Advertisement

ಕೃಷಿ ಮಸೂದೆ ಅಂಗೀಕಾರ ! ನಾಳೆ ರೈತ ಸಂಘಟನೆಗಳಿಂದ ರಾಜ್ಯ ಬಂದ್‌

12:13 AM Sep 27, 2020 | sudhir |

ಬೆಂಗಳೂರು: ರೈತ ಸಂಘಟನೆಗಳು ಮತ್ತು ವಿಪಕ್ಷಗಳ ವಿರೋಧದ ನಡುವೆಯೇ ರಾಜ್ಯ ಸರಕಾರವು ಭೂಸುಧಾರಣೆ ತಿದ್ದುಪಡಿ ಕಾಯ್ದೆ ಮತ್ತು ಎಪಿಎಂಸಿ ತಿದ್ದುಪಡಿ ಕಾಯ್ದೆಗಳನ್ನು ಅಂಗೀಕರಿಸಿದೆ.

Advertisement

ಈ ಎರಡೂ ಕಾಯ್ದೆಗಳನ್ನು ವಿರೋಧಿಸುತ್ತಿರುವ ರೈತ ಸಂಘಟನೆಗಳು ಈಗಾಗಲೇ ರಾಜ್ಯಾದ್ಯಂತ ಪ್ರತಿಭಟನೆ ನಡೆಸುತ್ತಿದ್ದು, ಸೋಮವಾರ ರಾಜ್ಯ ಬಂದ್‌ಗೆ ಕರೆ ನೀಡಿವೆ. ಇದು ರೈತರ ಮರಣ ಶಾಸನ ಎಂದು ಆರೋಪಿಸಿದ ಕಾಂಗ್ರೆಸ್‌ ಸದಸ್ಯರು ಮಸೂದೆಯ ಪ್ರತಿಯನ್ನು ಹರಿದು ಹಾಕಿದರಲ್ಲದೆ, ಸಭಾತ್ಯಾಗ ಮಾಡಿ ಆಕ್ರೋಶ ವ್ಯಕ್ತಪಡಿಸಿದರು. ಇದರ ಹಿಂದೆಯೇ ಜೆಡಿಎಸ್‌
ಸದಸ್ಯರೂ ಸಭಾತ್ಯಾಗ ಮಾಡಿದರು.

ಪರ-ವಿರೋಧ ಚರ್ಚೆ
ಮಸೂದೆ ಮಂಡಿಸಿದ ಕಂದಾಯ ಸಚಿವ ಆರ್‌. ಅಶೋಕ್‌, ರೈತರಿಗೆ ಇದರಿಂದ ಯಾವುದೇ ಕಾರಣಕ್ಕೂ ತೊಂದರೆಯಾಗದು ಎಂದರು. ಆದರೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು, ಭೂ ಸುಧಾರಣೆ ತಿದ್ದುಪಡಿ ಕಾಯ್ದೆಗೆ ರೈತರ ಸಹಿತ ಬಹುತೇಕರ ವಿರೋಧವಿದೆ. ಯಾವ ಉದ್ದೇಶಕ್ಕಾಗಿ ಭೂ ಸುಧಾರಣೆಗಳ ಕಾಯ್ದೆಯನ್ನು ದೇವರಾಜ ಅರಸು ಅವರು ತಂದಿದ್ದರೋ ಆ ಮೂಲ ಆಶಯಕ್ಕೆ ಇದು ವಿರುದ್ಧವಾಗಿದೆ. ಇದರ ಹಿಂದೆ ಬೇರೆಯದೇ ಉದ್ದೇಶವಿದೆ ಎಂದು ಆರೋಪಿಸಿದರು.

ಜೆಡಿಎಸ್‌ ಸಹಮತ
ಅಚ್ಚರಿ ಬೆಳವಣಿಗೆಯಲ್ಲಿ ಈ ಮಸೂದೆಗೆ ಜೆಡಿಎಸ್‌ ಸಹಮತ ವ್ಯಕ್ತಪಡಿಸಿತು. ಆದರೆ ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿ ಅವರು ಮಾತನಾಡಿ, ಈ ಮಸೂದೆಯನ್ನು ಕೊರೊನಾ ಸಂದರ್ಭದಲ್ಲಿ ಅಧ್ಯಾದೇಶ ಮೂಲಕ ತಂದ ಅಗತ್ಯದ ಬಗ್ಗೆ ಪ್ರಶ್ನಿಸಿದರು. ಜಮೀನು ಖರೀದಿ ಮಿತಿ ಹೆಚ್ಚು ಮಾಡಿರುವುದರಿಂದ ಮತ್ತೆ ಜಮೀನ್ದಾರಿ ಪದ್ಧತಿಯತ್ತ ಹೋಗುವಂತಾಗುತ್ತದೆ ಎಂದು ಹೇಳಿದರಾದರೂ ಇದರಿಂದ ರೈತರಿಗೆ ಎಷ್ಟು ಅನುಕೂಲ ಎಂಬ ಬಗ್ಗೆ ಪರಿಶೀಲನೆ ನಡೆಸಿ ಎಂದು ಸಲಹೆ ನೀಡಿದರು .
“ನನ್ನ ಬೆಳೆ, ನನ್ನ ಹಕ್ಕು’ ತಿದ್ದುಪಡಿ ಮಸೂದೆಯಂತೆ ರೈತರು ತಾವು ಬೆಳೆದ ಬೆಳೆಗಳನ್ನು “ನನ್ನ ಬೆಳೆ ನನ್ನ ಹಕ್ಕು’ ಎಂಬಂತೆ ಮುಕ್ತ ಮಾರುಕಟ್ಟೆಯಲ್ಲಿ ಮಾರಾಟ ಮಾಡಬಹುದು ಎಂದು ಸಹ ಕಾರ ಸಚಿವ ಎಸ್‌.ಟಿ. ಸೋಮಶೇಖರ್‌ ವಿವರಣೆ ನೀಡಿದರು.

