Advertisement

ರಾಜ್ಯಕ್ಕೆ ಕೈತಪ್ಪಿದ ದೇವಧರ್‌ ಟ್ರೋಫಿ

06:45 AM Mar 09, 2018 | Team Udayavani |

ಧರ್ಮಶಾಲಾ: ಕರ್ನಾಟಕ ತಂಡ ದೇವಧರ್‌ ಟ್ರೋಫಿ ಫೈನಲ್‌ನಲ್ಲಿ ಎಡವಿದೆ. ಗುರುವಾರದ ಫೈನಲ್‌ನಲ್ಲಿ 6 ವಿಕೆಟ್‌ ಜಯ ಸಾಧಿಸಿದ ಇಂಡಿಯಾ ಬಿ ತಂಡ ಚಾಂಪಿಯನ್‌ ಆಗಿ ಮೂಡಿಬಂದಿದೆ.

Advertisement

ಧರ್ಮಶಾಲಾದಲ್ಲಿ ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ನಡೆಸಿದ ಕರ್ನಾಟಕ 8 ವಿಕೆಟಿಗೆ 279 ರನ್‌ ಪೇರಿಸಿ ಸವಾಲೊಡ್ಡಿದರೆ, ಶ್ರೇಯಸ್‌ ಅಯ್ಯರ್‌ ನಾಯಕತ್ವದ ಇಂಡಿಯಾ ಬಿ ತಂಡ 48.2 ಓವರ್‌ಗಳಲ್ಲಿ 4 ವಿಕೆಟಿಗೆ 281 ರನ್‌ ಬಾರಿಸಿ ಜಯಭೇರಿ ಮೊಳಗಿಸಿತು.

ಇಂಡಿಯಾ ಬಿ ಪರ ಋತುರಾಜ್‌ ಗಾಯಕ್ವಾಡ್‌ 58, ಅಭಿಮನ್ಯು ಈಶ್ವರನ್‌ 69, ಶ್ರೇಯಸ್‌ ಅಯ್ಯರ್‌ 61 ಹಾಗೂ ಮನೋಜ್‌ ತಿವಾರಿ ಅಜೇಯ 59 ರನ್‌ ಹೊಡೆದರು. ಇದರೊಂದಿಗೆ ಲೀಗ್‌ ಹಂತದಲ್ಲಿ ಕರ್ನಾಟಕ ವಿರುದ್ಧ ಅನುಭವಿಸಿದ ಸೋಲಿಗೆ ಸೇಡು ತೀರಿಸಿಕೊಂಡಿತು.

ಸಮರ್ಥ್ ಶತಕ
ವನ್‌ಡೌನ್‌ ಬ್ಯಾಟ್ಸ್‌ಮನ್‌ ರವಿಕುಮಾರ್‌ ಸಮರ್ಥ್ ಅವರ ಅಮೋಘ ಶತಕ ಕರ್ನಾಟಕ ಸರದಿಯ ಆಕರ್ಷಣೆ ಆಗಿತ್ತು. ಒಂದೆಡೆ ವಿಕೆಟ್‌ಗಳು ಉರುಳುತ್ತಿದ್ದರೂ ಕ್ರೀಸಿಗೆ ಅಂಟಿಕೊಂಡು ನಿಂತ ಸಮರ್ಥ್ 120 ಎಸೆತ ಎದುರಿಸಿ 107 ರನ್‌ ಬಾರಿಸಿದರು. ಇದರಲ್ಲಿ 8 ಬೌಂಡರಿ ಹಾಗೂ ಒಂದು ಸಿಕ್ಸರ್‌ ಸೇರಿತ್ತು. ಅವರಿಗೆ ವಿಕೆಟ್‌ ಕೀಪರ್‌ ಸಿ.ಎಂ. ಗೌತಮ್‌ ಉತ್ತಮ ಬೆಂಬಲ ನೀಡಿದರು.

ತಂಡ 15 ಓವರ್‌ಗಳ ಮುಕ್ತಾಯಕ್ಕೆ 4 ವಿಕೆಟ್‌ ಕಳೆದುಕೊಂಡು 64 ರನ್‌ ಮಾಡಿ ತೀವ್ರ ಸಂಕಟದಲ್ಲಿದ್ದಾಗ ಜತೆಗೂಡಿದ ಸಮರ್ಥ್-ಗೌತಮ್‌ 5ನೇ ವಿಕೆಟಿಗೆ 132 ರನ್‌ ಪೇರಿಸಿದರು. ಇದರಲ್ಲಿ ಗೌತಮ್‌ ಪಾಲು 76 ರನ್‌ (84 ಎಸೆತ, 6 ಬೌಂಡರಿ, 2 ಸಿಕ್ಸರ್‌).

Advertisement

ಬಳಿಕ ಶ್ರೇಯಸ್‌ ಗೋಪಾಲ್‌ ಕೂಡ ಜವಾಬ್ದಾರಿಯುತ ಆಟವಾಡಿ 38 ರನ್‌ ಕೊಡುಗೆ ಸಲ್ಲಿಸಿದರು (22 ಎಸೆತ, 4 ಬೌಂಡರಿ, 1 ಸಿಕ್ಸರ್‌). ಸಮರ್ಥ್-ಗೋಪಾಲ್‌ ಜೋಡಿಯಿಂದ 6ನೇ ವಿಕೆಟಿಗೆ 64 ರನ್‌ ಸಂಗ್ರಗೊಂಡಿತು. ಸಮರ್ಥ್ 7ನೇ ವಿಕೆಟ್‌ ರೂಪದಲ್ಲಿ ಪೆವಿಲಿಯನ್‌ ಸೇರುವಾಗ ಕರ್ನಾಟಕ 271 ರನ್‌ ಪೇರಿಸಿತ್ತು. ಆಗ ಕೇವಲ ಒಂದು ಓವರ್‌ ಬಾಕಿ ಇತ್ತು.

ಅಗರ್ವಾಲ್‌ (14), ನಾಯಕ ನಾಯರ್‌ (10), ದೇಶಪಾಂಡೆ (13), ಬಿನ್ನಿ (2) ಬ್ಯಾಟಿಂಗ್‌ ವೈಫ‌ಲ್ಯ ಅನುಭವಿಸಿದರು.

ಸಂಕ್ಷಿಪ್ತ ಸ್ಕೋರ್‌: ಕರ್ನಾಟಕ-8 ವಿಕೆಟಿಗೆ 279 (ಸಮರ್ಥ್ 107, ಸಿ.ಎಂ. ಗೌತಮ್‌ 76, ಗೋಪಾಲ್‌ 38, ಖಲೀಲ್‌ ಅಹ್ಮದ್‌ 49ಕ್ಕೆ 3, ಉಮೇಶ್‌ ಯಾದವ್‌ 48ಕ್ಕೆ 2). ಇಂಡಿಯಾ “ಬಿ’-48.2 ಓವರ್‌ಗಳಲ್ಲಿ 4 ವಿಕೆಟಿಗೆ 281 (ಗಾಯಕ್ವಾಡ್‌ 58, ಈಶ್ವರನ್‌ 69, ಅಯ್ಯರ್‌ 61, ತಿವಾರಿ ಅಜೇಯ 59, ಗೋಪಾಲ್‌ 55ಕ್ಕೆ 2).

Advertisement

Udayavani is now on Telegram. Click here to join our channel and stay updated with the latest news.

Next