Advertisement

Karnataka; ಮಗ್ಗಗಳಿಗೆ 250 ಯುನಿಟ್ ವಿದ್ಯುತ್ ಉಚಿತ: ಸಚಿವ ಶಿವಾನಂದ ಪಾಟೀಲ್

07:52 PM Oct 21, 2023 | Team Udayavani |

ವಿಜಯಪುರ : ರಾಜ್ಯದ ನೇಕಾರರಿಗೆ ನಮ್ಮ ಸರ್ಕಾರ ದಸರಾ-ದೀಪಾವಳಿ ಉಡುಗೊರೆ ನೀಡಿದೆ. 10 ಎಚ್.ಪಿ. ಮಗ್ಗ ಹಾಗೂ ಮಗ್ಗ ಪೂರ್ವ ಕೇಂದ್ರಗಳಿಗೆ 250 ಯುನಿಟ್ ವಿದ್ಯುತ್ ಉಚಿತವಾಗಿ ನೀಡುವ ಕುರಿತು ಸರ್ಕಾರ ಆದೇಶ ಹೊರಡಿಸಿದೆ ಎಂದು ಜವಳಿ- ಸಕ್ಕರೆ ಸಚಿವ ಶಿವಾನಂದ ಪಾಟೀಲ ಹೇಳಿದರು.

Advertisement

ಶನಿವಾರ ನಗರದಲ್ಲಿ ಪತ್ರಿಕಾಗೋಷ್ಠಿ ಯಲ್ಲಿ ಮಾತನಾಡಿದ ಅವರು, ಚುನಾವಣೆ ಪ್ರಣಾಳಿಕೆಯಲ್ಲಿ ನೀಡಿದ ಭರವಸೆ ಈಡೇರಿಸಲು ಕಾಂಗ್ರೆಸ್ ಪಕ್ಷದ ನಮ್ಮ ಸರ್ಕಾರ ಬದ್ಧತೆ ತೋರಿದೆ. ಸರ್ಕಾರದ ಈ ಸೌಲಭ್ಯದಿಂದ ರಾಜ್ಯದ ನೇಕಾರರ ಆರ್ಥಿಕ ಉನ್ನತೀಕರಣ ಹಾಗೂ ಸ್ವಾವಲಂಬಿ ಜೀವನಕ್ಕೆ ಸಹಕಾರಿಯಾಗಲಿದೆ ಎಂದರು.

ಯೋಜನೆ ಅನುಷ್ಠಾನದಿಂದ ರಾಜ್ಯದ ಸುಮಾರು 45 ಸಾವಿರ ನೇಕಾರ ಕುಟುಂಬಗಳಿಗೆ ಅನುಕೂಲ ಆಗಲಿದೆ.ಸರ್ಕಾರದ ಈ ನಿರ್ಧಾರ ಆದೇಶವಾಗಿ ಹೊರಡಿಸಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಮಸ್ತ ನೇಕಾರರು ಹಾಗೂ ಇಲಾಖೆ ಪರವಾಗಿ ಕೃತಜ್ಞತೆ ಸಲ್ಲಿಸುವುದಾಗಿ ಹೇಳಿದರು.

ಇಲ್ಲದೆ 20 ಎಚ್‍ಪಿ ವರೆಗಿನ ವಿದ್ಯುತ್ ಮಗ್ಗ ಹಾಗೂ ಪೂರ್ವ ಘಟಕಗಳಿಗೆ ಮಾಸಿಕ 500 ಯುನಿಟ್ ವರೆಗೆ 1.25 ರೂ. ದರದಲ್ಲಿ ವಿದ್ಯುತ್ ಒದಗಿಸಲು ಕೂಡ ಆದೇಶಿಸಲಾಗಿದೆ. ಇದರಿಂದ ದೊಡ್ಡ ನೇಕಾರರಿಗೂ ಅನುಕೂಲ ಆಗಲಿದೆ. ಶೇ.80 ನೇಕಾರರು 10 ಎಚ್‍ಪಿ ವರೆಗಿನ ಮಗ್ಗ ಹೊಂದಿದ್ದು, ಅವರಿಗೆ ಯೋಜನೆಯಿಂದ ಹೆಚ್ಚಿನ ಅನುಕೂಲವಾಗಲಿದೆ ಎಂದರು.

