Advertisement

Karnataka Bank ಮಾಜಿ ಅಧ್ಯಕ್ಷ, ಹಿರಿಯ ಬ್ಯಾಂಕಿಂಗ್‌ ತಜ್ಞ ಪಿ.ಜಯರಾಂ ಭಟ್‌ ವಿಧಿವಶ

11:23 PM Aug 09, 2023 | Team Udayavani |

ಮಂಗಳೂರು:ಕರ್ಣಾಟಕ ಬ್ಯಾಂಕ್‌ನ ಮಾಜಿ ಅಧ್ಯಕ್ಷ, ಹಿರಿಯ ಬ್ಯಾಂಕಿಂಗ್‌ ತಜ್ಞ ಪೊಳಲಿ ಜಯರಾಮ ಭಟ್‌ (72) ಆ. 9ರಂದು ನಿಧನ ಹೊಂದಿದರು.

Advertisement

ಮುಂಬಯಿಯಲ್ಲಿ ಯುನಿವರ್ಸಲ್‌ ಸೋಂಪೋ ವಿಮಾ ಕಂಪೆನಿಯ ಮಂಡಳಿ ಸಭೆಯಲ್ಲಿ ಭಾಗವಹಿಸಿ ವಾಪಸಾಗುತ್ತಿದ್ದಾಗ ಮಧ್ಯಾಹ್ನ ಮಂಗಳೂರು ವಿಮಾನ ನಿಲ್ದಾಣದಲ್ಲಿ ಹೃದಯಾಘಾತ ಉಂಟಾಗಿದ್ದು ಅವರನ್ನು ನಗರದ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫ‌ಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.ಮೃತರು ಪತ್ನಿ, ಪುತ್ರ ಮತ್ತು ಪುತ್ರಿಯನ್ನು ಅಗಲಿದ್ದಾರೆ.

ಪಿ. ಜಯರಾಮ ಭಟ್‌ ಅವರು ದಕ್ಷಿಣ ಕನ್ನಡ ಜಿಲ್ಲೆಯ ಪೊಳಲಿಯವರು. 1951ರಲ್ಲಿ ಮೈಸೂರು ವಿಶ್ವವಿದ್ಯಾನಿಲಯದಿಂದ ರಸಾಯನಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿಯನ್ನು ಪ್ರಥಮ ರ್‍ಯಾಂಕ್‌ನೊಂದಿಗೆ ಪಡೆದಿದ್ದರು. ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಬ್ಯಾಂಕರ್ಸ್‌ ಸರ್ಟಿಫೈಡ್‌ ಅಸೋಸಿಯೇಟ್‌ (ಸಿಎಐಐಬಿ) ಆಗಿದ್ದರು. ತಮ್ಮ ನಾಲ್ಕೂವರೆ ದಶಕಗಳಿಗೂ ಮೀರಿದ ಸುದೀರ್ಘ‌ ಬ್ಯಾಂಕಿಂಗ್‌ ವೃತ್ತಿ ಜೀವನವನ್ನು 1973ರಲ್ಲಿ ಖಾಸಗಿ ರಂಗದ ಪ್ರತಿಷ್ಠಿತ ಕರ್ಣಾಟಕ ಬ್ಯಾಂಕ್‌ನಲ್ಲಿ ಅಧಿಕಾರಿಯಾಗಿ ಆರಂಭಿಸಿ ಕ್ರಮೇಣ ಬ್ಯಾಂಕ್‌ನ ವಿವಿಧ ಹುದ್ದೆಗಳಿಗೆ ಭಡ್ತಿ ಹೊಂದಿದರು. 2009ರ ಜುಲೈಯಿಂದ 2017ರ ಎಪ್ರಿಲ್‌ ವರೆಗೆ ಬ್ಯಾಂಕ್‌ನ ಮ್ಯಾನೇಜಿಂಗ್‌ ಡೈರೆಕ್ಟರ್‌ ಆಗಿ, ಅನಂತರ ಬ್ಯಾಂಕ್‌ನ ಚೇರ್‌ಮನ್‌ ಆಗಿ ಸೇವೆ ಸಲ್ಲಿಸಿದ್ದರು. ತಮ್ಮ ಅವ ಧಿಯಲ್ಲಿ ಇ-ಲಾಬಿ, ಮೊಬೈಲ್‌ ಬ್ಯಾಂಕಿಂಗ್‌, ಪಿಒಎಸ್‌, ಆನ್‌ಲೈನ್‌ ಟ್ರೇಡಿಂಗ್‌ ಅಕೌಂಟ್‌, ಟ್ರಾವೆಲ್‌ ಕಾರ್ಡ್‌, ಗಿಫ್ಟ್‌ ಕಾರ್ಡ್‌ ಮೊದಲಾದ ಯಶಸ್ವಿ ಯೋಜನೆಗಳನ್ನು ಪರಿಚಯಿಸಿದ್ದರು. ಬ್ಯಾಂಕ್‌ನ ಸರ್ವಾಂಗೀಣ ಪ್ರಗತಿಗೆ ಅಪಾರ ಕೊಡುಗೆ ನೀಡಿದ್ದರು.

