Advertisement

ಕರ್ನಾಟಕ ಸಿಎಂ ಸ್ಥಿತಿ ಕ್ಲರ್ಕ್‌ನಂತೆ!

12:30 AM Jan 13, 2019 | Team Udayavani |

ಹೊಸದಿಲ್ಲಿ: ಮಹಾ ಘಟ ಬಂಧನದ ಮೊದಲ ಸರಕಾರವಿರುವಂಥ ಕರ್ನಾಟಕದಲ್ಲಿ ಮುಖ್ಯಮಂತ್ರಿಯ ಸ್ಥಿತಿ ಕ್ಲರ್ಕ್‌ನಂತಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಲೇವಡಿ ಮಾಡಿದ್ದಾರೆ. ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಶನಿವಾರ  ಅವರು ಮಾತನಾಡಿ, ದೇಶದ ಎಲ್ಲೆಡೆ ಮಹಾ ಘಟಬಂಧನ ವಿಫ‌ಲವಾ ಗಿದೆ. ತೆಲಂಗಾಣದಲ್ಲಿ ಕೆಲವೇ ದಿನಗಳ ಹಿಂದೆ ನಡೆದ ಚುನಾವಣೆಯಲ್ಲಿ ಅದು ಹೀನಾಯ ಸೋಲು ಅನುಭವಿಸಿದೆ. ಕರ್ನಾಟಕದಲ್ಲಿ ಮೈತ್ರಿ ಸರಕಾರದ ಮುಖ್ಯ ಮಂತ್ರಿಯನ್ನು ಯಾವ ರೀತಿ ನಡೆಸಿ ಕೊಳ್ಳುತ್ತಿದ್ದಾರೆಂದರೆ, ತಾನು ಕ್ಲರ್ಕ್‌ ರೀತಿ ಕೆಲಸ ಮಾಡುತ್ತಿರುವುದಾಗಿ ಅವರೇ ಹೇಳಿ ಕೊಂಡಿದ್ದಾರೆ ಎಂದು ಪ್ರಧಾನಿ ಟೀಕಿಸಿದ್ದಾರೆ. ಈ ಹೇಳಿಕೆಗೆ ಜೆಡಿಎಸ್‌, ಕಾಂಗ್ರೆಸ್‌ ನಾಯಕರು ತಿರುಗೇಟು ನೀಡಿದ್ದಾರೆ. 

Advertisement

ವಿಪಕ್ಷಗಳಿಗೆ ಕೇಂದ್ರದಲ್ಲಿ ಅಸಹಾಯಕ ಮತ್ತು ಬಲಹೀನ ಸರಕಾರವೇ ಬೇಕು. ಇಂಥ ಸಮಯದಲ್ಲಿ ಮಾತ್ರ ಅವರಿಗೆ ಲೂಟಿ ಮಾಡಲು ಅನುಕೂಲವಾಗುತ್ತದೆ. ಮಹಾಮೈತ್ರಿ ಎಂಬ ವಿಫ‌ಲ ಪ್ರಯತ್ನ ನಡೆಯುತ್ತಿದೆ. ಇವರ ಉದ್ದೇಶ ಬಲಿಷ್ಠ ಸರಕಾರ ಸ್ಥಾಪಿಸುವುದು. ಅವರಿಗೆ ಎಂಥ ಬಲಿಷ್ಠ ಸರಕಾರ ಬೇಕೆಂದರೆ, ಅವರ ಭ್ರಷ್ಟಾಚಾರವನ್ನು ಮುಚ್ಚಿ ಹಾಕಬೇಕಿದೆ. ಆದರೆ ನಾವು, ರೈತರಿಗೆ ಸೂಕ್ತ ಬೆಲೆ ಸಿಗುವಂತಹ ಸುಸ್ಥಿರ ಸರಕಾರ ಅಧಿಕಾರಕ್ಕೆ ತರಲು ಯೋಚಿಸುತ್ತಿದ್ದೇವೆ ಎಂದರು.

