Advertisement

‘ದಿನ ನೂರು ಸಾಧನೆ ನೂರಾರು..’: ಪುಸ್ತಕ ಬಿಡುಗಡೆ ಮಾಡಿದ ಮುಖ್ಯಮಂತ್ರಿ ಯಡಿಯೂರಪ್ಪ

09:50 AM Nov 06, 2019 | Hari Prasad |

ಬೆಂಗಳೂರು: ಭಾರತೀಯ ಜನತಾ ಪಕ್ಷ ರಾಜ್ಯದಲ್ಲಿ ಅಧಿಕಾರಕ್ಕೆ ಬಂದು ನೂರು ದಿನಗಳನ್ನು ಪೂರೈಸಿದ ಹಿನ್ನಲೆಯಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ತಮ್ಮ ಸರಕಾರದ ಅವಧಿಯ ಸಾಧನೆಗಳ ಮಾಹಿತಿಯನ್ನೊಳಗೊಂಡ ಪುಸ್ತಕವೊಂದನ್ನು ಇಂದು ಬಿಡುಗಡೆಗೊಳಿಸಿದರು. ಈ ನೂರು ದಿನಗಳಲ್ಲಿ ತಮ್ಮ ಸರಕಾರವು ಬೇರೆ ಬೇರೆ ಇಲಾಖೆಗಳಲ್ಲಿ ಮಾಡಿರುವ ಸಾಧನೆಯ ಲಿಖಿತ ಕೈಪಿಡಿ ಇದಾಗಿದೆ.

Advertisement

ಪ್ರಧಾನಿ ನರೇಂದ್ರ ಮೋದಿಯವರು ಆರ್.ಸಿ ಇ.ಪಿ ಒಪ್ಪಂದಕ್ಕೆ ಸಹಿ ಹಾಕದೇ ಹೊರನಡೆದಿರುವುದು ದೇಶದ ರೈತರ ಬಗ್ಗೆ ಪ್ರಧಾನಿಗೆ ಇರುವ ಕಾಳಜಿ ಸಾಬೀತಾಗಿದೆ. ಯಾವುದೇ ಕಾರಣಕ್ಕೂ ರೈತರ ಹಿತ ಬಲಿಕೊಡುವುದಿಲ್ಲ ಎಂಬ ನಂಬಿಕೆ ಇತ್ತು. ಅದರಂತೆ ನಡೆದುಕೊಂಡಿದ್ದಾರೆ. ಆದರೆ ಕಾಂಗ್ರೆಸ್ ನವರು ಆರ್.ಸಿ ಇ ಪಿ ವಿಚಾರದಲ್ಲಿ ಸುಖಾಸುಮ್ಮನೆ ರಾಜಕೀಯ ಮಾಡುತ್ತಿದ್ದಾರೆ ಎಂದು ಯಡಿಯೂರಪ್ಪನವರು ಇದೇ ಸಂದರ್ಭದಲ್ಲಿ ಹೇಳಿದರು.

ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು ನವೆಂಬರ್ 02ರಂದು ಶತದಿನ ಪೂರೈಸಿದೆ. ಈ ಸಂದರ್ಭದಲ್ಲಿ ನಮ್ಮ ಸರಕಾರದ ಸಾಧನೆಗಳ ಕಿರು ಹೊತ್ತಿಗೆಯನ್ನು ಬಿಡುಗಡೆ ಮಾಡಲು ಹೆಮ್ಮೆಯಾಗುತ್ತಿದೆ. ನಮ್ಮದು ಭ್ರಷ್ಟಾಚಾರ.ಮುಕ್ತ ಸರ್ಕಾರವಾಗಿದ್ದು ಸರಕಾರದ ಯೋಜನೆಗಳನ್ನು ಜನರಿಗೆ ಮುಟ್ಟಿಸುವಲ್ಲಿ ಎಲ್ಲಾ ಇಲಾಖೆಗಳ ಅಧಿಕಾರಿಗಳಿಗೆ ಚುರುಕು ಮುಟ್ಟಿಸಲಾಗಿದೆ ಎಂದು ಬಿ.ಎಸ್.ವೈ. ಅವರು ಇದೇ ಸಂದರ್ಭದಲ್ಲಿ ತಿಳಿಸಿದರು.

ನೂರು ದಿನಗಳಲ್ಲಿ ಪಕ್ಷದ ಸಾಧನೆಯ ಮಾಹಿತಿ:
– ಪ್ರಧಾನಿ ಕಿಸಾನ್ ಸಮ್ಮಾನ್ ಯೋಜನೆಯಲ್ಲಿ 25 ಲಕ್ಷ.ರೈತರ ಖಾತೆಗೆ ಹಣವನ್ನು ಜಮಾ ಮಾಡಲಾಗಿದೆ.