ಭಾರತೀಯ ಬ್ಯಾಂಕ್‌ಗಳ ಒಕ್ಕೂಟ (ಐಬಿಎ) ಆಡಳಿತ ಸಮಿತಿಯ ಸದಸ್ಯರಾಗಿ ನಾಲ್ಕು ವರ್ಷ ಕಾರ್ಯನಿರ್ವಹಿಸಿದ್ದರು. ಬೆಂಗಳೂರಿನ ಸದರ್ನ್ ಇಂಡಿಯಾ ಬ್ಯಾಂಕ್ಸ್‌ ಸ್ಟಾಫ್‌ ಟ್ರೈನಿಂಗ್‌ ಕಾಲೇಜು (ಎಸ್‌ಐಬಿಎಸ್‌ಟಿಸಿ) ಆಡಳಿತ ಮಂಡಳಿಯ ಚೇರ್‌ಮನ್‌ ಆಗಿಯೂ 2019ರ ಆ. 31ರಿಂದ 2021ರ ಅ. 8ರ ವರೆಗೆ ಕಾರ್ಯನಿರ್ವಹಿಸಿದ್ದಾರೆ.

ಬ್ಯಾಂಕ್‌ನಲ್ಲಿ 48 ವರ್ಷ ಗಳಿಗೂ ಮಿಕ್ಕಿದ ಸುದೀರ್ಘ‌ ಸೇವೆಯನ್ನು ಸಲ್ಲಿಸಿರುವ ಜಯರಾಮ ಭಟ್‌ ಅವರು 2017ರ ಎ. 12ರಿಂದ 2021ರ ನ. 13ರವರೆಗೆ ಬ್ಯಾಂಕ್‌ನ 10ನೇ ಅಧ್ಯಕ್ಷ ಪದವಿಯನ್ನು ಯಶಸ್ವಿಯಾಗಿ ಪೂರೈಸಿದ್ದರು. ಪ್ರಸ್ತುತ ಕರ್ಣಾಟಕ ಬ್ಯಾಂಕಿನ ಸಹವರ್ತಿ ಸಂಸ್ಥೆಯಾದ ಯುನಿವರ್ಸಲ್‌ ಸೋಂಪೋ ಜನರಲ್‌ ಇನ್ಶೂರೆನ್ಸ್‌ ಕಂಪೆನಿ ಲಿಮಿಟೆಡ್‌ನ‌ ಆಡಳಿತ ಮಂಡಳಿಯಲ್ಲಿ ಬ್ಯಾಂಕ್‌ನ ನಾಮನಿರ್ದೇಶಿತ ನಿರ್ದೇಶಕರಾಗಿದ್ದರು.

