Advertisement
ದೊಡ್ಡ ದೊಡ್ಡ ಕಾರ್ಯಕ್ರಮಗಳು, ಮದುವೆ ಸಮಾರಂಭಗಳನ್ನು ಏರ್ಪಡಿಸಿ ತಮ್ಮ ಪ್ರತಿಷ್ಠೆ ಪ್ರದರ್ಶಿಸುತ್ತಿದ್ದ ಗಣ್ಯರು, ನಾಯಕರು ವೈರಸ್‌ಗೆ ಹೆದರಿ ಕಾರ್ಯಕ್ರಮಗಳನ್ನು ಸರಳ ರೀತಿಯಲ್ಲಿ ಆಚರಿಸುತ್ತಿದ್ದಾರೆ. ಬಹುತೇಕ ಜಾತ್ರೆ, ರಥೋತ್ಸವ, ಸಭೆ, ಸಮಾರಂಭಗಳು ರದ್ದಾಗಿವೆ. ಹೀಗಾಗಿ, ಎಲ್ಲೆಡೆ ಅಘೋಷಿತ ಬಂದ್ ವಾತಾವರಣ ಕಂಡು ಬರುತ್ತಿದ್ದು, ಕರುನಾಡಿನ ಬಹುತೇಕ ಜನನಿಬಿಡ ಪ್ರದೇಶಗಳು ಜನರಿಲ್ಲದೆ ಭಣಗುಡುತ್ತಿವೆ.
Related Articles
Advertisement
ಹೀಗಾಗಿ, ಟಾಂಗಾ ಗಾಡಿ ಮಾಲೀಕರ ಬದುಕಿನ ಜಟಕಾ ಬಂಡಿ ಸಾಗದಾಗಿದೆ. ನಿತ್ಯ ಕುದುರೆಯೊಂದಕ್ಕೆ 300 ರೂ. ವ್ಯಯಿಸಬೇಕು. ಕುದುರೆಗೆ ಖರ್ಚು ಮಾಡಲಿಕ್ಕೂ ಹಣ ದುಡಿಯೋಕಾಗುತ್ತಿಲ್ಲ. ಯಾವೊಬ್ಬ ಪ್ರವಾಸಿಗನೂ ಟಾಂಗಾ ಗಾಡಿ ಏರುವ ಯೋಚನೆಯನ್ನೇ ಮಾಡುತ್ತಿಲ್ಲ ಎಂಬುದು ಟಾಂಗಾವಾಲರ ಅಳಲು.
ಲೈಟಿಂಗ್ಸ್, ಬೋಟಿಂಗ್ ಸ್ಥಗಿತ: ರಂಗನತಿಟ್ಟು ಪಕ್ಷಿಧಾಮಕ್ಕೆ ಪ್ರವೇಶ ನಿಷೇಧಿಸಿರುವುದರಿಂದ ಬೋಟಿಂಗ್ ಸ್ಥಗಿತಗೊಳಿಸಲಾಗಿದೆ. ಕೆಆರ್‌ಎಸ್ ಬೃಂದಾವನದಲ್ಲಿ ರಾತ್ರಿ ವೇಳೆ ಕಾರಂಜಿಗೆ ಅಳವಡಿಸಿದ್ದ ಬಣ್ಣ, ಬಣ್ಣದ ಲೈಟಿಂಗ್ಸ್ ಹಾಗೂ ಎಂಡಿಎಫ್ ಸೌಂಡ್ಸ್ ಅನ್ನು ಸ್ಥಗಿತಗೊಳಿಸಲಾಗಿದೆ.
ರಂಗನತಿಟ್ಟು ಪಕ್ಷಿಧಾಮಕ್ಕೆ ನಿತ್ಯ 2-3 ಸಾವಿರ ಪ್ರವಾಸಿಗರು ಆಗಮಿಸಿ ದರೆ, ಕೆಆರ್‌ಎಸ್ ಬೃಂದಾವನ ವೀಕ್ಷಣೆಗೆ ಕನಿಷ್ಠ 5 ಸಾವಿರ ಮಂದಿ ಪ್ರವಾಸಿಗರು ಆಗಮಿಸುತ್ತಿದ್ದರು. ಎರಡು ಪ್ರವಾಸಿ ತಾಣಗಳ ಪ್ರವೇಶ ಶುಲ್ಕದಿಂದ ರಾಜ್ಯ ಸರ್ಕಾರದ ಬೊಕ್ಕಸಕ್ಕೆ ನಿತ್ಯ ಹರಿದು ಬರುತ್ತಿದ್ದ ಲಕ್ಷಾಂತರ ರೂ. ನಷ್ಟವಾಗಿದೆ.
