Advertisement

ಮುಂದಿನ ಚುನಾವಣೆ ಯುವಕರಿಗೆ ಆದ್ಯತೆ; ಬಿಜೆಪಿಯ ಹಿರೀಕರಿಗೆ ಆತಂಕ

08:38 PM Jul 24, 2022 | Team Udayavani |

ಬೆಂಗಳೂರು: ಮಾಜಿ ಸಿಎಂ ಬಿ.ಎಸ್‌.ಯಡಿಯೂರಪ್ಪ ಅವರ “ಚುನಾವಣಾ ರಾಜಕೀಯ ನಿವೃತ್ತಿ’ ಹೇಳಿಕೆಯು ಬಿಜೆಪಿಯ ಹಿರಿತಲೆಗಳಲ್ಲಿ ತಳಮಳ ಉಂಟುಮಾಡಿದೆ. ಮುಂಬರುವ ಚುನಾವಣೆಯಲ್ಲಿ ಪಕ್ಷದ ಶೇ.40ರಷ್ಟು ಸೀಟುಗಳನ್ನು ಹೊಸ ಮುಖಗಳಿಗೆ ನೀಡುವ ಬಗ್ಗೆ ಬಿಜೆಪಿಯಲ್ಲಿ ಚರ್ಚೆ ಆರಂಭವಾಗಿರುವುದೇ ಹಿರಿಯ ನಾಯಕರ ಆತಂಕಕ್ಕೆ ಕಾರಣ.

Advertisement

ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಉತ್ತರ ಪ್ರದೇಶ ಮಾದರಿಯಲ್ಲಿ ಹೊಸ ಮುಖಗಳಿಗೆ ಶೇ.40ರಷ್ಟು ಸ್ಥಾನಗಳನ್ನು ನೀಡಬೇಕೆಂಬ ಲೆಕ್ಕಾಚಾರ ನಡೆಯುತ್ತಿದೆ ಎಂಬ ಮಾತುಗಳು ಕೇಳಿ ಬರುತ್ತಿದೆ. ಹೀಗಾಗಿ ಅನೇಕ ಹಿರಿಯ ನಾಯಕರಿಗೆ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಟಿಕೆಟ್‌ ಸಿಗುತ್ತದೋ ಇಲ್ಲವೋ ಎನ್ನುವ ಭೀತಿ ಆರಂಭವಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಹೈಕಮಾಂಡ್‌ ಲೆಕ್ಕಾಚಾರ:

ಉತ್ತರ ಭಾರತದಲ್ಲಿ ಎಲ್ಲ ರಾಜ್ಯಗಳಲ್ಲಿಯೂ ತನ್ನದೇ ಆದ ಹೊಸ ಪ್ರಯೋಗವನ್ನು ಮಾಡುತ್ತಾ ಅಲ್ಲಿನ ಚುನಾವಣೆಗಳಲ್ಲಿ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ಬರುವಲ್ಲಿ ಯಶಸ್ವಿಯಾಗಿರುವ ಬಿಜೆಪಿ ರಾಷ್ಟ್ರೀಯ ನಾಯಕರು, ಮುಂದಿನ ವರ್ಷ ನಡೆಯುವ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿಯೂ ಅದೇ ಪ್ರಯೋಗ ಮಾಡುವತ್ತ ಕಾರ್ಯಪ್ರವೃತ್ತರಾಗಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.

60:40 ಲೆಕ್ಕಾಚಾರ:

Advertisement

ರಾಜ್ಯದಲ್ಲಿ ಬಿಜೆಪಿಯನ್ನು ಮತ್ತೆ ಅಧಿಕಾರಕ್ಕೆ ತರಲು ಎಲ್ಲ ರೀತಿಯ ಕಾರ್ಯತಂತ್ರಗಳನ್ನು ರೂಪಿಸುತ್ತಿರುವ ಬಿಜೆಪಿ ನಾಯಕರು, ಹಾಲಿ ಶಾಸಕರ ಪೈಕಿ ಕಳಪೆ ಕಾರ್ಯ ಸಾಧನೆ, ಪಕ್ಷದ ಸಂಘಟನೆ ಮಾಡದಿರುವುದು, ಕಾರ್ಯಕರ್ತರು ಮತ್ತು ಸಾರ್ವಜನಿಕರೊಂದಿಗೆ ಉತ್ತಮ ಸಂಪರ್ಕ ಇಟ್ಟುಕೊಳ್ಳದ ಶಾಸಕರನ್ನು ಬದಲಾಯಿಸಿ 60:40 ಲೆಕ್ಕಾಚಾರದಲ್ಲಿ ಹೊಸಬರಿಗೆ ಅವಕಾಶ ಕಲ್ಪಿಸಲು ನಿರ್ಧರಿಸಿದ್ದಾರೆ ಎಂದು ಹೇಳಲಾಗಿದೆ.

ಹಿರಿಯರಿಗೆ ಆತಂಕ:

ಬಿಜೆಪಿಯಲ್ಲಿ 75 ವರ್ಷ ಮೀರಿದವರಿಗೆ ಟಿಕೆಟ್‌ ನೀಡಲಾಗುವುದಿಲ್ಲ ಎನ್ನುವ ಅಲಿಖೀತ ನಿಯಮವಿದೆ. ಆದರೆ, ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಈಗಾಗಲೇ 75 ವರ್ಷ ಮೀರಿದವರಾಗಿರುವುದರಿಂದ ಅವರು ಸ್ವಯಂಪ್ರೇರಿತರಾಗಿ ತಾವು ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಹೇಳಿರುವುದು, ಪಕ್ಷದಲ್ಲಿರುವ ಹಿರಿಯ ಶಾಸಕರಿಗೆ ಆತಂಕ ಶುರುವಾಗಿದೆಯಂತೆ.

