“ಎಲ್ಲರಿಗೂ ಸೂರು’ ಸಂಕಲ್ಪದಡಿ ಈ ಬಾರಿ ಆರ್ಥಿಕ ದುರ್ಬಲ ವರ್ಗಗಳು ಮತ್ತು ಕೊಳಗೇರಿ ನಿವಾಸಿಗಳ “ವಾಸ್ತು’ ಬದಲಿಸುವ ಪಣ ತೊಡಲಾಗಿದೆ.
“ನಮ್ಮ ನೆಲೆ’ ಯೋಜನೆಯಡಿ ಕರ್ನಾಟಕ ಗೃಹ ಮಂಡಳಿಯಿಂದ ಅಭಿವೃದ್ಧಿಪಡಿಸಿರುವ ನಿವೇಶನಗಳ ಪೈಕಿ ಮೂರನೇ ಒಂದು ಭಾಗವನ್ನು ಅಂದರೆ, 10 ಸಾವಿರ ನಿವೇಶನಗಳನ್ನು ಆರ್ಥಿಕ ದುರ್ಬಲ ವರ್ಗ (ಇಡಬ್ಲೂéಎಸ್)ದವರಿಗೆ ಹಂಚಿಕೆ ಮಾಡುವುದಾಗಿ ಘೋಷಿಸಲಾಗಿದೆ. ಜೊತೆಗೆ ಸರ್ಕಾರಿ ಮಾಲಿಕತ್ವದ ಕೊಳಗೇರಿ ಪ್ರದೇಶಗಳಲ್ಲಿ ವಾಸಿಸುವ 1.14 ಲಕ್ಷ ಕುಟುಂಬಗಳಿಗೆ ಹಕ್ಕುಪತ್ರ ನೀಡಿದ್ದು, ವರ್ಷಾಂತ್ಯದಲ್ಲಿ ಎಲ್ಲಾ 3.36 ಲಕ್ಷ ಕುಟುಂಬಗಳಿಗೂ ಭೂಮಾಲಿಕತ್ವದ ಹಕ್ಕುಪತ್ರಗಳನ್ನು ನೀಡಲಾಗುವುದು ಎಂದು ಮುಖ್ಯಮಂತ್ರಿ ಘೋಷಿಸಿದ್ದಾರೆ.
ಹಿಂದಿನ ಸರ್ಕಾರ ಯಾವುದೇ ಅನುದಾನ ಬಿಡುಗಡೆ ಮಾಡದೇ ಘೋಷಿಸಿದ್ದ 15.84 ಲಕ್ಷ ಮನೆಗಳಿಗೆ ಕೋವಿಡ್ ಸಂಕಷ್ಟದ ನಡುವೆಯೂ 10,173 ಕೋಟಿ ರೂ. ಅನುದಾನ ನೀಡಿ, 5 ಲಕ್ಷ ಮನೆಗಳನ್ನು ಪೂರ್ಣಗೊಳಿಸಲಾಗಿದೆ. 5 ಲಕ್ಷ ಹೊಸ ಮನೆಗಳ ನಿರ್ಮಾಣಕ್ಕೆ ಅನುಮೋದನೆ ನೀಡಲಾಗಿದೆ. ಪ್ರಸಕ್ತ ವರ್ಷದಲ್ಲಿ 5 ಲಕ್ಷ ಹೊಸ ಮನೆ ನಿರ್ಮಿಸಲಾಗುವುದು. ಒಟ್ಟಾರೆ 5 ಸಾವಿರ ಕೋಟಿ ವೆಚ್ಚ ಮಾಡಲಾಗುವುದು ಎಂದೂ ಸಿಎಂ ತಿಳಿಸಿದ್ದಾರೆ.
ಅಭಿವೃದ್ಧಿ ಆಕಾಂಕ್ಷಿಗಳ ತಾಲೂಕುಗಳಲ್ಲಿ ಹೆಚ್ಚು ಜನರಿಗೆ ವಸತಿ ಸೌಲಭ್ಯ ಕಲ್ಪಿಸಲು 500 ಕೋಟಿ ರೂ. ನೀಡಲಾಗುವುದು. ಗೃಹ ಮಂಡಳಿಯಿಂದ ಪ್ರಸಕ್ತ ಆರ್ಥಿಕ ವರ್ಷದಲ್ಲಿ ಈವರೆಗೆ 6 ವಸತಿ ಯೋಜನೆಗಳನ್ನು ಪೂರ್ಣಗೊಳಿಸಿ 6,142 ನಿವೇಶನಗಳನ್ನು ಅಭಿವೃದ್ಧಿಪಡಿಸಲಾಗಿದೆ. ಪ್ರಸಕ್ತ ಸಾಲಿನಲ್ಲಿ ಅಂದಾಜು 2 ಸಾವಿರ ಎಕರೆ ಜಮೀನನ್ನು ವಸತಿ ಯೋಜನೆಗಾಗಿ ಸಂಗ್ರಹಿಸಿ ಅಂದಾಜು 30 ಸಾವಿರ ಸ್ವತ್ತುಗಳನ್ನು ಅಭಿವೃದ್ಧಿಪಡಿಸಿ, ಹಂಚಿಕೆ ಮಾಡಲು ನಿರ್ಧರಿಸಲಾಗಿದೆ.
ಬೆಂಗಳೂರಿನಲ್ಲಿ ಪ್ರಸಕ್ತ ವರ್ಷ 20 ಸಾವಿರ ಮನೆ ಪೂರ್ಣಗೊಳಿಸಿ ಹಸ್ತಾಂತರಿಸಲಾಗುವುದು. ಈ ಯೋಜನೆಯಡಿ ಇಚ್ಛೆಪಡುವ ಮನೆಯನ್ನು ಆನ್‌ಲೈನ್‌ನಲ್ಲಿ ಫಲಾನುಭವಿಗಳೇ ಆಯ್ಕೆ ಮಾಡಿಕೊಳ್ಳುವ ಪಾರದರ್ಶಕ ವ್ಯವಸ್ಥೆ ರೂಪಿಸಲಾಗಿದೆ ಎಂದೂ ಸಿಎಂ ಹೇಳಿದ್ದಾರೆ.