Advertisement

ಉಡುಪಿ: ಶ್ರೀಕೃಷ್ಣನ ನಾಡಿನಲ್ಲಿ ಬಿಗ್‌ ಫೈಟ್‌ ನಿರೀಕ್ಷೆ

06:00 AM Apr 13, 2018 | Team Udayavani |

ಉಡುಪಿ: ಶಿಕ್ಷಣ, ಬ್ಯಾಂಕಿಂಗ್‌, ಆರೋಗ್ಯ,ಧಾರ್ಮಿಕ ಮತ್ತು ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ವಿಶ್ವಮಾನ್ಯವೆನಿಸಿರುವ ಉಡುಪಿಯು ರಾಜ ಕೀಯವಾಗಿಯೂ ಸಾಕಷ್ಟು ಗಮನ ಸೆಳೆದಿದೆ.

Advertisement

ಪ್ರಸ್ತುತ ನಗರಸಭೆಯ 35 ವಾರ್ಡ್‌ಗಳುಮತ್ತು 18 ಗ್ರಾ.ಪಂ.ಗಳು ಕ್ಷೇತ್ರದ ವ್ಯಾಪ್ತಿಯ ಲ್ಲಿವೆ. 2008ರ ಕ್ಷೇತ್ರ ಪುನರ್ವಿಂಗಡನೆ ಅನಂತರ ಹಿರಿಯಡಕ ಮತ್ತು ಉದ್ಯಾವರ ಭಾಗಗಳು ಕಾಪು ಕ್ಷೇತ್ರಕ್ಕೆ ಸೇರ್ಪಡೆಯಾದವು. ಈ ಹಿಂದೆ ಕ್ಷೇತ್ರವಾಗಿದ್ದ ಬ್ರಹ್ಮಾವರದ ಹಲವಾರು ಗ್ರಾಮಾಂತರ ಪ್ರದೇಶಗಳು ಉಡುಪಿ ಕ್ಷೇತ್ರದ ವ್ಯಾಪ್ತಿಗೆ ಬಂದವು. ಪೂರ್ವ, ಪಶ್ಚಿಮ, ದಕ್ಷಿಣದಲ್ಲಿ ನಗರಸಭೆ, ಉತ್ತರದಲ್ಲಿ ಕೊಕ್ಕರ್ಣೆ ಕ್ಷೇತ್ರದ ಗಡಿ ಭಾಗಗಳು.

ಉಡುಪಿ ವಿಧಾನಸಭಾ ಕ್ಷೇತ್ರದಲ್ಲಿ 1970ರ ದಶಕದ ವರೆಗೂ ಕಾಂಗ್ರೆಸ್‌ ಮತ್ತು ಪ್ರಜಾ ಸೋಶಿಯಲಿಸ್ಟ್‌ ಪಾರ್ಟಿ ನಡುವೆ ಸ್ಪರ್ಧೆ ಇತ್ತು. ಅನಂತರ ಜನಸಂಘ, ಜನತಾ ಪರಿವಾರಗಳು ಕಣಕ್ಕಿಳಿದವು. 1980ರ ಅನಂತರ ಕಾಂಗ್ರೆಸ್‌ ಮತ್ತು ಬಿಜೆಪಿ ನಡುವೆ ಪೈಪೋಟಿ ಬೆಳೆಯಿತು.

1957ರಲ್ಲಿ ಪಿಎಸ್‌ಪಿಯ ಉಪೇಂದ್ರ ನಾಯಕ್‌ (ಮತ 17,598) ಅವರು ಕಾಂಗ್ರೆಸ್‌ನ ಪಿ.ವಿ. ಆಚಾರ್‌ (13,291) ಅವರ ವಿರುದ್ಧ ಗೆಲುವು ಸಾಧಿಸಿ ದ್ದರು. 1962ರಲ್ಲಿ ಕಾಂಗ್ರೆಸ್‌ನ ಮಲ್ಪೆ ಮಧ್ವರಾಜ್‌ (17,511) ಅವರು ಪಿಎಸ್‌ಪಿಯ ಉಪೇಂದ್ರ ನಾಯಕ್‌ (8,003) ವಿರುದ್ಧ ಗೆಲುವು ಸಾಧಿಸಿ ದ್ದರು. 1967ರಲ್ಲಿ ಕಾಂಗ್ರೆಸ್‌ನ ಎಸ್‌.ಕೆ. ಅಮೀನ್‌ (11,737) ಪಿಎಸ್‌ಪಿಯ ಯು.ಎಸ್‌. ನಾಯಕ್‌ 
(10,611) ವಿರುದ್ಧ ಗೆಲುವು ಸಾಧಿಸಿದ್ದರು.

