Advertisement

ಪುತ್ತೂರು: ಬಂದ್‌ ಇಲ್ಲ, ಜನಜೀವನ ಎಂದಿನಂತೆ

04:20 AM May 29, 2018 | Karthik A |

ಪುತ್ತೂರು: ಬಂದ್‌ ಇದೆ ಹಾಗೂ ಇಲ್ಲ ಎಂಬ ಬಗ್ಗೆ ಗೊಂದಲದ ನಡುವೆ ಸೋಮವಾರ ಜನಜೀವನ ಸಹಜಸ್ಥಿತಿಯಲ್ಲಿ ಸಾಗಿತು. ಬೆಳಗ್ಗಿನ ಹೊತ್ತು ವಿದ್ಯಾರ್ಥಿಗಳು ಶಾಲಾ- ಕಾಲೇಜುಗಳಿಗೆ ತೆರಳುವುದೇ ಬೇಡವೋ ಎಂಬ ಗೊಂದಲದಲ್ಲಿದ್ದರು. ಇದು ಬಿಟ್ಟರೆ, ಇಡೀ ದಿನ ಸಹಜ ಸ್ಥಿತಿ ಕಂಡುಬಂದಿತು. ಶಾಲಾ- ಕಾಲೇಜುಗಳು ಎಂದಿನಂತೆ ಕಾರ್ಯ ನಿರ್ವಹಿಸಿದ್ದು, ವಿದ್ಯಾರ್ಥಿಗಳು ತರಗತಿಗೆ ಹಾಜರಾದರು. ಬಸ್‌ ಸಂಚಾರದಲ್ಲೂ ಯಾವುದೇ ವ್ಯತ್ಯಯ ಆಗಿಲ್ಲ. ಪುತ್ತೂರಿನಲ್ಲಿ ಸೋಮವಾರ ಸಂತೆಯೂ ಇರುವುದರಿಂದ ಜನದಟ್ಟಣೆ, ವಾಹನದಟ್ಟಣೆ ಹೆಚ್ಚಾಗಿತ್ತು.

Advertisement

ವಿಜಯೋತ್ಸವ ಮುಂದೂಡಿಕೆ
ಪುತ್ತೂರಿನಲ್ಲಿ ಬಿಜೆಪಿ ವಿಜಯೋತ್ಸವವನ್ನು ಸೋಮವಾರ ಆಚರಿಸುವುದೆಂದು ನಿರ್ಧರಿಸಲಾಗಿತ್ತು. ಆದರೆ ಬಂದ್‌ ಬಗ್ಗೆ ಸೂಕ್ತ ನಿರ್ಧಾರ ಕೈಗೊಳ್ಳದೇ ಇರುವುದರಿಂದ ವಿಜಯೋತ್ಸವವನ್ನು ಮಂಗಳವಾರಕ್ಕೆ ಮುಂದೂಡಲಾಗಿತ್ತು. ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಹೇಳಿಕೆ ನೀಡಿದ ಬಳಿಕ, ಪುತ್ತೂರಿನ ಬಿಜೆಪಿ ನಾಯಕರಿಗೂ ಈ ಬಗ್ಗೆ ಖಾತ್ರಿ ಇರಲಿಲ್ಲ. ಆದ್ದರಿಂದ ವಿಜಯೋತ್ಸವವನ್ನು ಮುಂದೂಡುವುದೇ ವಾಸಿ ಎಂಬ ತೀರ್ಮಾನಕ್ಕೆ ಬಂದಿದ್ದರು.


