Advertisement
397 ರನ್ನುಗಳ ಭಾರೀ ಹಿನ್ನಡೆಗೆ ಸಿಲುಕಿದ ಬಳಿಕ ದ್ವಿತೀಯ ಇನ್ನಿಂಗ್ಸ್ ಆರಂಭಿಸಿದ ಮುಂಬಯಿ 3ನೇ ದಿನದಾಟದ ಅಂತ್ಯಕ್ಕೆ 3 ವಿಕೆಟ್ ಕಳೆದುಕೊಂಡು 120 ರನ್ ಮಾಡಿತ್ತು. ಆಗಲೇ ಆದಿತ್ಯ ತಾರೆ ಬಳಗದ ಮೇಲೆ ಇನ್ನಿಂಗ್ಸ್ ಸೋಲಿನ ಕಾರ್ಮೋಡ ಆವರಿಸಿತ್ತು. ರವಿವಾರ ಬ್ಯಾಟಿಂಗ್ ಮುಂದುವರಿಸಿದ ಮುಂಬಯಿ 377 ರನ್ನುಗಳಿಗೆ ಸರ್ವಪತನ ಕಂಡಿತು. ಇನ್ನೊಂದು ದಿನದ ಆಟ ಬಾಕಿ ಉಳಿದಿರುವಾಗಲೇ ವಿನಯ್ ಪಡೆ ಈ ಪರಾಕ್ರಮ ಮೆರೆಯಿತು. ಇದು ರಣಜಿ ಇತಿಹಾಸದಲ್ಲಿ ಮುಂಬಯಿ ಅನುಭವಿಸಿದ ಕೇವಲ 5ನೇ ಇನ್ನಿಂಗ್ಸ್ ಸೋಲಾಗಿದೆ.
ಸೂರ್ಯಕುಮಾರ್ ಯಾದವ್ ಅವರ ಶತಕ, ನೈಟ್ ವಾಚ್‌ಮನ್ ಆಕಾಶ್ ಪಾರ್ಕರ್ ಮತ್ತು ಮೊದಲ ಪಂದ್ಯವಾಡಿದ ಶಿವಂ ದುಬೆ ಅವರ ಅರ್ಧ ಶತಕಗಳು ಮುಂಬಯಿಯ ಹೋರಾಟವನ್ನೇನೋ ಜಾರಿಯಲ್ಲಿರಿಸಿದರು. ಆದರೆ ಕರ್ನಾಟಕವನ್ನು ಮತ್ತೆ ಬ್ಯಾಟಿಂಗಿಗೆ ಇಳಿಸುವಲ್ಲಿ ಈ ಪ್ರಯತ್ನ ಸಾಲಲಿಲ್ಲ. ಆಫ್ಸ್ಪಿನ್ನರ್ ಕೃಷ್ಣಪ್ಪ ಗೌತಮ್ 6 ವಿಕೆಟ್ ಹಾರಿಸಿ ಮುಂಬಯಿಗೆ ಕಂಟಕವಾಗಿ ಪರಿಣಮಿಸಿದರು. ಗೌತಮ್ ಇನ್ನಿಂಗ್ಸ್ ಒಂದರಲ್ಲಿ 5 ಪ್ಲಸ್ ವಿಕೆಟ್ ಹಾರಿಸಿದ್ದು ಇದು 5ನೇ ಸಲ. ಹ್ಯಾಟ್ರಿಕ್ ಪರಾಕ್ರಮದೊಂದಿಗೆ ಮುಂಬಯಿಯ ಕುಸಿತಕ್ಕೆ ಮುಹೂರ್ತವಿರಿಸಿದ ಕರ್ನಾಟಕದ ನಾಯಕ ಆರ್. ವಿನಯ್ ಕುಮಾರ್ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು. ಅವರ ಒಟ್ಟು ಸಾಧನೆ 78ಕ್ಕೆ 8 ವಿಕೆಟ್ ಹಾಗೂ 37 ರನ್. ಇದರೊಂದಿಗೆ “ದಾವಣಗೆರೆ ಎಕ್ಸ್‌ಪ್ರೆಸ್’ ವಿನಯ್ ಕುಮಾರ್ ಪಾಲಿಗೆ 100ನೇ ಪ್ರಥಮ ದರ್ಜೆ ಪಂದ್ಯ ಸ್ಮರಣೀಯವೆನಿಸಿತು.
