Advertisement
6 ಗ್ರಾಮಗಳಿಗೆ ಭೇಟಿ, 6 ತಾಸು ಅವಲೋಕನಚಿಕ್ಕಬಳ್ಳಾಪುರ: ಕೇಂದ್ರ ಬರ ಅಧ್ಯಯನ ತಂಡದ ಅಧಿಕಾರಿಗಳು ಜಿಲ್ಲೆಯ 6 ಗ್ರಾಮಗಳಿಗೆ ಮಾತ್ರ ತಮ್ಮ ಪರಿಶೀಲನೆಯನ್ನು ಸೀಮಿತಗೊಳಿಸಿದರು. 6 ಗ್ರಾಮಗಳ ಬರ ಅಧ್ಯಯನವನ್ನು ಕೇವಲ 6 ತಾಸಿನಲ್ಲಿ ಪೂರೈಸಿದ ಅಧಿಕಾರಿಗಳು ಅಲ್ಲಲ್ಲಿ ರೈತರೊಂದಿಗೆ ಸಂವಾದ ನಡೆಸುವ ಮೂಲಕ ರಾಗಿ, ತೊಗರಿ, ಮುಸುಕಿನ ಜೋಳ ಮತ್ತಿತರ ಬೆಳೆಗಳು ಮಳೆ ಕೊರತೆಯಿಂದ ಹಾನಿಯಾಗಿರುವುದನ್ನು ವೀಕ್ಷಿಸಿ ರೈತರಿಗೆ ಸಾಂತ್ವನ ಹೇಳಿದರು.
ಕೊಪ್ಪಳ: ರೈತರ ಜಮೀನುಗಳಿಗೆ ಭೇಟಿ ನೀಡಿ ಅವರ ಸಮಸ್ಯೆ ಆಲಿಸುವ ಜತೆಗೆ ಬರದ ಪರಿಸ್ಥಿತಿ ಅವಲೋಕಿಸಿದ್ದೇವೆ. ಬೆಳೆ ಹಾನಿ ಕುರಿತು ರೈತರಿಂದಲೇ ಮಾಹಿತಿ ಪಡೆಯುತ್ತಿದ್ದೇವೆ. ವಾಸ್ತವ ಸ್ಥಿತಿ ಅವಲೋಕಿಸಿ ವರದಿ ಸಿದ್ಧಪಡಿಸಿ ಸರಕಾರಕ್ಕೆ ಸಕಾಲದಲ್ಲಿಯೇ ಸಲ್ಲಿಸಲಾಗುವುದು ಎಂದು ಕೇಂದ್ರ ಬರ ಅಧ್ಯಯನ ತಂಡದ ಅಧಿಕಾರಿ ಕೇಂದ್ರ ಗ್ರಾಮೀಣಾಭಿವೃದ್ಧಿ ಇಲಾಖೆ ಸಹಾಯಕ ಆಯುಕ್ತ ಮೋತಿರಾಂ ಸಾಹು ಹೇಳಿದರು.
