ಬೆಂಗಳೂರು: ಸಾರ್ವಜನಿಕರಿಗೆ ದಸ್ತಾವೇಜು ನೋಂದಣಿ ವಿಚಾರದಲ್ಲಿ ಸೃಷ್ಟಿಯಾಗಿ ರುವ ಇ-ಖಾತಾ ಸಮಸ್ಯೆ ಪರಿಹರಿ ಸುವುದಕ್ಕಾಗಿ ಬುಧವಾರ ಉನ್ನತ ಮಟ್ಟದ ಸಭೆ ಆಯೋಜಿಸಲಾಗಿದೆ.
ಕಂದಾಯ ಸಚಿವ ಕೃಷ್ಣಬೈರೇಗೌಡ, ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ, ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್, ಪೌರಾಡಳಿತ ಸಚಿವ ರಹೀಂ ಖಾನ್ ಭಾಗವಹಿಸಲಿದ್ದಾರೆ.
ಸ್ಥಿರಾಸ್ತಿ ದಸ್ತಾವೇಜು ನೋಂದಣಿಗೆ ಕಾವೇರಿ-2 ತಂತ್ರಾಂಶದೊಂದಿಗೆ ಇ-ಆಸ್ತಿ ಮತ್ತು ಇ-ಸ್ವತ್ತು ತಂತ್ರಾಂಶವನ್ನು 2014ರಲ್ಲೇ ಸಂಯೋಜನೆ ಗೊಳಿಸಲಾಗಿದೆ. ಹೀಗಾಗಿ ಈಗ ಇ-ಖಾತಾ ಕಡ್ಡಾಯವಾಗಿರುತ್ತದೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ತುರ್ತಾಗಿ ಇ-ಖಾತಾ ವಿತರಣೆ ಮಾಡುವುದಕ್ಕೆ ಇರುವ ಸಮಸ್ಯೆ ನಿವಾರಣೆ ಮಾಡುವುದು ಸಭೆಯ ಮುಖ್ಯ ಧ್ಯೇಯವಾಗಿದೆ.
ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಸೇರಿದಂತೆ ಹಲವೆಡೆ ಇ-ಆಸ್ತಿ ಖಾತೆಗಳಲ್ಲಿ ಜಾಗದ ಅಳತೆ ವಿವರಗಳು ನಮೂದಾಗದೇ ಇರುವುದರಿಂದ ಕಾವೇರಿ-2 ತಂತ್ರಾಂಶದಲ್ಲಿ ನೋಂದಣಿಯಾಗುತ್ತಿಲ್ಲ. ಕೃಷಿ ಜಮೀನು ಭೂ ಪರಿವರ್ತನೆ ಬಳಿಕ ನಿವೇಶನ ಬಿಡುಗಡೆಗೊಳಿಸುವ ಪೂರ್ವದಲ್ಲಿ ಉದ್ಯಾನವನ, ಸಿಎ ಸೈಟ್, ರಸ್ತೆ ಜಮೀನು ಪರಿತ್ಯಾಜನ ಪತ್ರ ನೀಡುವುದಕ್ಕೂ ಇ-ಖಾತೆ ಮಂಜೂರು ಮಾಡುವ ವಿಚಾರ ಈ ಸಭೆಯಲ್ಲಿ ಪ್ರಸ್ತಾವವಾಗಲಿದೆ.
ಒಂದು ಸ್ಥಿರಾಸ್ತಿಯನ್ನು ವಿಭಜಿಸಿ ಮಾರಾಟ ಮಾಡುವ ಸಂದರ್ಭದಲ್ಲಿ ನೋಂದಣಿಗಾಗಿ ಈ ಖಾತೆಯನ್ನೂ ವಿಭಜಿಸಬೇಕಾಗುತ್ತದೆ. ಇಲ್ಲವಾದರೆ ನೋಂದಣಿ ಸಾಧ್ಯವಾಗುವುದಿಲ್ಲ. ಇದು ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ಮಹಾನಗರ ಪಾಲಿಕೆ ನೀಡುತ್ತಿರುವ ಟಿಡಿಆರ್ ಪುನರ್ ಬಳಕೆ ತಡೆಯುವುದು, ಯೋಜನಾ ಪ್ರಾಧಿಕಾರದಿಂದ ಬಡಾವಣೆ ನಿರ್ಮಾಣಕ್ಕೆ ಅನುಮತಿ ಪಡೆಯದೇ ಜಮೀನು ಮಾರಾಟ ಮಾಡುವಾಗಿನ ಮಾರ್ಗಸೂಚಿ ದರ ನಿಗದಿ ಮಾಡುವುದು ಸೇರಿದಂತೆ ಹಲವು ವಿಚಾರಗಳ ಬಗ್ಗೆ ಈ ಸಭೆಯಲ್ಲಿ ನಿರ್ಣಯ ತೆಗೆದುಕೊಳ್ಳುವ ಸಾಧ್ಯತೆ ಇದೆ.