Advertisement

ಸಿಇಟಿ ರಿಸಲ್ಟ್ : ಶ್ರೀಧರ್‌ ಟಾಪರ್‌

06:00 AM Jun 02, 2018 | |

ಬೆಂಗಳೂರು: ವಿವಿಧ ವೃತ್ತಿಪರ ಕೋರ್ಸ್‌ ಗಳಿಗೆ 2018ನೇ ಸಾಲಿನ ಪ್ರವೇಶಕ್ಕೆ ನಡೆಸಲಾದ “ಸಾಮಾನ್ಯ ಪ್ರವೇಶ ಪರೀಕ್ಷೆ’ (ಸಿಇಟಿ) ಫ‌ಲಿತಾಂಶ ಶುಕ್ರವಾರ ಪ್ರಕಟಗೊಂಡಿದೆ. ಎಂಜಿನಿಯರಿಂಗ್‌ ಮತ್ತು ಬಿಎಸ್ಸಿ (ಕೃಷಿ) ಎರಡರಲ್ಲೂ ವಿಜಯಪುರದ ಶ್ರೀಧರ್‌ ದೊಡಮನಿ ಪ್ರಥಮ ರ್‍ಯಾಂಕ್‌ ಗಳಿಸುವ ಮೂಲಕ ರಾಜ್ಯದ ಗಮನಸೆಳೆದಿದ್ದಾರೆ.

Advertisement

ಎಂಜಿನಿಯರಿಂಗ್‌, ಬಿಎಸ್ಸಿ (ಕೃಷಿ), ಪಶುವೈದ್ಯಕೀಯ ಮತ್ತು ಬಿ-ಫಾರ್ಮಾ/ ಡಿ-ಫಾರ್ಮಾ ಕೋರ್ಸ್‌ಗಳ ಪ್ರವೇಶಕ್ಕೆ ನಡೆದ ಪರೀಕ್ಷೆಗಳಲ್ಲಿ ಮೊದಲೆರಡೂ ಕೋರ್ಸ್‌ಗಳಲ್ಲಿ ಶ್ರೀಧರ್‌ ದೊಡಮನಿ ಟಾಪರ್‌ ಆಗಿ ಹೊರಹೊಮ್ಮಿದ್ದಾರೆ. ಉಳಿದವುಗಳಲ್ಲಿ ಮಂಗಳೂರಿನ ವಿನೀತ್‌ ಮೇಗೂರು ಮತ್ತು ಜಲಮಂಡಳಿ ಅಧ್ಯಕ್ಷ ತುಷಾರ್‌ ಗಿರಿನಾಥ್‌ ಅವರ ಪುತ್ರ ತುಹಿನ್‌ ಗಿರಿನಾಥ್‌ ಪ್ರಥಮ ರ್‍ಯಾಂಕ್‌ ಗಳಿಸಿದ್ದಾರೆ.

ಪ್ರಸಕ್ತ ಸಾಲಿನ ಐದೂ ಕೋರ್ಸ್‌ಗಳ ಸಿಇಟಿ ಪರೀಕ್ಷೆಗೆ ಹುಡುಗರು ಮತ್ತು ಹುಡುಗಿಯರು ಸೇರಿ 1,92,905 ಅಭ್ಯರ್ಥಿಗಳು ಹಾಜರಾಗಿದ್ದರು. ಈ ಪೈಕಿ 1.46 ಲಕ್ಷ ಅಭ್ಯರ್ಥಿಗಳು ಎಂಜನಿಯರಿಂಗ್‌ನಲ್ಲಿ ಅರ್ಹತೆ ಪಡೆದಿದ್ದಾರೆ. ಆದರೆ, ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕೆ ಸಂಬಂಧಿಸಿ “ನೀಟ್‌’ ಫ‌ಲಿತಾಂಶ ಇನ್ನಷ್ಟೇ ಪ್ರಕಟಗೊಳ್ಳಬೇಕಿದೆ. ತದನಂತರ ಆ ಕೋರ್ಸ್‌ಗಳ ಪ್ರವೇಶಕ್ಕೆ ರ್‍ಯಾಂಕ್‌ಗಳನ್ನು ಪ್ರಕಟಿಸಲಾಗುವುದು ಎಂದು ಉನ್ನತ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಜಕುಮಾರ್‌ ಖತ್ರಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. 

