ಬೆಂಗಳೂರು : ಕಾನೂನು ವ್ಯಾಪ್ತಿಯಲ್ಲಿ ಎಂಇಎಸ್ ನಿಷೇಧಿಸುವುದಕ್ಕೆ ಕ್ರಮ ತೆಗೆದುಕೊಳ್ಳಬೇಕೇ ಹೊರತು ಬಂದ್ ನಿಂದ ಯಾವುದೇ ಪ್ರಯೋಜನವಿಲ್ಲ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ಚನ್ನಪಟ್ಟಣದಲ್ಲಿ ಸುದ್ದಿಗಾರರ ಜತೆಗೆ ಮಾತನಾಡಿದ ಅವರು, ಡಿ.31ಕ್ಕೆ ಕರ್ನಾಟಕ ಬಂದ್ ಗೆ ಕರೆ ನೀಡಲಾಗಿದೆ. ಆದರೆ ಇದರಿಂದ ಯಾರಿಗೆ ಅನುಕೂಲ , ಯಾರಿಗೆ ಅನನುಕೂಲ ? ಈ ಬಂದ್ ಕರೆಯಿಂದ ಮಹಾರಾಷ್ಟ್ರಕ್ಕೆ ಯಾವುದೇ ನಷ್ಟವಾಗುವುದಿಲ್ಲ. ಆದರೆ ರಾಜ್ಯದ ಜನರಿಗೆ ತೊಂದರೆಯಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಎಂಇಎಸ್ ಸೇರಿದಂತೆ ಕಿಡಿಗೇಡಿ ಕೃತ್ಯ ಎಸಗುವ ಎಲ್ಲ ಸಂಘಟನೆಗಳನ್ನು ನಿಷೇಧ ಮಾಡುವುದಕ್ಕೆ ರಾಜ್ಯ ಸರಕಾರ ಮುಲಾಜಿಲ್ಲದೇ ಕ್ರಮ ತೆಗೆದುಕೊಳ್ಳಬೇಕು. ಬಂದ್‌ನಿಂದ ಕನ್ನಡಿಗರಿಗೆ ತೀರಾ ತೊಂದರೆಯಾಗುತ್ತದೆ. ಸಣ್ಣಪುಟ್ಟ ವ್ಯಾಪಾರಿಗಳು, ಬೀದಿ ಬದಿ ಮಾರಾಟಗಾರರು ನಷ್ಟ ಅನುಭವಿಸುತ್ತಾರೆ. ಕರೆ ನೀಡಿದವರು ಈ ಬಗ್ಗೆಯೂ ಯೋಚಿಸಬೇಕೆಂದು ಸಲಹೆ ನೀಡಿದರು.
ಎಂಇಎಸ್ ನಿಷೇಧ ಮಾಡುವುದಕ್ಕೆ ಕಾನೂನು ರೀತಿಯಲ್ಲಿ ಸರಕಾರ ಕ್ರಮ ತೆಗೆದುಕೊಳ್ಳಬೇಕು. ನ್ಯಾಯಾಲಯಕ್ಕೆ ಹೋಗಿ ತಡೆ ತರುವ ರೀತಿಯಲ್ಲಿ ನಿಷೇಧ ಹೇರಬಾರದು. ಈ ಬಗ್ಗೆ ಸರಕಾರ ಯೋಚಿಸಿ ಕ್ರಮ ತೆಗೆದುಕೊಳ್ಳಲಿ ಎಂದು ಹೇಳಿದರು.
ಬೆಳಗಾವಿಯಲ್ಲಿ ಹತ್ತು ದಿನಗಳ ಕಾಲ ನಡೆದ ಕಲಾಪ ವ್ಯರ್ಥವಾಗಿದೆ. ಜನರು ಎದುರಿಸುತ್ತಿರುವ ಜ್ವಲಂತ ಸಮಸ್ಯೆಗಳ ಬಗ್ಗೆ ಅಲ್ಲಿ ಚರ್ಚೆಯೇ ನಡೆದಿಲ್ಲ. ಮೊದಲ ಐದು ದಿನದ ಕಲಾಪವಂತೂ ಸಂಪೂರ್ಣವಾಗಿ ವ್ಯರ್ಥವಾಗಿದೆ. ಉತ್ತರ ಕರ್ನಾಟಕದ ಬಗ್ಗೆ ಚರ್ಚೆಯೇ ನಡೆದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.