Advertisement

Karnataka: ಬಜೆಟ್‌ ಭಾಷಣದಲ್ಲಿ ಕೇಂದ್ರ ವಿರುದ್ಧ ಚಾರ್ಜ್‌ಶೀಟ್‌

12:05 AM Feb 17, 2024 | Team Udayavani |

ಬೆಂಗಳೂರು: ರಾಜ್ಯಪಾಲರ ಭಾಷಣದ ಮುಂದುವರಿದ ಭಾಗವಾಗಿ ರಾಜ್ಯ ಬಜೆಟ್‌ನಲ್ಲೂ ತೆರಿಗೆ ವಿಚಾರಕ್ಕೆ ಸಂಬಂಧಪಟ್ಟಂತೆ ಸಿಎಂ ಸಿದ್ದರಾಮಯ್ಯ ಕೇಂದ್ರ ಸರಕಾರದ ವಿರುದ್ಧ ವಾಗ್ಧಾಳಿ ಮುಂದುವರಿಸಿದ್ದು, ಅವಕಾಶ ಸಿಕ್ಕಲೆಲ್ಲ ಕೇಂದ್ರ ಸರಕಾರಕ್ಕೆ “ಬೈಗುಳ ಭಾಗ್ಯ” ಕರುಣಿಸಿದ್ದಾರೆ.

Advertisement

2022-23ಕ್ಕೆ ಹೋಲಿಸಿದರೆ ರಾಜ್ಯದಲ್ಲಿ ಜಿಎಸ್‌ಟಿ ಸಂಗ್ರಹ ಶೇ.18ರಷ್ಟು ಹೆಚ್ಚಳ ಕಂಡಿರುವುದಕ್ಕೆ ಗ್ಯಾರಂಟಿ ಯೋಜನೆಗಳೇ ಕಾರಣ ಎಂದು ಅವರು ಬಲವಾಗಿ ಪ್ರತಿಪಾದಿಸಿದ್ದಾರೆ. ಆದರೆ ಈ ವಾದಕ್ಕೆ ಪೂರಕವಾದ ಅಥವಾ ಸಮರ್ಥನೆಗೆ ಬಲ ನೀಡುವ ಯಾವುದೇ ಅಂಶವನ್ನು ಬಜೆಟ್‌ನಲ್ಲಿ ಪ್ರಸ್ತುತ ಪಡಿಸಿಲ್ಲ. ಗ್ಯಾರಂಟಿಯಿಂದ ಜನರ ಆದಾಯ ಪ್ರಮಾಣ ಹೆಚ್ಚಾಗಿ, ಆರ್ಥಿಕತೆಯನ್ನು ಉತ್ತೇಜಿಸು ವಲ್ಲಿ ಸಹಕಾರಿಯಾಗಿದೆ ಎಂದು ಪ್ರತಿಪಾದಿಸಿದ್ದಾರೆ.

2017ರಿಂದ 2023-24ರ ವರೆಗೆ ರಾಜ್ಯದಲ್ಲಿ ಒಟ್ಟು 4,92,296 ಕೋಟಿ ರೂ.ಗಳ ಜಿ.ಎಸ್‌.ಟಿ ತೆರಿಗೆ ಸಂಗ್ರಹಣೆಯಾಗುತ್ತದೆ ಎಂದು ಅಂದಾಜಿಸ ಲಾಗಿತ್ತು. ಆದರೆ ವಾಸ್ತವಿಕವಾಗಿ ರಾಜ್ಯದಲ್ಲಿ 3,26,764 ಕೋಟಿ ರೂ.ಗಳ ಜಿ.ಎಸ್‌.ಟಿ ತೆರಿಗೆ ಸ್ವೀಕೃತವಾಗಿದೆ. ಜಿಎಸ್‌ಟಿ ತೆರಿಗೆ ಸಂಗ್ರಹಣೆಯಲ್ಲಿನ ಕೊರತೆ 1,65,532 ಕೋಟಿ ರೂ.ಗಳಿಗೆ ಎದುರಾಗಿ, ಕೇಂದ್ರ ಸರಕಾರವು ರಾಜ್ಯಕ್ಕೆ ಕೇವಲ 1,06,258 ಕೋಟಿ ರೂ. ಪರಿಹಾರವನ್ನು ಮಾತ್ರ ಬಿಡುಗಡೆ ಮಾಡಿದೆ. ಜಿಎಸ್‌ಟಿ. ತೆರಿಗೆಯ ಅವೈಜ್ಞಾನಿಕ ಅನುಷ್ಠಾನದಿಂದ ರಾಜ್ಯಕ್ಕೆ ಕಳೆದ ಏಳು ವರ್ಷಗಳ ಅವಧಿಯಲ್ಲಿ ಒಟ್ಟು 59,274 ಕೋಟಿ ರೂ.ಗಳ ನಷ್ಟವಾಗಿರುತ್ತದೆ ಎಂದು ಆಪಾದಿಸಿದ್ದಾರೆ.