Related Articles
ಸೂರ್ಯಕುಮಾರ್ ಯಾದವ್ 55 ರನ್ ಹಾಗೂ ಆಕಾಶ್ ಪಾರ್ಕರ್ 3 ರನ್ನಿನಿಂದ ಬ್ಯಾಟಿಂಗ್ ಮುಂದುವರಿಸಿದರು. ರವಿವಾರದ ಮುಂಜಾನೆಯ ಅವಧಿಯಲ್ಲಿ ಇವರಿಬ್ಬರೂ ಅತ್ಯಂತ ಜವಾಬ್ದಾರಿಯುತ ಬ್ಯಾಟಿಂಗ್ ಮೂಲಕ ಮುಂಬಯಿಯ ರಕ್ಷಣೆಗೆ ನಿಂತರು. ಸ್ಕೋರ್ ಇನ್ನೂರರ ಗಡಿ ದಾಟಿ ಬೆಳೆಯತೊಡಗಿತು. ಅಷ್ಟರಲ್ಲಿ ಯಾದವ್ ಶತಕವನ್ನೂ ಪೂರ್ತಿಗೊಳಿಸಿದರು. ಕರ್ನಾಟಕದ ಬೌಲರ್‌ಗಳು “ಬ್ರೇಕ್ ತೂÅ’ಗಾಗಿ ಹರಸಾಹಸಪಟ್ಟರೂ ಯಶಸ್ಸು ಸಿಗಲಿಲ್ಲ. ಈ ಜೋಡಿ ಬೇರ್ಪಡಲು ಯಾದವ್ ರನೌಟಾಗಬೇಕಾಯಿತು. 180 ಎಸೆತ ಎದುರಿಸಿದ ಯಾದವ್ 16 ಬೌಂಡರಿ ಹಾಗೂ ಒಂದು ಸಿಕ್ಸರ್ ನೆರವಿನಿಂದ 108 ರನ್ ಬಾರಿಸಿದರು. ಇದು ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಅವರ 12ನೇ ಶತಕವಾದರೆ, ಪ್ರಸಕ್ತ ರಣಜಿ ಋತುವಿನಲ್ಲಿ ಮೊದಲನೆಯದು. ಕರ್ನಾಟಕಕ್ಕೆ ಮೊದಲ ಅವಧಿಯಲ್ಲಿ ಲಭಿಸಿದ್ದು ಇದೊಂದೇ ಯಶಸ್ಸು.
Advertisement
ಯಾದವ್ ಜತೆ 4ನೇ ವಿಕೆಟಿಗೆ 98 ರನ್ ಪೇರಿಸಲು ನೆರವಾದ ಆಕಾಶ್ ಪಾರ್ಕರ್ 186 ಎಸೆತಗಳನ್ನು ನಿಭಾಯಿಸಿ 65 ರನ್ ಹೊಡೆದರು. ಇದರಲ್ಲಿ 11 ಬೌಂಡರಿ ಸೇರಿತ್ತು. ಪ್ರಥಮ ಇನ್ನಿಂಗ್ಸ್‌ನಲ್ಲಿ ಪಾರ್ಕರ್ ಮೊದಲ ಎಸೆತದಲ್ಲೇ ಔಟಾಗಿ ವಿನಯ್‌ಗೆ ಹ್ಯಾಟ್ರಿಕ್ ವಿಕೆಟ್ ಒಪ್ಪಿಸಿದ್ದರು. ಪಾರ್ಕರ್ 7ನೇ ವಿಕೆಟ್ ರೂಪದಲ್ಲಿ ಪೆವಿಲಿಯನ್ ಸೇರಿಕೊಂಡರು. ಈ ನಡುವೆ ಸಿದ್ದೇಶ್ ಲಾಡ್ (31) ಮತ್ತು ನಾಯಕ ಆದಿತ್ಯ ತಾರೆ (0) ಅವರಿಗೆ ವಿನಯ್ ಕುಮಾರ್ ಬಲೆ ಬೀಸಿದರು. ನಾಯಕ ತಾರೆ ಖಾತೆ ತೆರೆಯದೆ ನಿರ್ಗಮಿಸಿದ್ದು ಮುಂಬಯಿಗೆ ಬಿದ್ದ ಭಾರೀ ಹೊಡೆತವೆನಿಸಿತು.
