ಮುಂಬಯಿ: ಮಾನವ ಸಂಪನ್ಮೂಲಗಳನ್ನು ಕ್ರೋಢೀಕರಿಸಿ ಸ್ವಾವಲಂಬನೆ, ಸ್ವಂತ ಉದ್ಯೋಗ, ಉನ್ನತ ಶಿಕ್ಷಣ ಆರ್ಥಿಕ ಸಾಲವನ್ನು ನೀಡಿ ಜನ ಸಾಮಾನ್ಯರ ಬದುಕನ್ನು ಮೇಲ್‌ಸ್ತರಕ್ಕೆ ತಲುಪಿಸಿದೆ. ನೋಟು ಅಮಾನ್ಯದಂತಹ ಆರ್ಥಿಕ ಪ್ರತಿಕೂಲ ಸಂದರ್ಭದಲ್ಲೂ ವಸಾಯಿಯ ಕರ್ನಾಟಕ ಕೋ ಆಪರೇಟಿವ್ ಕ್ರೆಡಿಟ್ ಸೊಸೈಟಿಯು ಪರಿಸ್ಥಿತಿಯನ್ನು ಸವಾಲಾಗಿ ಸ್ವೀಕರಿಸಿ ಯಶಸ್ವಿಯಾಗಿದೆ. ಆರ್ಥಿಕ ವರ್ಷದಲ್ಲಿ ಠೇವಣಿ 569 ಲಕ್ಷ ರೂ. ಗಳಷ್ಟು ಸಾಧಿಸಿರುವುದು ಆಶಾದಾಯಕ ಬೆಳವಣಿಗೆಯಾಗಿದೆ. 222 ಲಕ್ಷ ರೂ. ಸಾಲ ನೀಡಿ ಸ್ವಉದ್ಯೋಗಿಗಳಿಗೆ ಉತ್ತೇಜನ ನೀಡಿದೆ. ಅನುತ್ಪಾದಕ ಆಸ್ತಿ ಶೂನ್ಯವಾಗಿದ್ದು, ಶೇರುದಾರರಿಗೆ ಶೇ. 13 ಲಾಭಾಂಶ ಘೋಷಿದೆ ಎಂದು ಕರ್ನಾಟಕ ಕೋ ಆಪರೇಟಿವ್ ಕ್ರೆಡಿಟ್ ಸೊಸೈಟಿ ವಸಾಯಿ ಇದರ ಕಾರ್ಯಾಧ್ಯಕ್ಷ ಭಾಸ್ಕರ ಕೆ. ಶೆಟ್ಟಿ ನುಡಿದರು.
ಸೆ. 3ರಂದು ವಸಾಯಿ ಪಶ್ಚಿಮದ ಬಬೋಲದ ಪಾಪಾಡಿರೋಡ್‌ನ ಡಿ. ಸಿ. ಕ್ಲಬ್ ಹಾಲ್‌ನಲ್ಲಿ ನಡೆದ ಕರ್ನಾಟಕ ಕೋ ಆಪರೇಟಿವ್ ಕ್ರೆಡಿಟ್ ಸೊಸೈಟಿಯ 21ನೇ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮಾತೃಸಂಸ್ಥೆ ವಸಾಯಿ ಕರ್ನಾಟಕ ಸಂಘದ ಆಡಳಿತ ಮಂಡಳಿಯು ಸೊಸೈಟಿಯ ಸರ್ವರ್ತೋಮುಖ ಅಭಿವೃದ್ಧಿಗೆ ಕಾರಣಿಭೂತರಾಗಿದೆ. ಮಾಜಿ ಉಪಕಾರ್ಯಾಧ್ಯಕ್ಷ ಕರ್ನಿರೆ ಶ್ರೀಧರ ಶೆಟ್ಟಿ ಅವರ ತ್ಯಾಗಮಯ ಜೀವನ, ಆದರ್ಶ ಬದುಕು ಕ್ರೆಡಿಟ್ ಸೊಸೈಟಿಯ ಶ್ರೇಷ್ಠತೆಯನ್ನು ಹೆಚ್ಚಿಸಿದೆ. ತುಳು-ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ಸಂಸ್ಥೆಯ ಶೇರುದಾರರಾಗಿ ಅಭಿವೃದ್ಧಿಯ ಪಥಕ್ಕೆ ಸಹಕರಿಸಬೇಕು ಎಂದು ವಿನಂತಿಸಿದರು.
ಸೊಸೈಟಿಯ ಕಾರ್ಯದರ್ಶಿ ಓ. ಪಿ. ಪೂಜಾರಿ ಅವರು ಗತ ಮಹಾಸಭೆಯ ವರದಿ ವಾಚಿಸಿ ಮುಂದಿನ ಕಾರ್ಯಯೋಜನೆಗಳ ಬಗ್ಗೆ ತಿಳಿಸಿದರು. ವಸಾಯಿ ಕರ್ನಾಟಕ ಸಂಘದ ಗೌರವಾಧ್ಯಕ್ಷ ವಿಶ್ವನಾಥ ಪಿ. ಶೆಟ್ಟಿ ಮಾತನಾಡಿ, ಕರ್ನಾಟಕದ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಶೇರುದಾರರಾಗಬೇಕು. ಠೇವಣಿಗಳನ್ನಿತ್ತು ವಿವಿಧ ಸಾಲ, ಸೌಲಭ್ಯಗಳನ್ನು ಪಡೆದು ಆರ್ಥಿಕವಾಗಿ ಮುನ್ನಡೆಗೆ ಸಹಕರಿಸಬೇಕು ಎಂದರು.