ದೀರ್ಘ‌ ಕಾಲ ಪ್ರತಿನಿಧಿಸಿದ್ದ ಮನೋರಮಾ
ಮನೋರಮಾ ಮಧ್ವರಾಜ್‌ 1972ರಲ್ಲಿ ಚುನಾವಣಾ ಕಣಕ್ಕಿಳಿದರು. ಅನಂತರ ಹಲವು ವರ್ಷಗಳ ಕಾಲ ಜನಪ್ರತಿನಿಧಿಯಾಗಿದ್ದರು. ಮಂತ್ರಿ ಪದವಿ ಕೂಡ ಅಲಂಕರಿಸಿದ್ದರು. ಇದೇ ಅವಧಿ ಯಲ್ಲಿ ಡಾ| ವಿ.ಎಸ್‌. ಆಚಾರ್ಯ ಅವರ ವಿಧಾನ ಸಭಾ ಚುನಾವಣೆಯ ರಾಜಕೀಯ ಆರಂಭವಾಯಿತು. 1972ರಲ್ಲಿ ಕಾಂಗ್ರೆಸ್‌ನ ಮನೋರಮಾ ಮಧ್ವರಾಜ್‌ (26,020) ಜನಸಂಘದ ಡಾ| ವಿ.ಎಸ್‌. ಆಚಾರ್ಯ(11,076) ಎದುರು ಗೆಲುವು ಸಾಧಿಸಿದರು. 1978ರಲ್ಲಿ ಮನೋರಮಾ ಮಧ್ವರಾಜರು (30,899) ಅವರು ಜನತಾ ಪಾರ್ಟಿಯ ಶ್ರೀಧರ ಎಂ. ಕಲ್ಮಾಡಿ (22,819) ಅವರನ್ನು ಸೋಲಿಸಿದರು. 1983ರಲ್ಲಿ ಬಿಜೆಪಿಯ ಡಾ| ವಿ.ಎಸ್‌. ಆಚಾರ್ಯ (26,385) ಕಾಂಗ್ರೆಸ್‌ನ ಮನೋರಮಾ ಮಧ್ವರಾಜ್‌ (23,146), ಅವರ ವಿರುದ್ಧ ಗೆಲುವು ಪಡೆದರು. 1985ರಲ್ಲಿ ಮತ್ತೆ ಮನೋರಮಾ ಮಧ್ವರಾಜರು (38,162) ಬಿಜೆಪಿಯ ಡಾ| ವಿ.ಎಸ್‌. ಆಚಾರ್ಯ (22,221) ಅವರನ್ನು ಸೋಲಿಸಿದರು. 1989ರಲ್ಲಿ ಮನೋರಮಾ (29,490) ಪಕ್ಷೇತರ ಯು.ಆರ್‌. ಸಭಾಪತಿ (28,705) ಅವರನ್ನು ಸೋಲಿಸಿದರು. 1994ರಲ್ಲಿ ಕೆಸಿಪಿಯ ಯು.ಆರ್‌. ಸಭಾಪತಿ (29,649) ಅವರು ಮನೋರಮಾ ಮಧ್ವರಾಜ್‌ (24,831) ಅವರನ್ನು ಸೋಲಿಸಿ ಗೆಲುವು ಪಡೆದರು. 1999ರಲ್ಲಿ ಕಾಂಗ್ರೆಸ್‌ನ ಸಭಾಪತಿ ಅವರು (41,018), ಬಿಜೆಪಿಯ ಬಿ. ಸುಧಾಕರ ಶೆಟ್ಟಿ (40,308) ವಿರುದ್ಧ ಗೆಲುವು ಸಾಧಿಸಿದರು. 2004ರಲ್ಲಿ ಬಿಜೆಪಿಯ ಕೆ. ರಘುಪತಿ ಭಟ್‌ (36,341) ಕಾಂಗ್ರೆಸ್‌ನ ಯು.ಆರ್‌. ಸಭಾಪತಿ (34,808) ವಿರುದ್ಧ ಗೆಲುವು ಸಾಧಿಸಿದರು. 2008ರಲ್ಲಿ ಬಿಜೆಪಿಯ ಕೆ. ರಘುಪತಿ ಭಟ್‌ ಪುನರಾಯ್ಕೆಯಾದರು. 2013ರಲ್ಲಿ ಪ್ರಮೋದ್‌ ಮಧ್ವರಾಜ್‌(ಕಾಂಗ್ರೆಸ್‌) ಮೊದಲ ಬಾರಿಗೆ ಶಾಸಕರಾದರು. ಉಡುಪಿ ಯಲ್ಲಿ ಕಾಂಗ್ರೆಸ್‌ ಮತ್ತೆ ವಿಜೃಂಭಿಸಿತು.

