Advertisement

ಏನೇ ಇದ್ದರೂ ವೋಟ್‌ ಹಾಕಲೇಬೇಕು ಬಿಡಿ ಈ ಬಾರಿ…

08:20 AM May 04, 2018 | Karthik A |

ಬೆಳ್ತಂಗಡಿ: ಈ ವಿಧಾನಸಭಾ ಕ್ಷೇತ್ರದ ಮತದಾರನ ಬೇಡಿಕೆ ಒಂದೇ- ‘ನಮಗೆ ತಾಲೂಕು ಕೇಂದ್ರದ ಚಿತ್ರಣ ಬದಲಿಸುವವರು ಬೇಕು’. ಬೆಳ್ತಂಗಡಿ ಪಟ್ಟಣ ಸುತ್ತಮುತ್ತ ಭೇಟಿ ನೀಡಿದ ಉದಯವಾಣಿ ಪ್ರತಿನಿಧಿ ಚುನಾವಣೆ ಕುರಿತು ಮಾತು ಆರಂಭಿಸುವ ಮೊದಲೇ ಮತದಾರರು ಹೇಳಿದ್ದು, ತಾಲೂಕು ಕೇಂದ್ರ ಬೆಳೆಯಬೇಕಿದೆ. ಅಂಥವರು ಬೇಕು ಎಂದು.

Advertisement

ಪಕ್ಷಗಳ ಪರ ವಿರೋಧ ಅಭಿಪ್ರಾಯ ಇದೆ. ಆದರೆ, ತಾಲೂಕಿನಲ್ಲಿ ಹಾದುಹೋಗುವ ಬಂಟ್ವಾಳ – ವಿಲ್ಲುಪುರಂ ರಾಷ್ಟ್ರೀಯ ಹೆದ್ದಾರಿ ಕಿರಿದು. ಅದರಿಂದ ನಿತ್ಯವೂ ಸಂಚಾರ ಸಮಸ್ಯೆಯಾಗುತ್ತಿದೆ. ಅದನ್ನು ಸರಿಪಡಿಸಬೇಕು. ಶಿರಾಡಿ ಘಾಟಿ ಸಂಚಾರ ನಿರ್ಬಂಧದಿಂದ ವಾಹನಗಳ ಸಂಖ್ಯೆ ಹೆಚ್ಚುತ್ತಿದೆ. ಇದರಿಂದ ಮುಕ್ತಿ ನೀಡಲು ಗೆದ್ದವರು ಶ್ರಮಿಸಬೇಕು ಎಂದು ಬೇಡಿಕೆಯ ಪಟ್ಟಿ ಇಟ್ಟರು ಮತದಾರರೊಬ್ಬರು. ತಾಲೂಕು ಕೇಂದ್ರದಲ್ಲಿ ಹೆಚ್ಚು ಅಭಿವೃದ್ಧಿ ಆಗಬೇಕಿವೆ. ಇರುವ ಅವಕಾಶ ಬಳಸಿಕೊಳ್ಳಬೇಕು. ವ್ಯವಸ್ಥಿತ ಪಾರ್ಕಿಂಗ್‌ ವ್ಯವಸ್ಥೆ ಇತ್ಯಾದಿ ಸೌಕರ್ಯ ಬೇಕಿದೆ ಎನ್ನುತ್ತಾರೆ ಇಲ್ಲಿಯ ಜೀವನ್‌.

ಹಾಗೆಂದು ಜನರಲ್ಲಿ ಮತದಾನದ ಬಗ್ಗೆ ನಿರುತ್ಸಾಹವಿಲ್ಲ. ತುಂಬಿದ ಉತ್ಸಾಹದಲ್ಲಿ ತಮ್ಮ ಮೆಚ್ಚಿನ ಅಭ್ಯರ್ಥಿಗೆ ಮತ ಚಲಾಯಿಸಲು ಕಾತರರಾಗಿದ್ದಾರೆ. ಆದರೆ ಜನಸಾಮಾನ್ಯರ ಬೇಡಿಕೆ ಒಂದೇ-ಯಾರು ಚುನಾಯಿತರಾಗುತ್ತಾರೋ ಅವರು ಮೂಲಸೌಲಭ್ಯಗಳನ್ನು ಸೃಷ್ಟಿಸುವತ್ತ ಗಮನಹರಿಸಬೇಕು ಎಂಬುದು. ಜನರ ಬೇಡಿಕೆ. ಈಗಾಗಲೇ ಹಲವು ಕಡೆಗಳಲ್ಲಿ ರಸ್ತೆ ಆಭಿವೃದ್ಧಿ ಮಾಡಿದ್ದರೂ ಇನ್ನೂ ಹಲವೆಡೆ ಆಗಬೇಕಿದೆ ಎನ್ನುತ್ತಾರೆ ಹೆಸರು ಹೇಳಲಿಚ್ಛಿಸದ ಮತದಾರರೊಬ್ಬರು.