– ಮೀನುಗಾರರು ಮತ್ತು ನೇಕಾರರ ಸಾಲಗಳನ್ನು ಮನ್ನಾ ಮಾಡಲಾಗಿದೆ.

Advertisement

– ಅತಿವೃಷ್ಟಿಯಿಂದ ಜನರು ಸಂಕಷ್ಟಕ್ಕೆ ಸಿಲುಕಿದ್ದರು. ಸರಕಾರ ತಕ್ಷಣವೇ ಅವರ ಸಂಕಷ್ಟಕ್ಕೆ ಸ್ಪಂದಿಸುವ ಕೆಲಸವನ್ನು ಮಾಡಿತು. ನೆರೆ ಸಂತ್ರಸ್ತರಿಗೆ ಸರಕಾರದ ಸಹಾಯವನ್ನು ಸಕಾಲಕ್ಕೆ ತಲುಪಿಸುವಲ್ಲಿ ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿಗಳ ಶ್ರಮಕ್ಕೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಸಿ.ಎಂ. ಅವರು ಇದೇ ಸಂದರ್ಭದಲ್ಲಿ ತಿಳಿಸಿದರು.

– ನೆರೆ ಪೀಡಿತ ಜನರಿಗೆ ಎನ್.ಡಿ ಆರ್.ಎಫ್. ನಿಯಮಕ್ಕಿಂತ ಹೆಚ್ಚಿನ ಪರಿಹಾರವನ್ನು ನೀಡಲಾಗಿದೆ. ರಾಜ್ಯದ ಬೊಕ್ಕಸದಲ್ಲಿ ಆರ್ಥಿಕ ಸ್ಥಿತಿ ಚೆನ್ನಾಗಿದೆ. ಸಾರಿಗೆ ಹೊರತುಪಡಿಸಿ ಉಳಿದೆಲ್ಲಾ ಕ್ಷೇತ್ರಗಳಲ್ಲಿ ಹೆಚ್ಚಿನ ತೆರಿಗೆ ಸಂಗ್ರಹವಾಗಿದೆ ಎಂಬ ಮಾಹಿತಿಯನ್ನು ಮುಖ್ಯಮಂತ್ರಿಯವರು ನೀಡಿದರು.

– ಕಳಸಾ ಬಂಡೂರಿ ಯೋಜನೆಗೆ ಪರಿಸರ ಇಲಾಖೆ ಒಪ್ಪಿಗೆ ಕೊಡಿಸುವಲ್ಲಿ ಯಶಸ್ವಿಯಾಗಿದ್ದೇವೆ. ಕೃಷ್ಣಾ ನೀರು ಬಳಕೆ ಮಾಡಿಕೊಳ್ಳಲು ಕ್ರಮಕೈಗೊಳ್ಳಲಾಗಿದೆ.

– ಮಧ್ಯಾಹ್ನದ ಬಿಸಿಯೂಟದಲ್ಲಿ ಸಂತುಲಿತ ಆಹಾರ ನೀಡಲು ತೀರ್ಮಾನಿಸಲಾಗಿದೆ.

– ಆರೋಗ್ಯ ಕರ್ನಾಟಕ ಯೋಜನೆಯಡಿಯಲ್ಲಿ ಒಂದು ಲಕ್ಷ.ಜನರಿಗೆ ಆರೋಗ್ಯ ಸೇವೆ ಒದಗಿಸಲಾಗಿದೆ.

– ಚಿಕ್ಕಮಗಳೂರು, ಹಾವೇರಿ, ಚಿಕ್ಕಬಳ್ಳಾಪುರದಲ್ಲಿ ಹೊಸ ಮೆಡಿಕಲ್ ಕಾಲೇಜು ಪ್ರಾರಂಭಿಸಲು ಕೇಂದ್ರದಿಂದ ಒಪ್ಪಿಗೆ ಪಡೆದುಕೊಂಡಿದ್ದೇವೆ.

– ಶಿಥಿಲಾವಸ್ಥೆಯಲ್ಲಿರುವ ಅಂಗನವಾಡಿ ಕಟ್ಟಡಗಳ ದುರಸ್ಥಿಗೆ ಹಣ ನೀಡಿದ್ದೇವೆ.

– ಎಲ್ಲರಿಗೂ ಸೂರು ಒಂದೂವರೆ ಲಕ್ಷ ಮನೆಗಳನ್ನು ನಿರ್ಮಿಸಿಕೊಡಲು ತೀರ್ಮಾನಿಸಲಾಗಿದೆ. ನಮ್ಮ ಸರಕಾರ ಅಧಿಕಾರಕ್ಕೆ ಬಂದ ಮೇಲೆ ಇದುವರೆಗೆ 25 ಸಾವಿರ ಮನೆಗಳನ್ನು ನಿರ್ಮಿಸಿ ಕೊಡಲಾಗಿದೆ.