Advertisement

ಹ್ಯಾಟ್ರಿಕ್‌ ತಪ್ಪಿಸಿಕೊಂಡಿದ್ದ ಭಟ್‌
ಬಿಜೆಪಿಯ ಕೆ. ರಘುಪತಿ ಭಟ್‌ 2004 ಮತ್ತು 2008ರ ವಿಧಾನಸಭಾ ಚುನಾ ವಣೆಯಲ್ಲಿ ಗೆದ್ದಿದ್ದರು. 2013ರಲ್ಲಿ ಸ್ಪರ್ಧೆಯಿಂದ ಹಿಂಜರಿದ ಕಾರಣ ಸುಧಾಕರ ಶೆಟ್ಟಿ ಬಿಜೆಪಿಯ ಅಭ್ಯರ್ಥಿ ಯಾದರು. ಭಟ್‌ ಅವರ ಹ್ಯಾಟ್ರಿಕ್‌ ಗೆಲುವಿನ ಪ್ರಯತ್ನ ತಪ್ಪಿಹೋಯಿತು. ಈ ಬಾರಿ ಕಾಂಗ್ರೆಸ್‌ ಮತ್ತು ಬಿಜೆಪಿ ಪಕ್ಷಗಳ ನಡುವೆ ನೇರ ಮುಖಾಮುಖೀ ಎಂದೇ ಹೇಳಲಾದರೂ ಜೆಡಿಎಸ್‌ ಕೂಡ ಕಠಿನ ಸ್ಪರ್ಧೆ ಒಡ್ಡಲಿದೆ ಎಂಬ ವಿಶ್ವಾಸ ಜೆಡಿಎಸ್‌ ಜಿಲ್ಲಾ ನಾಯಕರದ್ದು. ಕಾಂಗ್ರೆಸ್‌ನಿಂದ ಪ್ರಮೋದ್‌ ಮಧ್ವರಾಜ್‌ ಅವರೇ ಮತ್ತೂಮ್ಮೆ ಸ್ಪರ್ಧಿಸುವುದು ಖಚಿತ ವಾಗಿದೆ. ಜೆಡಿಎಸ್‌ ಗಂಗಾಧರ ಭಂಡಾರಿ ಬಿರ್ತಿ ಅವರನ್ನು ಕಣಕ್ಕಿಳಿಸಿದೆ. ಬಿಜೆಪಿ ಉಡುಪಿಯಲ್ಲಿ ತನ್ನ ಪಾರಮ್ಯವನ್ನು ಮತ್ತೂಮ್ಮೆ ಗಳಿಸುವ ಹಠದಲ್ಲಿದ್ದರೆ ಕಾಂಗ್ರೆಸ್‌ ಯಾವ ಕಾರಣಕ್ಕೂ ಕ್ಷೇತ್ರ ಬಿಟ್ಟು ಕೊಡೆ ಎಂದು ತೊಡೆ ತಟ್ಟುತ್ತಿದೆ.  ಜೆಡಿಎಸ್‌ ಕೂಡ ಪ್ರಚಾರಕ್ಕೆ ಆದ್ಯತೆ ನೀಡಿದೆ. ಕಾಂಗ್ರೆಸ್‌ ಹಾಲಿ ಶಾಸಕರು ಮತ್ತು ಬಿಜೆಪಿಯ ಮಾಜಿ ಶಾಸಕರ ರಾಜಕೀಯೇತರ ವಿಚಾರಗಳು ಕೂಡ ಚುನಾವಣೆ ಸಂದರ್ಭ ಮುನ್ನೆಲೆಗೆ ಬಂದಿವೆ.