ವಿಪಕ್ಷಗಳ ಒಕ್ಕೂಟ ಸಾಮಾನ್ಯವಾಗಿ ಕಲ್ಪನೆ ಮತ್ತು ಸಿದ್ಧಾಂತವನ್ನು ಆಧರಿಸಿರುತ್ತದೆ. ಆದರೆ ಇದೇ ಮೊದಲ ಬಾರಿಗೆ ರಾಜ ಕೀಯ ಒಕ್ಕೂಟ ಓರ್ವ ವ್ಯಕ್ತಿಯ ವಿರುದ್ಧ ರಚನೆ ಯಾಗುತ್ತಿದೆ. ಅಯೋಧ್ಯೆ ಪ್ರಕರಣವನ್ನು ಕಾಂಗ್ರೆಸ್‌, ತನ್ನ ವಕೀಲರ ಮೂಲಕ ತಡೆ ಯುತ್ತಿದೆ ಮತ್ತು ಸುಳ್ಳು ಆರೋಪ ಹೊರಿಸಿ ಸಿಜೆಐ ಅನ್ನೂ ಪದಚ್ಯುತಗೊಳಿಸಲು ಪ್ರಯತ್ನಿಸಿದೆ ಎಂದರು.

ಮೇಲ್ವರ್ಗದವರಿಗೆ ಶೇ.10ರ ಮೀಸಲಾತಿ ನೀಡಿಕೆ ಸಮಸ್ಯೆಗಳನ್ನು ಪರಿಹರಿಸದು. ಆದರೆ ದೇಶವನ್ನು ಹೊಸ ದಿಕ್ಕಿಗೆ ಕೊಂಡೊಯ್ಯಲಿದೆ. ಇದರಿಂದಾಗಿ ಆರ್ಥಿಕವಾಗಿ ಹಿಂದುಳಿದ ಸ್ತರದ ಜನರಲ್ಲಿ ಆತ್ಮವಿಶ್ವಾಸವನ್ನು ಮೂಡುತ್ತದೆ. ಹಿಂದಿನ ಸರಕಾರಗಳು ರೈತರನ್ನು ಕೇವಲ ಮತದಾರರಂತೆ ನೋಡುತ್ತಿದ್ದವು. ನಮ್ಮ ಸರಕಾರವು ಅವರನ್ನು ನಿಜವಾದ ಅನ್ನದಾತರು ಎಂದು ನೋಡುತ್ತಿದೆ. ರೈತರ ಆದಾಯವನ್ನು ದುಪ್ಪಟ್ಟುಗೊಳಿಸಲು ಶ್ರಮಿಸುತ್ತಿದ್ದೇವೆ. ನಮಗೆ ಸಬ್‌ಕಾ ಸಾಥ್‌ ಸಬ್‌ಕಾ ವಿಕಾಸ್‌ ಆಗಬೇಕಿದೆ ಎಂದಿದ್ದಾರೆ.

ನಮಗಿಂತ ಮೊದಲು ಅಧಿಕಾರದಲ್ಲಿದ್ದ ಸರಕಾರವು ದೇಶವನ್ನು ಕತ್ತಲಿನೆಡೆಗೆ ನೂಕಿತ್ತು. 2004ರಿಂದ 2014ರ ನಡುವಣ 10 ವರ್ಷಗಳಲ್ಲಿ ದೇಶವು ಹಗರಣ ಮತ್ತು ಭ್ರಷ್ಟಾಚಾರದಲ್ಲಿ ಮುಳುಗಿತ್ತು ಎಂದ ಅವರು, ಉತ್ತರ ಪ್ರದೇಶದಲ್ಲಿ ಮಹಾಘಟಬಂಧನ ಮಾಡಿಕೊಂಡಿರುವ ಎಸ್ಪಿ ಹಾಗೂ ಬಿಎಸ್ಪಿ ಜನರ ವಿಶ್ವಾಸವನ್ನು ಕಳೆದುಕೊಂಡಿವೆ ಎಂದು ತಿಳಿಸಿದ್ದಾರೆ.

