Advertisement

Shikaripurದಲ್ಲಿ ಬಿರುಸಿನ ಪ್ರಚಾರ; ಸಮರ್ಥ ಅಭ್ಯರ್ಥಿಗಾಗಿ ಕಾಂಗ್ರೆಸ್‌ ತಿಣುಕಾಟ 

12:25 AM Apr 11, 2023 | Shreeram Nayak |

ಶಿವಮೊಗ್ಗ: ಶಿಕಾರಿಪುರ ವಿಧಾನಸಭಾ ಕ್ಷೇತ್ರದಲ್ಲಿ ತಮಗೇ ಟಿಕೆಟ್‌ ಸಿಗುವ ವಿಶ್ವಾಸದಲ್ಲಿ ಬಿ.ವೈ. ವಿಜಯೇಂದ್ರ ಅವರು ಈಗಾಗಲೇ ಎರಡು ಸುತ್ತು ಪ್ರಚಾರ ಮುಗಿಸಿದ್ದು, ಟಿಕೆಟ್‌ ಘೋಷಣೆ ಅನಂತರ ರಾಜ್ಯ ಪ್ರವಾಸಕ್ಕೆ ಅಣಿಯಾಗುತ್ತಿದ್ದಾರೆ. ಕಾಂಗ್ರೆಸ್‌ ಮಾತ್ರ ಇನ್ನೂ ಅಭ್ಯರ್ಥಿ ಅಂತಿಮಗೊಳಿಸುವುದರಲ್ಲೇ ತಿಣುಕಾಡುತ್ತಿದೆ. ಜೆಡಿಎಸ್‌ಗೆ ಹುರಿಯಾಳು ಗಳೇ ಇಲ್ಲ. ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ದಿನದಿಂದ ದಿನಕ್ಕೆ ಮುಂದೆ ಹೋಗುತ್ತಲೇ ಇದೆ. ಆದರೆ ಮಾಜಿ ಸಿಎಂ ಯಡಿಯೂರಪ್ಪ ಅವರ ತವರು ಶಿಕಾರಿಪುರದಲ್ಲಿ ಬಹುತೇಕ ಅಭ್ಯರ್ಥಿ ಫೈನಲ್‌ ಆದಂತಾಗಿದೆ. ವಿಜಯೇಂದ್ರ ಅವರೇ ಕಣಕ್ಕಿಳಿಯಲಿದ್ದು, ಈಗಾಗಲೇ ತಂದೆ ತೆರವು ಮಾಡಿದ ಈ ಕ್ಷೇತ್ರದಲ್ಲಿ ಒಂದು ತಿಂಗಳಿನಿಂದ ಬಿರುಸಿನ ಪ್ರಚಾರ ನಡೆಸುತ್ತಿದ್ದಾರೆ. ಈಗಾಗಲೇ ಎರಡು ಸುತ್ತು ಪ್ರತೀ ಗ್ರಾಮಕ್ಕೆ ತೆರಳಿ ಮತಯಾಚನೆ ಮಾಡಿದ್ದಾರೆ. ಈಗ ಮೂರನೇ ಸುತ್ತಿನ ಪ್ರಚಾರ ನಡೆಸುತ್ತಿದ್ದಾರೆ.

Advertisement

ಚುನಾವಣೆ ಘೋಷಣೆಯಾಗುವ ಮುನ್ನವೇ ವಿಜಯೇಂದ್ರ ವರುಣಾ ಕ್ಷೇತ್ರದಲ್ಲಿ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದಲ್ಲದೆ, ನಿರಂತರ ಪ್ರವಾಸವನ್ನೂ ಮಾಡಿದ್ದರು. ಹೀಗಾಗಿ ಅಲ್ಲೇ ಸ್ಪರ್ಧಿಸುತ್ತಾರೆ ಎಂದು ಹೇಳಲಾಗುತ್ತಿತ್ತು. ಆದರೆ ಅಷ್ಟರಲ್ಲಾಗಲೇ ಯಡಿಯೂರಪ್ಪ ಅವರು ತಾವು ಚುನಾವಣ ರಾಜಕಾರಣದಿಂದ ದೂರ ಉಳಿಯುತ್ತೇನೆ.

ಹೀಗಾಗಿ ಶಿಕಾರಿಪುರ ಕ್ಷೇತ್ರದಿಂದ ವಿಜಯೇಂದ್ರ ಸ್ಪರ್ಧಿಸುತ್ತಾರೆ ಎಂದು ಹೇಳಿದ್ದರು. ಇದಕ್ಕೆ ಒಪ್ಪಿಗೆ ಸೂಚಿಸಿದ್ದ ವಿಜಯೇಂದ್ರ ಅಂದಿನಿಂದಲೇ ಶಿಕಾರಿಪುರದಲ್ಲಿ ನಿರಂತರವಾಗಿ ಪ್ರಚಾರ ನಡೆಸಲಾರಂಭಿಸಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿರುವ ವಿಜಯೇಂದ್ರ, “ನಾನು ಶಿಕಾರಿಪುರದಲ್ಲೇ ಸ್ಪ ರ್ಧಿಸಬೇಕೆಂಬುದು ಜನರ ಇಚ್ಛೆ. ಹೀಗಾಗಿಯೇ ಈಗಾಗಲೇ ಶಿಕಾರಿಪುರದಲ್ಲಿ ಎರಡು ಸುತ್ತಿನ ಪ್ರಚಾರ ಕಾರ್ಯ ನಡೆಸಿದ್ದೇನೆ’ ಎಂದಿದ್ದಾರೆ.

