Advertisement

ತಗ್ಗದ ಮಳೆಯ ಅಬ್ಬರ: ಕರಾವಳಿಯಾದ್ಯಂತ ಹಾಹಾಕಾರ ಸೃಷ್ಟಿಸಿದ ಪುನರ್ವಸು ವರ್ಷಧಾರೆ

11:55 PM Jul 10, 2022 | Team Udayavani |

ಮಂಗಳೂರು/ ಉಡುಪಿ: ಕರಾವಳಿ ಯಲ್ಲಿ ಪುನರ್ವಸು ಮಳೆ ಸತತ ಐದನೇ ದಿನ, ರವಿವಾರವೂ ಬಿರುಸಾಗಿ ಸುರಿದಿದ್ದು, ಹಲವು ಕಡೆ ಅಪಾಯ ತಂದೊಡ್ಡಿದೆ.

Advertisement

ಕಡಬ ತಾಲೂಕಿನ ಕಾಣಿಯೂರು ಸಮೀಪದ ಬೈತಡ್ಕದಲ್ಲಿ ಶನಿವಾರ ತಡರಾತ್ರಿ ಗೌರಿ ಹೊಳೆಗೆಕಿರು ಸೇತುವೆಯಿಂದ ಕಾರೊಂದು ಉರುಳಿದ್ದು, ಯುವಕರಿಬ್ಬರು ನಾಪತ್ತೆಯಾಗಿದ್ದಾರೆ. ಆಗುಂಬೆ ಘಾಟಿಯ ನಾಲ್ಕನೇ ತಿರುವಿನಲ್ಲಿ ಗುಡ್ಡ ಕುಸಿದು ವಾಹನ ಸಂಚಾರ ಸ್ಥಗಿತಗೊಂಡಿದೆ.

ಚಾರ್ಮಾಡಿ ಘಾಟಿಯ 8ನೇ ತಿರುವಿನಲ್ಲಿ ರವಿವಾರ ಬೆಳಗ್ಗೆ ರಸ್ತೆಗೆ ಮರ ಉರುಳಿದ್ದು, ಸುಮಾರು ಒಂದು ತಾಸು ವಾಹನ ಸಂಚಾರ ಬಂದ್‌ ಆಗಿತ್ತು. ಮಂಗಳೂರು- ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಕಲೇಶಪುರ- ದೋಣಿಗಲ್‌ ನಡುವೆ ಗುಡ್ಡ ಕುಸಿತವಾಗಿ ಒಂದು ತಾಸು ಸಂಚಾರ ಸ್ಥಗಿತಗೊಂಡಿತ್ತು.

ಉಭಯ ಜಿಲ್ಲೆಗಳ ಎಲ್ಲ ನದಿ, ಹೊಳೆಗಳು ಅಪಾಯದ ಮಟ್ಟದಲ್ಲಿ ಹರಿಯುತ್ತಿವೆ. ತಗ್ಗು ಪ್ರದೇಶಗಳಿಗೆ ನೆರೆ ನೀರು ನುಗ್ಗಿ ನೂರಾರು ಹೆಕ್ಟೇರ್‌ ಕೃಷಿ ಭೂಮಿ ಜಲಾವೃತಗೊಂಡಿದೆ. ಹಲವು ಮನೆಗಳಿಗೆ ನೀರು ನುಗ್ಗಿದ್ದರೆ ನೂರಾರು ಮನೆಗಳು ಜಲ ದಿಗ್ಬಂಧನ ಅನುಭವಿಸುತ್ತಿವೆ. ಗುಡ್ಡಕುಸಿತ, ಭೂಕುಸಿತಗಳು ಅಲ್ಲಲ್ಲಿ ಉಂಟಾಗಿವೆ.