‘ನೋಡಿ, ನಮಗೆ ತಾಲೂಕಿನಲ್ಲಿ ಸುಸಜ್ಜಿತ ಕ್ರೀಡಾಂಗಣ ನಿರ್ಮಾಣವಾಗಬೇಕು. ಇದರಿಂದ ಗ್ರಾಮೀಣ ಪ್ರತಿಭೆಗಳಿಗೆ ಅನುಕೂಲವಾಗಲಿದೆ. ತಾಲೂಕಿಗೆ ಆಗಮಿಸುವ ಸಾವಿರಾರು ಪ್ರವಾಸಿಗ ರಿಗೆ ಮೂಲಸೌಲಭ್ಯ ಬೇಕು. ಆಗ ಮಾತ್ರ ತಾಲೂಕು ಕೇಂದ್ರ ಬೆಳೆದೀತು’ ಎನ್ನುತ್ತಾರೆ ಮತ್ತೂಬ್ಬ ಮತದಾರರು. ತಾಲೂಕಿನಲ್ಲಿ ಸುಮಾರು 5,000 ಹೊಸ ಮತದಾರರಿದ್ದು, ಉತ್ಸಾಹದಿಂದ ತಮ್ಮ ಪ್ರಥಮ ಮತ ಚಲಾಯಿಸಲು ಕಾತರರಾಗಿದ್ದರೆ. ಇದರೊಂದಿಗೆ ಯುವಮತದಾರರ ಆಗ್ರಹವಿದೆ. ಅದೆಂದರೆ, ಉದ್ಯೋಗ ಸೃಷ್ಟಿಯಾಗಬೇಕು ಎಂಬುದು. ಕೈಗಾರಿಕೆಗಳನ್ನು ತಂದಲ್ಲಿ ಎಲ್ಲರಿಗೂ ಅನುಕೂಲ ಎಂಬುದು ಅವರ ಅಭಿಪ್ರಾಯ. ಆರೋಗ್ಯ ಕ್ಷೇತ್ರದಡಿ ಸರಕಾರಿ ಆಸ್ಪತ್ರೆಯಲ್ಲಿ ವಿಶೇಷ ಸೌಲಭ್ಯ ಒದಗಿಸಬೇಕೆಂಬ ಆಗ್ರಹವೂ ಕೇಳಿದೆ. ತಾಲೂಕಿನಲ್ಲೇ ಡಯಾಲಿಸಿಸ್‌ ಸೌಲಭ್ಯ ಬೇಕೆನ್ನುತ್ತಾರೆ ರೋಗಿಯ ಸಂಬಂಧಿಯೊಬ್ಬರು.

ಮತದಾನ
ಮಾಡುವುದು ಹಕ್ಕು. ಅದನ್ನು ಚಲಾಯಿಸಲೇಬೇಕು. ಅಭ್ಯರ್ಥಿಗಳ ಬಗ್ಗೆ ಇನ್ನೂ ಅಷ್ಟೊಂದು ತಲೆ ಕೆಡಿಸಿಕೊಂಡಿಲ್ಲ. ಹಳಬರೂ ಇದ್ದಾರೆ, ಹೊಸಬರೂ ಬಂದಿದ್ದಾರೆ. ಮತದಾನಕ್ಕೆ ಎರಡು ದಿನ ಇರುವಾಗ ಯೋಚಿಸಿದರೆ ಸಾಕು.
– ಚಿರಂಜೀವಿ, ಖಾಸಗಿ ಕಂಪೆನಿಯ ಉದ್ಯೋಗಿ

Advertisement

— ಹರ್ಷಿತ್‌ ಪಿಂಡಿವನ

Advertisement

Udayavani is now on Telegram. Click here to join our channel and stay updated with the latest news.

Next