ಸರ್ಕಾರದ ನೇಕಾರರಿಗೆ ಉಚಿತ ವಿದ್ಯುತ್ ಯೋಜನೆ ಜಾರಿಯಿಂದ ಸರ್ಕಾರಕ್ಕೆ ಸುಮಾರು 140 ಕೋಟಿ ರೂ. ವರೆಗೂ ಆಗಬಹುದು ಎಂದರು.

Advertisement

ರಬಕವಿ,ಬನಹಟ್ಟಿ , ಚಿಕ್ಕಬಳ್ಳಾಪುರ ನೇಕಾರರು ಉಚಿತ ವಿದ್ಯುತ್ ಪೂರೈಕೆ ಬಗ್ಗೆ ಒತ್ತಾಯ ಮಾಡಿದ್ದರು. ಅವರ ಬೇಡಿಕೆಯನ್ನು ಅನುಷ್ಠಾನಕ್ಕೆ ತರುತ್ತಿದೆ. ಸದರಿ ಯೋಜನೆ ಜಾರಿಯಿಂದ ರಾಜ್ಯದಲ್ಲಿ ವಿದ್ಯುತ್ ಸಮಸ್ಯೆ ಇದ್ದರೂ ಸಕ್ಕರೆ ಕಾರ್ಖಾನೆಗಳು ಕಬ್ಬು ನುರಿಸುವ ಕೆಲಸ ಆರಂಭಿಸಿದರೆ ಸಮಸ್ಯೆಗೆ ಪರಿಹಾರ ಸಿಗುತ್ತದೆ. ಸಕ್ಕರೆ ಕಾರ್ಖಾನೆಗಳಿಂದ ಕೋಜೆನ್‍ ಮೂಲಕ 800-1000 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಯಾದರೆ ಅದರಿಂದ ವಿದ್ಯುತ್ ಸಮಸ್ಯೆಗೆ ಒಂದಿಷ್ಟು ಪರಿಹಾರವೂ ಸಿಗಲಿದೆ ಎಂದು ಉತ್ತರಿಸಿದರು.

25 ರಿಂದ ಸಕ್ಕರೆ ಕಾರ್ಖಾನೆಗಳು ಆರಂಭ
ರಾಜ್ಯದಲ್ಲಿ ಸಕ್ಕರೆ ಕಾರ್ಖಾನೆಗಳು ಅ.25 ರಿಂದ ಕಬ್ಬು ನುರಿಸುವ ಕಾರ್ಯ ಆರಂಭಿಸಲಿವೆ ಎಂದು ಸಚಿವ ಶಿವಾನಂದ ಪಾಟೀಲ ಹೇಳಿದರು.

ಈ ಹಿಂದೆ ಸಕ್ಕರೆ ಕಾರ್ಖಾನೆಯುವರು ಮನಸ್ಸಿಗೆ ಬಂದಂತೆ ಕಬ್ಬು ನುರಿಸುವುದನ್ನು ಆರಂಭಿಸುತ್ತಿದ್ದರು. ಅಲ್ಲದೆ ಬೇರೆ ಕಾರ್ಖಾನೆ ವ್ಯಾಪ್ತಿಯ ಕಬ್ಬು ಪಡೆದುಕೊಳ್ಳುತ್ತಿದ್ದರು. ಆದರೆ ಈ ವರ್ಷ ಎಲ್ಲ ಕಾರ್ಖಾನೆಯವರು ಒಟ್ಟಿಗೆ ಕಬ್ಬು ನುರಿಸುವ ಕಾರ್ಯ ಆರಂಭಿಸುತ್ತಿದ್ದಾರೆ ಎಂದು ತಿಳಿಸಿದರು.