ಮೊದಲ ರಣಜಿ ಪಂದ್ಯವಾಡುತ್ತಿರುವ ಶಿವಂ ದುಬೆ ಕೊನೆಯ ಹಂತದಲ್ಲಿ ಉತ್ತಮ ಹೋರಾಟವೊಂದನ್ನು ಪ್ರದರ್ಶಿಸಿ 71 ರನ್ ಹೊಡೆದರು. ಈ ಆಕ್ರಮಣಕಾರಿ ಬ್ಯಾಟಿಂಗ್ ವೇಳೆ 7 ಬೌಂಡರಿ ಹಾಗೂ 4 ಸಿಕ್ಸರ್ ಸಿಡಿಯಲ್ಪಟ್ಟಿತು. ಮೊದಲ ಸರದಿಯಲ್ಲಿ 75 ರನ್ ಮಾಡಿದ್ದ ಧವಳ್ ಕುಲಕರ್ಣಿ, ಈ ಬಾರಿ ತಾನೆದುರಿಸಿದ ಮೊದಲ ಎಸೆತವನ್ನೇ ಸಿಕ್ಸರ್‌ಗೆ ಅಟ್ಟಿದರು. ಆದರೆ 15 ರನ್ನಿಗೆ ಇವರ ಆಟ ಮುಗಿಯಿತು. ಅಂತಿಮವಾಗಿ ದುಬೆ ವಿಕೆಟ್ ಕೀಳುವ ಮೂಲಕ ಕೆ. ಗೌತಮ್ ಕರ್ನಾಟಕದ ಗೆಲುವನ್ನು ಸಾರಿದರು.
ಸ್ಕೋರ್‌ಪಟ್ಟಿ* ಮುಂಬಯಿ ಪ್ರಥಮ ಇನ್ನಿಂಗ್ಸ್ 173
* ಕರ್ನಾಟಕ ಪ್ರಥಮ ಇನ್ನಿಂಗ್ಸ್ 570
* ಮುಂಬಯಿ ದ್ವಿತೀಯ ಇನ್ನಿಂಗ್ಸ್
ಪೃಥ್ವಿ ಶಾ ಬಿ ಅರವಿಂದ್ 14
ಜಾಯ್ ಬಿಸ್ತಾ ಬಿ ಕೆ.ಗೌತಮ್ 20
ಅಖೀಲ್ ಹೆರ್ವಾಡ್ಕರ್ ಸಿ ಅಬ್ಟಾಸ್ ಬಿ ಕೆ.ಗೌತಮ್ 26
ಸೂರ್ಯಕುಮಾರ್ ಯಾದವ್ ರನೌಟ್ 108
ಆಕಾಶ್ ಪಾರ್ಕರ್ ಸಿ ನಾಯರ್ ಬಿ ಕೆ.ಗೌತಮ್ 65
ಸಿದ್ದೇಶ್ ಲಾಡ್ ಸಿ ಗೌತಮ್ ಬಿ ವಿನಯ್ 31
ಆದಿತ್ಯ ತಾರೆ ಸಿ ಗೌತಮ್ ಬಿ ವಿನಯ್ 0
ಶಿವಂ ದುಬೆ ಸಿ ಸಮರ್ಥ್ ಬಿ ಕೆ.ಗೌತಮ್ 71
ಧವಳ್ ಕುಲಕರ್ಣಿ ಬಿ ಕೆ.ಗೌತಮ್ 15
ಕೃಶ್ ಕೊಠಾರಿ ಬಿ ಕೆ.ಗೌತಮ್ 0
ಶಿವಂ ಮಲ್ಹೋತ್ರಾ ಔಟಾಗದೆ 0
ಇತರ 27
ಒಟ್ಟು (ಆಲೌಟ್) 377
ವಿಕೆಟ್ ಪತನ: 1-30, 2-34, 3-114, 4-212, 5-264, 6-276, 7-295, 8-315, 9-333.
ಬೌಲಿಂಗ್:
ವಿನಯ್ ಕುಮಾರ್ 19-6-44-2
ಅಭಿಮನ್ಯು ಮಿಥುನ್ 22-6-81-0
ಕೃಷ್ಣಪ್ಪ ಗೌತಮ್ 35.5-8-104-6
ಶ್ರೀನಾಥ್ ಅರವಿಂದ್ 18-8-40-1
ಶ್ರೇಯಸ್ ಗೋಪಾಲ್ 16-1-74-0
ಪವನ್ ದೇಶಪಾಂಡೆ 4-1-10-0 ಪಂದ್ಯಶ್ರೇಷ್ಠ: ವಿನಯ್ ಕುಮಾರ್