ಭಾರತ್ ಬ್ಯಾಂಕಿನ ನಿರ್ದೇಶಕ ಕೆ. ಬಿ. ಪೂಜಾರಿ ಮಾತನಾಡಿ, ಕರ್ನಾಟಕ ಕೋ ಆಪರೇಟಿವ್ ಸೊಸೈಟಿಯು ಉತ್ತಮ ನಿರ್ದೇಶಕ ಮಂಡಳಿಯನ್ನು ಒಳಗೊಂಡಿದೆ. ಗುಣಮಟ್ಟದ ಸೇವೆಯೊಂದಿಗೆ ಪಾರದರ್ಶಕತೆಯನ್ನು ಕಾಯ್ದು ಕೊಂಡಿದೆ. ಭಾರತ್ ಬ್ಯಾಂಕ್‌ನಲ್ಲಿ ಅವರು ಖಾತೆ ಹೊಂದಿರುವುದು ನಮಗೆಲ್ಲ ಸಂತಸ ತಂದಿದೆ ಎಂದು ನುಡಿದರು.
ವಸಾಯಿ ಜಿಎಸ್‌ಬಿ ಸಮಾಜದ ದೇವೇಂದ್ರ ಭಕ್ತ, ಗಿರೀಶ್ ಲಾಲ್ವನಿ ಅವರು ಮಾತನಾಡಿ ಸಲಹೆ ಸೂಚನೆಗಳನ್ನು ನೀಡಿದರು. ಜಿಲ್ಲಾ ಅಭಿವೃದ್ಧಿ ವಿಭಾಗದ ಅಧಿಕಾರಿ ಪಿ. ಕೆ. ಪಾನಸ್ಕರ್ ಅವರು ಕ್ರೆಡಿಟ್ ಸೊಸೈಟಿಯ ಕ್ರಮ ನಿರ್ಬಂಧನೆಯ ಬಗ್ಗೆ ವಿವರಿಸಿದರು. ಮಹಾಸಭೆಯಲ್ಲಿ ಇತ್ತೀಚೆಗೆ ನಿಧನರಾದ ಕ್ರೆಡಿಟ್ ಸೊಸೈಟಿ ಮತ್ತು ಕರ್ನಾಟಕ ಸಂಘದ ಸ್ಥಾಪಕ ಕರ್ನಿರೆ ಶ್ರೀಧರ ಶೆಟ್ಟಿ ಅವರ ಭಾವಚಿತ್ರಕ್ಕೆ ಪುಷ್ಪವೃಷ್ಟಿಗೈದು ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಕೋಶಾಧಿಕಾರಿ ಮಂಜುಳಾ ಶೆಟ್ಟಿ ಅವರು ಆಯವ್ಯಯ ಪಟ್ಟಿಯನ್ನು ಮಂಡಿಸಿದರು. ವಸಾಯಿ ಕರ್ನಾಟಕ ಸಂಘದ ಗೌರವ ಪ್ರಧಾನ ಕಾರ್ಯದರ್ಶಿ ಎಚ್. ಜಿ. ಕುಂದರ್ ಕಾರ್ಯಕ್ರಮ ನಿರ್ವಹಿಸಿದರು. ವೇದಿಕೆಯಲ್ಲಿ ನಿರ್ದೇಶಕರಾದ ಪಾಂಡು ಎಲ್. ಶೆಟ್ಟಿ, ಮುಕುಂದ ಎಸ್. ಶೆಟ್ಟಿ, ದೇವೇಂದ್ರ ಬಿ. ಬುನ್ನಾನ್, ಶಶಿಕಾಂತ್ ಎನ್. ಶೆಟ್ಟಿ, ಉದ್ಧವ್ ಕಾಂಬ್ಳೆ ಅವರು ಉಪಸ್ಥಿತರಿದ್ದರು.
ಕ್ರೆಡಿಟ್ ಸೊಸೈಟಿಯ ಸಿಇಒ ರಮೇಶ್ ಆರ್. ಶಿರೋಲೆ, ಪ್ರಬಂಧಕ ರವಿಕಾಂತ್ ನಾಯಕ್, ಅಧಿಕಾರಿ ಸೋನಿ ವೈ. ಶೆಟ್ಟಿ, ಇತರ ಸಿಬಂದಿಗಳನ್ನು ಗಣ್ಯರು ಗೌರವಿಸಿದರು. ಓ. ಪಿ. ಪೂಜಾರಿ ವಂದಿಸಿದರು. ಸದಸ್ಯ ಬಾಂಧವರು, ಶೇರುದಾರರು, ಸ್ಥಳೀಯ ಉದ್ಯಮಿಗಳು, ತುಳು-ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.