Advertisement

ರಾಜ್ಯ ಬಂದ್‌ಗೆ ಮಿಶ್ರ ಪ್ರತಿಕ್ರಿಯೆ; ಉ.ಕರ್ನಾಟಕದಲ್ಲಿ ಬೆಂಬಲ

06:00 AM May 29, 2018 | |

ಬೆಂಗಳೂರು/ಹುಬ್ಬಳ್ಳಿ: ರೈತರ ಸಾಲ ಮನ್ನಾಕ್ಕೆ ಆಗ್ರಹಿಸಿ ಸೋಮವಾರ ಬಿಜೆಪಿ ಕರೆ ನೀಡಿದ್ದ ಬಂದ್‌ಗೆ ರಾಜ್ಯದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬೆಂಗಳೂರು ಹೊರತುಪಡಿಸಿ, ರಾಜ್ಯದ ಇತರೆಡೆ ಬಂದ್‌ಗೆ ಕರೆ ನೀಡಲಾಗಿತ್ತು. ಧಾರವಾಡದಲ್ಲಿ ಮೂರು ಬಸ್‌ಗಳಿಗೆ, ಚಿತ್ರದುರ್ಗದಲ್ಲಿ ಇಂದಿರಾ ಕ್ಯಾಂಟಿನ್‌ಗೆ ಕಲ್ಲು ತೂರಿದ ಘಟನೆ ಬಿಟ್ಟರೆ, ಉಳಿದೆಡೆ ಯಾವುದೇ ಅಹಿತಕರ ಘಟನೆಗಳು ನಡೆದ ಬಗ್ಗೆ ವರದಿಯಾಗಿಲ್ಲ.

Advertisement

ಕೆಲವೆಡೆ ನಿಷೇಧಾಜ್ಞೆ ಉಲ್ಲಂ ಸಿ ಪ್ರತಿಭಟನೆ ನಡೆಸಿದವರನ್ನು ಪೊಲೀಸರು ಬಂಧಿಸಿ, ಬಿಡುಗಡೆ ಮಾಡಿದರು. ಉಳಿದಂತೆ ವಾಣಿಜ್ಯ ವಹಿವಾಟುಗಳು, ಕಚೇರಿ, ಶಾಲಾ ಕಾಲೇಜುಗಳು ಎಂದಿನಂತೆ ಕಾರ್ಯ ನಿರ್ವಹಿಸಿದವು. ಕೆಲವೆಡೆ ಖಾಸಗಿ ಶಾಲಾ-ಕಾಲೇಜುಗಳಿಗೆ ರಜೆ ನೀಡಲಾಗಿತ್ತು.

ಚಿತ್ರದುರ್ಗದಲ್ಲಿ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದ ಬಳಿ ಹಾಗೂ ಯೂನಿಯನ್‌ ಪಾರ್ಕ್‌ನಲ್ಲಿರುವ ಇಂದಿರಾ ಕ್ಯಾಂಟೀನ್‌ಗಳ ಮೇಲೆ ಪ್ರತಿಭಟನಾನಿರತ ಬಿಜೆಪಿ ಕಾರ್ಯಕರ್ತರು ಕಲ್ಲು ತೂರಾಟ ನಡೆಸಿದರು. ಕಲ್ಲು ತೂರಾಟದಿಂದ ಇಂದಿರಾ ಕ್ಯಾಂಟೀನ್‌ನ ಗಾಜುಗಳೆಲ್ಲ ಪುಡಿಯಾಗಿದ್ದು, ಈ ಸಂಬಂಧ ಮೂವರು ಬಿಜೆಪಿ ಕಾರ್ಯಕರ್ತರನ್ನು ಬಂಧಿಸಲಾಗಿದೆ. ಯಾದಗಿರಿಯಲ್ಲಿ ಬಲವಂತವಾಗಿ ಬಾಗಿಲು ಮುಚ್ಚಿಸಲು ಮುಂದಾದ ಬಿಜೆಪಿ ಶಾಸಕ ವೆಂಕಟರೆಡ್ಡಿ ಮುದ್ನಾಳ ಜೊತೆ ಹೋಟೆಲ್‌ ಮಾಲೀಕರು ಸಂಘರ್ಷಕ್ಕಿಳಿದ ಘಟನೆ ನಡೆಯಿತು.

