Advertisement

ಇಂದು ರಾಜ್ಯ ಬಜೆಟ್‌: ಸಿಎಂ ಪಾಲಿಗೆ ಹಗ್ಗದ ಮೇಲಿನ ನಡಿಗೆ

02:04 AM Mar 08, 2021 | Team Udayavani |

ಹಣಕಾಸು ಖಾತೆಯನ್ನೂ ನಿರ್ವಹಿಸುತ್ತಿರುವ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ಸೋಮವಾರ 2021-22ನೇ ಸಾಲಿನ ರಾಜ್ಯ ಮುಂಗಡಪತ್ರವನ್ನು ಮಂಡಿಸಲಿದ್ದಾರೆ. ಕಳೆದ ಬಾರಿಯ ಬಜೆಟ್‌ನಲ್ಲಿ ಹಲವಾರು ಅಭಿವೃದ್ಧಿ ಯೋಜನೆ ಮತ್ತು ಜನಪ್ರಿಯ ಕಾರ್ಯಕ್ರಮಗಳನ್ನು ಘೋಷಿಸಲಾಗಿತ್ತಾದರೂ ಕೊರೊನಾ ಕಾರಣದಿಂದಾಗಿ ಅವುಗಳ ಸಮರ್ಪಕ ಅನುಷ್ಠಾನ ಸಾಧ್ಯವಾಗಿರಲಿಲ್ಲ. ರಾಜ್ಯದ ಆರ್ಥಿಕತೆಯ ಮೇಲೂ ಕೋವಿಡ್‌ ಗಂಭೀರ ಪರಿಣಾಮ ಬೀರಿದ್ದು ಬೊಕ್ಕಸ ಬರಿದಾಗಿದೆ. ಸದ್ಯ ಪರಿಸ್ಥಿತಿ ಸಹಜ ಸ್ಥಿತಿಯತ್ತ ಮರಳುತ್ತಿದೆಯಾದರೂ ಸಂಪನ್ಮೂಲ ಸಂಗ್ರಹ ಬಲುದೊಡ್ಡ ಸವಾಲಾಗಿರುವುದರಿಂದ ಈ ಬಾರಿಯ ಬಜೆಟ್‌ ಮುಖ್ಯಮಂತ್ರಿ ಪಾಲಿಗೆ ಅಗ್ನಿಪರೀಕ್ಷೆಯಾಗಿದೆ.

Advertisement

ಕಳೆದ ಬಾರಿಯೇ ಈ ಹಿಂದಿನ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಸರಕಾರದ ಕೆಲವೊಂದು ಯೋಜನೆಗಳನ್ನು ಬದಿಗೆ ಸರಿಸಿದ್ದ ಬಿಜೆಪಿ ಸರಕಾರ ಮತ್ತೆ ಕೆಲವೊಂದನ್ನು ನಿರ್ಲಕ್ಷಿಸುವ ಮೂಲಕ ಅವುಗಳನ್ನೂ ರದ್ದುಗೊಳಿಸುವ ಮುನ್ಸೂಚನೆ ನೀಡಿತ್ತು. ರಾಜ್ಯದ ಸದ್ಯದ ಆರ್ಥಿಕ ಪರಿಸ್ಥಿತಿ ಮತ್ತು ಈ ಯೋಜನೆಗಳ ಫ‌ಲಶ್ರುತಿಯನ್ನು ಆಧರಿಸಿ ಈ ಬಾರಿ ಯಡಿಯೂರಪ್ಪ ಅವರು ಮೈತ್ರಿ ಸರಕಾರದ ಇನ್ನಷ್ಟು ಯೋಜನೆಗಳಿಗೆ ಕತ್ತರಿ ಹಾಕಲಿರುವುದು ನಿಶ್ಚಿತ.

ಅಗತ್ಯ ವಸ್ತುಗಳ ಬೆಲೆಯಲ್ಲಿ ಭಾರೀ ಹೆಚ್ಚಳವಾಗಿರುವುದರಿಂದ ಬಡ ಮತ್ತು ಮಧ್ಯಮ ವರ್ಗದ ಜನರ ದೈನಂದಿನ ಬದುಕು ದುಸ್ತರವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಹೊಸದಾಗಿ ತೆರಿಗೆ ವಿಧಿಸುವ ಅಥವಾ ಹೆಚ್ಚಿಸುವ ಸಾಧ್ಯತೆ ಕಡಿಮೆ. ಇದೇ ವೇಳೆ ಆದಾಯ ಕ್ರೋಡೀಕರಣಕ್ಕಾಗಿ ಯಡಿ ಯೂರಪ್ಪ ಅವರು ಒಂದಿಷ್ಟು ಕಠಿನ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಾಧ್ಯತೆ ಇದೆ. ಆದಾಯ ಸಂಗ್ರಹಣೆಯಲ್ಲಿನ ಸೋರಿಕೆ ಹಾಗೂ ಆಡಳಿತ ವೆಚ್ಚಗಳಿಗೆ ಕಡಿವಾಣ ಹಾಕಿ, ಅಭಿವೃದ್ಧಿ ಯೋಜನೆಗಳು ಮತ್ತು ಜನಪರ ಕಾರ್ಯಕ್ರಮಗಳಿಗೆ ಈ ಹಣವನ್ನು ಬಳಸಿಕೊಳ್ಳುವ ಲೆಕ್ಕಾಚಾರ ಅವರದಾ ಗಿದೆ. ಅಷ್ಟೇ ಅಲ್ಲದೆ ಈ ಬಾರಿ ಸಾಲದ ಪ್ರಮಾಣದಲ್ಲಿಯೂ ಹೆಚ್ಚಳವನ್ನು ನಿರೀಕ್ಷಿಸಲಾಗಿದ್ದು ಆದಾಯ ಮತ್ತು ವೆಚ್ಚವನ್ನು ಸರಿದೂಗಿಸುವುದು ಮುಖ್ಯಮಂತ್ರಿ ಪಾಲಿಗೆ “ಹಗ್ಗದ ಮೇಲಿನ ನಡಿಗೆ’ಯೇ ಸರಿ.