Related Articles
Advertisement
ಅಧಿಕಾರಿಗಳ ಎದುರೇ ಆತ್ಮಹತ್ಯೆಗೆ ಯತ್ನಿಸಿದ ರೈತಬೆಳಗಾವಿ: ಬರ ಅಧ್ಯಯನ ತಂಡದ ಅಧಿಕಾರಿಗಳ ಮುಂದೆಯೇ ಶುಕ್ರವಾರ ಜಿಲ್ಲೆಯ ರೈತನೊಬ್ಬ ಆತ್ಮಹತ್ಯೆಗೆ ಮುಂದಾದ ಘಟನೆ ನಡೆದಿದೆ. ಬೆಳೆ ಹಾನಿಯಾಗಿದ್ದರೂ ತಮ್ಮ ಕಷ್ಟವನ್ನು ಅಧಿಕಾರಿಗಳು ಕೇಳಲಿಲ್ಲ ಎಂದು ಕೋಪಗೊಂಡ ಸವದತ್ತಿ ತಾಲೂಕಿನ ಇಂಚಲ ಗ್ರಾಮದ ಅಪ್ಪಾಸಾಹೇಬ ಲಕ್ಕುಂಡಿ ಎಂಬ ರೈತ ಕ್ರಿಮಿನಾಶಕ ಬಾಟಲಿಗಳನ್ನು ತೋರಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಬರ ಪರಿಸ್ಥಿತಿ ಅವಲೋಕನದ ಚಿತ್ರಣವನ್ನೇ ಬದಲಿಸಿತು. ಬೈಲಹೊಂಗಲ ತಾಲೂಕಿನ ಕಲಕುಪ್ಪಿ³ ಗ್ರಾಮದ ಬಳಿ ಶುಕ್ರವಾರ ಬರ ಪರಿಸ್ಥಿತಿಯ ಅಧ್ಯಯನಕ್ಕೆ ಅಗಮಿಸಿದ್ದ ಕೇಂದ್ರದ ಅಧಿಕಾರಿಗಳ ತಂಡದ ಸದಸ್ಯರು ಹೊಲಗಳಿಗೆ ತೆರಳಿ ಮಳೆ ಕೊರತೆಯಿಂದ ಹಾನಿಯಾದ ಸೋಯಾಬಿನ್, ಸೂರ್ಯಕಾಂತಿ, ಅಲಸಂದಿ, ಶೇಂಗಾ ಬೆಳೆಗಳನ್ನು ವೀಕ್ಷಿಸಿದರು. ಅಲ್ಲಿಯೇ ಇದ್ದ ರೈತರಿಂದ ಸಮಸ್ಯೆಗಳನ್ನು ಆಲಿಸಿದರು. ಮಹಿಳಾ ರೈತರಾದ ಕಮಲವ್ವ ನಡಟ್ಟಿ ಅವರಿಂದ ಬೆಳೆ ಹಾನಿಯಿಂದಾದ ತೊಂದರೆ ಆಲಿಸಿ ಅಲ್ಲಿಂದ ತೆರಳಿದರು. ಈ ಸಂದರ್ಭದಲ್ಲಿ ಒಂದೆರಡು ಬಾರಿ ತಮ್ಮ ಸಮಸ್ಯೆ ಹೇಳಿಕೊಂಡಿದ್ದ ರೈತ ಅಪ್ಪಾಸಾಹೇಬ ಲಕ್ಕುಂಡಿ ಒಮ್ಮೆಲೇ ಸಿಟ್ಟಿನಿಂದ ಅಧಿಕಾರಿಗಳು ನಮ್ಮ ಸಮಸ್ಯೆ ಕೇಳುತ್ತಿಲ್ಲ. ಹೀಗಾದರೆ ನಾವು ಇದ್ದು ಏನು ಪ್ರಯೋಜನ. ಮೈಮೇಲೆ ಸಾಲ ಹೆಚ್ಚಾಗಿದೆ. ಈಗ ಆತ್ಮಹತ್ಯೆಯೊಂದೇ ಪರಿಹಾರ ಎಂದು ಕೂಗಾಡಿ ತಮ್ಮ ಬಳಿ ಇಟ್ಟುಕೊಂಡಿದ್ದ ಎರಡು ಕ್ರಿಮಿನಾಶಕ ಬಾಟಲಿ ತೆಗೆದುಕೊಂಡು ಕುಡಿಯಲು ಮುಂದಾದರು. ತತ್‌ಕ್ಷಣವೇ ಪೊಲೀಸರು ಬಾಟಲಿ ಕಸಿದುಕೊಂಡರು. ಅಷ್ಟೊತ್ತಿಗೆ ಬರ ಅಧ್ಯಯನ ತಂಡದ ಅಧಿಕಾರಿಗಳು ಸಮೀಕ್ಷೆ ನಡೆಸಿ ಅಲ್ಲಿಂದ ತೆರಳಿದ್ದರು. 42 ಲಕ್ಷ ಹೆಕ್ಟೇರ್ ಬೆಳೆ ಹಾನಿ, 30 ಸಾವಿರ ಕೋ.ರೂ. ನಷ್ಟ: ಸಿಎಂ