ಇದೇ ವೇಳೆ, ಶ್ರೀರಂಗಪಟ್ಟಣದ ಶ್ರೀರಂಗನಾಥಸ್ವಾಮಿ, ನಿಮಿಷಾಂಬ ದೇವಾಲಯ, ಬಲಮುರಿ, ಎಡಮುರಿ, ಸ್ನಾನಘಟ್ಟ ಸೇರಿದಂತೆ ಕಾವೇರಿ ನದಿ ತೀರದ ಪ್ರದೇಶಗಳಿಗೂ ಪ್ರವಾಸಿಗರು ಸುಳಿಯುತ್ತಿಲ್ಲ. ನಂಜನಗೂಡು ಶ್ರೀಕಂಠೇಶ್ವರಸ್ವಾಮಿ, ಮಲೆ ಮಹದೇಶ್ವರ ಸ್ವಾಮಿ, ಕೊಲ್ಲೂರು ಮೂಕಾಂಬಿಕೆ, ಶೃಂಗೇರಿ, ಗೋಕರ್ಣ ಸೇರಿದಂತೆ ರಾಜ್ಯದ ಬಹುತೇಕ ದೇವಾಲಯಗಳಲ್ಲಿ ಭಕ್ತರ ಆಗಮನದಲ್ಲಿ ಕಡಿತವಾಗಿದೆ.
ಸಫಾರಿ ಬಂದ್: ಮಾ.22ರವರೆಗೆ ಬಂಡೀಪುರದಲ್ಲಿ ಸಫಾರಿ ನಿಷೇಧಿಸಲಾಗಿದ್ದು, ಸುತ್ತಮುತ್ತಲಿನ ರೆಸಾರ್ಟುಗಳನ್ನು ಬಂದ್ ಮಾಡಲಾಗಿದೆ. ಬಂಡೀಪುರ ಸುತ್ತಲಿನ ಕಂಟ್ರಿ ಕ್ಲಬ್, ಸರಾಯ್, ವಿಂಡ್ ಫ್ಲವರ್, ಜಂಗಲ್ ಲಾಡ್ಜ್ ಸೇರಿದಂತೆ ಪ್ರತಿಷ್ಠಿತ ರೆಸಾರ್ಟ್‌ಗಳು ಗ್ರಾಹಕ ರಿಲ್ಲದೆ ಭಣಗುಡುತ್ತಿವೆ.
ನಾಗರಹೊಳೆ ರಾಷ್ಟ್ರೀಯ ಉದ್ಯಾನವನಕ್ಕೆ ಮಾ.22 ರವರೆಗೆ ನಿರ್ಬಂಧ ವಿಧಿಸಲಾಗಿದೆ. ಹೀಗಾಗಿ, ಭಾನುವಾರ ವೀರನಹೊಸಹಳ್ಳಿಯಲ್ಲಿ ಕೇವಲ 15 ಮಂದಿ ಮಾತ್ರ ಸಫಾರಿಗೆ ತೆರಳಿದ್ದರು. ನಾಗರಹೊಳೆ ಉದ್ಯಾನದಂಚಿನಲ್ಲಿನ ಜೆಎಲ್‌ಆರ್, ಕಿಂಗ್ಸ್ ಕೋರ್ಟ್ ಹಾಗೂ ಜಂಗಲ್ ಇನ್ ರೆಸಾರ್ಟ್‌ಗಳಲ್ಲಿಯೂ ಪ್ರವಾಸಿಗರ ಸಂಖ್ಯೆ ಕಡಿಮೆಯಾಗಿದೆ.
ರಾಜ್ಯದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸೇರಿದಂತೆ ಎಲ್ಲಾ ನಿಲ್ದಾಣಗಳಲ್ಲಿಯೂ ಗೃಹ ಇಲಾಖೆಯಿಂದ ಕೊರೊನಾ ವೈರಸ್ ನಿಯಂತ್ರಣಕ್ಕೆ ಸೂಕ್ತ ಕ್ರಮ ಕೈಗೊಳ್ಳಲಾಗಿದೆ. ಯಾರೂ ಆತಂಕ ಪಡುವ ಅಗತ್ಯವಿಲ್ಲ.ಆರೋಗ್ಯ ದೃಷ್ಟಿಯಿಂದ ಸಾರ್ವಜನಿಕರು ಸ್ವತ್ಛತೆ ಹಾಗೂ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು. -ಬಸವರಾಜ ಬೊಮ್ಮಾಯಿ, ಗೃಹ ಸಚಿವ