Advertisement

Karnataka election 2023: ಇಂದಿನಿಂದ ಬಿಜೆಪಿ ಮಹಾಪ್ರಚಾರ ಅಭಿಯಾನ

01:14 AM Apr 25, 2023 | Team Udayavani |

ಬೆಂಗಳೂರು: ಮತದಾರರ ಮನ ಸೆಳೆಯುವುದಕ್ಕಾಗಿ ಬಿಜೆಪಿಯು ಮಂಗಳವಾರ, ಬುಧವಾರ ರಾಜ್ಯದ ಎಲ್ಲ ಕ್ಷೇತ್ರಗಳ ವ್ಯಾಪ್ತಿಯಲ್ಲಿ “ವಿಶೇಷ ಮಹಾ ಪ್ರಚಾರ ಅಭಿಯಾನ’ ಆಯೋಜಿಸಿದೆ. ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಸಹಿತ 98 ಮಂದಿ ಪಕ್ಷದ ಘಟಾನುಘಟಿ ನಾಯಕರು ಈ ಅಭಿಯಾನದಲ್ಲಿ ಭಾಗಿಯಾಗಿ ಕೇಸರಿ ಕಹಳೆ ಮೊಳಗಿಸಲಿದ್ದಾರೆ.

Advertisement

ಜೆ.ಪಿ. ನಡ್ಡಾ, ಅಮಿತ್‌ ಶಾ, ರಾಜನಾಥ್‌ ಸಿಂಗ್‌, ಅರುಣ್‌ ಸಿಂಗ್‌, ಸ್ಮತಿ ಇರಾನಿ, ಧರ್ಮೇಂದ್ರ ಪ್ರಧಾನ್‌, ನಿರ್ಮಲಾ ಸೀತಾರಾಮನ್‌, ಮನಸುಖ ಮಾಂಡವಿಯಾ, ಯೋಗಿ ಆದಿತ್ಯನಾಥ್‌, ದೇವೇಂದ್ರ ಫ‌ಡ್ನವೀಸ್‌, ಅಣ್ಣಾಮಲೈ ಸೇರಿದಂತೆ 98 ನಾಯಕರು ಪಾಲ್ಗೊಳ್ಳಲಿದ್ದಾರೆ.

ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲು ಹಾಗೂ ಕೇಂದ್ರ ಸಚಿವೆ, ರಾಜ್ಯ ಬಿಜೆಪಿ ಚುನಾವಣ ಸಂಚಾಲಕಿ ಶೋಭಾ ಕರಂದ್ಲಾಜೆ ಬೆಂಗಳೂರಿನಲ್ಲಿ ನಡೆಸಿದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಈ ವಿಚಾರ ತಿಳಿಸಿದ್ದಾರೆ.

ಪರಿಚಯ ಜತೆ ಪ್ರಚಾರ
ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಮಾತನಾಡಿ, ಎಲ್ಲ 224 ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಸ್ಪರ್ಧಿಸುತ್ತಿದ್ದಾರೆ. ಕೇಂದ್ರ ನಾಯಕರಾದ ಅಮಿತ್‌ ಶಾ, ಜೆ.ಪಿ. ನಡ್ಡಾ ಪ್ರಚಾರ ಪ್ರವಾಸ ಆರಂಭಿಸಿದ್ದಾರೆ. ಒಂದು ತಿಂಗಳ ಹಿಂದೆ ಆರಂಭಿಸಿದ ಬೂತ್‌ ವಿಜಯ ಅಭಿಯಾನದಲ್ಲಿ ಡಬಲ್‌ ಎಂಜಿನ್‌ ಸರಕಾರದ ಸಾಧನೆಗಳು ಮತ್ತು ಯೋಜನೆಗಳನ್ನು ಕಾರ್ಯಕರ್ತರು ಮನೆ-ಮನೆಗೆ ತಲುಪಿಸಿದ್ದಾರೆ. ಇನ್ನು ಅಭ್ಯರ್ಥಿಗಳ ಪರಿಚಯದೊಂದಿಗೆ ಕಾರ್ಯಕರ್ತರು ಪ್ರಚಾರ ನಡೆಸಲಿದ್ದಾರೆ ಎಂದರು.

ಮತಗಟ್ಟೆ ಆಧಾರದಡಿ ವಿಶೇಷ ಮಹಾ ಪ್ರಚಾರ ಅಭಿಯಾನವನ್ನು ಬಿಜೆಪಿ ಹಮ್ಮಿಕೊಂಡಿದೆ. ಕೇಂದ್ರ, ರಾಜ್ಯ ಹಾಗೂ ಜಿಲ್ಲಾ ಮಟ್ಟದ ನಾಯಕರು ಈ ಅಭಿಯಾನದಲ್ಲಿ ಪಾಲ್ಗೊಳ್ಳಲಿದ್ದಾರೆ. ಎಲ್ಲ 224 ಕ್ಷೇತ್ರಗಳಲ್ಲಿ ಸಾರ್ವಜನಿಕ ಸಭೆ, ರೋಡ್‌ ಶೋ, ಪತ್ರಿಕಾಗೋಷ್ಠಿ, ಮನೆ-ಮನೆಗೆ ಭೇಟಿ ಮುಂತಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ವಿವರಿಸಿದರು.

