Advertisement

ಕಲಾವಿದ ಶಂಕರಗೆ ಪ್ರಶಸ್ತಿಯ ಗರಿ

05:14 PM Dec 28, 2018 | |

ಹಾವೇರಿ: ಉತ್ತರ ಕರ್ನಾಟಕದ ಗಂಡುಕಲೆ ಎನಿಸಿದ “ದೊಡ್ಡಾಟ’ದಲ್ಲಿ ಪಾತ್ರದ ಗತ್ತಿಗೆ ತಕ್ಕಂತೆ ಮೆರಗು ನೀಡುವುದು ಪಾತ್ರಧಾರಿಯ ವೇಷಭೂಷಣ. ಅಪರೂಪದ ಈ ಪ್ರಸಾದನ ಕಲೆಯಲ್ಲಿ ಕೌಶಲ್ಯ ಹೊಂದಿರುವ ಜಿಲ್ಲೆಯ ಶಿಗ್ಗಾವಿ ಪಟ್ಟಣದ ಶಂಕರ ಅರ್ಕಸಾಲಿಯವರಿಗೆ ಕರ್ನಾಟಕ ಬಯಲಾಟ ಅಕಾಡೆಮಿ ಪ್ರಸಕ್ತ ಸಾಲಿನ ವಾರ್ಷಿಕ ಪ್ರಶಸ್ತಿಗೆ ಆಯ್ಕೆ ಮಾಡಿದೆ.

Advertisement

ದೊಡ್ಡಾಟದ ಪ್ರಸಂಗಗಳಲ್ಲಿ ಬರುವ ಪಾತ್ರಗಳ ಘನತೆ, ಅಂತಸ್ತಿಗೆ ತಕ್ಕಂತೆ ವೇಷ ಭೂಷಣಗನ್ನು ಸಿದ್ಧಪಡಿಸುತ್ತಾರೆ. ರಾಜರು, ಮಹಾರಾಜರು, ರಾಕ್ಷಸರು, ಯಕ್ಷ -ಗಂಧರ್ವ, ಕಿನ್ನರಿ, ಕಿಂಪುರುಷರು ಪ್ರಸಂಗಗಳಲ್ಲಿ ಬರುತ್ತಾರೆ. ಅವರಿಗೆ ತಕ್ಕಂತೆ ವೇಷ ಭೂಷಣ ಸಿದ್ಧಪಡಿಸುವುದು ಶಂಕರ ಅರ್ಕಸಾಲಿಯವರಿಗೆ ಕರಗತವಾಗಿದೆ.

ದೊಡ್ಡಾಟದ ಜತೆಗೆ ಸಣ್ಣಾಟದ ಪಾತ್ರಧಾರಿಗಳ ವೇಷಭೂಷಣ ತಯಾರಿಕೆಯ ಕಲೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಅರ್ಕಸಾಲಿ, ಸಿದ್ಧಪಡಿಸಿದ ವೇಷ ಭೂಷಣಗಳು, ರಾಜ್ಯ, ದೇಶವಷ್ಟೇ ಅಲ್ಲ ಬೆಲ್ಜಿಯಂ ದೇಶದ ರಂಗಭೂಮಿ ವಿದ್ಯಾರ್ಥಿಗಳ ಪ್ರಾತ್ಯಕ್ಷಿತೆಗೂ ಬಳಕೆಯಾಗಿ ಉತ್ತರ ಕರ್ನಾಟಕದ ಹೆಮ್ಮೆ ಹೆಚ್ಚಿಸಿವೆ. ಶಂಕರ ಅವರು ಬಾಲ್ಯದಿಂದಲೇ ಈ ಕೌಶಲ್ಯವನ್ನು ಕರಗತ ಮಾಡಿಕೊಂಡಿದ್ದಾರೆ. ಹಿರಿಯ ಕಲಾವಿದ, ಸ್ವಾತಂತ್ರ್ಯ ಹೋರಾಟಗಾರರಾಗಿದ್ದ ಅಜ್ಜ ರಾಮಚಂದ್ರಪ್ಪ ಅರ್ಕಸಾಲಿ ಅವರ ಗರಡಿಯಲ್ಲಿ ತರಬೇತಿ ಪಡೆದಿದ್ದು, ಕಳೆದ 25 ವರ್ಷಗಳಿಂದ ಪ್ರಸಾದನ ಕಲೆಯನ್ನೇ ತಮ್ಮ ಬದುಕಿಗೆ ಆಧಾರವಾಗಿಸಿಕೊಂಡಿದ್ದಾರೆ.