ಸುಳ್ಯ: ಬಂದ್‌ಗೆ ನೀರಸ ಪ್ರತಿಕ್ರಿಯೆ

ಎಚ್‌.ಡಿ. ಕುಮಾರಸ್ವಾಮಿ ನೇತೃತ್ವದ ರಾಜ್ಯ ಸರಕಾರ ರೈತರ ಕೃಷಿ ಸಾಲ ಮನ್ನಾ ಮಾಡುವಂತೆ ಆಗ್ರಹಿಸಿ ಸೋಮವಾರ ರಾಜ್ಯವ್ಯಾಪ್ತಿ ನೀಡಿದ ವಿಪಕ್ಷ ಬಿಜೆಪಿ ಬೆಂಬಲದ ಸ್ವಯಂಪ್ರೇರಿತ ಬಂದ್‌ ಕರೆಗೆ ಸುಳ್ಯದಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು. ಬೆಂಬಲ ವ್ಯಕ್ತಪಡಿಸಿದ್ದ ಬಿಜೆಪಿ, ಶಾಲಾ ಪುನರಾರಂಭದ ದಿನವಾದ ಕಾರಣದಿಂದ ಮಕ್ಕಳಿಗೆ ಅನನುಕೂಲವಾಗುತ್ತದೆ ಎಂದು ಬಂದ್‌ ಚಟುವಟಿಕೆಯಿಂದ ದೂರ ಉಳಿದಿತ್ತು. 

ಬೆಳ್ಳಾರೆ, ಜಾಳ್ಸೂರು, ಗುತ್ತಿಗಾರು, ಪಂಜ ಮೊದಲಾದೆಡೆ ಬಂದ್‌ ಇಲ್ಲದೆ ಎಂದಿನಂತೆ ವ್ಯವಹಾರ ನಡೆಯಿತು. ನಗರ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ಕೆಎಸ್‌ಆರ್‌ಟಿಸಿ ಬಸ್‌, ಇತರೆ ಟೂರಿಸ್ಟ್‌ ವಾಹನಗಳು ಓಡಾಟ ನಡೆಸಿತ್ತು. ಸರಕಾರಿ ಕಚೇರಿ, ಶಾಲೆ, ಇತರೆ ವಾಣಿಜ್ಯ ಆಧಾರಿತ ಅಂಗಡಿ – ಮುಂಗಟ್ಟುಗಳು ತೆರೆದಿದ್ದವು. ಅರಂತೋಡಿನಲ್ಲಿ ಸಾಂಕೇತಿಕ ಪ್ರತಿಭಟನೆ ನಡೆದರೆ, ಬಿಜೆಪಿ ಕಾರ್ಯಕರ್ತರು ಕೊಡಗು-ದ.ಕ. ಗಡಿಭಾಗದ ಸಂಪಾಜೆ ಗೇಟನ್ನು ಕೆಲ ಕಾಲ ಬಂದ್‌ ಮಾಡಿ ಬಂದ್‌ಗೆ ಬೆಂಬಲ ಸೂಚಿಸಿದರು.

ಸುಬ್ರಹ್ಮಣ್ಯ: ಪರಿಣಾಮ ಬೀರದ ಬಿಜೆಪಿ ಬಂದ್‌ ಕರೆ
ರಾಜ್ಯ ಸರಕಾರ ರೈತರ ಕೃಷಿ ಸಾಲ ಮನ್ನಾ ಮಾಡಬೇಕೆಂದು ಒತ್ತಾಯಿಸಿ ಬಿಜೆಪಿ ರಾಜ್ಯಾದ್ಯಂತ ಸೋಮವಾರ ನೀಡಿದ ಸ್ವಯಂಪ್ರೇರಿತ ಬಂದ್‌ ಕರೆಗೆ ಪುಣ್ಯ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಯಾವುದೇ ಪ್ರತಿಕ್ರಿಯೆ ಕಂಡುಬಂದಿಲ್ಲ. ಕ್ಷೇತ್ರದಲ್ಲಿ ಜನಜೀವನ ಎಂದಿನಂತೆ ಇತ್ತು. ಭಕ್ತರ ಸಂಖ್ಯೆ ಸಹಜ ಸ್ಥಿತಿಯಲ್ಲೆ ಕಂಡು ಬಂತು. ಸಾರಿಗೆ ಬಸ್‌, ಖಾಸಗಿ ವಾಹನಗಳು ಓಡಾಟ ನಡೆಸಿದವು. ಸರಕಾರಿ ಕಚೇರಿಗಳು ತೆರೆದಿದ್ದವು. ಜನಸಾಮಾನ್ಯರ ಮೇಲೆ ಬಂದ್‌ ಕರೆ ಯಾವುದೇ ಪ್ರಭಾವ ಬೀರಿಲ್ಲ.

Advertisement
Advertisement

Udayavani is now on Telegram. Click here to join our channel and stay updated with the latest news.

Next