ನಾಳೆ ಬಂದ್‌
ಮಸೂದೆಗಳಿಗೆ ಒಪ್ಪಿಗೆ ಸಿಕ್ಕಿರುವಂತೆಯೇ ರೈತರ ಆಕ್ರೋಶವೂ ಹೆಚ್ಚಾಗಿದೆ. ಸೋಮವಾರ ನಡೆಯಲಿರುವ ಕರ್ನಾಟಕ ಬಂದ್‌ಗೆ ರಾಜ್ಯದ ಜನ ಸಂಪೂರ್ಣ ಸಹಕಾರ ನೀಡಬೇಕು ಎಂದು ಐಕ್ಯ ಹೋರಾಟ ವೇದಿಕೆ ಮುಖಂಡರು ಮನವಿ ಮಾಡಿದ್ದಾರೆ.
ಬಂದ್‌ಗೆ ಕಬಿನಿ ರೈತ ಹಿತರಕ್ಷಣ ಸಮಿತಿ, ರಾಜ್ಯ ಕೃಷಿ ಪಂಪ್‌ಸೆಟ್‌ ಬಳಕೆದಾರರ ಸಂಘ, ಮಹಾದಾಯಿ ನೀರು ಹೋರಾಟ ಸಮಿತಿ, ಕರ್ನಾಟಕ ರಕ್ಷಣ ವೇದಿಕೆ ಸಹಿತ ಹಲವು ರೈತ ಸಂಘಟನೆಗಳು ಮತ್ತು ಕನ್ನಡಪರ ಸಂಘಟನೆಗಳು ಬೆಂಬಲ ನೀಡಿವೆ.

Advertisement

ಕರಾವಳಿಯಲ್ಲೂ ಬೆಂಬಲ
ಸೋಮವಾರ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ವಿವಿಧೆಡೆ ಪ್ರತಿಭಟನ ಸಭೆ, ಮೆರವಣಿಗೆ, ರಸ್ತೆ ತಡೆ ನಡೆಯಲಿದೆ. ಬಸ್‌ ಸಂಚಾರ ನಿಲ್ಲಿಸುವ ಬಗ್ಗೆ ಸೂಚನೆ ಬಂದಿಲ್ಲ ಎಂದು ಕೆಎಸ್ಸಾರ್ಟಿಸಿ ಅಧಿಕಾರಿಗಳು ತಿಳಿಸಿದ್ದಾರೆ. ಖಾಸಗಿ ಬಸ್‌ ಸಂಚಾರ ಇರಲಿದೆ ಎಂದು ದ.ಕ. ಬಸ್‌ ಮಾಲಕರ ಸಂಘ ತಿಳಿಸಿದೆ.

ಏನೆಲ್ಲ ಇರುತ್ತವೆ?
ಆಸ್ಪತ್ರೆ, ಔಷಧ ಮಳಿಗೆ, ಹಣ್ಣು , ತರಕಾರಿ, ಹಾಲು ದಿನಪತ್ರಿಕೆ, ಹೊಟೇಲ್‌, ಲಾರಿಗಳ ಸಂಚಾರ, ಟ್ಯಾಕ್ಸಿ ಗಳು, ಪ್ರವಾಸಿ ವಾಹನಗಳು, ಕೆಎಸ್ಸಾರ್ಟಿಸಿ ಬಸ್‌ ಸಂಚಾರ, ಮೆಟ್ರೋ.

ಯಾವುದು ಇಲ್ಲ?
ಎಪಿಎಂಸಿ ಮಾರುಕಟ್ಟೆ, ಸಿಟಿ ಮಾರುಕಟ್ಟೆ, ರಸ್ತೆ ಬದಿ ವ್ಯಾಪಾರ, ಓಲಾ, ಉಬರ್‌.

Advertisement

Udayavani is now on Telegram. Click here to join our channel and stay updated with the latest news.

Next