ಬೆಂಗಳೂರು: ಕೌಶಲಾಭಿವೃದ್ಧಿಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ತಮ್ಮ ಬಜೆಟ್ ನಲ್ಲಿ ಒಂದಷ್ಟು ವಿನೂತನ ಯೋಜನೆಗಳನ್ನು ಮುಖ್ಯಮಂತ್ರಿ ಕುಮಾರಸ್ವಾಮಿಯವರು ಘೊಷಿಸಿದ್ದಾರೆ. ಹಾಗೆಯೇ ಕನ್ನಡ ಮತ್ತು ಸಂಸ್ಕೃತಿಯ ಉಳಿವಿಗೂ ಕುಮಾರಸ್ವಾಮಿಯವರು ಕೆಲವೊಂದು ಯೋಜನೆಗಳನ್ನು ಘೋಷಿಸಿದ್ದಾರೆ. ಅವುಗಳಲ್ಲಿ ಮುಖ್ಯವಾದವುಗಳು ಇಲ್ಲಿವೆ.
1) ‘ಮುಖ್ಯಮಂತ್ರಿ ಕೌಶಲ್ಯ ಕರ್ನಾಟಕ’ ಯೋಜನೆಯಡಿ 70,000 ಹೊಸ ಅಭ್ಯರ್ಥಿಗಳಿಗೆ 90 ಕೋಟಿ ರೂ.ಗಳ ವೆಚ್ಚದಲ್ಲಿ ಕೌಶಲ್ಯ ತರಬೇತಿ.
2) ಸಾಂಪ್ರದಾಯಿಕ ಕರಕುಶಲತೆಯನ್ನು ಉತ್ತೇಜಿಸಲು ಮಾಸ್ಟರ್ ಟ್ರೈನರ್ ಗಳು ಹಾಗೂ ಆಧುನಿಕ ವಿನ್ಯಾಸಕಾರರ ಸಹಯೋಗದೊಂದಿಗೆ ‘ಕೌಶಲ್ಯ ಪರಂಪರೆ ಶಾಲೆ’ ಹೊಸ ಕಾರ್ಯಕ್ರಮಕ್ಕೆ ಚಾಲನೆ.
3) ಶಿವಕುಮಾರ ಸ್ವಾಮಿಗಳ ಹುಟ್ಟೂರು ರಾಮನಗರ ಜಿಲ್ಲೆಯ ವೀರಾಪುರ ಗ್ರಾಮದಲ್ಲಿ ವಿಶ್ವದರ್ಜೆಯ ಸಾಂಸ್ಕೃತಿಕ ಹಾಗೂ ಪಾರಂಪರಿಕ ಕೇಂದ್ರ ಸ್ಥಾಪನೆಗೆ 25 ಕೋಟಿ ರೂ.ಗಳ ವಿಶೇಷ ಅನುದಾನ.
4) ಬಾಲಗಂಗಾಧರನಾಥ ಸ್ವಾಮೀಜಿಯವರ ಜನ್ಮಸ್ಥಳ ಬಿಡದಿಯ ಬಾಣಂದೂರು ಗ್ರಾಮವನ್ನು ಮಾದರಿ ಗ್ರಾಮವನ್ನಾಗಿ ಅಭಿವೃದ್ಧಿಪಡಿಸಲು ಹಾಗೂ ಶ್ರೀಗಳ ಜೀವನ ಸಾಧನೆಗಳು ಮತ್ತು ವಿಚಾರಗಳನ್ನು ಸಾರಲು ಸಾಂಸ್ಕೃತಿಕ ಹಾಗೂ ಪಾರಂಪರಿಕ ಕೇಂದ್ರವನ್ನು ಸ್ಥಾಪಿಸಲು 25 ಕೋಟಿ ರೂಪಾಯಿಗಳ ಅನುದಾನ.
5) ನಾಡಪ್ರಭು ಕೆಂಪೇಗೌಡ ಅಭಿವೃದ್ಧಿ ಪ್ರಾಧಿಕಾರಕ್ಕೆ 5 ಕೋಟಿ ರೂ.ಗಳ ಅನುದಾನ.
6) ಕೊಡವ ಸಮಾಜದ ಸರ್ವತೋಮುಖ ಅಭಿವೃದ್ಧಿಗೆ 10 ಕೋಟಿ ರೂ.ಗಳ ಅನುದಾನ.
7) ರಾಜ್ಯದ ಜಾನಪದ ಕಲಾವಿದರು ಹಾಗೂ ಕಲೆಗಳ ಉತ್ತೇಜನಕ್ಕಾಗಿ ‘ಜಾನಪದ ಜಾತ್ರೆ’ಗೆ ಮರು ಚಾಲನೆ. ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಜಾನಪದ ಜಾತ್ರೆ ಏರ್ಪಡಿಸಲು 2 ಕೋಟಿ ರೂ.ಗಳ ಅನುದಾನ.
8) ಕರಗ ಉತ್ಸವ ಆಚರಿಸುವ 139 ಸಂಘ ಸಂಸ್ಥೆಗಳಿಗೆ ಅಭಿವೃದ್ಧಿಗೆ ತಲಾ 2 ಕೋಟಿ ರೂ.ಗಳ ಅನುದಾನ.
9) ತಿಪಟೂರಿನಲ್ಲಿ ಹಾಸ್ಯ ಚಕ್ರವರ್ತಿ ದಿ. ನರಸಿಂಹರಾಜು ಅವರ ಹೆಸರಿನಲ್ಲಿ ಸ್ಮಾರಕ ಸಭಾ ಮಂದಿರ ನಿರ್ಮಾಣಕ್ಕೆ 2 ಕೋಟಿ ರೂ. ಅನುದಾನ.