Advertisement

ಪ್ರಶಸ್ತಿ – ಪುರಸ್ಕಾರ
ಮ್ಯಾನೇಜಿಂಗ್‌ ಡೈರೆಕ್ಟರ್‌ ಆಗಿದ್ದ ಸಂದರ್ಭ ದಲ್ಲಿ ಬ್ಯಾಂಕ್‌ಗೆ ಐಡಿಬಿಆರ್‌ಟಿ, ಐಬಿಎ, ಸಿಐ ಎಂಎಸ್‌ಎಂಇ, ಎಎಸ್‌ಎಸ್‌ಒಸಿಎಚ್‌ಎಎಂ ಮೊದಲಾದ ಪ್ರತಿಷ್ಠಿತ ಸಂಸ್ಥೆಗಳಿಂದ ಕೊಡ ಲ್ಪಡುವ ಮಾಹಿತಿ ತಂತ್ರಜ್ಞಾನ, ಕಾರ್ಪೊರೆಟ್‌ ಸಾಮಾಜಿಕ ಹೊಣೆಗಾರಿಕೆ, ಚಿಕ್ಕ ಹಾಗೂ ಮಧ್ಯಮ ಉದ್ದಿಮೆಗಳ ಸಾಲ ನೀಡಿಕೆಯ ರಂಗ ಇತ್ಯಾದಿಗಳಲ್ಲಿ ಹಲವಾರು ಪ್ರಶಸ್ತಿಗಳು ಲಭಿಸಿವೆ. ಆರ್ಯಭಟ ಅಂತಾರಾಷ್ಟ್ರೀಯ ಪ್ರಶಸ್ತಿ (ಆರ್ಯಭಟ ಸಾಂಸ್ಕೃತಿಕ ಸಂಸ್ಥೆ ಬೆಂಗಳೂರು), ಔಟ್‌ಸ್ಟ್ಯಾಂಡಿಂಗ್‌ ಮ್ಯಾನೇಜರ್‌ ಪ್ರಶಸ್ತಿ (ಮಂಗಳೂರು ಮ್ಯಾನೇಜ್‌ಮೆಂಟ್‌ ಅಸೋಸಿ ಯೇಶನ್‌), ಸಿಇಒ ವಿದ್‌ ಎಚ್‌.ಆರ್‌. ಓರಿಯಂಟೇಶನ್‌ (ಏಷಿಯಾ ಪೆಸಿಫಿಕ್‌ ಎಚ್‌.ಆರ್‌.ಎಂ. ಕಾಂಗ್ರೆಸ್‌), ಟಿ.ಎ. ಪೈ ಸ್ಮಾರಕ ಶ್ರೇಷ್ಠ ಬ್ಯಾಂಕರ್‌ ಪ್ರಶಸ್ತಿ’ (ದೆಹಲಿ ಕನ್ನಡಿಗ), ಎ. ಶಾಮ ರಾವ್‌ ಔಟ್‌ಸ್ಟ್ಯಾಂಡಿಂಗ್‌ ಅಚೀವ್‌ಮೆಂಟ್‌ ಅವಾರ್ಡ್‌ (ಶ್ರೀನಿವಾಸ ಸಮೂಹ ಸಂಸ್ಥೆಗಳು), ನೂತನ ವರ್ಷದ ಪ್ರಶಸ್ತಿ-2015 (ಅಕಾಡೆಮಿ ಆಫ್‌ ಜನರಲ್‌ ಎಜುಕೇಶನ್‌ ಮಣಿಪಾಲ, ಮಣಿಪಾಲ್‌ ವಿಶ್ವ ವಿದ್ಯಾಲಯ ಮತ್ತು ಸಿಂಡಿಕೇಟ್‌ ಬ್ಯಾಂಕ್‌), ಪರಮಾನುಗ್ರಹ ಪ್ರಶಸ್ತಿ (ಸಂಸ್ಥಾನ ಗೋಕರ್ಣ ಶ್ರೀ ರಾಮಚಂದ್ರಾಪುರ ಮಠ), ನರಸಿಂಹ ಪ್ರಶಸ್ತಿ (ಕೂಟ ಮಹಾ
ಜಗತ್ತು ಸಾಲಿಗ್ರಾಮ ಬೆಂಗಳೂರು), ಯೆಡ್ತರೆ ಮಂಜಯ್ಯ ಶೆಟ್ಟಿ ಸ್ಮಾರಕ ಪ್ರಶಸ್ತಿ (ಯೆಡ್ತರೆ ಮಂಜಯ್ಯ ಶೆಟ್ಟಿ ಸ್ಮಾರಕ ಟ್ರಸ್ಟ್‌ ಕುಂದಾಪುರ), ವಂದನಾ ಪ್ರಶಸ್ತಿ-2017′ (ರೋಟರಿ ಕ್ಲಬ್‌ ಮಂಗಳೂರು), ಸೂರಜ್‌ ಸೇವಾ ಪ್ರಶಸ್ತಿ-2017 (ಸೂರಜ್‌ ಎಜ್ಯುಕೇಶನಲ್‌ ಆ್ಯಂಡ್‌ ಚಾರಿಟೆಬಲ್‌ ಟ್ರಸ್ಟ್‌ ಮುಡಿಪು, ದಕ್ಷಿಣ ಕನ್ನಡ), ಎಮಿನೆಂಟ್‌ ಅಲುಮ್ನಿ ಅವಾರ್ಡ್‌’ (ಸೈಂಟ್‌ ಅಲೋಶಿಯಸ್‌ ಇನ್‌ಸ್ಟಿಟ್ಯೂಶನ್ಸ್‌ ಮ್ಯಾನೇಜ್‌ಮೆಂಟ್‌ ಹಾಗೂ ಸೈಂಟ್‌ ಅಲೋಶಿಯಸ್‌ ಕಾಲೇಜು ಅಲುಮ್ನಿ ಅಸೋಸಿಯೇಶನ್‌), ಲಯನ್ಸ್‌ ಸಾಧಕ ಪುರಸ್ಕಾರ – 2018-19 (ಅಂತಾರಾಷ್ಟ್ರೀಯ ಲಯನ್ಸ್‌ ಸೇವಾ ಸಂಸ್ಥೆ), ಧರ್ಮ ಸಿಂಧು ಪ್ರಶಸ್ತಿ (ವಜ್ರದೇಹಿ ಪ್ರತಿಷ್ಠಾನ ಗುರುಪುರ, ದಕ್ಷಿಣ ಕನ್ನಡ), ತುಳಸಿ ಸನ್ಮಾನ 2018 (ಶ್ರೀ ವಿದ್ಯಾ ಸರಸ್ವತಿ ಕ್ಷೇತ್ರ, ಕೊಟ್ಟಾರ, ಮಂಗಳೂರು), ಬ್ಯುಸಿನೆಸ್‌ ಟುಡೇ ಇಂಡಿಯಾಸ್‌ 30 ಬೆಸ್ಟ್‌ ಸಿಇಒ, ಶ್ರೀ ಕೃಷ್ಣಾನುಗ್ರಹ ಪ್ರಶಸ್ತಿ (ಶ್ರೀ ವಿಶ್ವೇಶತೀರ್ಥ ಶ್ರೀಪಾದರು, ಅವರ ಪಂಚಮ ಪರ್ಯಾಯದ ಸಂದರ್ಭದಲ್ಲಿ ಉಡುಪಿಯ ಅಧೋಕ್ಷಜ ಮಠದ ವತಿಯಿಂದ), ಶ್ರೀ ದುರ್ಗಾನುಗ್ರಹ ಪ್ರಶಸ್ತಿ’ (ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ ಕಟೀಲು), ಡೈಮಂಡ್‌ ಸುಪ್ರೀಮ್‌ ಎಕ್ಸಲೆನ್ಸ್‌ ಪ್ರಶಸ್ತಿ (ಲಯನ್ಸ್‌ ಕ್ಲಬ್‌ ಇಂಟರ್‌ನ್ಯಾಶನಲ್‌), ಪೇಜಾವರ ಶ್ರೀ ವಿಶ್ವೇಶತೀರ್ಥ ಜೀವಮಾನ ಸಾಧನಾ ಪ್ರಶಸ್ತಿ (ಕಲ್ಕೂರ ಪ್ರತಿಷ್ಠಾನ ಮಂಗಳೂರು), ಸಂಸ್ಮರಣಾ ಪ್ರಶಸ್ತಿ (ಶರವು ರಾಘವೇಂದ್ರ ಶಾಸ್ತ್ರಿ, ಶರವು ದೇವಸ್ಥಾನ, ಮಂಗಳೂರು)ಗಳು ಲಭಿಸಿವೆ.

