Advertisement

ಸುಳ್ಯ-ಪುತ್ತೂರು: ಮೊದಲ ಪಟ್ಟಿಯಲ್ಲೇ ಸ್ಥಾನ ಅನುಮಾನ

12:14 AM Apr 11, 2023 | Team Udayavani |

ಪುತ್ತೂರು: ಸುಳ್ಯ-ಪುತ್ತೂರು ಉಭಯ ಕ್ಷೇತ್ರಗಳಲ್ಲೂ ಹೊಸ ಮುಖಗಳ ಪ್ರವೇಶವಾಗಲಿದೆಯೇ?

Advertisement

ಸದ್ಯದ ಲೆಕ್ಕಾಚಾರದ ಪ್ರಕಾರ ಹೌದು. ದಿನಕ್ಕೊಂದು ರೀತಿಯಲ್ಲಿ ತಂತ್ರ ರೂಪಿಸುತ್ತಿರುವ ಬಿಜೆಪಿ ವರಿಷ್ಠರು, ತತ್ವ, ಜಾತಿ ಎಲ್ಲ ಕೋನಗಳಲ್ಲೂ ಗೆಲ್ಲಬಲ್ಲ ಅಭ್ಯರ್ಥಿಗಳ ಹುಡುಕಾಟವು ಹೈಕಮಾಂಡ್‌ಗೆ ದೊಡ್ಡ ಸವಾಲಾಗಿ ಪರಿಣಿಸಿದೆ. ಈಗ ಹೊಸ ಸೂತ್ರವೊಂದನ್ನು ಹೆಣೆದಿದ್ದು, ಒಂದು ವೇಳೆ ಉಭಯ ಕ್ಷೇತ್ರಗಳಲ್ಲಿ ಆಕಾಂಕ್ಷಿತರನ್ನು ಸಮಾಧಾನ ಪಡಿಸಲು ಸಾಧ್ಯವಾಗದೇ ಇದ್ದರೆ ಪರಸ್ಪರ ವರ್ಗಾವಣೆಯ ತಂತ್ರ ಅಳವಡಿಸಲು ಯೋಚಿಸುತ್ತಿದೆ ಎನ್ನಲಾಗಿದೆ.

ಅಲ್ಲಿಂದ ಇಲ್ಲಿಗೆ ಇಲ್ಲಿಂದ ಅಲ್ಲಿಗೆ
ಉಭಯ ಕ್ಷೇತ್ರಗಳಲ್ಲಿ ಪುತ್ತೂರು ಹೈವೋಲ್ಟೆàಜ್‌ ಕ್ಷೇತ್ರ. ಇದು ಬಿಜೆಪಿ ರಾಜ್ಯಾಧ್ಯಕ್ಷರ ತವರು ಕ್ಷೇತ್ರವೂ ಹೌದು. ಹೀಗಾಗಿ ಬಿಜೆಪಿ ಪಾಲಿಗಿದು ಪ್ರತಿಷ್ಠೆಯ ಕಣ. ಪುತ್ತೂರು ಕ್ಷೇತ್ರದಲ್ಲಿ ಹಾಲಿ ಶಾಸಕ ಸಂಜೀವ ಮಠಂದೂರು ಅವರ ಬದಲಿಗೆ ಟಿಕೆಟ್‌ ಆಕಾಂಕ್ಷಿಗಳ ಪಟ್ಟಿ ದೊಡ್ಡದಿದೆ. ಪ್ರತಿಯೊಬ್ಬರೂ ಹೈಕಮಾಂಡ್‌ ಮಟ್ಟದಲ್ಲಿ ಬೇರೆ ಬೇರೆ ರೀತಿಯಲ್ಲಿ ಪ್ರಭಾವ ಬೀರುತ್ತಿದ್ದಾರೆ. ಜಾತಿ ಸಂಗತಿಯನ್ನೂ ತೂಗಿ ಅಳೆದು ನೋಡುತ್ತಿರುವ ಬಿಜೆಪಿ, ಯಾರ ಕೆಂಗಣ್ಣಿಗೂ ಗುರಿಯಾಗದಂತ ಸೂತ್ರವನ್ನು ರೂಪಿಸುವತ್ತ ಕಾರ್ಯೋನ್ಮುಖವಾಗಿದೆ.

ಅದರಂತೆ ಸುಳ್ಯದಿಂದ ಒಕ್ಕಲಿಗ ಸಮುದಾಯದ ಅಭ್ಯರ್ಥಿಗೆ ಪುತ್ತೂರಿನಲ್ಲಿ ಅವಕಾಶ ನೀಡಿ, ಪುತ್ತೂರಿನ ಪರಿಶಿಷ್ಟ ಜಾತಿ ವರ್ಗದ ಅಭ್ಯರ್ಥಿಗೆ ಸುಳ್ಯದಲ್ಲಿ ಅವಕಾಶ ನೀಡಿದರೆ ಎಲ್ಲವನ್ನೂ ನಿಭಾಯಿಸಿದಂತಾಗುತ್ತದೆ. ಜತೆಗೆ ಎರಡೂ ಕ್ಷೇತ್ರಗಳಲ್ಲಿನ ಯಾವುದೋ ಒಂದು ಗುಂಪಿಗೆ ಆದ್ಯತೆ ನೀಡಿದರೆ ಆಂತರಿಕ ಕಚ್ಚಾಟ ತೀವ್ರಗೊಳ್ಳಬಹುದು. ಈ ತಂತ್ರದಿಂದ ಅದನ್ನೂ ತಡೆಯಬಹುದು ಎಂಬ ಲೆಕ್ಕಾಚಾರವೂ ಇದರ ಹಿಂದಿದೆ ಎನ್ನಲಾಗಿದೆ. ಆದರೆ ಹೊರಗಿನವರನ್ನು ತಡೆಯಲು ಉಭಯ ಕ್ಷೇತ್ರಗಳಲ್ಲಿನ ವಿವಿಧ ಗುಂಪುಗಳು ಒಂದಾದರೆ‌ ಎಂಬ ಅಂಶವನ್ನೂ ಪಕ್ಷದ ಸಭೆಗಳಲ್ಲಿ ಪರಿಗಣಿಸಲಾಗಿದೆಯೋ ಎಂಬ ಬಗ್ಗೆ ಖಚಿತವಾಗಿಲ್ಲ. ಇನ್ನಷ್ಟು ಚರ್ಚೆಗಳು ಚಾಲ್ತಿಯಲ್ಲಿದೆ ಎನ್ನಲಾಗಿದೆ.

ಈ ಹಿನ್ನೆಲೆಯಲ್ಲಿ ಬಿಡುಗಡೆಯಾಗುವ ಮೊದಲ ಪಟ್ಟಿಯಲ್ಲಿ ಎರಡೂ ಕ್ಷೇತ್ರಗಳ ಅಭ್ಯರ್ಥಿಗಳ ಹೆಸರು ಪ್ರಕಟಗೊಳ್ಳುವ ಸಾಧ್ಯತೆ ಕಡಿಮೆ ಇದ್ದು,, ಒಂದನ್ನು ಪ್ರಕಟಿಸಿ, ಆದರ ಪರಿಣಾಮ ಆಧರಿಸಿ ಇನ್ನೊಂದನ್ನು ಪ್ರಕಟಿಸುವ ಸಾಧ್ಯತೆಯೇ ಹೆಚ್ಚು ಎನ್ನಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next