ಉಡುಪಿ: ಸದ್ಯ ಜಿಲ್ಲೆಯ ಮಟ್ಟಿಗೆ ಹಿರಿಯ ಶಾಸಕರಾಗಿದ್ದ ಹಾಲಾಡಿ ಶ್ರೀನಿವಾಸ ಶೆಟ್ಟಿಯವರು ಚುನಾವಣೆ ರಾಜಕೀಯದಿಂದ ಹಿಂದೆ ಸರಿದಿರುವುದು ಹಲವು ರೀತಿಯ ವಿಶ್ಲೇಷಣೆಗೆ ದಾರಿ ಮಾಡಿಕೊಟ್ಟಿದೆ. ವಿಶಿಷ್ಟ ವ್ಯಕ್ತಿತ್ವದ ಹಾಲಾಡಿಯವರ ಮಟ್ಟಿಗೆ ಈಗಲೇ “ಇದಮಿತ್ಥಂ’ ಎಂದು ಹೇಳುವಂತಿಲ್ಲ. ಹಾಲಾಡಿ ಅವರ ನಿರ್ಧಾರದಿಂದ ಕರಾವಳಿಯ ರಾಜಕೀಯ ವಲಯದಲ್ಲಿ ಸಂಚಲನ ಉಂಟಾಗಿದೆ.
ಕ್ಷೇತ್ರದಲ್ಲಿ ತನ್ನದೇ ಪ್ರಭಾವ ಹೊಂದಿದ್ದ ಶ್ರೀನಿವಾಸ ಶೆಟ್ಟರು 2013ರಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿಯೂ ಸ್ಪರ್ಧಿಸಿ ಗೆದ್ದು ತಮ್ಮ ಶಕ್ತಿ ಪ್ರದರ್ಶಿಸಿದ್ದರು. ಈಗ ತಾವಾಗಿಯೇ ಚುನಾವಣೆ ರಾಜಕಾರಣದಿಂದ ಹಿಂದೆ ಸರಿದು ಪಕ್ಷದ ಅಭ್ಯರ್ಥಿಗೆ ಬೆಂಬಲ ಸೂಚಿಸುವುದಾಗಿ ಘೋಷಿಸಿದ್ದಾರೆ.
ಈ ಬೆಳವಣಿಗೆ ಬೆನ್ನಲ್ಲೇ ಬಿಜೆಪಿಯಲ್ಲಿ ಟಿಕೆಟ್ ಹಂಚಿಕೆ ಸಂಬಂಧಿಸಿ ಹಲವು ನಿಲುವುಗಳು ಟಿಸಿಲೊಡೆದಿವೆ. ಕುಂದಾಪುರದಲ್ಲಿ ಶ್ರೀನಿವಾಸ ಶೆಟ್ಟಿಯವರು ಸೂಚಿಸುವ ಅಭ್ಯರ್ಥಿಗೆ ಪಕ್ಷ ಟಿಕೆಟ್ ನೀಡಲೇ ಬೇಕಾದ ಅನಿವಾರ್ಯತೆ ಸೃಷ್ಟಿಯಾಗಬಹುದು, ಈ ಸಲಹೆಯನ್ನು ಪಕ್ಷ ನಿರಾಕರಿಸಲೂಬಹುದು. ಅವರನ್ನು ಸಾರಾಸಗಟಾಗಿ ತಿರಸ್ಕರಿಸಿ ಬಿಜೆಪಿ ಗೆಲ್ಲುವುದು ಅಷ್ಟು ಸುಲಭವಿಲ್ಲ. 2013ರಲ್ಲಿ ಪಕ್ಷೇತರ ಅಭ್ಯರ್ಥಿಯಾಗಿದ್ದ ಶ್ರೀನಿವಾಸ ಶೆಟ್ಟರು 80,563 ಮತ ಪಡೆದಿದ್ದರೆ, ಕಾಂಗ್ರೆಸ್‌ನ ಮಲ್ಯಾಡಿ ಶಿವರಾಮ ಶೆಟ್ಟಿಯವರು 39,952 ಮತ ಪಡೆದು ಎರಡನೇ ಸ್ಥಾನದಲ್ಲಿ ಮತ್ತು ಬಿಜೆಪಿಯಿಂದ ಸ್ಪರ್ಧಿಸಿದ್ದ ಕಿಶೋರ್ ಕುಮಾರ್ 14,524 ಮತ ಪಡೆದು ಮೂರನೇ ಸ್ಥಾನದಲ್ಲಿದ್ದರು.
