ನವದೆಹಲಿ/ಬೆಂಗಳೂರು: ರಾಜ್ಯ ಬಿಜೆಪಿ ಸರಕಾರದ ನೂತನ ಸಚಿವರು ಮಂಗಳವಾರ ಬೆಳಗ್ಗೆ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಏತನ್ಮಧ್ಯೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್ ಶಾ ಅವರು ಅಂತಿಮಗೊಳಿಸುವ ಪಟ್ಟಿಯಲ್ಲಿ ಯಾರೆಲ್ಲ ಸ್ಥಾನ ಪಡೆಯಲಿದ್ದಾರೆ ಎಂಬುದು ಸದ್ಯ ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ.
ಮಂಗಳವಾರ ಬೆಳಗ್ಗೆ 10-30ರಿಂದ 11-30ರೊಳಗೆ ರಾಜಭವನದಲ್ಲಿ ನೂತನ ಸಚಿವರ ಪ್ರಮಾಣವಚನ ಸ್ವೀಕಾರ ಸಮಾರಂಭ ನಡೆಯಲಿದೆ ಎಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಸೋಮವಾರ ಸುದ್ದಿಗಾರರ ಜತೆ ಮಾತನಾಡುತ್ತ ತಿಳಿಸಿದ್ದರು.
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಈಗಾಗಲೇ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಜತೆ ಸುದೀರ್ಘವಾಗಿ ಚರ್ಚೆ ನಡೆಸಿ ರಾಜ್ಯ ಸಂಪುಟದಲ್ಲಿ ಯಾರೆಲ್ಲ ಸ್ಥಾನ ಪಡೆಯಬೇಕೆಂಬ ಬಗ್ಗೆ ಅಂತಿಮ ನಿರ್ಧಾರ ಕೈಗೊಂಡಿದ್ದಾರೆಂದು ಮೂಲಗಳು ತಿಳಿಸಿವೆ.
ಬಿಎಸ್ ವೈ ಆಪ್ತರಲ್ಲಿ ಕಳವಳ!
ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರ ಆಪ್ತರಿಗೆ ಇದೀಗ ಆತಂಕ ಶುರುವಾಗಿದೆ ಎನ್ನಲಾಗಿದೆ. ಯಾಕೆಂದರೆ ಸಚಿವ ಸಂಪುಟದಲ್ಲಿ ಯಾರು ಸ್ಥಾನ ಪಡೆಯಲಿದ್ದಾರೆ ಎಂಬುದು ಇಂದು ಸಂಜೆ ಅಥವಾ ಮಧ್ಯರಾತ್ರಿಯೊಳಗೆ ಬಿಎಸ್ ವೈ ಕೈಸೇರಲಿರುವ ಪಟ್ಟಿ ನೋಡಿದ ಮೇಲೆಯೇ ತಿಳಿಯದೆ! ಈ ಬಾರಿಯ ಸಚಿವ ಸಂಪುಟದಲ್ಲಿ ಹೊಸಬರಿಗೆ ಹೆಚ್ಚಿನ ಸ್ಥಾನಗಳಲ್ಲಿ ಮಣೆ ಹಾಕುವ ಸಾಧ್ಯತೆ ಇದೆ ಎನ್ನಲಾಗಿದೆ.
ಸಚಿವ ಸ್ಥಾನ ಸಿಗದಿದ್ದರೆ ಬೇಸರಮಾಡಿಕೊಳ್ಳಬೇಡಿ: ಬಿಎಸ್ ಯಡಿಯೂರಪ್ಪ
ಸಚಿವ ಸಂಪುಟದಲ್ಲಿ ತಮ್ಮ ಕೆಲವು ಆಪ್ತರಿಗೆ ಸಚಿವ ಸ್ಥಾನ ಸಿಗುವುದು ಅನುಮಾನ ಎಂಬುದು ಖಚಿತವಾಗುತ್ತಿದ್ದಂತೆಯೇ, ಸಚಿವ ಸ್ಥಾನ ಸಿಗದಿದ್ದರೆ ಯಾರೂ ಬೇಸರ ಮಾಡಿಕೊಳ್ಳಬೇಡಿ ಎಂದು ಬಿಎಸ್ ಯಡಿಯೂರಪ್ಪ ಸೋಮವಾರ ಮುಂಜಾಗ್ರತೆಯಾಗಿ ಸಲಹೆ ನೀಡಿದ್ದಾರೆ. ನಿಮ್ಮ ಬೆಂಬಲಕ್ಕೆ ನಾನಿದ್ದೇನೆ, ನಿಮ್ಮ ಕ್ಷೇತ್ರಕ್ಕೆ ಬೇಕಾದಷ್ಟು ಅನುದಾನ ಕೊಡುತ್ತೇನೆ ಎಂದು ಈ ಸಂದರ್ಭದಲ್ಲಿ ಆಪ್ತರಿಗೆ ಭರವಸೆ ನೀಡಿದ್ದಾರೆ.