Advertisement

ಉಡುಪಿ: ಈಡೇರಿಕೆಗೆ ಕಾದಿವೆ ಹತ್ತು ಹಲವು

08:20 AM Apr 20, 2018 | Team Udayavani |

ತುಳು ಮತ್ತು ಕನ್ನಡ ಭಾಷಿಕ ಸಂಸ್ಕೃತಿಗಳ ಸಂಗಮ ಸ್ಥಾನ ಉಡುಪಿ ವಿಧಾನಸಭಾ ಕ್ಷೇತ್ರ ರಾಜ್ಯದ ಶೈಕ್ಷಣಿಕ, ಆರೋಗ್ಯ, ಔದ್ಯಮಿಕ ರಂಗಗಳಲ್ಲಿ ಗಮನಾರ್ಹ ಸ್ಥಾನವನ್ನು ಹೊಂದಿದೆ. ಪ್ರವಾಸೋದ್ಯಮ ಈ ಭಾಗದಲ್ಲಿ ಅಭಿವೃದ್ಧಿಯ ಸರ್ವ ಅವಕಾಶಗಳನ್ನು ಹೊಂದಿರುವ ಕ್ಷೇತ್ರ. ಉಡುಪಿ ವಿಧಾನಸಭಾ ಕ್ಷೇತ್ರ ನಗರದ ಕೇಂದ್ರವನ್ನೇ ಬಹ್ವಂಶ ಹೊಂದಿದ್ದು, ಇಲ್ಲಿಯ ಬೇಡಿಕೆಗಳು ಹತ್ತು ಹಲವು.

Advertisement

1. ಕುಡಿಯುವ ನೀರು
ಉಡುಪಿ ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ಸಾಮಾನ್ಯ. ವಾರಾಹಿಯ ನೀರು ತರುವ ಯೋಜನೆ ಕಾರ್ಯಗತಗೊಂಡರೆ ಸಮಸ್ಯೆ ಬಗೆಹರಿದೀತು ಎಂಬ ನಿರೀಕ್ಷೆ ಇದೆ. ಗ್ರಾಮಾಂತರದಲ್ಲಿ ಬಹುಗ್ರಾಮ ನೀರಿನ ಯೋಜನೆ ಬೇಡಿಕೆ ಬಹುಕಾಲದ್ದು.

2. ಮರಳುಗಾರಿಕೆ
ಮರಳುಗಾರಿಕೆಯ ಗೊಂದಲದಿಂದಾಗಿ ಬೆಲೆ ಏರಿಕೆಯನ್ನು ನಿಯಂತ್ರಿಸುವುದು ಸವಾಲು. ಪ್ರತ್ಯೇಕ ಮರಳು ನೀತಿ ಜಾರಿಗೆ ಬಂದರೆ ಮರಳು ಸಮಸ್ಯೆಗೆ ಮುಕ್ತಿ ದೊರೆತೀತು. ನಿರ್ಮಾಣ ಚಟುವಟಿಕೆಗಳು ಹೆಚ್ಚಾಗಬಹುದು. 

3. ಶಿಕ್ಷಣ
ಉಡುಪಿಯಲ್ಲಿ ಸರಕಾರಿ ವೈದ್ಯ ಕಾಲೇಜು ಎಂಜಿನಿಯರಿಂಗ್‌ ಕಾಲೇಜು ಆರಂಭಿಸಬೇಕು ಎಂಬ ಬೇಡಿಕೆ ಈಡೇರಿಲ್ಲ. ಸರಕಾರಿ ವೃತ್ತಿಪರ ಕಾಲೇಜುಗಳು ಕೂಡ ಇದ್ದರೆ ಬಡವಿದ್ಯಾರ್ಥಿಗಳಿಗೆ ಹೆಚ್ಚಿನ ಅನುಕೂಲವಾಗುತ್ತದೆ.