ಜೂನ್‌ 5ಕ್ಕೆ ದಾಖಲೆ ಪರಿಶೀಲನೆ: ಫ‌ಲಿತಾಂಶ ಬಿಡುಗಡೆಗೊಳಿಸಿ ನಂತರ ಮಾತನಾಡಿದ ಅವರು, ರ್‍ಯಾಂಕ್‌ ನೀಡಿದ ಮಾತ್ರಕ್ಕೆ ಅಭ್ಯರ್ಥಿಗಳಿಗೆ ಸೀಟು ಹಂಚಿಕೆ ಮಾಡಿಕೊಳ್ಳುವ ಅರ್ಹತೆ ಬರುವುದಿಲ್ಲ. ದಾಖಲೆಗಳ ಪರಿಶೀಲನೆ ನಂತರವಷ್ಟೇ ಅರ್ಹತೆ ಯನ್ನು ಪರಿಗಣಿಸಲಾಗುವುದು. ದ್ವಿತೀಯ ಪಿಯುಸಿ
ಮರು ಮೌಲ್ಯಮಾಪನದ ಅಂಕಗಳಲ್ಲಿ ವ್ಯತ್ಯಾಸ ಕಂಡುಬಂದರೆ, ಅವುಗಳ ಆಧಾರದಲ್ಲಿ ಹೊಸ ರ್‍ಯಾಂಕ್‌ ನೀಡಲಾಗುವುದು. ಜೂನ್‌ 5ರಂದು ಅಭ್ಯರ್ಥಿಗಳ ದಾಖಲೆಗಳ ಪರಿಶೀಲನೆ ನಡೆಯಲಿದ್ದು, ಜೂನ್‌ ಅಂತ್ಯದೊಳಗೆ ಮೊದಲ ಸುತ್ತಿನ ಕೌನ್ಸೆಲಿಂಗ್‌ ಪೂರ್ಣಗೊಳ್ಳಲಿದೆ ಎಂದು ಸ್ಪಷ್ಟಪಡಿಸಿದರು. ಕಳೆದ ಬಾರಿಗೆ 1.80 ಲಕ್ಷ ಅಭ್ಯರ್ಥಿಗಳು ಸಿಇಟಿಗೆ ಹಾಜರಾಗಿದ್ದರು. ಈ ಬಾರಿ 430 ಪರೀಕ್ಷಾ ಕೇಂದ್ರಗಳಲ್ಲಿ 1.92 ಲಕ್ಷ ಅಭ್ಯರ್ಥಿಗಳು ಸಿಇಟಿ ಬರೆದಿದ್ದರು. ಆದರೆ, ಎಂಜಿನಿಯರಿಂಗ್‌ ಕಾಲೇಜುಗಳ ಸೀಟು ಮತ್ತು ಶುಲ್ಕ ನಿಗದಿ ಬಗ್ಗೆ ಇನ್ನೂ ತೀರ್ಮಾನ ಆಗಿಲ್ಲ ಎಂದು ಪ್ರಶ್ನೆಯೊಂದಕ್ಕೆ ರಾಜಕುಮಾರ್‌ ಖತ್ರಿ ಪ್ರತಿಕ್ರಿಯಿಸಿದರು.