ಧಾರವಾಡದಲ್ಲಿ ಆಲೂರು ವೆಂಕಟರಾವ್‌ ವೃತ್ತದಲ್ಲಿ ಟಾಯರ್‌ಗೆ ಬೆಂಕಿ ಹಚ್ಚಿ ಆಕ್ರೋಶ ಹೊರ ಹಾಕಿದ ಪ್ರತಿಭಟನಾಕಾರರು, ಕುಮಾರಸ್ವಾಮಿ ವಿರುದ್ಧ ಘೋಷಣೆ ಹಾಕಿದರು. ಈ ಸಮಯದಲ್ಲಿ ಟಾಯರ್‌ಗೆ ಬೆಂಕಿ ಹಚ್ಚುವ ವೇಳೆಯಲ್ಲಿ ಕಾರ್ಯಕರ್ತನ ಚಪ್ಪಲಿಗೆ ಬೆಂಕಿ ತಗುಲಿದ ಘಟನೆ ಕೂಡ ನಡೆಯಿತು. ಈ ವೇಳೆ, ಬಸ್‌ ಸಂಚಾರಕ್ಕೆ ಮುಂದಾದ ಮೂರು ಬಸ್‌ಗಳ ಮೇಲೆ ದುಷ್ಕರ್ಮಿಗಳು ಕಲ್ಲು ಹೊಡೆದಿದ್ದರಿಂದ ಗಾಜುಗಳು ಒಡೆದಿವೆ. ಪೆಪ್ಸಿ ಕಂಪನಿಗೆ ಕೂಡ ಪ್ರತಿಭಟನಾನಿರತರು ಮುತ್ತಿಗೆ ಹಾಕಿದರು. ನಗರದಲ್ಲಿ ಸರ್ಕಾರಿ ಹಾಗೂ ಖಾಸಗಿ ಶಾಲಾ-ಕಾಲೇಜುಗಳು ರಜೆ ಘೋಷಿಸುವ ಮೂಲಕ ಬಂದ್‌ ಬೆಂಬಲಿಸಿದವು.

ಹುಬ್ಬಳ್ಳಿಯ ಕಿತ್ತೂರು ಚನ್ನಮ್ಮ ವೃತ್ತದಲ್ಲಿ ಬಿಜೆಪಿ ಕಾರ್ಯಕರ್ತರು ಟಾಯರ್‌ಗೆ ಬೆಂಕಿ ಹಚ್ಚಲು ಯತ್ನಿಸಿದಾಗ ಪೊಲೀಸರ ಜೊತೆ ಮಾತಿನ ಚಕಮಕಿ ನಡೆಯಿತು. ಮಹದಾಯಿ ಹೋರಾಟದುದ್ದಕ್ಕೂ ರೈತರ ಹೋರಾಟಕ್ಕೆ ನಿರಂತರ ಬೆಂಬಲ ನೀಡುತ್ತಲೇ ಬಂದಿರುವ ನರಗುಂದ ಪಟ್ಟಣದಲ್ಲಿ ವ್ಯಾಪಕ ಬೆಂಬಲ ವ್ಯಕ್ತವಾಯಿತು.

Advertisement

ಶ್ರೀರಂಗಪಟ್ಟಣ, ಕೊರಟಗೆರೆಗಳಲ್ಲಿ ಮಾನವ ಸರಪಳಿ ನಿರ್ಮಿಸಿ, ಪ್ರತಿಭಟನೆ ವ್ಯಕ್ತಪಡಿಸಲಾಯಿತು. ಗುಂಡ್ಲುಪೇಟೆಯಲ್ಲಿ ಬಂದ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಪೆಟ್ರೋಲ್‌ ಬಂಕ್‌, ಹೋಟೆಲ್‌, ಟೀ ಕ್ಯಾಂಟೀನ್‌ ಹಾಗೂ ಅಂಗಡಿಗಳ ಮಾಲಿಕರು ಬಾಗಿಲು ಮುಚ್ಚಿ ಬಂದ್‌ಗೆ ಬೆಂಬಲ ಸೂಚಿಸಿದರು.