4. ಒಳಚರಂಡಿ
ನಗರಸಭೆ ವ್ಯಾಪ್ತಿ ಮತ್ತು ಹೊರವಲಯದಲ್ಲಿ ಒಳಚರಂಡಿ ಕಾಮಗಾರಿ ನಡೆದಿಲ್ಲ. ಈ ಹಿಂದಿನ ಸಂಪರ್ಕಗಳ ಸಾಮರ್ಥ್ಯ ಸಾಕಾಗುತ್ತಿಲ್ಲ. ಹಾಗಾಗಿ ಕೊಳಚೆ ನೀರು ಸಾರ್ವಜನಿಕ ರಸ್ತೆ, ಹೊಳೆ, ಬಾವಿಗಳಿಗೆ ಹರಿದು ಹೋಗುತ್ತದೆ.

Advertisement

5. ಬಂದರು ಅಭಿವೃದ್ಧಿ
ಸರ್ವಋತು ಮಲ್ಪೆ ಬಂದರಿನಲ್ಲಿ ದೋಣಿಗಳಿಗೆ ತಂಗಲು ಸಾಕಷ್ಟು ಜಾಗವಿಲ್ಲ. 4ನೇ ಹಂತದ ಅಭಿವೃದ್ಧಿ ಕಾಮಗಾರಿ ಪ್ರಸ್ತಾವನೆ ಕಳುಹಿಸಲಾಗಿದೆ. ಅದು ಕಾರ್ಯಗತಗೊಂಡರೆ ಮೀನುಗಾರಿಕಾ ಚಟುವಟಿಕೆ ವೃದ್ಧಿಯಾಗಲು ಸಾಧ್ಯವಿದೆ.

6. ಜಿಲ್ಲಾ ರಂಗಮಂದಿರ
ಉಡುಪಿ ಹೆಚ್ಚು ಸಾಂಸ್ಕೃತಿಕ ಚಟುವಟಿಕೆಗಳ ಕೇಂದ್ರವಾಗಿದ್ದೂ ಜಿಲ್ಲಾ ರಂಗಮಂದಿರ ಇಲ್ಲಿಲ್ಲ. ಪುರಭವನವನ್ನು ಖಾಸಗಿಯವರಿಗೆ ವಹಿಸಿರುವುದರಿಂದ ದುಬಾರಿಯಾಗಿದೆ. ರಂಗಮಂದಿರ ನಿರ್ಮಾಣಕ್ಕೆ ಸರಕಾರಗಳು ಆಸ್ಥೆ ವಹಿಸಿಲ್ಲ.

7. ಮಲ್ಪೆ ರಸ್ತೆ ವಿಸ್ತರಣೆ
ಕರಾವಳಿ ಬೈಪಾಸ್‌ನಿಂದ ಮಲ್ಪೆವರೆಗಿನ 4 ಕಿ.ಮೀ. ರಸ್ತೆ ವಿಸ್ತರಿಸುವ ಬೇಡಿಕೆ ಹಾಗೆಯೇ ಇದೆ. ಈ ರಸ್ತೆ ಮಲ್ಪೆ-ಮೊಳಕಾಲ್ಮೂರು ರಾಷ್ಟ್ರೀಯ ಹೆದ್ದಾರಿಯಾಗಿ ಘೋಷಣೆಯಾದ ಅನಂತರ ಈ ರಸ್ತೆಯ ವಿಸ್ತರಣೆ ಯೋಜನೆಗೆ ಹಿನ್ನಡೆಯಾಗಿದೆ.

8. ಗ್ರಾಮೀಣ ಸಾರಿಗೆ
ಮತ್ತಷ್ಟು ಸರಕಾರಿ ಬಸ್‌ಗಳನ್ನು ಗ್ರಾಮಾಂತರ ಭಾಗಗಳಲ್ಲಿ ಓಡಿಸಬೇಕು. ಸರಕಾರಿ ಬಸ್‌ಗಳ ಸೌಲಭ್ಯ ವಿಶೇಷವಾಗಿ ಈ ಭಾಗದ ಹಿರಿಯ ನಾಗರಿಕರು, ವಿದ್ಯಾರ್ಥಿಗಳಿಗೂ ದೊರೆಯಬೇಕು ಎಂಬ ಬೇಡಿಕೆ ಜನತೆಯದ್ದು.