ಉಡುಪಿ ಮಠಾಧೀಶರ ಸಂತಾಪ
ಜಯರಾಮ ಭಟ್‌ ಅವರ ನಿಧನದಿಂದ ವಿಷಾದವಾಗಿದೆ. ಬ್ಯಾಂಕ್‌ನ ಅಭಿವೃದ್ಧಿ ಮತ್ತು ಗ್ರಾಹಕ ಸ್ನೇಹಿ ಪರಂಪರೆ ಉನ್ನತ ಸ್ಥಿತಿಗೆ ಕೊಂಡೊಯ್ದು ಸಂಸ್ಥೆಯನ್ನೂ ಬೆಳೆಸಿ, ನಾಡಿನ ಆರ್ಥಿಕತೆ ವೃದ್ಧಿಗೂ ವಿಶೇಷ ಕೊಡುಗೆ ನೀಡಿದ್ದರು. ಜತೆಗೆ ಸಾಮಾಜಿಕ ಶೈಕ್ಷಣಿಕ, ಧಾರ್ಮಿಕ ಹಾಗೂ ಸಮಾಜದ ಉನ್ನತಿ ಆಶಯಗಳುಳ್ಳ ಸೇವಾ ಕಾರ್ಯಗಳಿಗೆ ಬ್ಯಾಂಕನ್ನು ಸದಾ ಮುಕ್ತವಾಗಿಟ್ಟು ಕೊಡುಗೆ ನೀಡಿದ್ದರು. ಶ್ರೀ ಮಠದೊಂದಿಗೆ ವಿಶೇಷ ಬಾಂಧವ್ಯ ಹೊಂದಿದ್ದು ಶ್ರೀ ಕೃಷ್ಣ ಮಠ ಮತ್ತು ಅಷ್ಟ ಮಠಗಳ ಪರ್ಯಾಯೋತ್ಸವಗಳಲ್ಲಿ ಸಾಕಷ್ಟು ಸಹಕಾರ ನೀಡಿದ್ದರು. ಸಾರ್ಥಕ ಬದುಕು ನಡೆಸಿ ಅಗಲಿದ ಅವರಿಗೆ ಶ್ರೀ ಕೃಷ್ಣನಲ್ಲಿ ಸದ್ಗತಿ ಪ್ರಾರ್ಥಿಸುತ್ತೇವೆ.
– ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು, ಪೇಜಾವರ ಮಠ, ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು, ಪುತ್ತಿಗೆ ಮಠ, ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು, ಪಲಿಮಾರು ಮಠ, ಶ್ರೀ ವಿಶ್ವವಲ್ಲಭತೀರ್ಥ ಶ್ರೀಪಾದರು, ಸೋದೆ ವಾದಿರಾಜ ಮಠ

