Advertisement
ವಿಧಾನಸಭಾ ಸಾರ್ವತ್ರಿಕ ಚುನಾವಣೆ ಪ್ರಯುಕ್ತ ಜಿಲ್ಲೆಯಲ್ಲಿ ಮತದಾರರಿಗೆ ಜಾಗೃತಿ ಮತ್ತು ಮತದಾನದ ಮಹತ್ವದ ಕುರಿತು ಅರಿವು ಮೂಡಿಸುತ್ತಿರುವ ಸ್ವೀಪ್ ಸಮಿತಿ ಕಳೆದ ಬಾರಿಗಿಂತ ಹೆಚ್ಚಿನ ಮತದಾನ ನಡೆಸಲು ಅನೇಕ ಕ್ರಮಗಳನ್ನು ಕೈಗೊಂಡಿದೆ.
ಪ್ರಸ್ತುತ ಸಾಮಾಜಿಕ ಮಾಧ್ಯಮಗಳ ಮೂಲಕ ಎಷ್ಟೇ ದೂರದಲ್ಲಿದ್ದರೂ ಸುಲಭವಾಗಿ ಸಂಪರ್ಕಿಸಲು ಸಾಧ್ಯವಾಗಲಿದ್ದು, ಇದನ್ನು ಬಳಸಿಕೊಂಡು ಹೊರದೇಶ ಮತ್ತು ಹೊರ ರಾಜ್ಯದಲ್ಲಿರುವ ಜಿಲ್ಲೆಯ ವಿವಿಧ ಸಂಘಟನೆಗಳ ಮುಖ್ಯಸ್ಥರು ಮತ್ತು ಪ್ರತಿನಿಧಿಗಳೊಂದಿಗೆ ಝೂಮ್ ಅಥವಾ ಯುಟ್ಯೂಬ್ ಮೂಲಕ ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷರಾಗಿರುವ ಜಿ.ಪಂ. ಸಿಇಒ ಸಭೆ ನಡೆಸಲಿದ್ದು, ಮತದಾನದ ಮಹತ್ವದ ಬಗ್ಗೆ ಜಾಗೃತಿ ಮತ್ತು ಅರಿವು ಮೂಡಿಸುವ ಚಿಂತನೆ ನಡೆದಿದೆ.
Related Articles
ವಿದೇಶದಲ್ಲಿರುವವರನ್ನು ಮತದಾನಕ್ಕೆ ಕರೆತರಲು ಅವರ ಪೋಷಕರು ಮತ್ತು ಅಪ್ತರ ಮೂಲಕ ಮತದಾನ ದಿನವಾದ ಮೇ 10ರಂದು ಮನೆಗಳಿಗೆ ಆಗಮಿಸುವಂತೆ ಮನವೊಲಿಸುವ ಪ್ರಯತ್ನ ನಡೆಯುತ್ತಿದೆ. ತಮ್ಮ ಮಕ್ಕಳಿಗೆ ಪತ್ರ ಬರೆಯುವಂತೆ ಪೋಷಕರನ್ನು ಪ್ರೇರೇಪಿಸ ಲಾಗುತ್ತಿದೆ. ಈ ಪತ್ರದಲ್ಲಿ ಚುನಾವಣೆಗಾಗಿ ನೀವು ಓದಿದ ಶಾಲೆಯ ಕಟ್ಟಡಗಳು ಸಾಂಪ್ರದಾಯಿಕ ಚಿತ್ರಗಳ ವಿನ್ಯಾಸದೊಂದಿಗೆ ಆಕರ್ಷಕವಾಗಿ ಶೃಂಗಾರಗೊಂಡಿರುವ ಬಗ್ಗೆ, ಮತದಾನ ದಿನದಂದು ಮತದಾನಕ್ಕೆ ಆಗಮಿಸಲು ಬರುವ ನಿಮ್ಮ ನಿರೀಕ್ಷೆಯನ್ನು ಕಾತರದಿಂದ ಕಾಣುತ್ತಿರುವ ನಿಮ್ಮ ಇಲ್ಲಿನ ಸ್ನೇಹಿತರನ್ನೂ, ಬಂಧುಗಳ ಆಶಯವನ್ನೂ ತಿಳಿಸುವ ಉದ್ದೇಶ ಹೊಂದಲಾಗಿದೆ.
Advertisement
ಜಿಲ್ಲೆಯ ಸಾವಿರಕ್ಕೂ ಅಧಿಕ ಮಂದಿ ವಿದೇಶ ಮತ್ತು ಹೊರರಾಜ್ಯದಲ್ಲಿ ನಲೆಸಿದ್ದು, ಜಿಲ್ಲೆಯೊಂದಿಗೆ ಎಲ್ಲ ರೀತಿಯ ಭಾವನಾತ್ಮಕ ಸಂಬಂಧಗಳನ್ನು ಹೊಂದಿದ್ದಾರೆ. ಜಿಲ್ಲೆಯ ಪ್ರಗತಿ ಬಗ್ಗೆ ವಿಶೇಷ ಕಾಳಜಿಯನ್ನೂ ಹೊಂದಿದ್ದಾರೆ. ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಉತ್ತಮ ನಾಯಕನನ್ನು ಆಯ್ಕೆ ಮಾಡುವ ಅತ್ಯಂತ ಮಹತ್ವದ ಘಟ್ಟವಾದ ಮತದಾನ ಪ್ರಕ್ರಿಯೆಯಲ್ಲಿ ಎಲ್ಲ ನಾಗರಿಕರೂ ಭಾಗವಹಿಸಿ ತಮ್ಮ ಹಕ್ಕು ಚಲಾಯಿಸಬೇಕು. ಇದಕ್ಕಾಗಿ ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ವಿನೂತನಪ್ರಯತ್ನ ಮಾಡಲಾಗುತ್ತಿದೆ.
– ಪ್ರಸನ್ನ ಎಚ್., ಅಧ್ಯಕ್ಷರು ಜಿಲ್ಲಾ ಸ್ವೀಪ್ ಸಮಿತಿ ಹಾಗೂ ಸಿಇಒ ಜಿ.ಪಂ.