Advertisement

Karnataka Assembly Election 2023: ಸಾವಿರ ಮತ ಪಡೆಯಲು ಸಾಹಸ ಪಡುವವರಿದ್ದಾರೆ !

12:52 PM Apr 15, 2023 | Team Udayavani |

ಉಡುಪಿ: “ಚುನಾವಣೆಯಲ್ಲಿ ನಿಂತರೆ ನಿನ್ನ ಮತವೇ ಬೀಳದು, ಕುಟುಂಬದವರ ಮತವೂ ಬಾರದು’ ಎಂಬ ಮಾತೊಂದಿದೆ. ಇದು ತಮಾಷೆಯಾದರೂ ಅನೇಕರಿಗೆ ಸ್ಪರ್ಧೆಯ ಅನಂತರದಲ್ಲಿ ಸತ್ಯ ಎನಿಸುತ್ತದೆ. ಸ್ಪರ್ಧಾ ಕಣಕ್ಕೆ ಇಳಿಯುವ ಮೊದಲು ಎಲ್ಲರೂ ನಮ್ಮವರೇ ನಮಗೆ ಮತ ಹಾಕುತ್ತಾರೆ ಎಂಬ ಭಾವನೆ ಬರುವಷ್ಟರ ಮಟ್ಟಿಗೆ ಹತ್ತಿರವಾಗಿರುತ್ತಾರೆ. ಚುನಾವಣೆ ಫ‌ಲಿತಾಂಶದ ಅನಂತರವೇ ತಿಳಿಯವುದು “ಅದು ಬರಿ ಮಾತು, ಕೃತಿಯಲ್ಲಿ ಇರಲಿಲ್ಲ’ ಎಂಬುದು.

Advertisement

ಚುನಾವಣೆ ಕಣದಲ್ಲಿ ರಾಷ್ಟ್ರೀಯ ಪಕ್ಷದ ಅಭ್ಯರ್ಥಿಗಳ ಜತೆಗೆ ಪಕ್ಷೇತರ ಅಭ್ಯರ್ಥಿಗಳು ಹಲವರಿರುತ್ತಾರೆ. ಕರಾವಳಿ ಮಟ್ಟಿಗೆ ರಾಷ್ಟ್ರೀಯ ಪಕ್ಷದ ಅಭ್ಯರ್ಥಿಗಳು ಬಿಟ್ಟು ಪಕ್ಷೇತರರು ಠೇವಣಿ ಉಳಿಸಿಕೊಳ್ಳುವುದು ತೀರಾ ಕಡಿಮೆ. ಅಂತಹ ವರ್ಚಸ್ಸು ಇರುವವರು ಮಾತ್ರ ಗೆಲ್ಲುತ್ತಾರೆ ಅಥವಾ ಠೇವಣಿ ಉಳಿಸಿಕೊಳ್ಳುತ್ತಾರೆ.

ಚುನಾವಣೆ ಫ‌ಲಿತಾಂಶದಲ್ಲಿ ಅನೇಕ ಸ್ವಾರಸ್ಯವೂ ಇರುತ್ತದೆ. ಪಕ್ಷೇತರರಾಗಿ ನಿಂತು ಪಡೆಯುವ ಮತಗಳು ಕೆಲವೊಮ್ಮೆ ಅಭ್ಯರ್ಥಿಯನ್ನೇ ನಿಬ್ಬೆರಗುಗೊಳಿಸಿದರೆ, ಇನ್ನು ಕೆಲವೊಮ್ಮೆ ಹತಾಶೆಯನ್ನು ಮೂಡಿಸುತ್ತದೆ.