ಸಂಸದರ ಬಂಧನ, ಬಿಡುಗಡೆ:
ಮೈಸೂರಿನ ಬನ್ನಿಮಂಟಪ ಬಳಿ ಬಂದ್‌ಗೆ ಸಹಕರಿಸುವಂತೆ ಬಸ್‌ಗಳನ್ನು ತಡೆದು ಪ್ರತಿಭಟನೆಗೆ ಮುಂದಾದ ಸಂಸದ ಪ್ರತಾಪ್‌ ಸಿಂಹ, ಶಾಸಕರಾದ ಎಸ್‌.ಎ.ರಾಮದಾಸ್‌, ಎಲ್‌.ನಾಗೇಂದ್ರ, ಸೇಡಂನಲ್ಲಿ ಬಿಜೆಪಿ ಶಾಸಕ ರಾಜಕುಮಾರ ಪಾಟೀಲ, ಬೆಳಗಾವಿಯಲ್ಲಿ ಬಿಜೆಪಿ ಶಾಸಕರಾದ ಅನಿಲ ಬೆನಕೆ ಹಾಗೂ ಅಭಯ ಪಾಟೀಲ, ದಾವಣಗೆರೆಯಲ್ಲಿ ಸಂಸದ ಜಿ.ಎಂ. ಸಿದ್ದೇಶ್ವರ್‌, ಶಾಸಕರಾದ ಎಸ್‌.ಎ. ರವೀಂದ್ರನಾಥ್‌, ಪ್ರೊ| ಎನ್‌. ಲಿಂಗಣ್ಣ, ವಿಧಾನ ಪರಿಷತ್‌ ಮಾಜಿ ಮುಖ್ಯ ಸಚೇತಕ ಡಾ| ಎ.ಎಚ್‌. ಶಿವಯೋಗಿಸ್ವಾಮಿ, ಬಿಜೆಪಿ ಜಿಲ್ಲಾ ಅಧ್ಯಕ್ಷ ಯಶವಂತರಾವ್‌ ಜಾಧವ್‌ ಒಳಗೊಂಡಂತೆ 42 ಜನ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದು, ನಂತರ ಬಿಡುಗಡೆಗೊಳಿಸಿದರು.

ಬಿಜೆಪಿ ವಿರುದ್ಧ ಜೆಡಿಎಸ್‌ ಪ್ರತಿಭಟನೆ
ಶಹಾಬಾದನಲ್ಲಿ ಅಂಗಡಿ ಮುಂಗಟ್ಟು ತೆರೆದು ವ್ಯಾಪಾರ ಮಾಡಿದ ವ್ಯಾಪಾರಸ್ಥರಿಗೆ ಜೆಡಿಎಸ್‌ ಕಾರ್ಯಕರ್ತರು ಗುಲಾಬಿ ಹೂ ನೀಡಿ ಅವರ ನಡೆ ಸ್ವಾಗತಿಸಿದರು. ಶ್ರೀರಂಗಪಟ್ಟಣದಲ್ಲಿ ಬಿಜೆಪಿ ನಡೆಸಿದ ಪ್ರತಿಭಟನೆಗೆ ಪ್ರತಿಯಾಗಿ ಜೆಡಿಎಸ್‌ ಕಾರ್ಯಕರ್ತರು ಮೋದಿಯವರ ವಿರುದ್ದ ಪ್ರತಿಭಟನೆ ನಡೆಸಿದರು.

Advertisement

Udayavani is now on Telegram. Click here to join our channel and stay updated with the latest news.

Next