– 51 ಸಾವಿರ ಅಕ್ರಮ ಬಿಪಿಎಲ್ ಪಡಿತರ ಚೀಟಿಗಳನ್ನು ಪತ್ತೆ ಹಚ್ಚಲಾಗಿದೆ.

– ಪ್ರವಾಹ ಪೀಡಿತ ಪ್ರದೇಶಗಳ ಜನರು ವಲಸೆ ಹೋಗದಂತೆ ತಡೆಯಲು ನರೇಗಾ ಯೋಜನೆಯಡಿಯಲ್ಲಿ 50 ಉದ್ಯೋಗದ ದಿನಗಳ ಹೆಚ್ಚಳಕ್ಕೆ ಕೇಂದ್ರಕ್ಕೆ ಮನವಿ ಸಲ್ಲಿಸಲಾಗಿದೆ.

– ಮೆಟ್ರೋ ಎರಡನೇ ಹಂತದ ಕಾಮಗಾರಿಯನ್ನು ಚುರುಕುಗೊಳಿಸಲಾಗಿದೆ.

– ನಮ್ಮದು ಇದೀಗ ವಿದ್ಯುತ್ ಸ್ವಾವಲಬಿ ರಾಜ್ಯಾವಾಗಿದೆ. ಇನ್ನು ನವೀಕರಣ ಇಂಧನ ಯೋಜನೆ ಅನುಷ್ಠಾನದಲ್ಲಿ ಕರ್ನಾಟಕ ದೇಶದಲ್ಲೇ ಪ್ರಥಮ ಸ್ಥಾನದಲ್ಲಿದೆ.

– ನೂತನಾಗಿ ನಿರ್ಮಾಣಗೊಂಡಿರುವ ಕಲಬುರ್ಗಿ ವಿಮಾನ ನಿಲ್ದಾಣವನ್ನು ಪ್ರಧಾನಿ ಮೋದಿ ಅವರು ಶೀಘ್ರ ಲೋಕಾರ್ಪಣೆಗೊಳಿಸಲಿದ್ದಾರೆ.

– ಸಮಾಜಿಕ ಭದ್ರತಾ ಪಿಂಚಣಿ ಯೊಜನೆ ಫಲಾನುಭವಿಗಳಿಗೆ ಪಿಂಚಣಿ ಮೊತ್ತವನ್ನು ಸಕಾಲಕ್ಕೆ ತಲುಪಿಸಲು ಕ್ರಮ ಕೈಗೊಳ್ಳಲಾಗುತ್ತಿದೆ.

– ಬೆಂಗಳೂರು ನಗರದ ಸಮಗ್ರ ಅಭಿವೃದ್ಧಿಗೆ ತಜ್ಞರ ಸಭೆ ಕರೆಯಲಾಗಿದ್ದು ಮುಂಬರುವ ನೂರು ದಿನಗಳಲ್ಲಿ ಮಹಾನಗರದ ಚಿತ್ರಣವನ್ನು ಬದಲಿಸಲಿದ್ದೇವೆ.

– ನೆರೆ ಸಂತ್ರಸ್ತರಿಗೆ ಮನೆ ಕಟ್ಟಿಕೊಳ್ಳಲು ಆರಂಭಿಕ ಕಂತಿನಲ್ಲಿ ಒಂದು ಲಕ್ಷ ರೂಪಾಯಿಗಳನ್ನು ಬಿಡುಗಡೆ ಮಾಡಲಾಗಿದೆ. ಏಳು ಲಕ್ಷ ಪ್ರವಾಹ ಸಂತ್ರಸ್ತರಿಗೆ ತಲಾ ಹತ್ತು ಸಾವಿರ ರೂಪಾಯಿಗಳನ್ನು ನೀಡಲಾಗಿದೆ.

–  ಕೃಷಿ ಕಾರ್ಮಿಕರು, ಎಸ್.ಸಿ., ಎಸ್.ಟಿ. ವರ್ಗಗಳಿಗೆ ಹಲವಾರು ಯೋಜನೆಗಳನ್ನು ಈ ಸರಕಾರ ಜಾರಿಗೊಳಿಸಿದೆ.

– ನಿರೀಕ್ಷಿತ ಮಟ್ಟದಲ್ಲಿ ತೆರಿಗೆ ಸಂಗ್ರಹವಾಗುತ್ತಿದ್ದು, ಮುಂಬರುವ ನೂರು ದಿನಗಳಲ್ಲಿ ರಾಜ್ಯದ ಚಿತ್ರಣವನ್ನು ಬದಲಾಯಿಸುವ ನಿಟ್ಟಿನಲ್ಲಿ ಈ ಸರಕಾರ ಕಾರ್ಯೋನ್ಮುಖವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next