2008ರ ಚುನಾವಣೆಯಲ್ಲಿ ಬೈಂದೂರು ಕ್ಷೇತ್ರದಿಂದ ಸ್ಪರ್ಧಿಸಿದ್ದ 8 ಅಭ್ಯರ್ಥಿಗಳಲ್ಲಿ 4 ಮಂದಿಗೆ ತಲಾ 3 ಸಾವಿರಕ್ಕಿಂತ ಅಧಿಕ ಮತ ಪಡೆದಿರಲಿಲ್ಲ. ಅದರಲ್ಲೂ ಒಬ್ಬರಿಗೆ ಸಾವಿರ ಮತವೂ ಬಂದಿರಲಿಲ್ಲ. ಕುಂದಾಪುರ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ 5 ಅಭ್ಯರ್ಥಿಗಳಲ್ಲಿ ಮೂವರಿಗೆ ತಲಾ 2500ಕ್ಕಿಂತ ಅಧಿಕ ಮತ ಸಿಕ್ಕಿರಲಿಲ್ಲ. ಉಡುಪಿಯ ಕಣದಲ್ಲಿದ್ದ ಮೂವರಲ್ಲಿ ಒಬ್ಬರಿಗೆ ಬಂದಿದ್ದು ಕೇವಲ 2443 ಮತ. ಉಳಿದ ಇಬ್ಬರು ತಲಾ 55 ಸಾವಿರಕ್ಕೂ ಅಧಿಕ ಮತ ಪಡೆದಿದ್ದರು. ಕಾಪುವಿನಲ್ಲಿ ಸ್ಪರ್ಧ ಕಣದಲ್ಲಿದ್ದ 7 ಮಂದಿಯಲ್ಲಿ ಇಬ್ಬರಿಗೆ ತಲಾ ಸಾವಿರ ಮತವೂ ಬಂದಿರಲಿಲ್ಲ. ಇನ್ನೊಬ್ಬರು ಕೇವಲ 1,109 ಮತ ಪಡೆದಿದ್ದರು. ಕಾರ್ಕಳದಲ್ಲೂ ಸಾವಿರ ಮತ ಪಡೆದ ಅಭ್ಯರ್ಥಿಗಳ ಸಂಖ್ಯೆ ಕಡಿಮೆಯಿತ್ತು.

2013ರಲ್ಲಿ ಬೈಂದೂರು ವಿಧಾನಸಭಾ ಕ್ಷೇತ್ರ ದಿಂದ 13 ಮಂದಿ ಕಣದಲ್ಲಿದ್ದರು. 6 ಮಂದಿಗೆ ತಲಾ ಒಂದು ಸಾವಿರ ಮತ ಪಡೆಯಲು ಸಾಧ್ಯವಾಗಿರಲಿಲ್ಲ. ಇದರಲ್ಲಿ ಕೇವಲ 334 ಮತ ಪಡೆದವರು ಇದ್ದಾರೆ. ಕುಂದಾಪುರ ದಿಂದ 6 ಮಂದಿ ಸ್ಪರ್ಧಿಸಿದ್ದರು, ಇಬ್ಬರಿಗೆ ತಲಾ ಒಂದು ಸಾವಿರ ಮತ ಪಡೆಯಲು ಸಾಧ್ಯವಾಗಿರಲಿಲ್ಲ.

Advertisement

ಉಡುಪಿಯಲ್ಲಿ 7 ಮಂದಿ ಕಣದಲ್ಲಿದ್ದರು. ಅದರಲ್ಲಿ ಮೂವರಿಗೆ ತಲಾ ಒಂದು ಸಾವಿರ ಮತ ಸಿಕ್ಕಿಲ್ಲ. ಕಾಪುವಿನಲ್ಲಿ 11 ಮಂದಿ ಸ್ಪರ್ಧೆ ಮಾಡಿದ್ದರು. ಅದರಲ್ಲೊಬ್ಬರು 162, ಇನ್ನೊಬ್ಬರು 2078, ಮತ್ತೂಬ್ಬರು 249 ಹಾಗೂ ಮಗದೊಬ್ಬರು 269 ಮತ ಪಡೆದಿದ್ದರು. ಇನ್ನೊಬ್ಬರು 467 ಮತ ಪಡೆದಿದ್ದರು. ಕಾರ್ಕಳ ಕ್ಷೇತ್ರದಿಂದ ಸ್ಪರ್ಧಿಸಿದ್ದ 9 ಮಂದಿಯಲ್ಲಿ ಆರು ಮಂದಿಗೆ ತಲಾ 1 ಸಾವಿರ ಮತ ಪಡೆಯಲು ಸಾಧ್ಯವಾಗಿರಲಿಲ್ಲ. ಇದರಲ್ಲಿ 232, 334, 478, 553 ಮತ ಪಡೆದವರು ಇದ್ದಾರೆ.

