Advertisement

ಕೆಲಸಕ್ಕೆ ಹಾಜರಾಗದ ಹಾಪ್‍ಕಾಮ್ಸ್ ನೌಕರರ ವಿರುದ್ಧ ಕಠಿಣ ಕ್ರಮಕ್ಕೆ ಮುಖ್ಯಮಂತ್ರಿ ಸೂಚನೆ

02:27 PM Jun 02, 2020 | sudhir |

ಬೆಂಗಳೂರು: ಕೋವಿಡ್ ಹಿನ್ನೆಲೆಯಲ್ಲಿ ಕಳೆದ 3 ತಿಂಗಳಿನಿಂದ ಕೆಲಸಕ್ಕೆ ಹಾಜರಾಗದ 150 ಜನ ಹಾಪ್‍ಕಾಮ್ಸ್ ನೌಕರರ ವಿರುದ್ಧ ಪರಿಶೀಲಿಸಿ ಕಠಿಣ ಕ್ರಮ ಕೈಗೊಳ್ಳಬೇಕೆಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಅಧಿಕಾರಿಗಳಿಗೆ ಸೂಚಿಸಿದರು.

Advertisement

ಇಂದು ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ನಡೆದ ಕೃಷಿ, ತೋಟಗಾರಿಕೆ ಹಾಗೂ ರೇಷ್ಮೆ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು,

ರಾಜ್ಯದ 550 ಹಾಪ್‍ಕಾಮ್ಸ್ ಮಳಿಗೆಗಳ ಪೈಕಿ ಕೇವಲ 250 ಮಳಿಗೆಗಳು ಕಾರ್ಯನಿರ್ವಹಿಸುತ್ತಿದ್ದು . ಮಳಿಗೆ ತೆರೆಯದೇ ಇರುವವರ ವಿರುದ್ಧ ಶಿಸ್ತಿನ ಕ್ರಮ ಜರುಗಿಸಬೇಕೆಂದು ಅವರು ಸೂಚಿಸಿದರು.

ರಾಜ್ಯದಲ್ಲಿ ಉತ್ತಮ ಮಳೆಯಾಗಿದ್ದು ಕೆಲವು ಜಿಲ್ಲೆಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಬಹುತೇಕ ಇಲ್ಲವಾಗಿದೆ. ಹೊಸ ಕೊಳವೆಬಾವಿಗಳನ್ನು ಕೊರೆಯಲು ಅನುಮತಿ ನೀಡಬಾರದು ಎಂದು ಮುಖ್ಯಮಂತ್ರಿಗಳು ಅಧಿಕಾರಿಗಳಿಗೆ ಸೂಚಿಸಿದರು.
ಒಂದು ತಿಂಗಳ ನಂತರ ಪರಿಸ್ಥಿತಿಯನ್ನು ಪರಿಶೀಲಿಸಿ ತೀರ್ಮಾನಿಸಬಹುದು ಎಂದರು.

ಕಳೆದ ಸಾಲಿನಲ್ಲಿ ಹೆಚ್ಚುವರಿ ಬಿತ್ತನೆ ಬೀಜವನ್ನು ಖರೀದಿಸಿ ವಿತರಿಸಲಾಗಿತ್ತು. ಈ ಬಾರಿಯೂ ವಿತರಿಸಬೇಕೆಂದು ರೈತರು ಒತ್ತಾಯಿಸುತ್ತಿದ್ದಾರೆ. ಕೋವಿಡ್ ಹಿನ್ನೆಲೆಯಲ್ಲಿ ರಾಜ್ಯ ಆಹಾರ ಪದಾರ್ಥಗಳ ಸರಪಳಿ ನಿರ್ವಹಣಾ ಕೋಶ ಕಾರ್ಯ ನಿರ್ವಹಿಸುತ್ತಿದೆ. ಅಗ್ರಿ ವಾರ್ ರೂಂ ಸ್ಥಾಪಿಸಿದ್ದು, ಪರಿಕರಗಳ ಲಭ್ಯತೆ, ಉತ್ಪನ್ನಗಳ ಮಾರಾಟ, ಸಾಗಾಣಿಕೆಗೆ ಸಂಬಂಧಿಸಿದ ಅಹವಾಲುಗಳನ್ನು ಸ್ವೀಕರಿಸಿ ಪರಿಹಾರ ಒದಗಿಸಲಾಗಿದೆ ಎಂದು ಸಚಿವ ಬಿ.ಸಿ.ಪಾಟೀಲ್ ಮಾಹಿತಿ ಒದಗಿಸಿದರು. ಕರ್ನಾಟಕಕ್ಕೆ ಮಿಡತೆ ಹಾವಳಿ ಇರುವುದಿಲ್ಲ ಎಂದು ವಿಜ್ಞಾನಿಗಳು ಖಚಿತಪಡಿಸಿರುವುದಾಗಿ ಸಚಿವರು ತಿಳಿಸಿದರು.

