ಬೆಂಗಳೂರು: ವಿಧಾನಮಂಡಲ ಅಧಿವೇಶನ ಸಂದರ್ಭ ಸದನದ ಒಳಗೆ ಮತ್ತು ಹೊರಗೆ ವಿಭಿನ್ನ ಹೋರಾಟ ನಡೆಸುವ ಸಂಬಂಧ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹಿರಿಯ ಶಾಸಕರ ಸಭೆ ನಡೆಸಿ ಚರ್ಚಿಸಿದರು.
ಮಂಗಳವಾರ ಕೆಪಿಸಿಸಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ, ಬಿಟ್ ಕಾಯಿನ್ ಹಗರಣ, ಶೇ. 40 ಪರ್ಸೆಂಟ್, ಹಿಜಾಬ್-ಕೇಸರಿ ಶಾಲು ವಿವಾದ ನಿರ್ವಹಣೆಯಲ್ಲಿ ವಿಫಲ, ಶಾಸಕರ ಕ್ಷೇತ್ರಗಳಿಗೆ ಅನುದಾನ ತಾರತಮ್ಯ, ರಾಷ್ಟ್ರಧ್ವಜ ಕುರಿತು ಸಚಿವ ಕೆ.ಎಸ್. ಈಶ್ವರಪ್ಪ ಹೇಳಿಕೆ ವಿಷಯದಲ್ಲಿ ನಿರಂತರ ಹೋರಾಟ ನಡೆಸಲು ಹಿರಿಯರ ಸಲಹೆ ಪಡೆಯಲಾ ಯಿತು. ರಾಮನಗರದಲ್ಲಿ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾ ಗಿರುವ ಮೇಕೆದಾಟು ಪಾದಯಾತ್ರೆ ಪುನರಾರಂಭದ ಬಗ್ಗೆಯೂ ಪ್ರಸ್ತಾವವಾಯಿತು. ಅಧಿವೇಶನ ಮುಗಿದ ಅನಂತರ ದಿನಾಂಕ ನಿಗದಿ ಮಾಡಿದರೆ ಸೂಕ್ತ ಎಂಬ ಅಭಿಪ್ರಾಯ ವ್ಯಕ್ತವಾಯಿತು.
ನಿಲುವಳಿ ಮಂಡಿಸುವ ಮೂಲಕ ಉಭಯ ಸದನಗಳಲ್ಲಿ ಚರ್ಚೆಗೆ ಪಟ್ಟು ಹಿಡಿದು ಅವಕಾಶ ಸಿಗದಿದ್ದರೆ ಪ್ರತಿಭಟನೆ, ಅಹೋರಾತ್ರಿ ಧರಣಿ, ಸದನದ ಹೊರಗೂ ಹೋರಾಟ ನಡೆಸುವ ಮೂಲಕ ಸರಕಾರದ ವೈಫಲ್ಯದ ವಿರುದ್ಧ ಪರಿಣಾಮಕಾರಿ ಹೋರಾಟ ಮಾಡೋಣ ಎಂದು ಸಭೆಯಲ್ಲಿ ಡಿ.ಕೆ. ಶಿವಕುಮಾರ್ ಹೇಳಿದರು.
ಇದನ್ನೂ ಓದಿ:ರಾಜ್ಯಾದ್ಯಂತ 1,405 ಕೋವಿಡ್ ಹೊಸ ಪ್ರಕರಣ ಪತ್ತೆ: 26 ಮರಣ ದಾಖಲು
ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ, ಪರಿಷತ್ ಪ್ರತಿಪಕ್ಷ ನಾಯಕ ಬಿ.ಕೆ. ಹರಿಪ್ರಸಾದ್, ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ. ಪಾಟೀಲ್, ಕಾರ್ಯಾಧ್ಯಕ್ಷರಾದ ರಾಮಲಿಂಗಾರೆಡ್ಡಿ, ಈಶ್ವರ ಖಂಡ್ರೆ, ಸಲೀಂ ಅಹಮದ್, ಧ್ರುವನಾರಾಯಣ, ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ, ಕೇಂದ್ರದ ಮಾಜಿ ಸಚಿವ ಕೆ.ಎಚ್. ಮುನಿಯಪ್ಪ, ರೆಹಮಾನ್ ಖಾನ್, ಮಾಜಿ ಸಚಿವರಾದ ಎಚ್.ಕೆ. ಪಾಟೀಲ್ ಸಭೆಯಲ್ಲಿ ಪಾಲ್ಗೊಂಡಿದ್ದರು.