Advertisement

ಸಂಪುಟಕ್ಕೆ ಶೀಘ್ರ ಹೊಸ ಸ್ಪರ್ಶ; ಮಾಸಾಂತ್ಯಕ್ಕೆ ಪಕ್ಷ , ಸರಕಾರದಲ್ಲಿ ಆಮೂಲಾಗ್ರ ಬದಲಾವಣೆ?

12:09 AM Apr 23, 2022 | Team Udayavani |

ಬೆಂಗಳೂರು: ಹಲವು ದಿನಗಳಿಂದ ಕೇಳಿಬರುತ್ತಿರುವ ಸಂಪುಟ ಪುನಾರಚನೆ ಅಂತಿಮ ಘಟ್ಟಕ್ಕೆ ತಲುಪಿದ್ದು, ಮಾಸಾಂತ್ಯಕ್ಕೆ ಮುಹೂರ್ತ ನಿಗದಿಯಾಗುವುದು ಖಚಿತ ಎನ್ನಲಾಗಿದೆ.

Advertisement

ಸರಕಾರ ಹಾಗೂ ಪಕ್ಷದಲ್ಲಿ ಆಮೂಲಾಗ್ರ ಬದಲಾವಣೆಯೊಂದಿಗೆ ಮುಂದಿನ ಚುನಾವಣೆಯಲ್ಲಿ 150 ಸೀಟು ಗೆಲ್ಲಲು ನೀಲನಕ್ಷೆ ಸಿದ್ಧಗೊಂಡಿದೆ.

ಒಂದೆಡೆ ಪಕ್ಷ ಸಂಘಟನೆ, ಮತ್ತೊಂದೆಡೆ ಉತ್ತಮ ಆಡಳಿತದ ಮೂಲಕ ಜನರ ವಿಶ್ವಾಸ ಗಳಿಸಲು ಪಕ್ಷದ ವರಿಷ್ಠರು ಸೂತ್ರ ಸಿದ್ಧಪಡಿಸಿದ್ದಾರೆ. ಹೊಸಪೇಟೆಯಲ್ಲಿ ನಡೆದ ಕಾರ್ಯಕಾರಿಣಿ ಬೆನ್ನಲ್ಲೇ ಇಂಥದ್ದೊಂದು ಕಾರ್ಯಯೋಜನೆ ರೂಪಿಸಲಾಗಿದೆ ಎನ್ನಲಾಗುತ್ತಿದೆ. ಸಂಪುಟ ವಿಸ್ತರಣೆ ಮಾಡಬೇಕೇ ಅಥವಾ ಪುನಾರಚನೆಗೆ ಮುಂದಾಗಬೇಕೇ ಎಂಬ ಗೊಂದಲ ಇತ್ತಾದರೂ ಈಗ ಪುನಾ ರಚನೆಗೆ ನಿರ್ಧರಿಸಿದಂತಿದೆ.

ಹೀಗಾಗಿ ಖಾಲಿ ಇರುವ ಐದು ಸ್ಥಾನಗಳ ಜತೆಗೆ ಐದು ಸಚಿವರ ರಾಜೀನಾಮೆ ಪಡೆದು, ಹತ್ತು ಸ್ಥಾನ ಭರ್ತಿ ಮಾಡುವುದು ಹಾಗೂ ಕೆಲವು ಪ್ರಮುಖ ಖಾತೆಗಳ ಬದಲಾವಣೆ ಮಾಡುವುದು ನೀಲನಕ್ಷೆಯ ಭಾಗ ಎನ್ನಲಾಗಿದೆ.