ವಿಜಯೇಂದ್ರ ಪರವಾಗಿ ಅವರ ಸಹೋದರ, ಸಂಸದ ಬಿ.ವೈ. ರಾಘವೇಂದ್ರ ಬ್ಯಾಟಿಂಗ್‌ ನಡೆಸಿದ್ದಾರೆ. ಶಿಕಾರಿಪುರದಲ್ಲೇ ವಿಜಯೇಂದ್ರ ಸ್ಪರ್ಧೆ ಮಾಡಬೇಕು ಎಂಬುದು ಕಾರ್ಯಕರ್ತರ ಇಚ್ಛೆ. ಹೀಗಾಗಿಯೇ ವಿಜಯೇಂದ್ರ ಶಿಕಾರಿಪುರದಲ್ಲಿ ಪ್ರವಾಸ ಮಾಡುತ್ತಿದ್ದಾರೆ.

ಕಾಂಗ್ರೆಸ್‌ ಟಿಕೆಟ್‌ ಯಾರಿಗೆ?
ಕಾಂಗ್ರೆಸ್‌ನಿಂದ 10 ಮಂದಿ ಆಕಾಂಕ್ಷಿಗಳಿದ್ದು ಎರಡು ಪಟ್ಟಿ ರಿಲೀಸ್‌ ಆದರೂ ಅಭ್ಯರ್ಥಿ ಅಂತಿಮಗೊಂಡಿಲ್ಲ. ಈಚೆಗೆ ಟಿಕೆಟ್‌ ಆಕಾಂಕ್ಷಿಗಳ ಬೆಂಬಲಿಗರು ಸಿದ್ದರಾಮಯ್ಯ ಮನೆ ಮುಂದೆ ಪ್ರತಿಭಟನೆ ಮಾಡಿ ಒಳ ಒಪ್ಪಂದ ಆರೋಪ ಮಾಡಿದ್ದರು. ಲಿಂಗಾಯತ ಅಭ್ಯರ್ಥಿಗೆ ಟಿಕೆಟ್‌ ನೀಡದೆ ವಂಚನೆ ಮಾಡಲಾಗುತ್ತಿದೆ ಎಂದಿದ್ದರು. ಲಿಂಗಾಯತ ಸಮುದಾಯದ ಪುಷ್ಪಾ ಶಿವಕುಮಾರ್‌, ನಾಗರಾಜ ಗೌಡ ಹಾಗೂ ಗೋಣಿ ಮಾಲತೇಶ್‌ ಹೆಸರು ಮುಂಚೂಣಿಯಲ್ಲಿದೆ. ಬಿಜೆಪಿಗೆ ಈ ಬಾರಿ ಟಕ್ಕರ್‌ ಕೊಡಬೇಕೆಂಬ ಉತ್ಸಾಹದಲ್ಲಿ ಕಾರ್ಯಕರ್ತರಿದ್ದರೆ ಹೈಕಮಾಂಡ್‌ ಮಾತ್ರ ಟಿಕೆಟ್‌ ಕೊಡುವಲ್ಲಿ ಮೀನಾಮೇಷ ಎಣಿಸುತ್ತಿದೆ. ಯಾರಿಗೇ ಕೊಟ್ಟರೂ ಒಗ್ಗಟ್ಟಿನಿಂದ ಕೆಲಸ ಮಾಡುವುದಾಗಿ ಎಲ್ಲ ಅಭ್ಯರ್ಥಿಗಳು ಘೋಷಿಸಿದ್ದರು. ಕಾಂಗ್ರೆಸ್‌ ಪ್ರಬಲ ಅಭ್ಯರ್ಥಿಗೆ ಮಣೆ ಹಾಕುವುದೇ ಅಥವಾ ಒಳ ಒಪ್ಪಂದ ಆರೋಪಕ್ಕೆ ಗುರಿಯಾಗುವುದೇ ಕಾದು ನೋಡಬೇಕಿದೆ.

Advertisement

ಜೆಡಿಎಸ್‌ಗಿಲ್ಲ ಅಭ್ಯರ್ಥಿ
ಕಳೆದ ಬಾರಿ ಜೆಡಿಎಸ್‌ ಚಿಹ್ನೆಯಡಿ ಸ್ಪರ್ಧಿಸಿದ್ದ ಎಚ್‌.ಟಿ.ಬಳಿಗಾರ್‌ ಅವರು ಚುನಾವಣೆ ಘೋಷಣೆ ಮುನ್ನವೇ ಬಿಜೆಪಿ ಸೇರಿದ್ದರು. ಹಾಗಾಗಿ ಜೆಡಿಎಸ್‌ಗೆ ಈ ಬಾರಿ ಯಾರು ಅಭ್ಯರ್ಥಿಯಾಗುತ್ತಾರೆ ಗೊತ್ತಿಲ್ಲ. ಕಾಂಗ್ರೆಸ್‌ನ ಬಂಡಾಯ ಅಭ್ಯರ್ಥಿಗಳು ಅಥವಾ ಹೊಸ ಅಭ್ಯರ್ಥಿಗೆ ಟಿಕೆಟ್‌ ಘೋಷಿಸುತ್ತಾರೋ ತಿಳಿಯದಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next