ಆಗಸ್ಟ್‌ 18ಕ್ಕೆ ಕೌನ್ಸೆಲಿಂಗ್‌ ಪೂರ್ಣ: ಹೆಚ್ಚುವರಿ ಕಾರ್ಯದರ್ಶಿ ಮಂಜುಳಾ ಮಾತನಾಡಿ, ವೈದ್ಯಕೀಯ ಮತ್ತು ದಂತ ವೈದ್ಯ ಕೀಯ ಕೋರ್ಸ್‌ಗಳಿಗೆ ಜೂನ್‌ 25ರಿಂದ ಜುಲೈ 5ರ ಒಳಗೆ ಮೊದಲ ಸುತ್ತಿನ ಕೌನ್ಸೆಲಿಂಗ್‌ ಪೂರ್ಣಗೊಳ್ಳಬೇಕು ಎಂಬ ಸೂಚನೆ ಇದೆ. ಆದರೆ, ಈ ಬಗ್ಗೆ ಇನ್ನೂ ಅಂತಿಮವಾಗಿಲ್ಲ. ಒಟ್ಟಾರೆ ಎಲ್ಲ ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕೆ ಸಂಬಂಧಿಸಿದಂತೆ ಕೌನ್ಸೆಲಿಂಗ್‌ ಪ್ರಕ್ರಿಯೆಗಳು ಆಗಸ್ಟ್‌ 18ರ ಒಳಗೆ ಮುಗಿಯಲಿವೆ ಎಂದು ಸ್ಪಷ್ಟಪಡಿಸಿದರು.

Advertisement

ಅರ್ಹತಾ ಪಟ್ಟಿ ಸಿದ್ಧ
ಪರಿಷ್ಕೃತ ಸರಿ ಉತ್ತರ ಗಳನ್ನು ಆಧರಿಸಿ ಅರ್ಹತಾ ಪಟ್ಟಿ ಸಿದ್ಧಪಡಿಸಲಾಗಿದ್ದು, ಸರಿ ಉತ್ತರಗಳನ್ನು ಪ್ರಾಧಿಕಾರದ ವೆಬ್‌ಸೈಟ್‌: //kea.kar.nic.in ನಲ್ಲಿ ವೀಕ್ಷಿಸಬಹುದು. ಮಾಹಿತಿಗೆ ಸಹಾಯವಾಣಿ 23460460 ಸಂಪರ್ಕಿಸಬಹುದು.

ಫ‌ಲಿತಾಂಶ ನೋಡಿದಾಕ್ಷಣ ತುಂಬಾ ಖುಷಿ ಆಯಿತು. ಈ ಸಾಧನೆಯಲ್ಲಿ ನನ್ನ ತಂದೆಯ ಪಾತ್ರ ದೊಡ್ಡದಿದೆ. ಐಎಎಸ್‌ ಅಧಿಕಾರಿಯಾಗಿರುವ ಅವರು, ನನಗೆ ನೈತಿಕ ಸ್ಥೈರ್ಯ ತುಂಬಿದರು. ಐಐಟಿ ಸೇರುವ ಗುರಿ ಇದೆ. 
● ತುಹಿನ್‌ ಗಿರಿನಾಥ್‌ ನಾರಾಯಣ ಇ ಟೆಕ್ನಾಲಜಿ ಸ್ಕೂಲ್‌, ಕುಂದನಹಳ್ಳಿ, ಬೆಂಗಳೂರು

ಎಂಜಿನಿಯರಿಂಗ್‌ ಮತ್ತು ಬಿಎಸ್ಸಿ (ಕೃಷಿ) ಕೋರ್ಸ್‌ ಗಳೆರಡಲ್ಲೂ ಮೊದಲ ರ್‍ಯಾಂಕ್‌ ಬಂದಿದ್ದು, ಅತ್ಯಂತ ಖುಷಿ ಆಗುತ್ತಿದೆ. ಎಲೆಕ್ಟ್ರಿಕಲ್‌ ಅಥವಾ ಕಂಪ್ಯೂಟರ್‌ ಸೈನ್ಸ್‌ನಲ್ಲಿ ಎಂಜಿನಿಯರಿಂಗ್‌ ಮಾಡಬೇಕು ಎನ್ನುವುದು ನನ್ನ ಗುರಿ.
● ಶ್ರೀಧರ್‌ ದೊಡಮನಿ, ಎಕ್ಸಿಲಂಟ್‌ ಪದವಿಪೂರ್ವ ವಿಜ್ಞಾನ ಕಾಲೇಜು, ವಿಜಯಪುರ

