ಬೆಂಗಳೂರು:ಇತ್ತೀಚೆಗೆ ನಡೆದ ಗುಜರಾತ್ ಚುನಾವಣೆ ವೇಳೆ ಕಾಂಗ್ರೆಸ್ ಮುಖಂಡ, ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ದೇವಾಲಯಕ್ಕೆ ಭೇಟಿ ನೀಡುವ ಮೂಲಕ ಹಿಂದೂ ಮತಗಳ ಒಲೈಕೆಗೆ ಮುಂದಾಗಿದ್ದರು, ಇದೀಗ ಕರ್ನಾಟಕದಲ್ಲಿಯೂ ರಾಹುಲ್ ಗಾಂಧಿ ಭೇಟಿ ವೇಳೆ ದೇಗುಲ, ಮಠಗಳಿಗೆ ತೆರಳುವ ಸಿದ್ಧತೆ ಮಾಡಿಕೊಂಡಿರುವುದಾಗಿ ಮೂಲಗಳು ತಿಳಿಸಿವೆ.
ಖಾಸಗಿ ಟಿವಿ ಚಾನೆಲ್ ಗಳ ವರದಿ ಪ್ರಕಾರ, ರಾಹುಲ್ ಗಾಂಧಿ ಫೆಬ್ರುವರಿ ತಿಂಗಳಲ್ಲಿ 2 ಬಾರಿ ರಾಜ್ಯ ಪ್ರವಾಸ ಕೈಗೊಳ್ಳಲಿದ್ದಾರೆ. ಫೆ.10ರಿಂದ ಮೂರು ದಿನಗಳ ಕಾಲ ಹಾಗೂ ಫೆ.20ರಿಂದ 3 ದಿನಗಳ ಕಾಲ ರಾಜ್ಯ ಭೇಟಿಗೆ ನಿರ್ಧರಿಸಿದ್ದಾರೆನ್ನಲಾಗಿದೆ.
ಈ ಸಂದರ್ಭದಲ್ಲಿ ರಾಹುಲ್ ಗಾಂಧಿ ಅವರು ಬೆಳಗ್ಗೆ ಶೃಂಗೇರಿ ಮಠಕ್ಕೆ ಭೇಟಿ ನೀಡಿ, ಸಂಜೆ ಉಡುಪಿಯ ಕೃಷ್ಣ ಮಠಕ್ಕೆ ಭೇಟಿ ನೀಡುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ಈ ಬಗ್ಗೆ ಕಾಂಗ್ರೆಸ್ ವಕ್ತಾರರಾಗಲಿ, ಹೈಕಮಾಂಡ್ ಆಗಲಿ ಅಧಿಕೃತವಾಗಿ ಯಾವುದೇ ಹೇಳಿಕೆ ನೀಡಿಲ್ಲ.
ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ರಾಹುಲ್ ಫೆ.10, 11 ಹಾಗೂ 12ರಂದು ಮೂರು ದಿನಗಳ ಪ್ರವಾಸದಲ್ಲಿ ಹೈದರಾಬಾದ್ ಕರ್ನಾಟಕಕ್ಕೆ ಭೇಟಿ ನೀಡಲಿದ್ದಾರೆ.
ಮೊದಲ ಹಂತದ ಭೇಟಿಯಲ್ಲಿ ಬೀದರ್, ಯಾದಗಿರಿ, ರಾಯಚೂರು, ಕೊಪ್ಪಳ, ಬಳ್ಳಾರಿ ಹಾಗೂ ಗುಲ್ಬರ್ಗ ಜಿಲ್ಲೆಗಳಿಗೆ ಪ್ರವಾಸ ಕೈಗೊಳ್ಳಲಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ 39 ಕ್ಷೇತ್ರಗಳಲ್ಲಿ 24 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿತ್ತು.ರಾಹುಲ್ ಗಾಂಧಿ ಪ್ರವಾಸದ ಬಗ್ಗೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆಸಿ ವೇಣುಗೋಪಾಲ್ ಮಾಹಿತಿಯನ್ನು ನೀಡಿದ್ದಾರೆ.