ಬಿಜೆಪಿ ಕಳೆದ ಎರಡು ಚುನಾವಣೆಗಳಲ್ಲಿ ಬೈಂದೂರು ಮತ್ತು ಕುಂದಾಪುರ ಕ್ಷೇತ್ರವನ್ನು ಬಂಟ ಸಮುದಾಯಕ್ಕೆ, ಉಡುಪಿ ಬ್ರಾಹ್ಮಣ ಸಮುದಾಯಕ್ಕೆ, ಕಾಪು ಮೊಗವೀರ ಸಮುದಾಯಕ್ಕೆ ಹಾಗೂ ಕಾರ್ಕಳ ಬಿಲ್ಲವ ಸಮುದಾಯಕ್ಕೆ ಟಿಕೆಟ್ ಹಂಚಿಕೆ ನೀಡುತ್ತಲೇ ಬಂದಿದೆ. ಈಗ ಹಾಲಾಡಿಯವರ ರಾಜೀನಾಮೆಯಿಂದ ಈ ರೂಢಪದ್ಧತಿಗೆ ತಿದ್ದುಪಡಿ ಆಗಲೂಬಹುದು. ಕುಂದಾಪುರದಲ್ಲಿ ಶ್ರೀನಿವಾಸ ಶೆಟ್ಟಿಯವರು ಸೂಚಿಸುವ ಅಭ್ಯರ್ಥಿಗೆ ಪಕ್ಷ ಟಿಕೆಟ್ ನೀಡಿದಲ್ಲಿ ಜಾತಿ ಕೋಟಾಗಳು ಇತರ ಕ್ಷೇತ್ರಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಇದು ಪಕ್ಕದ ಬೈಂದೂರು ಮತ್ತು ಉಡುಪಿ ಕ್ಷೇತ್ರದ ಮೇಲೆ ಹೆಚ್ಚು ಪರಿಣಾಮ ಬೀರಬಹುದು. ಕುಂದಾಪುರದಲ್ಲಿ ಬಂಟ ಸಮುದಾಯದವರೇ ಹೆಚ್ಚು ಬಾರಿ ಶಾಸಕರಾಗಿರುವ ಇತಿಹಾಸವಿದೆ. ಈ ಬಾರಿ ಕಾಂಗ್ರೆಸ್‌ನಿಂದ ಬಂಟ ಸಮುದಾಯದವರೇ ಸ್ಪರ್ಧಿಸುತ್ತಿರುವ ಹಿನ್ನೆಲೆಯಲ್ಲಿ ಅದೇ ಸಮುದಾಯಕ್ಕೆ ಬಿಜೆಪಿಯೂ ಟಿಕೆಟ್ ನೀಡಿದರೂ ಅಚ್ಚರಿಯಿಲ್ಲ.
ಶ್ರೀನಿವಾಸ ಶೆಟ್ಟಿಯವರು ಚುನಾವಣ ರಾಜಕಾರಣದಿಂದ ಹಿಂದೆ ಸರಿದಿರುವ ಕುರಿತೂ ಹಲವು ರೀತಿಯ ಮಾತುಗಳು ಕೇಳಿಬರುತ್ತಿವೆ. ಪಕ್ಷದ ವರಿಷ್ಠರು, ಜಿಲ್ಲೆಯ ಪ್ರಮುಖರು, ಅವರಿಗೆ ಸಂಬಂಧಿಸಿದ ಹಿಂದಿನ ಘಟನೆಗಳು ಇದಕ್ಕೆ ಕಾರಣ ಇರಬಹುದು ಎಂಬ ವಿಶ್ಲೇಷಣೆಗಳು ಸ್ಥಳೀಯವಾಗಿ ನಡೆಯುತ್ತಿವೆ. ಹಾಗಂತ ಎಲ್ಲೂ ಶ್ರೀನಿವಾಸ ಶೆಟ್ಟರು ಪಕ್ಷದ ವಿರುದ್ಧ ಹೋಗುವ ಇಂಗಿತ ವ್ಯಕ್ತಪಡಿಸಿಲ್ಲ. ಈಗ ಚುನಾವಣೆ ಘೋಷಣೆಯಾಗಿರುವುದು ಮಾತ್ರ, ಟಿಕೆಟ್ ಹಂಚಿಕೆಯ ಅನಂತರವೂ ಇನ್ನಷ್ಟು ಬೆಳವಣಿಗೆಗಳನ್ನು ನಿರೀಕ್ಷಿಸಬಹುದು.
