ಹೊಸದಿಲ್ಲಿ/ ಬೆಂಗಳೂರು: ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ (CWMA) ನಿರ್ದೇಶನಗಳನ್ನು ಅನುಸರಿಸಿ ಕರ್ನಾಟಕ ತಮಿಳುನಾಡಿಗೆ ಕಾವೇರಿ ನೀರನ್ನು ಬಿಡುಗಡೆ ಮಾಡಲು ಪ್ರಾರಂಭಿಸಿದ ಕಾರಣದ ರಾಜ್ಯದ ದಕ್ಷಿಣ ಭಾಗಗಳಲ್ಲಿ ಪ್ರತಿಭಟನೆಗಳು ಭುಗಿಲೆದ್ದಿವೆ. ಈ ನಡುವೆ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಹೊಸದಿಲ್ಲಿಯಲ್ಲಿ ಗುರುವಾರ ಕಾನೂನು ತಜ್ಞರೊಂದಿಗೆ ಮಹತ್ವದ ಸಭೆ ನಡೆಸಿದ್ದಾರೆ.
ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ.ಶಿವಕುಮಾರ್, ”ಇಂದು ನಾವು ನಮ್ಮ ಎಲ್ಲಾ ಕಾನೂನು ತಜ್ಞರೊಂದಿಗೆ ಸಭೆ ನಡೆಸಿದ್ದೇವೆ. ಇಡೀ ತಂಡ ಕರ್ನಾಟಕವನ್ನು ಪ್ರತಿನಿಧಿಸುತ್ತಿರುವ ನಮ್ಮ ಹಿರಿಯ ವಕೀಲರನ್ನು ಭೇಟಿ ಮಾಡುತ್ತೇವೆ. ನಮಗೆ 5,000 ಕ್ಯೂಸೆಕ್ ಬಿಡುಗಡೆ ಮಾಡಲು ಆದೇಶ ನೀಡಲಾಗಿದೆ. ನೀರು ಹರಿದು ಹೋಗುತ್ತಿರುವುದು ಕರ್ನಾಟಕಕ್ಕೆ ದೊಡ್ಡ ನೋವಾಗಿದೆ, ಇಲ್ಲಿ ನೀರಿಲ್ಲ, ಮಳೆ ಇಲ್ಲ.ಅವರು ಕರ್ನಾಟಕದವರ ಭಾವನೆಗಳನ್ನು ಮತ್ತು ರೈತರನ್ನು ಗೌರವಿಸುತ್ತಾರೆ ಎಂದು ಭಾವಿಸುತ್ತೇವೆ.ನಾವೂ ತಮಿಳುನಾಡಿನ ರೈತರನ್ನು ಗೌರವಿಸುತ್ತೇವೆ.ಆದರೆ ಕರ್ನಾಟಕ ಅತ್ಯಂತ ಗಂಭೀರ ಪರಿಸ್ಥಿತಿಯಲ್ಲಿ ನಮ್ಮ ಮನವಿ ಏನೆಂದರೆ ಮೇಕೆದಾಟುವೊಂದೇ ಪರಿಹಾರ…ಮೇಕೆದಾಟು ಕರ್ನಾಟಕಕ್ಕಲ್ಲ, ತಮಿಳುನಾಡಿಗೆ ನೆರವಾಗಲಿದೆ” ಎಂದು ಹೇಳಿದ್ದಾರೆ.
ಭಾರಿ ಪ್ರತಿಭಟನೆ
ಸರಕಾರದ ಕ್ರಮದ ವಿರುದ್ಧ ವಿವಿಧ ರೈತ ಸಂಘಟನೆಗಳು ಕಾವೇರಿ ಹೃದಯ ಭಾಗದ ಮೈಸೂರು, ಮಂಡ್ಯ ಮತ್ತು ಚಾಮರಾಜನಗರದಲ್ಲಿ ಧರಣಿ ನಡೆಸಿವೆ. ಕರ್ನಾಟಕದ ಹಿತಾಸಕ್ತಿ ಕಾಪಾಡಲು ಕಾಂಗ್ರೆಸ್ ಸರ್ಕಾರ ಏನನ್ನೂ ಮಾಡುತ್ತಿಲ್ಲ ಎಂದು ಬಿಜೆಪಿ ಆರೋಪಿಸಿದೆ. ಡಿಎಂಕೆ ನೇತೃತ್ವದ ತಮಿಳುನಾಡು ಸರ್ಕಾರದ ವಿರುದ್ಧ ಕಾನೂನು ಹೋರಾಟವನ್ನು ಸರಿಯಾಗಿ ನಡೆಸುತ್ತಿಲ್ಲ ಎಂದು ಆರೋಪಿಸಿದೆ.
CWMA ಯ ಆಗಸ್ಟ್ 28 ರ ನಿರ್ದೇಶನದ ನಂತರ ಕರ್ನಾಟಕ ಸರ್ಕಾರವು ಬುಧವಾರ 5,000 ಕ್ಯೂಸೆಕ್ ನೀರನ್ನು ಬಿಡುಗಡೆ ಮಾಡಲು ಪ್ರಾರಂಭಿಸಿದೆ. ಈ ಹಿಂದೆ ಪ್ರತಿನಿತ್ಯ 10,000 ಕ್ಯೂಸೆಕ್ ನೀರು ಬಿಡುವಂತೆ ಸಿಡಬ್ಲ್ಯುಎಂಎ ಕರ್ನಾಟಕಕ್ಕೆ ಆದೇಶ ನೀಡಿತ್ತು. ಆರಂಭದಲ್ಲಿ ಕೆಲವು ದಿನಗಳ ಕಾಲ ಅದನ್ನು ಬಿಡುಗಡೆ ಮಾಡಿದ ನಂತರ, ಕರ್ನಾಟಕವು ಮತ್ತೆ CWMA ಅನ್ನು ಸಂಪರ್ಕಿಸಿ ಕಾವೇರಿ ಜಲಾನಯನ ಪ್ರದೇಶದಲ್ಲಿ ಸಮರ್ಪಕ ಮಳೆ ಇಲ್ಲ ಎಂದು ಹೇಳಿತ್ತು. ಕರ್ನಾಟಕದ ದೃಷ್ಟಿಕೋನವನ್ನು ಪರಿಗಣಿಸಿ, ಕರ್ನಾಟಕ ಮತ್ತು ತಮಿಳುನಾಡು ಗಡಿಯಲ್ಲಿರುವ ಬಿಳಿಗುಂಡ್ಲುವಿಗೆ ಪ್ರತಿದಿನ 5,000 ಕ್ಯೂಸೆಕ್ ನೀರು ತಲುಪುವುದನ್ನು ಖಚಿತಪಡಿಸಿಕೊಳ್ಳಲು CWMA ಸರಕಾರಕ್ಕೆ ನಿರ್ದೇಶನ ನೀಡಿದೆ.