Advertisement

ಸೋಲಿನಿಂದ ಕಂಗೆಡಬೇಕಿಲ್ಲ: ಶಾ
ಮೂರು ರಾಜ್ಯಗಳಲ್ಲಿ ಪಕ್ಷ ಸೋಲನುಭವಿಸಿದ್ದಕ್ಕೆ  ನಿರಾಶರಾಗ ಬೇಕಿಲ್ಲ. ಲೋಕಸಭೆ ಚುನಾವಣೆ ಅತ್ಯಂತ ಪ್ರಮುಖವಾದದ್ದು ಎಂದು ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಹೇಳಿದ್ದಾರೆ. ಮೂರು ರಾಜ್ಯಗಳಲ್ಲಿ ವಿಪಕ್ಷ ಗೆದ್ದಿದೆ. ಆದರೆ ನಾವು ಸೋತಿಲ್ಲ. ಫ‌ಲಿತಾಂಶ ಉತ್ತಮವಾಗಿಲ್ಲವಾದರೂ ನಾವು ನೆಲೆ ಕಳೆದುಕೊಂಡಿಲ್ಲ. ಹೀಗಾಗಿ ಕಾರ್ಯಕರ್ತರು ನಿರಾಶೆ ಹೊಂದಬಾರದು. 

ಪ್ರಧಾನಿ ಹೇಳಿಕೆ ಅಚ್ಚರಿಯದ್ದು.ನನ್ನ ಹೇಳಿಕೆ ಬಗ್ಗೆ ಅವರು ಪ್ರತಿಕ್ರಿಯಿಸಿದ್ದು, ರೈತರ ಸಾಲ ಮನ್ನಾ ವಿಷಯದಲ್ಲೂ ಇದೇ ರೀತಿ ಹೇಳಿದ್ದರು. ಇದರಿಂದ ಸಮ್ಮಿಶ್ರ ಸರಕಾರಕ್ಕೆ ಬಾಧಕ ವಿಲ್ಲ, ಅಭಿವೃದ್ಧಿ ಅಜೆಂಡಾದಿಂದ ಹಿಂದೆ ಸರಿಯುವುದೂ ಇಲ್ಲ.
– ಎಚ್‌.ಡಿ. ಕುಮಾರಸ್ವಾಮಿ, ಮುಖ್ಯಮಂತ್ರಿ

ಮೋದಿ ಅನುಕೂಲಕ್ಕೆ ತಕ್ಕಂತೆ ವ್ಯಾಖ್ಯಾನ ಮಾಡುತ್ತಾರೆ. ಅವರಿಂದ ಇನ್ನೇನು ನಿರೀಕ್ಷಿಸಲು ಸಾಧ್ಯ? ಬಿಜೆಪಿ ಜತೆ ಮೈತ್ರಿ ಮಾಡಿಕೊಂಡಾಗಲೂ ನಮಗೆ ಕಹಿ ಅನುಭವ ಆಗಿದೆ.
–  ಎಚ್‌.ಡಿ. ದೇವೇಗೌಡ, ಮಾಜಿ ಪ್ರಧಾನಿ

ಸಂಘ ಪರಿವಾರದ ಕ್ಲರ್ಕ್‌ ನರೇಂದ್ರ ಮೋದಿ ಅವರು ತಮ್ಮ ಅನುಭವದ ಮಾತಿನಲ್ಲೇ ಕುಮಾರಸ್ವಾಮಿ ಅವರನ್ನು ಟೀಕಿಸಿದ್ದಾರೆ. ಹುಟ್ಟುಗುಣ ಸುಟ್ಟರೂ… 
-ಸಿದ್ದರಾಮಯ್ಯ,  ಮಾಜಿ ಮುಖ್ಯಮಂತ್ರಿ

ಪ್ರಧಾನಿ ಹೇಳಿದ್ದೇನು?
ನಿಮಗೆ ಎಂಥ ಪ್ರಧಾನ ಸೇವಕ ಬೇಕೆಂಬುದನ್ನು ನೀವೇ ನಿರ್ಧರಿಸಿ. ಓರ್ವ ಪ್ರಾಮಾಣಿಕ ಮತ್ತು ಕಠಿನ ಪರಿಶ್ರಮಿ ಬೇಕೇ ಅಥವಾ ಭ್ರಷ್ಟ ಮತ್ತು ಅಗತ್ಯವಿರುವಾಗ ರಜೆಯಲ್ಲಿ ತೆರಳುವಂಥವರು ಬೇಕೇ?