ಡಾ| ಡಿ. ವೀರೇಂದ್ರ ಹೆಗ್ಗಡೆ ಸಂತಾಪ
ಬೆಳ್ತಂಗಡಿ: ಜಯರಾಮ ಭಟ್‌ ನಿಧನಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಸಂತಾಪ ಸೂಚಿಸಿದ್ದಾರೆ. ಸರಳ ವ್ಯಕ್ತಿತ್ವದ ಅವರು ಬ್ಯಾಂಕಿನ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಸದಾ
ಹಸನ್ಮುಖದಿಂದ ಕರ್ತವ್ಯ ನಿರ್ವಹಿಸಿ ಎಲ್ಲರ ಪ್ರೀತಿ-ವಿಶ್ವಾಸಕ್ಕೆ ಪಾತ್ರ ರಾಗಿದ್ದರು. ಅವರ ಆತ್ಮಕ್ಕೆ ಚಿರಶಾಂತಿಯನ್ನು ಕೋರುತ್ತೇನೆ. ಅವರ ಅಗಲುವಿಕೆಯಿಂದ ಕುಟುಂಬವರ್ಗದವರಿಗೆ ಉಂಟಾದ ದುಃಖ ವನ್ನು ಸಹಿಸುವ ಶಕ್ತಿಯನ್ನಿತ್ತು ಶ್ರೀ ಮಂಜುನಾಥ ಸ್ವಾಮಿ ನೀಡಲೆಂದು ಪ್ರಾರ್ಥಿಸುತ್ತೇನೆ ಎಂದು ಸಂತಾಪ ಸೂಚನೆಯಲ್ಲಿ ತಿಳಿಸಿದ್ದಾರೆ.