ಘಟ್ಟ ಪ್ರದೇಶ ಮತ್ತು ಕರಾವಳಿಯಲ್ಲಿ ಭಾರೀ ಮಳೆಯಾಗುತ್ತಿರುವುದರಿಂದ ನೇತ್ರಾವತಿ ಮತ್ತು ಕುಮಾರಧಾರಾ ನದಿಗಳು ಉಕ್ಕಿಹರಿಯುತ್ತಿದ್ದು, ಅಪಾಯ ಮಟ್ಟದಲ್ಲಿವೆ. ಹಲವೆಡೆ ನೆರೆಯಿಂದಾಗಿ ಬಕ್ರೀದ್‌ ಆಚರಣೆಗೆ ಅಡ್ಡಿಯುಂಟಾಯಿತು.

Advertisement

ಉಡುಪಿ ಜಿಲ್ಲೆಯಲ್ಲಿಯೂ ಮಳೆ, ನೆರೆ ಯಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ. ಕೊಡಗಿ ನಲ್ಲಿ ಕಾವೇರಿ ಮತ್ತು ಉಪನದಿಗಳು ಉಕ್ಕಿ ಹರಿಯುತ್ತಿವೆ. ಹಲವು ಕಡೆ ಗುಡ್ಡಕುಸಿತಗಳು ಉಂಟಾಗಿವೆ. ಮಡಿಕೇರಿ-ಮಂಗಳೂರು ರಸ್ತೆಯ ಕೊಯನಾಡಿನಲ್ಲಿ ಪ್ರವಾಹದಿಂದ ಮಡಿಕೇರಿ- ಮಂಗಳೂರು ರಸ್ತೆ ಮುಳುಗಡೆಯಾಗುವ ಅಪಾಯ ತಲೆದೋರಿದೆ.

ಹೆಚ್ಚುತ್ತಿದೆ ಭೂಕುಸಿತ
ಬೆಂಗಳೂರು: ಮಳೆಯ ಪ್ರಕೋಪ ರಾಜ್ಯಾದ್ಯಂತ ಮುಂದುವರಿದಿದೆ. ಜೂ. 30ರಿಂದ ಈಚೆಗೆ ರಾಜ್ಯದಲ್ಲಿ ಧಾರಾಕಾರ ಮಳೆಯ ಜತೆಗೆ ಭೂ ಕುಸಿತವೂ ಉಂಟಾ ಗುತ್ತಿದೆ. ಚಿಕ್ಕಮಗಳೂರು, ಶಿವಮೊಗ್ಗ, ಕೊಡಗು ಸಹಿತ ಹಲವೆಡೆ ರವಿವಾರವೂ ಮಳೆಯಾಗಿದೆ. ಭೂಕುಸಿತ ಮುಂದುವರಿದಿದೆ.

ಚಿಕ್ಕಮಗಳೂರು ಜಿಲ್ಲೆಯಲ್ಲಿ ಯುವತಿಯೊಬ್ಬರು ಮರ ಬಿದ್ದು ಮೃತಪಟ್ಟಿದ್ದಾರೆ. ಬಾಳೆಹೊಳೆ ಗ್ರಾಮದಲ್ಲಿ ರಸ್ತೆ ಮೇಲೆ ಗುಡ್ಡ ಕುಸಿದಿದೆ. ಮುಳ್ಳಯ್ಯನಗಿರಿಗೆ ತೆರಳುವ ರಸ್ತೆ ಮಾರ್ಗದಲ್ಲಿ ಗುಡ್ಡ ಕುಸಿದಿದೆ. ಮೂಡಿಗೆರೆ ಮತ್ತು ಕೊಪ್ಪ ಭಾಗದಲ್ಲಿ ಅಲ್ಲಲ್ಲಿ ಗುಡ್ಡ ಕುಸಿದಿದೆ. ಜಯಪುರ ಮಾರ್ಗದ ಅಲ್ಲಲ್ಲಿ ಗುಡ್ಡ ಕುಸಿತ ಸಂಭವಿಸಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿಯೂ ಭೂಕುಸಿತಗಳು ಉಂಟಾಗಿವೆ.

Advertisement

Udayavani is now on Telegram. Click here to join our channel and stay updated with the latest news.

Next