15ನೇ ಹಣಕಾಸು ಆಯೋಗವು 2020-21ಕ್ಕೆ ಅನ್ವಯವಾಗುವಂತೆ ನೀಡಿದ್ದ ಮಧ್ಯಾಂತರ ವರದಿಯ ಶಿಫಾರಸ್ಸಿನಿಂದ ರಾಜ್ಯಕ್ಕಾದ ಅನ್ಯಾಯ ವನ್ನು ಸರಿಪಡಿಸುವಲ್ಲಿ ಹಿಂದಿನ ಸರಕಾರವು ವಿಫ‌ಲವಾಯಿತು. ರಾಜ್ಯದ ಜಿಎಸ್‌ಡಿ.ಪಿ ಲೆಕ್ಕಾಚಾರ ಮಾಡುವ ವಿಧಾನದಲ್ಲಿ ಬದಲಾವಣೆ ಹಾಗೂ 1971ರ ಬದಲು 2011ರ ಜನಗಣತಿ ವರದಿಯ ಬಳಕೆಯಿಂದಾಗಿ ಅಭಿವೃದ್ಧಿಶೀಲ ರಾಜ್ಯಗಳಿಗೆ ಭಾರೀ ನಷ್ಟವುಂಟಾಗಿದೆ. 15ನೇ ಹಣಕಾಸು ಆಯೋಗದ 6 ವರ್ಷ ಅವಧಿಯಲ್ಲಿ ಕೇಂದ್ರದಿಂದ ರಾಜ್ಯಗಳಿಗೆ ಹಂಚಿಕೆಯಾಗುವ ಒಟ್ಟು ತೆರಿಗೆ ಹಂಚಿಕೆಯಲ್ಲಿ, ರಾಜ್ಯಕ್ಕೆ 62,098 ಕೋಟಿ ರೂ.ಗಳಷ್ಟು ನಷ್ಟವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

2020-21ನೇ ವರ್ಷಕ್ಕೆ 5,495 ಕೋ. ರೂ. ವಿಶೇಷ ಅನುದಾನ ಒದಗಿಸುವಂತೆ ಹಾಗೂ ಅಂತಿಮ ವರದಿಯಲ್ಲಿ ಬೆಂಗಳೂರಿನ ಅಭಿವೃದ್ಧಿಗೆ 6,000 ಕೋ. ರೂ. ರಾಜ್ಯ ಕೇಂದ್ರಿತ ಅನುದಾನವನ್ನು ಶಿಫಾರಸು ಮಾಡಿತ್ತು. ಆದರೆ ಈ ಶಿಫಾರಸ್ಸುಗಳನ್ನು ಕೇಂದ್ರ ಸರಕಾರವು ತಿರಸ್ಕರಿಸಿದೆ. ರಾಜ್ಯದಲ್ಲಿ ಡಬಲ್‌ ಎಂಜಿನ್‌ ಎಂದು ಹೇಳಿಕೊಳ್ಳುವ ಸರಕಾರ ಇದ್ದರೂ ಸಹ ಕೇಂದ್ರದಿಂದ ಒಟ್ಟು 11,495 ಕೋ. ರೂ.ಗಳ ವಿಶೇಷ ಅನುದಾನ ಪಡೆಯುವಲ್ಲಿ ಹಿಂದಿನ ಸರಕಾರ ಅಸಮರ್ಥವಾಗಿತ್ತು ಎಂದು ಟೀಕಿ ಸಿದ್ದಾರೆ. ಈ ಅನ್ಯಾಯ ಮರುಕಳಿಸದಂತೆ ನೋಡಿ ಕೊಳ್ಳಲು ಸಚಿವ ಸಂಪುಟದ ಮಾರ್ಗದರ್ಶ ನದೊಂದಿಗೆ ವಿಷಯ ತಜ್ಞರನ್ನು ಒಳಗೊಂಡ ತಾಂತ್ರಿಕಕೋಶವನ್ನು ರಚಿಸಿ ರಾಜ್ಯಕ್ಕೆ ಹೆಚ್ಚು ತೆರಿಗೆ ಪಾಲು ಪಡೆಯಲು ಒಂದು ಜ್ಞಾಪನಾ ಪತ್ರವನ್ನು 16ನೇ ಹಣಕಾಸು ಆಯೋಗಕ್ಕೆ ಸಲ್ಲಿಸಲು ನಿರ್ಧರಿಸಲಾಗಿದೆ.

Advertisement

ಅನ್ನಭಾಗ್ಯದಡಿ ಹೆಚ್ಚುವರಿ 5 ಕೆ.ಜಿ ಆಹಾರಧಾನ್ಯ ನೀಡುವ ರಾಜ್ಯ ಸರಕಾರದ ಪ್ರಯತ್ನಕ್ಕೆ ಕೇಂದ್ರ ಅಸಹಕಾರ ತೋರಿದೆ ಎಂದು ದೂರಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next