ಬಿಎಸ್ಸಿ (ಕೃಷಿ) ಕೋರ್ಸ್‌ ಪ್ರವೇಶ ಪರೀಕ್ಷೆಯಲ್ಲಿ 2ನೇ ರ್‍ಯಾಂಕ್‌ ಗಳಿಸಿದ್ದರೂ ನಾನು ಡಾಕ್ಟರ್‌ ಆಗಬೇಕೆಂಬುದು ನನ್ನ ಗುರಿ. “ನೀಟ್‌’ನಲ್ಲಿ ಕೂಡ ನಾನು ಒಳ್ಳೆಯ ರ್‍ಯಾಂಕ್‌ ಗಳಿಸುತ್ತೇನೆ ಎಂಬ ವಿಶ್ವಾಸ ಇದೆ.
● ಸಾಯಿಕುಮಾರ್‌ ಆರ್‌. ಸಾಧುನವರ, ಚೇತನ್‌ ಪದವಿಪೂರ್ವ (ಸ್ವತಂತ್ರ) ಕಾಲೇಜು, ಹುಬ್ಬಳ್ಳಿ-ಧಾರವಾಡ

ವಿದ್ಯಾರ್ಥಿಗಳ ಉತ್ತಮ ಸಾಧನೆಗೆ ಅಭಿನಂದನೆ
ಬೆಂಗಳೂರು: ಸಿಇಟಿ ಹಾಗೂ ಕಾಮೇಡ್‌ ಕೆ ಫ‌ಲಿತಾಂಶ ಶುಕ್ರವಾರ ಪ್ರಕಟವಾಗಿದ್ದು, ಬೆಂಗಳೂರು ನಗರದ ಶ್ರೀ ಚೈತನ್ಯ ಎಜುಕೇಷನಲ್‌ ಇಸ್ಟಿಟ್ಯೂಷನ್ಸ್‌ನ 4 ವಿದ್ಯಾರ್ಥಿಗಳು ಮೊದಲ 10 ರ್‍ಯಾಂಕ್‌ಗಳಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಕಾಲೇಜಿನ ಎಲ್ಲ 172 ವಿದ್ಯಾರ್ಥಿ 
ಗಳು ಸಾವಿರ ರ್‍ಯಾಂಕ್‌ ಒಳಗೆ ಸ್ಥಾನ ಪಡೆದಿದ್ದು, ವಿದ್ಯಾರ್ಥಿಗಳಾದ ಟಿ.ವಿ.  ದಿನೇಶ್‌ ಆದಿತ್ಯ, ಎಂ.ಶೋಭನ್‌, ನಿಖೀಲ್‌ ಎಸ್‌.ಪೈ, ಹಾಗೂ ಅನೀಶ್‌
ಕುಮಾರ್‌ ಕ್ರಮವಾಗಿ 3,4,5 ಹಾಗೂ 7ನೇ ರ್‍ಯಾಂಕ್‌ ಪಡೆದಿದ್ದಾರೆ. ಕಾಲೇಜಿ ನ ವಿದ್ಯಾರ್ಥಿಗಳ ಈ ಸಾಧನೆಗೆ ಸಂಸ್ಥೆಯ ಆಡಳಿತ ನಿರ್ದೇಶಕಿ ಸುಷ್ಮಾ, ಸಂಸ್ಥಾಪಕ ಅಧ್ಯಕ್ಷ ಡಾ.ಬಿ.ಎಸ್‌.ರಾವ್‌ ಅಭಿನಂದನೆ ಸಲ್ಲಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next