ಬೆಂಗಳೂರು:ಬಿಜೆಪಿಯ ಮೊದಲ ಪಟ್ಟಿ ಬಿಡುಗಡೆ ಇನ್ನಷ್ಟು ವಿಳಂಬವಾಗುವ ಸಾಧ್ಯತೆ ಇದ್ದು, ಪ್ರಧಾನಿ ನರೇಂದ್ರ ಮೋದಿಯವರ “ಹುಲಿ ಸಫಾರಿ’ಯ ಬಳಿಕವೇ ಸಂಸದೀಯ ಮಂಡಳಿ ಸಭೆ ನಡೆಯಬಹುದು ಎಂದು ಬಿಜೆಪಿ ಮೂಲಗಳು ತಿಳಿಸಿವೆ.
ಕಳೆದೆರಡು ದಿನಗಳಿಂದ ನಡೆದ ಬಿಜೆಪಿ ಚುನಾವಣಾ ಸಮಿತಿ ಸಭೆ ಬುಧವಾರ ಮುಕ್ತಾಯಗೊಂಡಿದ್ದು, ರಾಜ್ಯದ ಎಲ್ಲ ವಿಧಾನಸಭಾ ಕ್ಷೇತ್ರಗಳಿಗೂ ತಲಾ ಮೂವರು ಆಕಾಂಕ್ಷಿಗಳ ಹೆಸರನ್ನು ನಮೂದಿಸಲಾಗಿದೆ. ನಿರೀಕ್ಷೆಯಂತೆ ಕೆಲವು ಕ್ಷೇತ್ರಗಳಲ್ಲಿ ಹಾಲಿ ಶಾಸಕರ ಹೆಸರನ್ನು ಕೈ ಬಿಡಲಾಗಿದೆ ಎಂದು ಬಿಜೆಪಿಯ ಉನ್ನತ ಮೂಲಗಳು ತಿಳಿಸಿದ್ದು, ಚುನಾವಣಾ ಸಮಿತಿ ಅಂತಿಮಗೊಳಿಸಿದ ಪಟ್ಟಿ ಗುರುವಾರ ದೆಹಲಿಗೆ ರವಾನೆಯಾಗಲಿದೆ.ಒಟ್ಟು ಮೂರು ಹಂತದಲ್ಲಿ ಬಿಜೆಪಿ ಪಟ್ಟಿ ಸಂಸ್ಕರಣೆಗೊಂಡಿದೆ.
ಜಿಲ್ಲಾ ಕೋರ್ ಕಮಿಟಿಯಿಂದ ಶಿಫಾರಸುಗೊಂಡ ಹೆಸರುಗಳನ್ನು ಜಿಲ್ಲಾವಾರು ಪ್ರಮುಖರ ನೇತೃತ್ವದಲ್ಲಿ ಏ.1 ಹಾಗೂ 2ರಂದು ಎರಡು ದಿನಗಳ ಕಾಲ ಸಂಸ್ಕರಣೆಗೆ ಒಳಪಡಿಸಲಾಗಿತ್ತು. ಇದಾದ ಬಳಿಕ ಕೋರ್ ಕಮಿಟಿ ಹಾಗೂ ಚುನಾವಣಾ ಸಮಿತಿ ಸಭೆ ನಡೆಸಿ ಪ್ರತಿ ಕ್ಷೇತ್ರದ ಬಗ್ಗೆಯೂ ಕೂಲಂಕಶ ಚರ್ಚೆ ನಡೆಸಿ ಸಂಭಾವ್ಯರ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ. ಪ್ರತಿ ಕ್ಷೇತ್ರದಲ್ಲೂ ಮೂವರ ಹೆಸರಿದೆ. ಈ ಪೈಕಿ ಪಕ್ಷಕ್ಕಾಗಿ ದುಡಿದ ಹಳೆಯ ಕಾರ್ಯಕರ್ತರು ಹಾಗೂ ಮುಖಂಡರ ಹೆಸರನ್ನು ಸೇರಿಸಲಾಗಿದೆ. ಸಾಮಾನ್ಯ ಕಾರ್ಯಕರ್ತರನ್ನೂ ಪಕ್ಷ ಗುರುತಿಸುತ್ತದೆ ಎಂಬ ಸಂದೇಶ ರವಾನಿಸಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಇಂದು ಸಿಎಂ ದೆಹಲಿಗೆ:
ಇದೆಲ್ಲದರ ಮಧ್ಯೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಗುರುವಾರ ದಿಲ್ಲಿಗೆ ಪ್ರಯಾಣ ಬೆಳೆಸಲಿದ್ದಾರೆ. ಹುಬ್ಬಳ್ಳಿಯಿಂದ ದಿಲ್ಲಿ ಪ್ರಯಾಣಕ್ಕೆ ಕಾರ್ಯಕ್ರಮ ಪಟ್ಟಿ ಸಿದ್ಧಗೊಂಡಿದೆಯಾದರೂ, ಏ.7ರ ಕಾರ್ಯಕ್ರಮ ಏನು ಎಂಬುದು ನಮೂದಾಗಿಲ್ಲ. ಹೀಗಾಗಿ ಅಂದು ಸಂಸದೀಯ ಮಂಡಳಿ ಸಭೆ ನಡೆಯುವುದು ಅನುಮಾನ. ಎಲ್ಲಕ್ಕಿಂತ ಹೆಚ್ಚಾಗಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್.ಯಡಿಯೂರಪ್ಪ ಶನಿವಾರ ದೆಹಲಿಗೆ ತೆರಳಬಹುದು ಎನ್ನಲಾಗಿದೆ.
ಇದೆಲ್ಲದರ ಮಧ್ಯೆ, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಶನಿವಾರ ರಾತ್ರಿ ರಾಜ್ಯಕ್ಕೆ ಆಗಮಿಸಲಿದ್ದು, ಭಾನುವಾರ ಬಂಡಿಪುರದಲ್ಲಿ ಹುಲಿ ಸಫಾರಿ ವೀಕ್ಷಣೆ ಮಾಡಲಿದ್ದಾರೆ. ಹೀಗಾಗಿ ಶನಿವಾರ ಅಥವಾ ಭಾನುವಾರ ಸಂಸದೀಯ ಮಂಡಳಿ ಹಾಗೂ ಚುನಾವಣಾ ಸಮಿತಿ ಸಭೆ ನಡೆಯುವುದು ಅನುಮಾನ. ಹೀಗಾಗಿ ಪ್ರಧಾನಿ ಭೇಟಿಯ ಬಳಿಕವೇ ರಾಜ್ಯ ವಿಧಾನಸಭಾ ಚುನಾವಣೆಗೆ ಬಿಜೆಪಿಯ ಮೊದಲ ಪಟ್ಟಿ ಬಿಡುಗಡೆಯಾಗಬಹುದು ಎಂದು ಹೇಳಲಾಗುತ್ತಿದೆ.