2018ರಲ್ಲಿ ಬೈಂದೂರಿನಿಂದ 10 ಮಂದಿ ಸ್ಪರ್ಧಿಸಿದ್ದರು. ರಾಷ್ಟ್ರೀಯ ಪಕ್ಷದ ಇಬ್ಬರು ಹೊರತುಪಡಿಸಿ ಉಳಿದವರ್ಯಾರಿಗೂ ತಲಾ 2500ಕ್ಕಿಂತ ಹೆಚ್ಚು ಮತಸಿಕ್ಕಿರಲಿಲ್ಲ. 297, 401,666, 783 ಮತ ಪಡೆದವರು ಇದ್ದರು. ಕುಂದಾಪುರದಿಂದ ಕಣಕ್ಕೆ ಇಳಿದಿದ್ದ 6 ಮಂದಿಯಲ್ಲಿ ನಾಲ್ವರಿಗೆ ತಲಾ 3000 ಸಾವಿರ ಮತವೂ ಬಂದಿರಲಿಲ್ಲ. ಉಡುಪಿ ಕ್ಷೇತ್ರದಿಂದ 9 ಮಂದಿ ಸ್ಪರ್ಧಿಸಿದ್ದು, 7 ಮಂದಿಗೆ ತಲಾ 1400 ಮತವೂ ಸಿಕ್ಕಿರಲಿಲ್ಲ. 321, 386, 394, 401, 605 ಮತಕ್ಕೆ ತೃಪ್ತಿ ಪಟ್ಟವರು ಇದ್ದಾರೆ. ಕಾಪುವಿನಿಂದ 6 ಮಂದಿ ಸ್ಪರ್ಧಿಸಿದ್ದು, 4 ಮಂದಿಗೆ ತಲಾ 1700ಕ್ಕಿಂತ ಧಿಕ ಮತ ಸಿಕ್ಕಿರಲಿಲ್ಲ. ಇನ್ನು ಕಾರ್ಕಳದಲ್ಲಿ ಸ್ಪರ್ಧೆಯಲ್ಲಿದ್ದ 8 ಮಂದಿಯಲ್ಲಿ 6 ಮಂದಿಗೆ ತಲಾ 1900ಕ್ಕಿಂತ ಅಧಿಕ ಮತ ಬಂದಿರಲಿಲ್ಲ.

ಒಂದೇ ಹೆಸರಿನವರೂ ಇರುತ್ತಾರೆ
ಕೆಲವು ಮತ ಕ್ಷೇತ್ರದಲ್ಲಿ ರಾಷ್ಟ್ರೀಯ ಪಕ್ಷದ ಅಭ್ಯರ್ಥಿಯ ಹೆಸರಿನವರೇ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆಗೆ ಇಳಿಯುವುದು ಉಂಟು. ಇದರಿಂದ ಕೆಲವು ಮತದಾರರು ತಪ್ಪಿ ಪಕ್ಷೇತರ ಅಭ್ಯರ್ಥಿಗೆ ಮತ ಚಲಾಯಿಸುವುದು ಸಾಮಾನ್ಯ. ಕೆಲವರು ಮತ ಪಡೆಯಲು ಈ ತಂತ್ರವನ್ನು ಬಳಸುವುದು ಹೊಸತೇನಲ್ಲ. ಆದರೆ ಕರಾವಳಿ ಯಲ್ಲಿ ಈ ತಂತ್ರ ಫ‌ಲಿಸುವುದು ತೀರ ಕಡಿಮೆ.

*ರಾಜು ಖಾರ್ವಿ ಕೊಡೇರಿ

Advertisement

Udayavani is now on Telegram. Click here to join our channel and stay updated with the latest news.

Next