ಪಕ್ಷದ ಹೈಕಮಾಂಡ್‌ ಸಕ್ರಿಯರಾಗಿ ಕೆಲಸ ಮಾಡುವವರು ಹಾಗೂ ಯುವಕರಿಗೆ ಹೆಚ್ಚಿನ ಆದ್ಯತೆ ನೀಡಬೇಕು ಎನ್ನುವ ಲೆಕ್ಕಾಚಾರ ಹಾಕಿರುವುದರಿಂದ 70 ವರ್ಷ ವಯಸ್ಸು ಮೀರಿದವರು ಹಾಗೂ ಆರೇಳು ಬಾರಿ ಚುನಾವಣೆಯಲ್ಲಿ ಗೆದ್ದಿರುವ ಹಿರಿಯ ನಾಯಕರಿಗೆ  ಟಿಕೆಟ್‌ ಸಿಗುವ ಬಗ್ಗೆ ಅನುಮಾನಗಳಿವೆ ಎಂಬ ಮಾತುಗಳು ಪಕ್ಷದ ವಲಯದಲ್ಲಿ ಕೇಳಿ ಬರುತ್ತಿದೆ. ಈ ಹಿನ್ನೆಲೆಯಲ್ಲಿ ಅನೇಕ ಹಿರಿಯ ಶಾಸಕರು ತಮ್ಮ ಬದಲು ತಮ್ಮ ಮಕ್ಕಳಿಗಾದರೂ ಟಿಕೆಟ್‌ ಕೊಡಿಸಬೇಕೆಂಬ ಆಲೋಚನೆ ನಡೆಸಿದ್ದಾರೆ ಎಂದು ಹೇಳಲಾಗಿದೆ.

ಕ್ಷೇತ್ರ ಬದಲಾವಣೆಯ ಆತಂಕ:

ಐದಾರು ಬಾರಿ ಒಂದೇ ಕ್ಷೇತ್ರದಲ್ಲಿ ಸ್ಪರ್ಧಿಸಿ ನಿರಂತರ ಗೆಲುವು ಪಡೆದ ನಾಯಕರ ಕ್ಷೇತ್ರಗಳನ್ನು ಬದಲಾಯಿಸಿ ಬೇರೆ ಕಡೆ ಸ್ಪರ್ಧೆಗೆ ಅವಕಾಶ ನೀಡಬೇಕೆಂಬ ಒತ್ತಡ ಚಿಂತನಾ ಸಭೆಯಲ್ಲಿ ಕೇಳಿ ಬಂದಿತ್ತು. ಹೀಗಾಗಿಯೂ ಅನೇಕ ಹಿರಿಯ ಶಾಸಕರಿಗೆ ತಮ್ಮ ಕ್ಷೇತ್ರ ಬದಲಾವಣೆಯಾಗುವ ಆತಂಕವೂ ಶುರುವಾಗಿದೆ. ಕೆಲವು ಶಾಸಕರು ಕಾಂಗ್ರೆಸ್‌ ಹಾಗೂ ಜೆಡಿಎಸ್‌ ನಾಯಕರೊಂದಿಗೆ ಒಳ ಒಪ್ಪಂದ ಮಾಡಿಕೊಂಡು ತಮ್ಮ ಕ್ಷೇತ್ರವನ್ನು ಗಟ್ಟಿ ಮಾಡಿಕೊಂಡು, ಪಕ್ಷದ ಅಕ್ಕ ಪಕ್ಕದ ಕ್ಷೇತ್ರಗಳನ್ನು ಗೆಲ್ಲಿಸಿಕೊಂಡು ಬರದೇ ಬೇರೆ ಪಕ್ಷಗಳ ಶಾಸಕರು ಗೆಲ್ಲಲು ಪರೋಕ್ಷ ಬೆಂಬಲ ನೀಡುತ್ತಾರೆ ಎನ್ನುವ ಆರೋಪವೂ ಪಕ್ಷದ ವಲಯದಲ್ಲೇ ಕೇಳಿ ಬಂದಿದೆ. ಅದೇ ಕಾರಣಕ್ಕೆ ಕ್ಷೇತ್ರ ಬದಲಾವಣೆ ಮಾಡಿ, ತಮ್ಮ ಜೊತೆಗೆ ಬೇರೆ ಕ್ಷೇತ್ರಗಳ ಅಭ್ಯರ್ಥಿಗಳನ್ನೂ ಗೆಲ್ಲಿಸಿಕೊಂಡು ಬರುವ ಜವಾಬ್ದಾರಿಯನ್ನು ಹಿರಿಯ ನಾಯಕರಿಗೆ ವಹಿಸಲು ಬಿಜೆಪಿ ಹೈಕಮಾಂಡ್‌ ಚಿಂತನೆ ನಡೆಸಿದೆ. ಈ ಎಲ್ಲವೂ ಹಿರಿಯ ನಾಯಕರಿಗೆ ಮತ್ತಷ್ಟು ಆತಂಕ ಮೂಡಿಸಿದೆ ಎಂಬ ಮಾತುಗಳು ಬಿಜೆಪಿ ವಲಯದಲ್ಲಿ ಕೇಳಿ ಬರುತ್ತಿವೆ.

Advertisement

Udayavani is now on Telegram. Click here to join our channel and stay updated with the latest news.

Next