ಪಕ್ಷ ಹಾಗೂ ಸರಕಾರದ ವರ್ಚಸ್ಸುವೃದ್ಧಿಗೆ ಗೃಹ, ಶಿಕ್ಷಣ, ಸಮಾಜ ಕಲ್ಯಾಣ, ಕಂದಾಯ, ಲೋಕೋಪಯೋಗಿ, ನೀರಾವರಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌, ಇಂಧನ, ಆರೋಗ್ಯ, ಕೈಗಾರಿಕೆ, ಕೃಷಿ ಖಾತೆಗಳಲ್ಲಿ ಪರಿಣಾಮಕಾರಿ ಆಡಳಿತ ನೀಡುವ ನಿಟ್ಟಿನಲ್ಲಿ ಕೆಲವು ತೀರ್ಮಾನ ಕೈಗೊಳ್ಳಲಾಗುವುದು ಎಂದು ತಿಳಿದು ಬಂದಿದೆ.

Advertisement

ತೀರ್ಮಾನವಷ್ಟೇ ಬಾಕಿ
ರಾಜ್ಯದ ವಿಚಾರಕ್ಕೆ ಸಂಬಂಧಿಸಿ ಹಿರಿಯ ನಾಯಕರು ಸುದೀರ್ಘ‌ವಾಗಿ ಚರ್ಚಿಸಿದ್ದು, ಪ್ರಸಕ್ತ ವಿದ್ಯಮಾನ, ಮುಂದಿನ ಬೆಳವಣಿಗೆ, ವಿಧಾನಸಭೆ ಚುನಾವಣೆ ಗಮನದಲ್ಲಿಟ್ಟುಕೊಂಡು ಪ್ರಮುಖ ತೀರ್ಮಾನ ಕೈಗೊಳ್ಳಲು ಮುಂದಾಗಿದ್ದಾರೆ. ಈ ಸಂಬಂಧ ಪಕ್ಷದ ಹಿರಿಯ ನಾಯಕರು ಪ್ರಾಥಮಿಕ ಹಂತದ ಚರ್ಚೆ ಮುಗಿಸಿದ್ದು, ತೀರ್ಮಾನವಷ್ಟೇ ಬಾಕಿಯಿದೆ ಎಂದು ಹೇಳಲಾಗಿದೆ.

ಒಕ್ಕಲಿಗರಿಗೆ ಅಧ್ಯಕ್ಷ ಸ್ಥಾನ?
ಜೂನ್‌ ನಲ್ಲಿ ರಾಜ್ಯಾಧ್ಯಕ್ಷರ ಅವಧಿ ಪೂರ್ಣಗೊಳ್ಳುವ ಹಿನ್ನೆಲೆಯಲ್ಲಿ ಹೊಸ ಅಧ್ಯಕ್ಷರ ನೇಮಕಕ್ಕೂ ತೀರ್ಮಾನಿಸಲಾಗಿದ್ದು, ಒಕ್ಕಲಿಗ ಸಮುದಾಯದ ಶೋಭಾ ಕರಂದ್ಲಾಜೆ, ಸಿ.ಟಿ. ರವಿ ಅವರ ಹೆಸರು ಮುಂಚೂಣಿಯಲ್ಲಿದೆ. ಸರಕಾರದಲ್ಲಿ ಸಚಿವರಾಗಿರುವ ಹಿರಿಯರನ್ನು ಕೈಬಿಟ್ಟರೆ ಅವರಿಗೆ ಪಕ್ಷ ಸಂಘಟನೆ ಪ್ರಮುಖ ಜವಾಬ್ದಾರಿ ನೀಡಬೇಕು ಎಂಬ ಅಭಿಪ್ರಾಯವಿದೆ. ಲಿಂಗಾಯತ, ಒಕ್ಕಲಿಗರ ಜತೆಗೆ ದಲಿತ ಹಾಗೂ ಹಿಂದುಳಿದ ವರ್ಗವನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಚುನಾವಣೆ ಎದುರಿಸಬೇಕು. ಪಕ್ಷ ಹಾಗೂ ಸರಕಾರದಲ್ಲಿ ಈ ಸಮುದಾಯಗಳಿಗೆ ಅವಕಾಶ ಕಲ್ಪಿಸಿ ಅವರ ವಿಶ್ವಾಸ ಗಳಿಸಬೇಕೆಂಬ ನಿರ್ಧಾರಕ್ಕೆ ಬರಲಾಗಿದೆ ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next