9. ಜಿಲ್ಲಾಸ್ಪತ್ರೆ
ಅಜ್ಜರಕಾಡು ಸರಕಾರಿ ಆಸ್ಪತ್ರೆ ಜಿಲ್ಲಾಸ್ಪತ್ರೆ ಯಾಗಿ ಮೇಲ್ದರ್ಜೆಗೇರಿದ್ದರೂ ಅಗತ್ಯ ಸೌಲಭ್ಯಗಳಿಲ್ಲ. ಜಿಲ್ಲಾ ಕೇಂದ್ರದಲ್ಲಿ ಸುಸಜ್ಜಿತ ಸರಕಾರಿ ಆಸ್ಪತ್ರೆ ಇದ್ದರೆ ಇದರ ಹೆಚ್ಚಿನ ಲಾಭ ಉಡುಪಿ ಕ್ಷೇತ್ರದ ಸಾಮಾನ್ಯರಿಗೆ ದೊರೆತಂತಾಗುತ್ತದೆ.

10. ಸಂಚಾರ ದಟ್ಟಣೆ
ಸುಗಮ ರಸ್ತೆ ಸಂಚಾರಕ್ಕೆ ಬೇಕಾದ ಸೌಲಭ್ಯ ಒದಗಿಸಬೇಕು. ಪಾದಚಾರಿಗಳಿಗೆ ಮಾರ್ಗ, ರಸ್ತೆ ದಾಟಲು ಸೂಕ್ತ ವ್ಯವಸ್ಥೆಗಳನ್ನು ಕಲ್ಪಿಸಬೇಕು ಎನ್ನುವ ಬೇಡಿಕೆ ಇದೆ. ಸುವ್ಯವಸ್ಥಿತ ಸರಕಾರಿ ಬಸ್‌ ನಿಲ್ದಾಣ ನಿರ್ಮಾಣಗೊಂಡಿಲ್ಲ. 

11. ಪರಿಸರ ಪೂರಕ ಉದ್ದಿಮೆ
ಪರಿಸರ ಪೂರಕ ಉದ್ಯಮಗಳನ್ನು, ಮುಖ್ಯವಾಗಿ ಮಾಹಿತಿ ತಂತ್ರಜ್ಞಾನ ಕೇಂದ್ರಗಳನ್ನು ಸ್ಥಾಪಿಸಿ ಉದ್ಯೋಗ ಬೇಡಿಕೆಯನ್ನು ಈಡೇರಿಸುವತ್ತ ಇದುವರೆಗೆ ಗಮನಹರಿಸಿಲ್ಲ. ಹಾಗಾಗಿ ಈಗ  ಈ ಬೇಡಿಕೆ ಮಹತ್ವ ಪಡೆದುಕೊಂಡಿದೆ.

12. ಹಕ್ಕುಪತ್ರ
ಡೀಮ್ಡ್ ಫಾರೆಸ್ಟ್‌ನಿಂದಾಗಿ ಹಕ್ಕುಪತ್ರ ವಂಚಿತರಾದವರು ಉಡುಪಿ ವಿಧಾನಸಭಾ ಕ್ಷೇತ್ರದಲ್ಲಿಯೂ ಇದ್ದಾರೆ. ಡೀಮ್ಡ್ ಫಾರೆಸ್ಟ್‌ ಸಮಸ್ಯೆಗೆ ಪರಿಹಾರ ಕಂಡುಕೊಂಡರೆ ಹಲವರಿಗೆ ಹಕ್ಕುಪತ್ರ ದೊರೆಯಲಿದೆ. 

Advertisement

Udayavani is now on Telegram. Click here to join our channel and stay updated with the latest news.

Next