ಚಿತ್ರದುರ್ಗ: ಈ ವರ್ಷ ರಾಜ್ಯದಲ್ಲಿ 80 ಲಕ್ಷ ಹೆಕ್ಟೇರ್‌ನಲ್ಲಿ ಬಿತ್ತನೆ ಪೈಕಿ 42 ಲಕ್ಷ ಹೆಕ್ಟೇರ್ ಬೆಳೆ ನಷ್ಟವಾಗಿದೆ. ಅಂದರೆ ಶೇ.52ರಷ್ಟು ನಷ್ಟವಾಗಿದೆ. ಹೀಗಾಗಿ ರಾಜ್ಯದ ರೈತರು ಹಾಗೂ ಜನತೆ ಸಂಕಷ್ಟಕ್ಕೆ ಸಿಲುಕಿದ್ದಾರೆ. 4,860 ಕೋಟಿ ರೂ. ಪರಿಹಾರ ಕೋರಿ ಕೇಂದ್ರಕ್ಕೆ ಮನವಿ ಮಾಡಿದ್ದರೂ ನಮಗೆ ಆಗಿರುವ ನಷ್ಟದ ಪ್ರಮಾಣ 30 ಸಾವಿರ ಕೋಟಿಗೂ ಅಧಿ ಕ. ಇದನ್ನೆಲ್ಲ ಕೇಂದ್ರ ಬರ ಅಧ್ಯಯನ ತಂಡ ಪರಿಶೀಲನೆ ನಡೆಸುತ್ತಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು. ಬರ ಅಧ್ಯಯನ ತಂಡಕ್ಕೆ ಭರ್ಜರಿ ಭೋಜನ
ಮಧುಗಿರಿ/ಕೊರಟಗೆರೆ: ತುಮಕೂರು ಜಿಲ್ಲೆ ಮಧುಗಿರಿ ತಾಲೂಕಿನ ಗಡಿರೇಖೆ ಭೈರೇನಹಳ್ಳಿ ಮೂಲಕ ಉಪವಿಭಾಗಕ್ಕೆ ಬೆಳಗ್ಗೆ 10 ಗಂಟೆಗೆ ಬರಬೇಕಿದ್ದ ಬರ ಅಧ್ಯಯನ ತಂಡದ ಅಧಿಕಾರಿಗಳು ಮಧ್ಯಾಹ್ನವಾದರೂ ಬಾರದಿದ್ದಾಗ ಅಧಿಕಾರಿಗಳು ಕಾದು ಸುಸ್ತಾಗಿದ್ದರು. ಮಧ್ಯಾಹ್ನ 2 ಗಂಟೆಗೆ ಮಾಡಗಾನಹಟ್ಟಿ ಸಮೀಪದ ಜಮೀನಿಗೆ ತಂಡ ಭೇಟಿ ನೀಡಿತು. ತಂಡಕ್ಕೆ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಭರ್ಜರಿ ಊಟದ ವ್ಯವಸ್ಥೆ ಮಾಡಲಾಗಿತ್ತು. ಮಾಂಸಪ್ರಿಯರಿಗೆ ರೋಟಿ, ದಾಲ್, ಚಿಕನ್, ಕಬಾಬ್, ಕುಲ್ಚಾ, ಸಬ್ಜಿ, ಪಲ್ಯ, ಪಲಾವ್, ಬಿರಿಯಾನಿ ಹಾಗೂ ಒಬ್ಬಟ್ಟಿನ ಊಟ ಮಾಡಿಸಲಾಗಿತ್ತು. ಇದನ್ನು ಸವಿದ ಅಧ್ಯಯನ ತಂಡ ಹಾಗೂ ಜಿಲ್ಲಾಡಳಿತ ಸಂಜೆ 4 ಗಂಟೆಗೆ ದೊಡ್ಡೇರಿ ಹೋಬಳಿಯ ಡಿವಿ ಹಳ್ಳಿ, ಡಿ.ಕೈಮರ ಗ್ರಾಮಗಳಲ್ಲಿ ಬರ ವೀಕ್ಷಣೆ ನಡೆಸಿದ ಬಳಿಕ ಶಿರಾ ಕಡೆ ಪ್ರಯಾಣ ಬೆಳೆಸಿತು.