಸಲಾಗುತ್ತಿದೆ. ಜತೆಗೆ ಶಿಥಿಲಗೊಂಡಿರುವ ಶಾಲೆಯ ಬಾಗಿಲುಗಳನ್ನು ಕೂಡ ದುರಸ್ತಿಪಡಿಸಿಬೀಗ ಹಾಕುವ ಕಾರ್ಯ ಮಾಡಲಾಗಿದೆ. ವಿದ್ಯುತ್ ಸಂಪರ್ಕ, ಶೌಚಾಲಯ ದುರಸ್ತಿ, ನೀರಿನ ಸಂಪರ್ಕ ಕೂಡ ಕಲ್ಪಿಸಲಾಗಿದೆ. ಮುಚ್ಚಿರುವ ಸರಕಾರಿ ಶಾಲೆಗಳು ಚುನಾವಣೆಗೆ ಮಾತ್ರ ಸೀಮಿತ ಎಂಬಂತಾಗಿದೆ. ಕೆಲವೊಂದು ಶಾಲೆಗಳು ಸುಸ್ಥಿತಿಯಲ್ಲಿದ್ದರೂ ಮುಚ್ಚಲ್ಪಟ್ಟಿವೆ. ಮತ್ತೆಕೆಲವು ಶಾಲೆಗಳು ಮುಚ್ಚಿದ ಬಳಿಕ ಶಿಥಿಲಗೊಂಡಿವೆ.
ಚುನಾವಣೆಗೆಂದು ದುರಸ್ತಿ ಮಾಡಲಾಗುತ್ತಿದೆಯಾದರೂ ಮತ್ತೆ ನೆನಪಾಗುವುದು ಮತ್ತೊಂದು ಚುನಾವಣೆಗೆ. ಆಗ ಮತ್ತೆ ಖರ್ಚು. ಸರಕಾರಿ ಶಾಲೆಗಳು ಪೂರ್ಣಪ್ರಮಾಣದಲ್ಲಿ ಬಳಕೆ ಯಾದರೆ ಮಾಡುವ ಖರ್ಚು ಕೂಡ ಉಳಿತಾಯವಾಗಲು ಸಾಧ್ಯವಿದೆ.
ವಿವಿಧ ಬಣ್ಣ ಶಾಲೆಯ ಕಾಂಪೌಂಡ್‌ಗಳಿಗೆ ಈಗಾಗಲೇ ವಿವಿಧ ಬಣ್ಣಗಳನ್ನು ಬಳಿಯಲಾಗಿದೆ. ಇನ್ನೂ ಕೆಲವೆಡೆ ಬಣ್ಣ ಬಳಿಯಲು ಬಾಕಿ ಉಳಿದಿದೆ. ಉಡುಪಿಯ ಕಲಾ ಸಂಸ್ಕೃತಿ ಯನ್ನು ಬಿಂಬಿಸುವ ವಿವಿಧ ರೀತಿಯ ಕಲಾ ಪ್ರಕಾರ ಗಳನ್ನು ಚಿತ್ರದಲ್ಲಿ ಬಿಂಬಿಸಲಾಗಿದೆ.