ಬೆಂಗಳೂರು: ರಾಜ್ಯದ 15 ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯ ಕಾವು ಜೋರಾಗಿರುವಂತೆ ಮೂರೂ ಪಕ್ಷಗಳ ನಾಯಕರ ನಡುವಿನ ಆರೋಪ ಪ್ರತ್ಯಾರೋಪಗಳೂ ಸಹ ಜೋರಾಗಿಯೇ ನಡೆಯುತ್ತಿದೆ. ಆಡಳಿತಾರೂಢ ಭಾರತೀಯ ಜನತಾ ಪಕ್ಷದ ನಾಯಕರು ಪ್ರಮುಖವಾಗಿ ಸಿದ್ಧರಾಮಯ್ಯನವರನ್ನೇ ಗುರಿಯಾಗಿಸಿಕೊಂಡು ಟೀಕೆಗಳನ್ನು ಮಾಡುತ್ತಿದ್ದಾರೆ. ಇತ್ತ ಮಾಜೀ ಮುಖ್ಯಮಂತ್ರಿ ಸಿದ್ಧರಾಮಯ್ಯನವರೂ ಸಹ ತಾವು ಹೋದ ಕಡೆಗಳಲ್ಲೆಲ್ಲಾ ಬಿಜೆಪಿ ರಾಜ್ಯ ನಾಯಕರನ್ನು ಮತ್ತು ಅನರ್ಹ ಶಾಸಕರನ್ನು ಗುರಿಯಾಗಿಸಿ ತಮ್ಮ ವಾಗ್ದಾಳಿಯನ್ನು ನಡೆಸುತ್ತಿದ್ದಾರೆ.
ಶುಕ್ರವಾರದಂದು ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ ಮತ್ತು ಸಿದ್ಧರಾಮಯ್ಯ ಅವರ ನಡುವೆ ಟ್ವೀಟ್ ವಾರ್ ನಡೆದಿದೆ. ಇದಕ್ಕೆ ಕಾರಣವಾಗಿದ್ದು ಸದಾನಂದ ಗೌಡ ಅವರು ತಮ್ಮ ಟ್ವೀಟ್ ಒಂದರಲ್ಲಿ ರಾಷ್ಟ್ರಕವಿ ಕುವೆಂಪು ಅವರ ಪದ್ಯದ ಸಾಲೊಂದನ್ನು ಬರೆದುಕೊಂಡು ‘ಗೊಬ್ಬರವನ್ನು ಹೀಯಾಳಿಸುವ ಮೂಲಕ ನೀವು ರೈತರನ್ನು ಕೇವಲವಾಗಿ ಕಂಡಿದ್ದೀರಿ. ಪ್ರಚಾರಕ್ಕಾಗಿ ದಿನಕ್ಕೊಂದು ಹೇಳಿಕೆ ನೀಡುವುದು ಸಮತೋಲನವಿಲ್ಲದೆ ತಮ್ಮ ಮನಸ್ಥಿತಿಯನ್ನು ತೋರಿಸುತ್ತದೆ’ ಎಂದು ಸಿದ್ಧರಾಮಯ್ಯನವರನ್ನು ಟೀಕಿಸಿದ್ದರು.
ಇದಕ್ಕೆ ತಕ್ಕ ಪ್ರತ್ಯುತ್ತರ ನೀಡಿರುವ ಸಿದ್ಧರಾಮಯ್ಯನವರು ಪಕ್ಷದಲ್ಲಿ ಸದಾನಂದ ಗೌಡ ಅವರು ಪ್ರಸ್ತುತ ತಲುಪಿರುವ ಸ್ಥಿತಿಯನ್ನು ಅಣಕವಾಡಿದ್ದಾರೆ. ‘ಮೊದಲು ಮುಖ್ಯಮಂತ್ರಿ ಸ್ಥಾನದಿಂದ ನಂತರ ರೈಲ್ವೇ, ಕಾನೂನು, ಅಂಕಿ-ಅಂಶ ಹೀಗೆ ಎಲ್ಲಾ ಕಡೆಗಳಲ್ಲಿಯೂ ತಿರಸ್ಕೃತಗೊಂಡ ಗೌಡರು ಈಗ ಪಕ್ಷದಲ್ಲಿ ಗೊಬ್ಬರವಾಗಿ ಹೋಗಿದ್ದಾರೆ. ಈ ಹತಾಶೆ ಅವರಿಂದ ಇಂತಹ ಹೇಳಿಕೆಗಳನ್ನು ಹೊರಡಿಸುತ್ತಿದೆ’ ಎಂದು ಅಣಕವಾಡಿದ್ದಾರೆ.
ಇದಕ್ಕೆ ಮತ್ತೆ ಪ್ರತ್ಯುತ್ತರ ನೀಡಿರುವ ಸದಾನಂದ ಗೌಡರು ಮತ್ತೆ ಕುವೆಂಪು ಅವರ ಪದ್ಯದ ಸಾಲನ್ನು ಉಲ್ಲೇಖಿಸಿ ‘ನಾನು ಗೊಬ್ಬರ ಹೌದು, ಸ್ವಪಕ್ಷೀಯರ ರಕ್ತ ಹೀರಿದ ಪಿ.ಎಫ್.ಐ.ನ ಸಮರ್ಥಕ ನೀವಲ್ಲವೇ?’ ಎಂದು ಮತ್ತೆ ಸಿದ್ಧರಾಮಯ್ಯನವರ ಕಾಲೆಳೆದಿದ್ದಾರೆ.
ಒಟ್ಟಿನಲ್ಲಿ ರಾಜಕಾರಣಿಗಳಿಗೆ ಪರಸ್ಪರ ಕಾಲೆಳೆದುಕೊಳ್ಳಲು ರಸಋಷಿ ಕುವೆಂಪು ಅವರ ಪದ್ಯದ ಸಾಲುಗಳು ಪೂರಕವಾಗಿದ್ದು ಮಾತ್ರ ವಿಶೇಷವಾಗಿತ್ತು.