ಬೆಂಗಳೂರು: ಈ ಬಾರಿ ರೈತಪರ ಬಜೆಟ್ ಮಂಡಿಸಲು ತೀರ್ಮಾನಿಸಿದ್ದೇನೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.
ಪತ್ರಕರ್ತರ ಜತೆ ಮಾತನಾಡಿದ ಅವರು, ಈಗಾಗಲೇ ಬಜೆಟ್ ಪೂರ್ವಭಾವಿ ಸಭೆ ಆರಂಭಿಸಲಾಗಿದೆ. ಸಂಪನ್ಮೂಲ ಕ್ರೋಡೀಕರಣ ಇಲಾಖೆಗಳ ಜತೆ ಸಭೆ ನಡೆಸಿದ್ದೇನೆ. ಉಳಿದ ಇಲಾಖೆಗಳ ಜತೆಯೂ ಸಭೆ ಮುಂದುವರಿಸಲಿದ್ದೇನೆ ಎಂದು ಹೇಳಿದರು.
ಇಲಾಖೆಗಳಲ್ಲಿ ಹಿಂದಿನ ಬಜೆಟ್‌ನ ಸಾಧನೆ, ಮುಂದೆ ಕೈಗೊಳ್ಳಬೇಕಾದ ಕಾರ್ಯಕ್ರಮಗಳ ಬಗ್ಗೆ ಅಧಿಕಾರಿಗಳ ಜತೆ ಚರ್ಚಿಸುತ್ತೇನೆ. ಎಲ್ಲರ ಸಲಹೆ ಪಡೆದು ಒಳ್ಳೆಯ ಬಜೆಟ್ ಮಂಡಿಸುವುದಾಗಿ ತಿಳಿಸಿದರು.
ಕೇಂದ್ರ ಸರಕಾರವು ರಾಜ್ಯಕ್ಕೆ ನೆರೆ ಪರಿಹಾರದ ಎರಡನೇ ಕಂತು ಬಿಡುಗಡೆ ಮಾಡಿದೆ. ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯಕ್ಕೆ ಬಂದು ಹೋದ ಕೂಡಲೇ ಹಣ ಬಿಡುಗಡೆ ಮಾಡಿದ್ದಾರೆ. ಈ ಮೊದಲು 1,200 ಕೋ. ರೂ. ಹಣ ಬಿಡುಗಡೆ ಮಾಡಲಾಗಿತ್ತು, ಇದೀಗ 1,865 ಕೋ. ರೂ. ಬಿಡುಗಡೆ ಮಾಡಿದ್ದಾರೆ. ಇದಕ್ಕಾಗಿ ನಾನು ಪ್ರಧಾನಿಯವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಹೇಳಿದರು.
ಎರಡು ಕಂತುಗಳಲ್ಲಿ ಬಿಡುಗಡೆಯಾಗಿರುವ ಹಣ ಸಾಕಾಗುವುದಿಲ್ಲ. ಮತ್ತೆ ಹಣ ಬಿಡುಗಡೆ ಮಾಡುವ ವಿಶ್ವಾಸವಿದೆ ಎಂದವರು ಇದೇ ವೇಳೆ ವಿಶ್ವಾಸ ವ್ಯಕ್ತಪಡಿಸಿದರು.