Advertisement

ಆರಂಭದಲ್ಲಿ ಮಂದಿರ, ದೇವಸ್ಥಾನಗಳಿಗೆ ಭೇಟಿ ನೀಡಿ ಬಳಿಕ ರಾಷ್ಟ್ರ ನಾಯಕರ ಪ್ರತಿಮೆಗಳಿಗೆ ಮಾಲಾರ್ಪಣೆ ಮಾಡುತ್ತೇವೆ. ಅನಂತರ ಕೇಂದ್ರ ಹಾಗೂ ರಾಜ್ಯ ಸರಕಾರಗಳ ವಿವಿಧ ಯೋಜನೆಗಳ ಫ‌ಲಾನುಭವಿಗಳು ಮತ್ತು ಸಮುದಾಯಗಳ ಮುಖಂಡರೊಂದಿಗೆ ಸಂವಾದ ನಡೆಯುತ್ತದೆ. ಕಾರ್ಯಕರ್ತರ ಆಧಾರದಡಿ ಬಿಜೆಪಿ ಚುನಾವಣೆ ಎದುರಿಸಲಿದೆ ಎಂದರು.

ಮೀಸಲಾತಿ ಮಾಹಿತಿ
ಶೋಭಾ ಕರಂದ್ಲಾಜೆ ಮಾತನಾಡಿ, ಅಭಿಯಾನದಡಿ ಪಕ್ಷದ ನಾಯಕರು ಮತ್ತು ಕಾರ್ಯಕರ್ತರು ಹಿಂದುಳಿದ ಮತ್ತು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಕಾಲೊನಿಗಳಿಗೆ ಭೇಟಿ ನೀಡಿ ಸರಕಾರ ಒದಗಿಸಿರುವ ಮೀಸಲಾತಿಯ ಬಗ್ಗೆ ತಿಳಿಸಲಿದ್ದಾರೆ. ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ನಾಲ್ಕು ದಿನ ದಕ್ಷಿಣ, ಕನ್ನಡ, ಕರಾವಳಿ, ಕಿತ್ತೂರು ಕರ್ನಾಟಕ, ಕಲ್ಯಾಣ ಕರ್ನಾಟಕದಲ್ಲಿ ಪ್ರಚಾರ ನಡೆಸಲಿದ್ದಾರೆ. ಅಮಿತ್‌ ಶಾ 35ರಿಂದ 40 ಕ್ಷೇತ್ರಗಳಲ್ಲಿ ಚುನಾವಣ ಪ್ರಚಾರ ನಡೆಸಲಿದ್ದಾರೆ ಎಂದು ವಿವರಿಸಿದರು.

ಮತ ಬ್ಯಾಂಕ್‌ಗಾಗಿ ಕಾಂಗ್ರೆಸ್‌ ಒಂದು ಸಮುದಾ ಯದ ಓಲೈಕೆ ಮಾಡುತ್ತಿದೆ. ಯಡಿಯೂರಪ್ಪ ಮುಖ್ಯ ಮಂತ್ರಿಯಾಗಿದ್ದಾಗ ಭಾಗ್ಯಲಕ್ಷ್ಮೀ, ಸಂಧ್ಯಾ ಸುರಕ್ಷಾ ಸೇರಿದಂತೆ ಎಲ್ಲ ವರ್ಗಗಳಿಗೂ ಪ್ರಯೋಜನವಾಗುವ ಯೋಜನೆಗಳನ್ನು ರೂಪಿಸಿದ್ದರು. ಬಿಜೆಪಿಯು ಒಂದು ಧರ್ಮಕ್ಕಾಗಿ ಯೋಜನೆಗಳನ್ನು ರೂಪಿಸಿಲ್ಲ. ಆದರೆ ಸಿದ್ದರಾಮಯ್ಯ ಕೇವಲ ಒಂದು ಸಮುದಾಯಕ್ಕಾಗಿ ಶಾದಿ ಭಾಗ್ಯ ಯೋಜನೆ ಜಾರಿಗೆ ತಂದಿದ್ದರು ಎಂದು ಆರೋಪಿಸಿದರು.

ನಾಳೆಯಿಂದ ಯೋಗಿ ಪ್ರಚಾರ
ಯೋಗಿ ಆದಿತ್ಯ ನಾಥ್‌ ಸ್ಟಾರ್‌ ಪ್ರಚಾರಕ ರಾಗಿ ಬುಧವಾರ ಅಖಾಡಕ್ಕಿಳಿಯಲಿದ್ದಾರೆ. ಮಂಡ್ಯ, ಬಸವನಬಾಗೇವಾಡಿ, ಇಂಡಿಯಲ್ಲಿ ಪ್ರಚಾರ ಮಾಡಲಿದ್ದಾರೆ. ಎ. 27ರಂದು ಮಂಗಳೂರು, ಕಾಪುವಿಗೆ ಅಮಿತ್‌ ಶಾ ಬರುವ ನಿರೀಕ್ಷೆ ಇದೆ.

Advertisement

Udayavani is now on Telegram. Click here to join our channel and stay updated with the latest news.

Next