ಬೆಂಗಳೂರು: ಉನ್ನತ ಶಿಕ್ಷಣ ಖಾತೆ ಬೇಡ ಎಂದು ಹೇಳಿದ್ದ ಜಿ.ಟಿ.ದೇವೇಗೌಡರಿಗೆ ಅಬಕಾರಿ ಹಾಗೂ ಕೃಷಿ ಮಾರುಕಟ್ಟೆ ಖಾತೆ ನೀಡಲು ತೀರ್ಮಾನಿಸಲಾಗಿದೆ. ಸಿಎಂ ಕುಮಾರಸ್ವಾಮಿ ಅವರ ಬಳಿ ಇರುವ ಅಬಕಾರಿ ಹಾಗೂ ಬಂಡೆಪ್ಪ ಕಾಶಂಪೂರ್ ಅವರ ಬಳಿ ಇರುವ ಕೃಷಿ ಮಾರುಕಟ್ಟೆ ಜಿ.ಟಿ.ದೇವೇಗೌಡರಿಗೆ ದೊರೆಯಲಿದೆ ಎಂದು ಮೂಲ ಗಳು ತಿಳಿಸಿವೆ.
ಉನ್ನತ ಶಿಕ್ಷಣ ಖಾತೆಯನ್ನು ಮುಖ್ಯಮಂತ್ರಿ ಕುಮಾರಸ್ವಾಮಿಯವರ ಬಳಿಯೇ ಇರಲಿದ್ದು, ಆ ಇಲಾಖೆಯ ಸಲಹೆಗಾರರನ್ನಾಗಿ ಕರ್ನಾಟಕ ಮುಕ್ತ ವಿಶ್ವವಿದ್ಯಾ ಲಯದ ವಿಶ್ರಾಂತ ಕುಲಪತಿ ಪ್ರೊ|ಕೆ.ಎಸ್.ರಂಗಪ್ಪ ಅವರನ್ನು ನೇಮಿಸಲಾಗುವುದು ಎಂದು ಮೂಲಗಳು ತಿಳಿಸಿವೆ.
ಸಿದ್ದರಾಮಯ್ಯ ಅವರು ಉಪ ಮುಖ್ಯಮಂತ್ರಿಯಾಗಿ ದ್ದಾಗ ಹಣಕಾಸು ಜತೆ ಅಬಕಾರಿ ಖಾತೆ ಸಹ ನಿರ್ವಹಿಸಿದ್ದರು. ಇದೀಗ ಸಿದ್ದರಾಮಯ್ಯ ಅವರನ್ನು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋಲಿಸಿದ ಜಿ.ಟಿ.ದೇವೇಗೌಡರಿಗೆ ಅದೇ ಖಾತೆ ದೊರೆತಂತಾ ಗುತ್ತದೆ. ಜತೆಗೆ ಕೃಷಿ ಮಾರುಕಟ್ಟೆ ಖಾತೆ ಸಹ ದೊರೆಯಲಿದೆ ಎನ್ನಲಾಗಿದೆ. ಸೋಮವಾರ ಖಾತೆ ಹಂಚಿಕೆ ಬಗ್ಗೆ ಅಧಿಕೃತ ಆದೇಶ ಹೊರಬೀಳಲಿದೆ ಎಂದು ಹೇಳಲಾಗಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಜಿ.ಟಿ.ದೇವೇಗೌಡರು, ನಾನು ತಿರುಪತಿಯಲ್ಲಿದ್ದೇನೆ. ನಮ್ಮ ಪಕ್ಷದ ನಾಯಕರಾದ ಎಚ್.ಡಿ.ದೇವೇಗೌಡರು ಹಾಗೂ ಸಿಎಂ ಎಚ್.ಡಿ. ಕುಮಾರಸ್ವಾಮಿಯವರು ಯಾವುದೇ ತೀರ್ಮಾನ ಕೈಗೊಂಡರೂ ಒಪ್ಪಿಕೊಳ್ಳುತ್ತೇನೆ. ಉನ್ನತ ಶಿಕ್ಷಣ ಇಲಾಖೆ ನಿಭಾಯಿಸುವ ಸಾಮರ್ಥ್ಯವೂ ನನಗಿದೆ. ಆದರೆ ರೈತರಿಗೆ ಉಪಕಾರ ಮಾಡುವ ಖಾತೆ ಕೊಡಿ ಎಂದು ಕೇಳಿದ್ದೆ. ಕೃಷಿ ಮಾರುಕಟ್ಟೆ ಖಾತೆ ಕೊಟ್ಟರೆ ಸಂತೋಷ, ರೈತರ ಉತ್ಪನ್ನಗಳಿಗೆ ನ್ಯಾಯಯುತ ಬೆಲೆ ಹಾಗೂ ಸೂಕ್ತ ಮಾರುಕಟ್ಟೆ ಕಲ್ಪಿಸುವ ಕೆಲಸ ಮಾಡುತ್ತೇನೆ ಎಂದು ಹೇಳಿದ್ದಾರೆ.