Advertisement

Karnataka By Poll Results: ಜೆಡಿಎಸ್‌ ಅಂತಿಮ ದಿನ ಎಣಿಸತೊಡಗಿದೆ: ಸಿ.ಪಿ.ಯೋಗೇಶ್ವರ್‌

01:14 PM Nov 23, 2024 | Team Udayavani |

ಚನ್ನಪಟ್ಟಣ: ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಜಿದ್ದಾಜಿದ್ದಿನ ಉಪಚುನಾವಣ ಹಣಾಹಣಿಯಲ್ಲಿ ಕಾಂಗ್ರೆಸ್‌ ಪಕ್ಷದ ಸಿ.ಪಿ.ಯೋಗೇಶ್ವರ್‌ ಗೆಲುವು ಸಾಧಿಸಿದ್ದು, ಪ್ರತಿಸ್ಪರ್ಧಿ ಬಿಜೆಪಿ ಮೈತ್ರಿ ಅಭ್ಯರ್ಥಿ ನಿಖಿಲ್‌ ಕುಮಾರಸ್ವಾಮಿ ಪರಾಜಯಗೊಂಡಿದ್ದಾರೆ. ಈ ಸಂದರ್ಭದಲ್ಲಿ ತನ್ನನ್ನು ಗೆಲ್ಲಿಸಿದ ಕ್ಷೇತ್ರದ ಮತದಾರರಿಗೆ ಸಿಪಿವೈ ಧನ್ಯವಾದ ಸಮರ್ಪಿಸಿದ್ದಾರೆ.

Advertisement

ಶನಿವಾರ (ನ.23) ಮತಎಣಿಕೆ ಅಂತಿಮ ಹಂತದ ವೇಳೆ ಸುದ್ದಿಗಾರರ ಜತೆ ಮಾತನಾಡಿದ ಸಿಪಿ ಯೋಗೇಶ್ವರ್‌, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಹಾಗೂ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರ ಪ್ರತಿಷ್ಠೆಗೆ ನಿಖಿಲ್‌ ಕುಮಾರಸ್ವಾಮಿ ಬಲಿಪಶು ಆಗಿದ್ದಾರೆ. ಮಗನನ್ನು ಗೆಲ್ಲಿಸಲೇಬೇಕು ಎಂಬ ಇಚ್ಛೆ ಇದ್ದಿದ್ದರೆ ನಿಖಿಲ್‌ ನನ್ನು ಚನ್ನಪಟ್ಟಣ ಲೋಕಸಭಾ ಚುನಾವಣೆಯಲ್ಲಿ ನಿಲ್ಲಿಸಿ ಗೆಲ್ಲಿಸಬಹುದಿತ್ತು. ಆದರೆ ತಮ್ಮ ಸ್ವಾರ್ಥಕ್ಕಾಗಿ ಅಲ್ಲಿಯೂ ಮಗನಿಗೆ ಮೋಸ ಮಾಡಿರುವುದಾಗಿ ಆರೋಪಿಸಿದರು.

ಈ ಚುನಾವಣೆಯಲ್ಲಿ ಎಚ್.ಡಿ.ದೇವೇಗೌಡರನ್ನು ಜನರು ತಿರಸ್ಕರಿಸಿದ್ದಾರೆ. ಅವರು ಮುತ್ಸದ್ಧಿ ರಾಜಕಾರಣಿ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಈಗ ಅವರಿಗೆ ವಯಸ್ಸಾಗಿದೆ. ಅವರು ವಿಶ್ರಾಂತ ಜೀವನ ನಡೆಸಲು ಇದು ಸೂಕ್ತ ಕಾಲ. ಅಷ್ಟೇ ಅಲ್ಲ ಚುನಾವಣೆಯ ಫಲಿತಾಂಶದ ಪರಿಣಾಮ ಜೆಡಿಎಸ್‌ ಕೊನೆಯ ದಿನಗಳನ್ನು ಎಣಿಸುವಂತೆ ಮಾಡಿದೆ ಎಂದು ಯೋಗೇಶ್ವರ್‌ ಹೇಳಿದರು.

ದೇವೇಗೌಡ ಅವರದ್ದು ಕೇವಲ ಸ್ವಾರ್ಥ ರಾಜಕಾರಣ. ಜನಪರ ಕಾಳಜಿ ಇದ್ದಿದ್ದರೆ ಜನ ಅವರ ಕೈಹಿಡಿಯುತ್ತಿದ್ದರು. ಆದರೆ ಕುಮಾರಸ್ವಾಮಿ ಸಿಎಂ ಆದಾಗ ಅಥವಾ ಕೇಂದ್ರ ಸಚಿವರಾದ ಮೇಲೆ ಚನ್ನಪಟ್ಟಣ ಕ್ಷೇತ್ರಕ್ಕೆ ಅವರ ಕೊಡುಗೆ ಏನೂ ಇಲ್ಲ ಎಂದು ಸಿಪಿವೈ ವಾಗ್ದಾಳಿ ನಡೆಸಿದರು.

Advertisement

ಈ ಸಂದರ್ಭದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ವಿರುದ್ಧ ಕಿಡಿಕಾರಿದ ಸಿಪಿವೈ, ವಿಜಯೇಂದ್ರರೇ ನಿಮ್ಮ ಬ್ಯಾಟರಿ ವೀಕ್‌ ಆಗಿದ್ದಾಗ ಅದನ್ನು ಜಾರ್ಜ್‌ ಮಾಡಿದ್ದು ನಾನು. ನಿಮ್ಮ ಕುಟುಂಬ ರಾಜಕಾರಣದ ಸ್ವಾರ್ಥದಲ್ಲಿ ನನ್ನನ್ನು ಕಡೆಗಣಿಸಿದ್ದೀರಿ. ಅದಕ್ಕೆ ಮತದಾರರು ತಕ್ಕ ಉತ್ತರ ನೀಡಿದ್ದಾರೆ ಎಂದು ತಿರುಗೇಟು ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next