ಸಾಮಾನ್ಯವಾಗಿ ನವೆಂಬರ್‍ನಲ್ಲಿ ಕಟಾವಿಗೆ ಬರುವ ಕಬ್ಬಿನಲ್ಲಿ ಸಕ್ಕರೆ ಪ್ರಮಾಣ ಹೆಚ್ಚಿರುತ್ತದೆ. ಹೀಗಾಗಿ ಕಬ್ಬು  ನುರಿಸುವ ಹಂಗಾಮನ್ನು ನ.1ರಿಂದ ಆರಂಭಿಸಲು ಸರಕಾರದ ಆದೇಶವಾಗಿತ್ತು. ಆದರೆ ಪ್ರಸಕ್ತ ಸಾಲಿನಲ್ಲಿ ಕಬ್ಬು  ನೀರಿಲ್ಲದೆ ಕಬ್ಬು ಒಣಗುತ್ತಿದ್ದು ಬೇಗ ಕಾರ್ಖಾನೆ ಆರಂಭಿಸುವಂತೆ ರೈತರು ಮನವಿ ಮಾಡಿದ್ದರು. ಹೀಗಾಗಿ ಅ.25 ರ ನಂತರ ಕಬ್ಬು ನುರಿಸುವ ಕಾರ್ಯಾರಂಭಿಸಲು ಮರು ಆದೇಶ ಮಾಡಲಾಗಿದೆ ಎಂದು ಹೇಳಿದರು.

ರಾಜ್ಯ ಮಟ್ಟದ ಸಹಕಾರಿ ಸಪ್ತಾಹ ಸಮಾರೋಪ

ರಾಜ್ಯ ಮಟ್ಟದ ಸಹಕಾರಿ ಸಪ್ತಾಹದ ಕೊನೆಯ ಕಾರ್ಯಕ್ರಮ ನ.20 ರಂದು ವಿಜಯಪುರದ ಡಿಸಿಸಿ ಬ್ಯಾಂಕ್ ಆವರಣದಲ್ಲಿ ನಡೆಯಲಿದೆ ಎಂದು ಸಚಿವ ಪಾಟೀಲ ತಿಳಿಸಿದರು.

ಸಹಕಾರಿ ಸಪ್ತಾಹದ ಸಮಾರೋಪದ ಹೊಣೆಯನ್ನು‌ ನಗರದಲ್ಲಿ ಆಯೋಜಿಸಲು ವಿಜಯಪುರ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ವಹಿಸುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ, ಸಹಕಾರಿ ಸಚಿವರು ಸೇರಿದಂತೆ ರಾಜ್ಯದ ಸಹಕಾರಿಗಳು ಭಾಗವಹಿಸಲಿದ್ದಾರೆ. ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರಿಗೂ ಆಹ್ವಾನ ನೀಡಲಾಗುತ್ತಿದೆ. ಬರ ಹಿನ್ನಲೆಯಲ್ಲಿ ಅದ್ಧೂರಿ ಕಾರ್ಯಕ್ರಮ ಇರದು. ಸಹಕಾರಿ ರಂಗದಲ್ಲಿ ದುಡಿದವರಿಗೆ ಸಹಕಾರಿ ರತ್ನ ಪ್ರಶಸ್ತಿ ಪ್ರದಾನ ನಡೆಯಲಿದೆ.ಕಾರ್ಯಕ್ರಮಕ್ಕೆ ವಿಜಯಪುರ- ಬಾಗಲಕೋಟೆ ಜಿಲ್ಲೆ ಎಲ್ಲ ಸಹಕಾರಿಗಳು ಸ್ವಯಂ ಪ್ರೇರಣೆಯಿಂದ ಭಾಗವಹಿಸಬೇಕೆಂದು ಮನವಿ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next