ಗಣ್ಯರ ಸಂತಾಪ
ಜಯರಾಮ ಭಟ್‌ ನಿಧನಕ್ಕೆ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ, ಕರ್ಣಾಟಕ ಬ್ಯಾಂಕಿನ ಚೇರ್‌ಮನ್‌ ಪ್ರದೀಪ್‌ ಕುಮಾರ್‌, ಮ್ಯಾನೇಜಿಂಗ್‌ ಡೈರೆಕ್ಟರ್‌ ಮತ್ತು ಸಿಇಒ ಶ್ರೀಕೃಷ್ಣನ್‌ ಎಚ್‌., ಎಕ್ಸಿಕ್ಯುಟಿವ್‌ ಡೈರೆಕ್ಟರ್‌ ಶೇಖರ ರಾವ್‌, ವಿಧಾನಸಭೆಯ ಸ್ಪೀಕರ್‌ ಯು.ಟಿ. ಖಾದರ್‌, ಸಂಸದ ನಳಿನ್‌ ಕುಮಾರ್‌ ಕಟೀಲು, ಶಾಸಕರಾದ ವೇದವ್ಯಾಸ ಕಾಮತ್‌, ಡಾ| ಭರತ್‌ ಶೆಟ್ಟಿ, ಉಮಾನಾಥ ಕೋಟ್ಯಾನ್‌, ಯಶ್‌ಪಾಲ್‌ ಸುವರ್ಣ, ಮಂಜುನಾಥ ಭಂಡಾರಿ, ಎಸ್‌ಸಿಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಡಾ| ಎಂ.ಎನ್‌. ರಾಜೇಂದ್ರ ಕುಮಾರ್‌, ಶಾರದಾ ಸಮೂಹ ಸಂಸ್ಥೆಗಳ ಅಧ್ಯಕ್ಷ ಡಾ| ಎಂ.ಬಿ. ಪುರಾಣಿಕ್‌, ಕಸಾಪ ಮಾಜಿ ಅಧ್ಯಕ್ಷ ಹರಿಕೃ ಷ್ಣ ಪುನರೂರು, ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಪ್ರದೀಪ್‌ ಕುಮಾರ್‌ ಕಲ್ಕೂರ, ಕ್ಯಾ| ಗಣೇಶ ಕಾರ್ಣಿಕ್‌, ಕಸಾಪ ಜಿಲ್ಲಾಧ್ಯಕ್ಷ ಡಾ| ಶ್ರೀನಾಥ ಎಂ.ಪಿ., ಸಿರಿಬಾಗಿಲು ಪ್ರತಿಷ್ಠಾನದ ರಾಮಕೃಷ್ಣ ಮಯ್ಯ, ಭಾಸ್ಕರ ರೈ ಕುಕ್ಕುವಳ್ಳಿ, ಬಪ್ಪನಾಡು ದೇಗುಲದ ಆಡಳಿತ ಮೊಕ್ತೇಸರ ಎನ್‌.ಎಸ್‌. ಮನೋಹರ ಶೆಟ್ಟಿ ಸಂತಾಪ ವ್ಯಕ್ತಪಡಿಸಿದ್ದಾರೆ.

ಅಂತಿಮ ದರ್ಶನ
ಆ. 10ರಂದು ಬೆಳಗ್ಗೆ 8ರಿಂದ 9ರ ವರೆಗೆ ಮಂಗಳೂರಿನ ಎ.ಜೆ. ಆಸ್ಪತ್ರೆಯಲ್ಲಿ ಸಾರ್ವಜನಿಕರಿಗೆ ಅಂತಿಮ ದರ್ಶನಕ್ಕೆ ಅವಕಾಶವಿದೆ. ಕದ್ರಿಯ ಹಿಂದೂ ರುದ್ರಭೂಮಿಯಲ್ಲಿ 10 ಗಂಟೆಗೆ ಅಂತ್ಯಕ್ರಿಯೆ ನೆರವೇರಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next