ಬೆಂಗಳೂರು: ಕಾಂಗ್ರೆಸ್ ಮುಖಂಡರ ಮನೆ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಐಟಿ ಅಧಿಕಾರಿಗಳ ಮನೆ ಮೇಲೆ ಎಸಿಬಿ ದಾಳಿ ನಡೆಸಲು ರಾಜ್ಯ ಸರ್ಕಾರ ಸಿದ್ಧತೆ ನಡೆಸಿದ್ದು ಈ ಬಗ್ಗೆ ಐಟಿ ಡಿಜಿ ಬಾಲಕೃಷ್ಣನ್ ಅವರು ಡಿಜಿಪಿ ಆರ್ ಕೆ ದತ್ತಾ ಅವರಿಗೆ ಪತ್ರ ಬರೆದು ಅಸಮಾಧಾನ ವ್ಯಕ್ತಪಡಿಸಿರುವುದಾಗಿ ಮಾಧ್ಯಮಗಳ ವರದಿ ತಿಳಿಸಿದೆ.
ಐಟಿ ಅಧಿಕಾರಿಗಳ ನಿವಾಸಗಳ ಮೇಲೆ ಎಸಿಬಿ ಮೂಲಕ ದಾಳಿ ನಡೆಸುವ ಕುರಿತು ಸಭೆ ನಡೆದಿರುವ ಬಗ್ಗೆ ಮಾಹಿತಿ ಬಂದಿರುವುದಾಗಿ ಐಟಿ ಡಿಜಿ ಬಾಲಕೃಷ್ಣನ್ ಅವರು ಡಿಜಿಪಿಗೆ ಬರೆದಿರುವ ಪತ್ರದಲ್ಲಿ ಉಲ್ಲೇಖಿಸಿದ್ದಾರೆನ್ನಲಾಗಿದೆ. ಐಟಿ ಅಧಿಕಾರಿಗಳ ಮೇಲೆ ದಾಳಿ ನಡೆಸಲು ಎಸಿಬಿಗೆ ಅಧಿಕಾರಿಗಳಿಗೆ ಅಧಿಕಾರ ಇಲ್ಲ. ಅಧಿಕಾರಿಗಳ ಮೇಲೆ ದೂರು ಇದ್ರೆ ಸಿಬಿಐಗೆ ದೂರು ಕೊಡಿ ಎಂದು ಐಟಿ ಡಿಜಿ ಪತ್ರದಲ್ಲಿ ತಿಳಿಸಿದ್ದಾರೆ.
ಏತನ್ಮಧ್ಯೆ ರಾಜ್ಯ ಸರ್ಕಾರ ಪತ್ರ ಬಂದಿರೋದು ನಿಜ. ಆದರೆ ಎಸಿಬಿಯನ್ನು ದುರ್ಬಳಕೆ ಮಾಡಿಕೊಂಡಿಲ್ಲ ಎಂದು ರಾಜ್ಯ ಸರ್ಕಾರ ಪ್ರತಿಕ್ರಿಯೆ ನೀಡಿದೆ.
ಪತ್ರ ಬಂದಿರೋದು ನಿಜ: ಗೃಹ ಸಚಿವ ರಾಮಲಿಂಗಾರೆಡ್ಡಿ
ಐಟಿ ಡಿಜಿ ಬಾಲಕೃಷ್ಣನ್ ಅವರಿಂದ 20 ದಿನಗಳ ಹಿಂದೆ ಪತ್ರ ಬಂದಿರೋದು ನಿಜ ಎಂದು ಗೃಹ ಸಚಿವ ರಾಮಲಿಂಗಾ ರೆಡ್ಡಿ ಅವರು ಐಟಿ ಅಧಿಕಾರಿಗಳ ಮೇಲೆ ಎಸಿಬಿ ದಾಳಿ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ್ದಾರೆ. ಆದರೆ ಅದು ಕೇವಲ ಊಹೆಯಲ್ಲಿ ಬರೆದ ಪತ್ರವಾಗಿತ್ತು. ನಾವು ಐಟಿ ಅಧಿಕಾರಿಗಳ ಮೇಲೆ ದಾಳಿ ನಡೆಸುವ ಸಿದ್ಧತೆ ನಡೆಸಿರಲಿಲ್ಲವಾಗಿತ್ತು. ರಾಜ್ಯ ಸರ್ಕಾರ ಎಸಿಬಿಯನ್ನು ದುರ್ಬಳಕೆ ಮಾಡಿಕೊಂಡಿಲ್ಲ, ಬಿಜೆಪಿ ಐಟಿ ಇಲಾಖೆಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಹೇಳಿದರು.
ವಿಚಾರಣೆ ಮಾಡೋದ್ರಲ್ಲಿ ತಪ್ಪೇನಿದೆ?ಟಿಬಿ ಜಯಚಂದ್ರ
ಐಟಿ ಅಧಿಕಾರಿಗಳ ಮೇಲೆ ಎಸಿಬಿ ದಾಳಿ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಕಾನೂನು ಸಚಿವ ಟಿಬಿ ಜಯಚಂದ್ರ, ವಿಚಾರಣೆ ಮಾಡೋದರಲ್ಲಿ ತಪ್ಪೇನಿದೆ. ಕಾನೂನಿನ ಅಡಿಯಲ್ಲಿ ಎಸಿಬಿ ಪ್ರಕರಣಗಳ ತನಿಖೆ ನಡೆಸುತ್ತೆ. ಎಸಿಬಿಯನ್ನು ಸರ್ಕಾರ ದುರುಪಯೋಗ ಮಾಡಿಕೊಂಡಿಲ್ಲ ಎಂದು ತಿಳಿಸಿದರು.