Advertisement

ಕೃಷಿ ಹಾಗೂ ತೋಟಗಾರಿಕೆ ಇಲಾಖೆಯಿಂದ ಬೇರೆ ಇಲಾಖೆಗಳಿಗೆ ನಿಯೋಜನೆ ಮೇಲೆ ತೆರಳಿರುವ ಅಧಿಕಾರಿ/ ಸಿಬ್ಬಂದಿಯನ್ನು ಮಾತೃ ಇಲಾಖೆಗೆ ವಾಪಸ್ಸು ಕರೆಸಿಕೊಳ್ಳಲು ಮುಖ್ಯಮಂತ್ರಿಗಳು ಸೂಚಿಸಿದರು.

ರೇಷ್ಮೆ ಇಲಾಖೆ: ಹಿಪ್ಪುನೇರಳೆ ವಿಸ್ತೀರ್ಣಕ್ಕೆ ಸಂಬಂಧಿಸಿದಂತೆ ಡ್ರೋನ್ ಮೂಲಕ ಸಮೀಕ್ಷೆ ನಡೆಸಲಾಗುತ್ತಿದ್ದು, ಒತ್ತುವರಿ ಆಗಿರುವ ಸರ್ಕಾರಿ ಜಮೀನನ್ನು ಸರ್ಕಾರದ ಸುಪರ್ದಿಗೆ ಪಡೆದುಕೊಳ್ಳಲು ಮುಖ್ಯ ಮಂತ್ರಿಗಳು ಸೂಚಿಸಿದರು.

ಇದೇ ಸಂದರ್ಭದಲ್ಲಿ ಮೆಕ್ಕೆ ಜೋಳ ಹಾಗೂ ಹೂವು ಬೆಳೆಗಾರರಿಗೆ ಒಟ್ಟು 666 ಕೋಟಿ ರೂ.ಗಳ ಮೊತ್ತವನ್ನು ಆನ್ ಲೈನ್ ಮೂಲಕ ಬಿಡುಗಡೆ ಮಾಡಿದರು. ಈ ಬಗ್ಗೆ ರೈತರಿಗೆ ಕರೆ ಮಾಡಿ ಹಣ ಸಂದಾಯವಾಗಿರುವ ಬಗ್ಗೆ ಮುಖ್ಯಮಂತ್ರಿಗಳು ಖಾತರಿಪಡಿಸಿಕೊಂಡರು.

ತೋಟಗಾರಿಕೆ ಹಾಗೂ ರೇಷ್ಮೆ ಸಚಿವ ಕೆ.ನಾರಾಯಣಸ್ವಾಮಿ, ಕೃಷಿ, ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಟಾರಿಯಾ, ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್, ಆರ್ಥಿಕ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಐ.ಎಸ್.ಎನ್ ಪ್ರಸಾದ್, ಅಭಿವೃದ್ಧಿ ಆಯುಕ್ತೆ ವಂದಿತಾ ಶರ್ಮಾ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next