ಬೆಂಗಳೂರು: ಸೋಮವಾರ ಆರಂಭವಾಗುವ ಅಧಿವೇಶನದಲ್ಲಿ ಅಗತ್ಯ ವಸ್ತುಗಳ ಬೆಲೆ ಏರಿಕೆ, ಪ್ರವಾಹ ಸಂತ್ರಸ್ತರಿಗೆ ಪರಿಹಾರ ವಿಳಂಬ, ವರ್ಗಾವಣೆ ದಂಧೆ ಕುರಿತು ಪ್ರಸ್ತಾವಿಸುವುದಾಗಿ ವಿಪಕ್ಷ ಕಾಂಗ್ರೆಸ್ ಘೋಷಿಸಿದ್ದು, ಆಡಳಿತ ಮತ್ತು ವಿಪಕ್ಷಗಳ ನಡುವೆ ಗಂಭೀರ ಚರ್ಚೆಗೆ ಸದನ ವೇದಿಕೆಯಾಗುವ ಲಕ್ಷಣಗಳು ಕಂಡುಬರುತ್ತಿವೆ. ಈ ನಡುವೆ ಜೆಡಿಎಸ್ ನಡೆ ಕುತೂಹಲ ಮೂಡಿಸಿದೆ.
ಗದ್ದಲ, ಕೋಲಾಹಲ ನಿರೀಕ್ಷೆ :
ವಿಪಕ್ಷ ಕಾಂಗ್ರೆಸ್‌ಗೆ ತಿರುಗೇಟು ನೀಡಲು ಆಡಳಿತಾರೂಢ ಬಿಜೆಪಿ ಹಲವು ಕಾರ್ಯತಂತ್ರಗಳೊಂದಿಗೆ ಸಜ್ಜಾಗಿದೆ. ಸೋಮವಾರ ಸಂಜೆ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ನಡೆಯಲಿದ್ದು, ಅಧಿವೇಶನದಲ್ಲಿ ವಿಪಕ್ಷ ಗಳ ಪ್ರಸ್ತಾವಗಳಿಗೆ ಹೇಗೆ ಸೂಕ್ತ ಉತ್ತರ ನೀಡಬೇಕು ಎಂಬ ಬಗ್ಗೆ ಚರ್ಚೆಯಾಗಲಿದೆ. ಜೆಡಿಎಸ್ ಶಾಸಕಾಂಗ ಪಕ್ಷದ ಸಭೆಯೂ ಸೋಮವಾರ ಸಂಜೆ ನಡೆಯಲಿದೆ.
ವಿಧಾನಮಂಡಲದ ಅಧಿವೇಶನದಲ್ಲಿ ಕಾಂಗ್ರೆಸ್ ಎತ್ತಲಿರುವ ವಿಷಯಗಳಿಗೆ ಜೆಡಿಎಸ್ ಬೆಂಬಲ ನೀಡಲಿದೆಯೇ ಇಲ್ಲವೇ ಎಂಬುದು ಕುತೂಹಲ ಮೂಡಿಸಿದೆ.
ಸೆ. 13ರಿಂದ 24ರ ವರೆಗೆ ನಡೆಯುವ ಅಧಿವೇಶನದಲ್ಲಿ ಕೊಳಚೆ ಪ್ರದೇಶಗಳ ಭೂಕಬಳಿಕೆ ವಿರುದ್ಧ ಕ್ರಮಕ್ಕೆ ತಿದ್ದುಪಡಿ ಮಸೂದೆ, ಬಿಡಬ್ಲ್ಯುಎಸ್‌ಎಸ್‌ಬಿ ತಿದ್ದುಪಡಿ, ಪೌರಸಭೆ, ಶಿಕ್ಷಕರ ವರ್ಗಾವಣೆ ನಿಯಮ ಮಸೂದೆ ಮತ್ತು 4 ಅಧ್ಯಾದೇಶ ಸಹಿತ 18 ಮಸೂದೆಗಳ ಮಂಡನೆಗೆ ಸರಕಾರ ಸಿದ್ಧವಾಗಿದೆ. 6 ತಿಂಗಳ ಬಳಿಕ ಅಧಿವೇಶನ ನಡೆ ಯುತ್ತಿದ್ದು, ಕೊರೊನಾದಿಂದಾಗಿ ಸಾಕಷ್ಟು ಮುನ್ನೆಚ್ಚರಿಕೆ ಕೈಗೊಳ್ಳಲಾಗಿದೆ.
ಜಂಟಿ ಅಧಿವೇಶನ: ಈ ಬಾರಿಯ ಅಧಿವೇಶನದ ಕೊನೆಯ ಒಂದು ದಿನ ಜಂಟಿ ಅಧಿವೇಶನ ನಡೆಸಲು ತೀರ್ಮಾನಿಸಲಾ ಗಿದೆ. ಇತ್ತೀಚಿನ ದಿನಗಳಲ್ಲಿ ರಾಜ್ಯ ಸಭೆ ಮತ್ತು ವಿಧಾನಸಭೆಗಳಲ್ಲಿ ನಡೆಯು ತ್ತಿರುವ ಗದ್ದಲಗಳ ಹಿನ್ನೆಲೆಯಲ್ಲಿ ಸಂಸದೀಯ ಮೌಲ್ಯಗಳ ಕುರಿತು ಜಂಟಿ ಅಧಿವೇಶನ ನಡೆಯಲಿದೆ. ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರನ್ನು ಜಂಟಿ ಅಧಿವೇಶನ ಉದ್ದೇಶಿಸಿ ಮಾತನಾಡಲು ಆಹ್ವಾನಿಸಲಾಗಿದೆ.
ಎತ್ತಿನ ಗಾಡಿಯೇರಿ ಬರಲಿದ್ದಾರೆ ಸಿದ್ದು, ಡಿಕೆಶಿ:
ಅಗತ್ಯ ವಸ್ತುಗಳ ಬೆಲೆ ಏರಿಕೆ ವಿಚಾರವನ್ನು ಅಧಿವೇಶನದಲ್ಲಿ ಪ್ರಸ್ತಾವಿಸಲು ತೀರ್ಮಾನಿಸಿರುವ ಕಾಂಗ್ರೆಸ್, ಎತ್ತಿನಗಾಡಿ ಚಲೋ ಚಳವಳಿಗೆ ಮುಂದಾಗಿದೆ. ಸೋಮವಾರ ಅಧಿವೇಶನಕ್ಕೆ ವಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಎತ್ತಿನ ಗಾಡಿಯಲ್ಲಿ ಬರಲಿದ್ದಾರೆ. ಬೆಂಗಳೂರಿನಲ್ಲಿರುವ ಕಾಂಗ್ರೆಸ್ ಶಾಸಕರು, ವಿಧಾನಪರಿಷತ್ ಸದಸ್ಯರು ಕೂಡ ಇದೇ ರೀತಿ ಬೆಲೆ ಏರಿಕೆ ವಿರುದ್ಧ ಪ್ರತಿಭಟನೆ ಮಾಡಲಿದ್ದಾರೆ ಎಂದು ತಿಳಿದು ಬಂದಿದೆ.