ಧುರೀಣರ ಕ್ಷೇತ್ರ 
ಉಡುಪಿಯ ಪ್ರಥಮ ಶಾಸಕ ಟಿ.ಎ. ಪೈ ಅವರು ಬಳಿಕ ಕೇಂದ್ರ ಸಂಪುಟದಲ್ಲಿ ಮಹತ್ವದ ಸ್ಥಾನ ಪಡೆದಿದ್ದರು. ನಾಲ್ಕು ಬಾರಿ ಗೆಲುವು ಸಾಧಿಸಿದ್ದ ಮನೋರಮಾ ಮಧ್ವರಾಜ್‌ ಬಹುಕಾಲ ಸಚಿವರಾಗಿದ್ದರು. 1983ರಲ್ಲಿ ಶಾಸಕ ರಾಗಿದ್ದ ಡಾ| ವಿ.ಎಸ್‌. ಆಚಾರ್ಯ ಇತ್ತೀಚಿನ ವರ್ಷಗಳಲ್ಲಿ ವಿಧಾನ ಪರಿಷತ್‌ ಸದಸ್ಯರಾಗಿ ಪ್ರಭಾವೀ ಸಚಿವ ಪದವಿ ಹೊಂದಿದ್ದರು. ಉಡುಪಿ ಲೋಕಸಭೆಯಿಂದ ಸತತ ಗೆಲುವು ಪಡೆದಿದ್ದ ಆಸ್ಕರ್‌ ಫೆರ್ನಾಂಡಿಸ್‌ ರಾಷ್ಟ್ರದಲ್ಲಿ ಪ್ರಮುಖ ಸ್ಥಾನ ಅಲಂಕರಿಸಿದ ವ್ಯಕ್ತಿ.

“ಬಿಜೆಪಿ ಗೇಟ್‌’, “ಶೀರೂರು ಶ್ರೀ ಫೈಟ್‌’
ಈ ಬಾರಿ ಚುನಾವಣೆ ಘೋಷಣೆಗೂ ಮುನ್ನ ಹುಟ್ಟಿಕೊಂಡಿದ್ದ ಪ್ರಮೋದ್‌ ಮಧ್ವರಾಜ್‌ ಬಿಜೆಪಿ ಸೇರ್ಪಡೆ ಕುರಿತ ವದಂತಿಯಿಂದಾಗಿ ಉಡುಪಿ ರಾಜ್ಯದ ಗಮನ ಸೆಳೆಯಿತು. “ಬಿಜೆಪಿಯ ವರೇ ಗೇಟ್‌ ಹಾಕಿದ್ದಾರೆ’ ಎಂಬ ಪ್ರಮೋದ್‌ ಹೇಳಿಕೆಯಿಂದ “ಬಿಜೆಪಿ ಸೇರ್ಪಡೆ’ ಪುಕಾರಿಗೆ ರೆಕ್ಕೆ ಪುಕ್ಕ ಬೆಳೆದವು. ಇಂದಿಗೂ ಈ ವಿಚಾರ ತೇಲುತ್ತಲೇ ಇದೆ. ಇದರ ಜತೆಗೆ ಶೀರೂರು ಮಠಾಧೀಶ ಶ್ರೀ ಲಕ್ಷ್ಮೀವರತೀರ್ಥ ಸ್ವಾಮೀಜಿ ಅವರ ರಾಜಕೀಯ ಪ್ರವೇಶದ “ಬಾಂಬ್‌’ ಕೂಡ ಸಂಚಲನ ಮೂಡಿಸಿತು.

ಒಟ್ಟು ಮತ ಕೇಂದ್ರ: 213
ಒಟ್ಟು ಮತದಾರರು: 2,03,777
ಪುರುಷ ಮತದಾರರು: 98,759
ಮಹಿಳಾ ಮತದಾರರು: 1,05,018

ಕಳೆದ ಬಾರಿಯ ಮತ ವಿವರ
2013ರ ಚುನಾವಣೆ

ಚಲಾವಣೆಗೊಂಡ ಮತ: 1,38,430

ಪ್ರಮೋದ್‌ಮಧ್ವರಾಜ್‌(ಕಾಂಗ್ರೆಸ್‌):  86,868
39,524 ಮತಗಳ ಅಂತರದ ಗೆಲುವು
ಸುಧಾಕರ ಶೆಟ್ಟಿ (ಬಿಜೆಪಿ): 47,344
ಯೋಗೀಶ್‌ ಆಚಾರ್ಯ (ಪಕ್ಷೇತರ): 1,472

–  ಸಂತೋಷ್‌ ಬೊಳ್ಳೆಟ್ಟು

Advertisement

Udayavani is now on Telegram. Click here to join our channel and stay updated with the latest news.

Next