ಒಟ್ಟಿನಲ್ಲಿ ಹಾಲಾಡಿ ಶ್ರೀನಿವಾಸ ಶೆಟ್ಟಿಯವರು ಚುನಾವಣ ರಾಜಕಾರಣದಿಂದ ದೂರ ಸರಿದಿರುವುದರಿಂದ ಬಿಜೆಪಿ ವರಿಷ್ಠರಿಂದ ಹೊಸ ಮುಖ ಪರಿಚಯದ ಚಿಂತನೆ ಮತ್ತು ಕ್ಷೇತ್ರವಾರು ಜಾತಿ ಲೆಕ್ಕಾಚಾರವನ್ನು ಬದಲಿಸುವ ಸ್ಪಷ್ಟ ಸೂಚನೆ ಕಾಣುತ್ತಿದೆ.
ಅಭ್ಯರ್ಥಿಯಾಗುವೆ ಎಂದಿದ್ದರು….
ಬೆಂಗಳೂರಿನಲ್ಲಿ ರವಿವಾರ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು, ಸಂಸದೀಯ ಮಂಡಳಿ ಸದಸ್ಯ ಬಿ.ಎಸ್.ಯಡಿಯೂರಪ್ಪ ಮತ್ತು ಸಂಘಟನೆಯ ಪ್ರಮುಖರ ಸಮ್ಮುಖದಲ್ಲಿ ನಡೆದ ಕೋರ್ ಕಮಿಟಿ ಸಭೆಯಲ್ಲಿ ಹಾಲಾಡಿ ಶ್ರೀನಿವಾಸ ಶೆಟ್ಟಿಯವರೇ ಸ್ವತಃ ತಾವು ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ಸ್ಪಷ್ಟಪಡಿಸಿದ್ದರು. ಅಲ್ಲದೆ, 2018ರಲ್ಲಿದ್ದ ಪರಿಸ್ಥಿತಿ ಈಗಿಲ್ಲ. ಅಭ್ಯರ್ಥಿಯ ವರ್ಚಸ್ಸು ಮುಖ್ಯವಾಗುತ್ತದೆ ಎಂಬುದನ್ನು ಸೂಚ್ಯವಾಗಿ ವರಿಷ್ಠರ ಗಮನಕ್ಕೂ ತಂದಿದ್ದರು ಎಂಬ ಬಗ್ಗೆ ಬಿಜೆಪಿ ಮೂಲಗಳು ತಿಳಿಸಿವೆ.
ಇದಾದ ಒಂದೇ ದಿನದಲ್ಲಿ ಶ್ರೀನಿವಾಸ ಶೆಟ್ಟರ ನಿಲುವು ಬದಲಾಗಿದೆ. ತಾನು ಸ್ಪರ್ಧಿಸುವುದಿಲ್ಲ. ತಾನು ಹೇಳಿದವರಿಗೆ ಟಿಕೆಟ್ ನೀಡುವಂತೆ ಬೇಡಿಕೆ ಇಡುತ್ತಾರೆ ಎಂಬ ಗುಸುಗುಸು ಮೊದಲು ಇತ್ತು, ಆದರೆ ಕೊನೆಯ ಕ್ಷಣದಲ್ಲಿ ತಾನು ಸ್ಪರ್ಧಿಸುವುದಿಲ್ಲ, ಪಕ್ಷದ ಅಭ್ಯರ್ಥಿಗೆ ಬೆಂಬಲ ನೀಡುವುದಾಗಿ ತಿಳಿಸಿದ್ದಾರೆ. ಇದು ಸ್ವ ಇಚ್ಛೆಯ ನಿರ್ಧಾರವೋ ಅಥವಾ ಒತ್ತಡವೋ ಎಂಬುದಕ್ಕೆ ಮುಂದೆ ಕಾಲವೇ ಉತ್ತರ ನೀಡಬಹುದು. ಆದರೆ ಹಾಲಾಡಿ ಶ್ರೀನಿವಾಸ ಶೆಟ್ಟಿಯವರಿಗೆ ಈ ಬಾರಿ ಚುನಾವಣೆಯಲ್ಲಿ ಸ್ಪರ್ಧಿಸಲು ಹುಮ್ಮಸ್ಸು ಇದ್ದದ್ದಂತೂ ಸತ್ಯ. ಅದು ಕರಗಿದ್ದು ಹೇಗೆ ಎಂಬುದು ಸದ್ಯ ಎಲ್ಲರಲ್ಲೂ ಮೂಡಿರುವ ಪ್ರಶ್ನೆ.