ವೇಷಭೂಷಣ ಸರಕು: ಒಬ್ಬ ಪುರುಷ ವೇಷಧಾರಿಗೆ ಭುಜಕಿರೀಟ, ಎದೆಪದಕ, ಕಂಠಹಾರ, ವೀರಗಾಸೆ (ಸೊಂಟಪಟ್ಟಿ) ನಾಗರಪಣಿ, ಚಕ್ರ, ಕರ್ಣಕುಂಡಲ, ತಲೆ ಕಿರೀಟ, ಮುಂಗಕಟ್ಟು, ಆಭರಣಗಳು ಮತ್ತು ಉಡಿಗೆಗಾಗಿ 16 ಮೊಳ ಉದ್ದದ ಗಟ್ಟಿದಡಿಯ ಕರಿಸೀರೆ, ಬಣ್ಣದ ನಿಲುವಂಗಿ, ದೋತ್ರ, ದಡಿದೋತ್ರ, ಉಂಡಿರುಮಾಲು ಬೇಕಾಗುತ್ತವೆ. ಇನ್ನು ಸ್ತ್ರೀ ವೇಷಧಾರಿಗೆ ಕಿರೀಟ, ಲೌಲಕ್‌, ಬಾಜುಬಂದ್‌, ನತ್ತು, ಟಿಕೀಸರ, ಸೊಂಟಪಟ್ಟಿ, ಬಳೇಕಟ್ಟು, ಆಭರಣ, 16 ಮೊಳ ಉದ್ದದ ಇಳಕಲ್‌ ಸೀರೆ(ಕಚ್ಚೆ ಸೀರೆ ಉಡಲು) ರವಿಕೆ, ಮೊದಲಾದ ವಸ್ತ್ರಗಳು ಬೇಕಾಗುತ್ತವೆ. ವಿವಿಧ ಪಾತ್ರಗಳಿಗೆ ತಕ್ಕಂತೆ ಈ ಸಾಮಗ್ರಿಗಳು ಸಂಖ್ಯೆ ಅಧಿಕವಾಗುತ್ತದೆ.

ಪುರುಷ, ಸ್ತ್ರೀ ಪಾತ್ರಧಾರಿ ವೇಷಭೂಷಣ ಸಿದ್ಧಪಡಿಸಲು 20 ದಿನಗಳು ಬೇಕು. ಅದಕ್ಕಾಗಿ ಕನಿಷ್ಟ 20 ಸಾವಿರ ಹಣ ಖರ್ಚು ಮಾಡಲಾಗುತ್ತದೆ. ಒಬ್ಬ ಪಾತ್ರಧಾರಿ ಸಿದ್ಧಗೊಳಿಸಲು ಅರ್ಧ ತಾಸು ಅವಧಿ 
ಬೇಕಾಗುತ್ತದೆ. ಸಿದ್ಧಪಡಿಸುವ ಅವಧಿ ಆಯಾ ಪಾತ್ರಧಾರಿಗೆ ತಕ್ಕಂತೆ ಹೆಚ್ಚು-ಕಡಿಮೆ ಆಗುತ್ತದೆ. ಇಷ್ಟೆಲ್ಲ ಸಿದ್ಧಪಡಿಸಿದ ಮೇಲೆಯೇ ಆ ಪಾತ್ರಧಾರಿಗೆ ನಿಜವಾದ ಜೀವಕಳೆ ತುಂಬಿಕೊಳ್ಳುತ್ತದೆ. ಇಂಥ ಅಪರೂಪದ ಪ್ರಸಾದನ ಕಲಾವಿದ ಶಂಕರ ಅರ್ಕಸಾಲಿ ಅವರಿಗೆ ಬಯಲಾಟ ಅಕಾಡೆಮಿ ಪ್ರಶಸ್ತಿಗೆ ಆಯ್ಕೆ ಮಾಡಿರುವುದು ಕಲಾವಿದರಲ್ಲಿ ಸಂತಸ ಮೂಡಿಸಿದೆ.

Advertisement

ಬಯಲಾಟ ಅಕಾಡೆಮಿ ನನ್ನನ್ನು ಪ್ರಶಸ್ತಿಗೆ ಆಯ್ಕೆ ಮಾಡಿರುವುದು ಖುಷಿ ತಂದಿದೆ. ದೊಡ್ಡಾಟ, ಸಣ್ಣಾಟದಂಥ ಕಲೆ ಉಳಿಸಲು ಕಲಾವಿದರು ಶ್ರಮಿಸಿದರೆ ಸಾಲದು ಜತೆಗೆ ಸಂಘ, ಸಂಸ್ಥೆಗಳು ಮತ್ತು ಸರ್ಕಾರಗಳು ಕಲಾವಿದರಿಗೆ, ವೇಷಭೂಷಣಗಳನ್ನು ಸಿದ್ಧಪಡಿಸಿ ಪಾತ್ರಗಳಿಗೆ ಜೀವಕಳೆ ತುಂಬುವ ಪ್ರಸಾದನ ಕಲಾವಿದರಿಗೆ ನೆರವು ನೀಡಬೇಕು. ಆಗ ಮಾತ್ರ ಪರಂಪರಾಗತವಾಗಿ ಬಂದಿರುವ ನಾಡಿನ ಕಲೆ ಉಳಿಸಿ, ಬೆಳಸಲು ಸಾಧ್ಯ.
. ಶಂಕರ ಅರ್ಕಸಾಲಿ,
ಪ್ರಸಾದನ ಕಲಾವಿದ

Advertisement

Udayavani is now on Telegram. Click here to join our channel and stay updated with the latest news.

Next