ಕಳೆದ ಬಾರಿಯ ಬಜೆಟ್‌ ಗಾತ್ರ 2.37ಲಕ್ಷ ಕೋಟಿ ರೂ.ಗಳಾಗಿದ್ದರೆ ಈ ಬಾರಿ ಹಣಕಾಸಿನ ಮುಗ್ಗಟ್ಟಿನ ಹೊರತಾಗಿಯೂ ಬಜೆಟ್‌ ಗಾತ್ರ ಒಂದಿಷ್ಟು ಹೆಚ್ಚಾಗುವ ನಿರೀಕ್ಷೆ ಇದೆ. ಕೆಲವೊಂದು ಹೊಸ ಯೋಜನೆಗಳನ್ನು ಘೋಷಿಸುವ ಸಾಧ್ಯತೆ ಇದೆ.

ಯಡಿಯೂರಪ್ಪ ಅವರು ಈ ಹಿಂದೆ ಮಂಡಿಸಿದ್ದ ಏಳು ಬಜೆಟ್‌ಗಳಲ್ಲಿಯೂ ರೈತರು ಮತ್ತು ಜನಸಾಮಾನ್ಯರ ಪರವಾದ ಯೋಜನೆಗಳನ್ನು ಘೋಷಿಸುತ್ತಾ ಬಂದಿರುವುದರಿಂದ ಈ ಬಾರಿಯ ಬಜೆಟ್‌ನಲ್ಲೂ ಸಂಪ್ರದಾಯವನ್ನು ಮುಂದುವರಿಸಿ ಕೆಲವೊಂದು ಹೊಸ ಯೋಜನೆಗಳನ್ನಾದರೂ ರಾಜ್ಯದ ಜನರಿಗೆ ಕೊಡುಗೆಯಾಗಿ ನೀಡಲಿದ್ದಾರೆ ಎಂಬುದು ರಾಜಕೀಯ ತಜ್ಞರ ಅಭಿಪ್ರಾಯ. ಕಳೆದ ಕೆಲವು ತಿಂಗಳುಗಳಿಂದೀಚೆಗೆ ರಾಜ್ಯದ ಕೆಲವೊಂದು ಸಮುದಾಯಗಳ ಸಂಘಟನೆಗಳು ಆಯಾಯ ಸಮುದಾಯಗಳ ಸ್ವಾಮೀಜಿಗಳ ನೇತೃತ್ವದಲ್ಲಿ ಮೀಸಲಾತಿ, ಪ್ರಾಧಿಕಾರಗಳ ರಚನೆ..ಮತ್ತಿತರ ಬೇಡಿಕೆಗಳನ್ನು ಮುಂದಿಟ್ಟು ಪ್ರತಿಭಟನೆ ನಡೆಸುತ್ತಲೇ ಬಂದಿವೆ. ಸದ್ಯದ ಪರಿಸ್ಥಿತಿಯಲ್ಲಿ ಮೀಸಲಾತಿ ವಿಚಾರವಾಗಿ ಕೇಂದ್ರಕ್ಕೆ ಶಿಫಾರಸು ಮಾಡುವಂತಹ ಅಥವಾ ಇದಕ್ಕಾಗಿ ತಜ್ಞರ ಸಮಿತಿ ರಚನೆಯಂಥ ಹುಚ್ಚು ಸಾಹಸಕ್ಕೆ ಸರಕಾರ ಮುಂದಾಗುವ ಸಾಧ್ಯತೆ ಕಡಿಮೆ. ಆದರೆ ಈ ಸಮುದಾಯಗಳ ಕೆಲವೊಂದು ಬೇಡಿಕೆಗಳನ್ನು ಮುಖ್ಯಮಂತ್ರಿ ಅವರು ಈಡೇರಿಸುವ ನಿರೀಕ್ಷೆಯಂತೂ ಇದ್ದೇ ಇದೆ. ಹೊಸದಾಗಿ ರಚನೆಯಾಗಿರುವ ಜಿಲ್ಲೆ, ತಾಲೂಕುಗಳಿಗೆ ಬಜೆಟ್‌ನಲ್ಲಿ ಒಂದಿಷ್ಟು ಹೆಚ್ಚಿನ ಅನುದಾನವನ್ನು ಮೀಸಲಿರಿಸುವ ಸಾಧ್ಯತೆಯೂ ಇದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next