ಮಹಾಮೈತ್ರಿ ಬಯಸಿದ ವಿಪಕ್ಷಗಳಿಗೆ ಮಜ್‌ಬೂರ್‌(ಅಸಹಾಯಕ) ಸರಕಾರ ಬೇಕು. ಆದರೆ, ಜನರಿಗೆ ಮಜ್‌ಬೂತ್‌ (ಬಲಿಷ್ಠ) ಸರಕಾರ ಬೇಕು. ಇದು ಬಿಜೆಪಿಗಷ್ಟೇ ಸಾಧ್ಯ.

ಭ್ರಷ್ಟಾಚಾರದ ಮಧ್ಯವರ್ತಿಗಳ ವಿರುದ್ಧ ನಾನು ಕ್ರಮ ಕೈಗೊಂಡೇ ತೀರುತ್ತೇನೆ. ಚೌಕಿದಾರ ಸುಮ್ಮನಿರುವುದಿಲ್ಲ. 

ಯಾವುದೇ ಭ್ರಷ್ಟಾಚಾರ ಆರೋಪ ಇಲ್ಲದಂಥ ಆಡಳಿತವನ್ನು ನೀಡಿದ್ದೇವೆ. ಭ್ರಷ್ಟಾಚಾರರಹಿತ ಸರಕಾರ ದೇಶ ನೋಡಿದ್ದು ಇದೇ ಮೊದಲು.

ಬಿತ್ತನೆ ಬೀಜ ಚೆನ್ನಾಗಿರಲೂಬಹುದು, ಮಳೆಯೂ ಚೆನ್ನಾಗಿ ಸುರಿದಿರಬಹುದು. ಆದರೆ ರೈತ ಸರಿಯಾಗಿ ಉಳುಮೆ ಮಾಡದಿದ್ದರೆ ಬೆಳೆ ಚೆನ್ನಾಗಿ ಬಾರದು. ಹೀಗಾಗಿ ಪಕ್ಷ ಗೆಲ್ಲಬೇಕೆಂದರೆ ಕಾರ್ಯಕರ್ತರೆಲ್ಲರೂ ರೈತರು ಭೂಮಿಯಲ್ಲಿ ದುಡಿವಂತೆ ದುಡಿಯಬೇಕು.

ನಾನು ಗುಜರಾತ್‌ ಸಿಎಂ ಆಗಿದ್ದಾಗ, ಯುಪಿಎ ಸರಕಾರ ಅಷ್ಟೊಂದು ಕಿರುಕುಳ ಕೊಟ್ಟಿದ್ದರೂ ಸಿಬಿಐಗೆ ನಿಷೇಧ ಹೇರಿರಲಿಲ್ಲ. ನಾವು ಕಾನೂನು, ಸತ್ಯದ ಮೇಲೆ ವಿಶ್ವಾಸವಿರಿಸಿದ್ದೆವು. ಆದರೆ ವಿಪಕ್ಷಗಳು ನಿಷೇಧ ಹೇರಿ ಕಾನೂನಿ ನಲ್ಲಿ ನಂಬಿಕೆಯಿಲ್ಲ ಎಂದು ಸಾರಿದ್ದವು. 

ಕಾಂಗ್ರೆಸ್‌ ಅಧಿಕಾರದಲ್ಲಿದ್ದಾಗ ಸಾಲ ನೀಡಲು 2 ಪ್ರಕ್ರಿಯೆಗಳಿದ್ದವು. ಒಂದು ಕಾಮನ್‌ ಪ್ರೊಸೆಸ್‌ (ಸಾಮಾನ್ಯ ಪ್ರಕ್ರಿಯೆ), ಮತ್ತೂಂದು ಕಾಂಗ್ರೆಸ್‌ ಪ್ರೊಸೆಸ್‌ (ಕಾಂಗ್ರೆಸ್‌ ಪ್ರಕ್ರಿಯೆ). ಜನಸಾಮಾನ್ಯರಿಗೆ ಮೊದಲ ಪ್ರಕ್ರಿಯೆಯಡಿ ಸಾಲ ನೀಡಿದ್ದರೆ, ಭ್ರಷ್ಟರು ಹಾಗೂ ಲೂಟಿಕೋರರಿಗೆ ಕಾಂಗ್ರೆಸ್‌ ಪ್ರಕ್ರಿಯೆ ಅನುಸರಿಸಲಾಗುತ್ತಿತ್ತು.

Advertisement

Udayavani is now on Telegram. Click here to join our channel and stay updated with the latest news.

Next