Advertisement

ನಿಜಾಮುದ್ದೀನ್‌ ಜಮಾತ್‌ ಧಾರ್ಮಿಕ ಸಭೆಯಲ್ಲಿ ಪಾಲ್ಗೊಂಡವರ ಮೇಲೆ ರಾಜ್ಯ ಪೊಲೀಸರ ಹದ್ದಿನ ಕಣ್ಣು

06:49 PM Apr 02, 2020 | Hari Prasad |

ಬೆಂಗಳೂರು: ದಿಲ್ಲಿಯ ನಿಜಾಮುದ್ದೀನ್‌ ಜಮಾತ್‌ ಧಾರ್ಮಿಕ ಸಭೆಯಲ್ಲಿ ರಾಜ್ಯದಿಂದ ಪಾಲ್ಗೊಂಡಿದ್ದವರ ಬಗ್ಗೆ ವಿವರ ಕಲೆ ಹಾಕಲಾಗುತ್ತಿದ್ದು, ಅವರಲ್ಲಿ ಕೋವಿಡ್ 19 ವೈರಸ್ ಸೋಂಕಿತರು ಮತ್ತು ಶಂಕಿತರ ಮೇಲೆ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದಾರೆ.

Advertisement

ದಿಲ್ಲಿಯ ಧಾರ್ಮಿಕ ಸಭೆಯಲ್ಲಿ ಭಾಗಿಯಾಗಿದ್ದ ಮುಖಂಡರು, ತಮ್ಮ ಜಿಲ್ಲೆಗಳ ಸಹಿತ ರಾಜ್ಯದ 24 ಜಿಲ್ಲೆಗಳಲ್ಲಿ ಸಂಚರಿಸಿ, ಧಾರ್ಮಿಕ ಸಭೆಯ ಮಹತ್ವ ಸಾರಿದ್ದಾರೆ. ಹೀಗಾಗಿ ಈ ಎಲ್ಲ ಭಾಗದಲ್ಲಿ ಕೊರೊನಾ ಸೋಂಕು ಹರಡಿರುವ ಸಾಧ್ಯತೆಯಿದ್ದು, ಕೆಲವರು ಪೊಲೀಸರಿಗೆ ಹೆದರಿ ತಲೆಮರೆಸಿಕೊಂಡಿದ್ದಾರೆ. ಅವರಿಗಾಗಿ ಹುಡುಕಾಟ ನಡೆಯುತ್ತಿದೆ ಎಂದು ಪೊಲೀಸ್‌ ಮೂಲಗಳು ಖಚಿತಪಡಿಸಿವೆ.

ದಿಲ್ಲಿಯ ನಿಜಾಮುದ್ದೀನ್‌ ಮರ್ಕಾಜ್‌ ಬಳಿ ನಡೆದ ತಬ್ಲಿಕ್‌-ಎ- ಜಮಾತ್‌ ಕಾರ್ಯಕ್ರಮದಲ್ಲಿ ರಾಜ್ಯದ 13ಕ್ಕೂ ಅಧಿಕ ಜಿಲ್ಲೆಗಳಿಂದ ಸಮುದಾಯದ ಮುಖಂಡರ ಸಹಿತ ಸುಮಾರು 1,500 ಮಂದಿ ಪಾಲ್ಗೊಂಡಿರುವ ಮಾಹಿತಿ ಸಿಕ್ಕಿದೆ. ಅವರಲ್ಲಿ ಅನೇಕರು ಕೊರೊನಾ ಸೋಂಕಿಗೆ ಒಳಗಾಗಿದ್ದಾರೆ ಅಥವಾ ಸೋಂಕಿನ ಸಾಧ್ಯತೆ ಹೆಚ್ಚಿದೆ ಎಂಬ ವಿಚಾರ ಬೆಳಕಿಗೆ ಬಂದಿದೆ.

ಬೆಳಗಾವಿಯಿಂದ 65, ಮೈಸೂರು 40, ದಕ್ಷಿಣಕನ್ನಡ, ಉಡುಪಿಯಿಂದ ಒಟ್ಟು 40, ಬೆಂಗಳೂರಿನಿಂದ 45ಕ್ಕೂ ಅಧಿಕ ಮಂದಿ ಪಾಲ್ಗೊಂಡಿದ್ದಾರೆ. ಇನ್ನುಳಿದ ಜಿಲ್ಲೆಗಳ ಮಾಹಿತಿ ಪಡೆಯುತ್ತಿದ್ದೇವೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಮಾರ್ಚ್‌ನಲ್ಲಿ ನಿಜಾಮುದ್ದೀನ್‌ ಮಸೀದಿಯಲ್ಲಿ ನಡೆದ ಧಾರ್ಮಿಕ ಸಭೆಗೆ ಕರ್ನಾಟಕದ 1,500 ಮಂದಿ ದಿಲ್ಲಿಗೆ ಹೋಗಿದ್ದಾರೆ ಎನ್ನುವುದು ಇದುವರೆಗಿನ ಮಾಹಿತಿ. ಈಗಾಗಲೇ 200 ಮಂದಿ ಕೋವಿಡ್ 19 ವೈರಸ್ ಶಂಕಿತರನ್ನು ಆಸ್ಪತ್ರೆಯಲ್ಲಿ ಕ್ವಾರಂಟೈನ್‌ ಮಾಡಲಾಗಿದೆ, ಉಳಿದವರನ್ನು ಹೋಮ್‌ ಕ್ವಾರಂಟೈನ್‌ ಮಾಡಲಾಗುತ್ತಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

Advertisement

ಪರಾಮರ್ಶೆಯ ಪ್ರಶ್ನೆಯೇ ಇಲ್ಲ: ಬೊಮ್ಮಾಯಿ
ಕೇರಳದಿಂದ ರಾಜ್ಯ ಸಂಪರ್ಕಿಸುವ 23 ರಸ್ತೆಗಳನ್ನು ಬಂದ್‌ ಮಾಡಲಾಗಿದೆ. ಕಾನೂನಿನ ಅಡಿಯಲ್ಲೇ ಕೇರಳ ಗಡಿ ಬಂದ್‌ ಮಾಡಿದ್ದೇವೆ. ಗಡಿ ಜಿಲ್ಲೆಗಳ ಜನರ ಆರೋಗ್ಯದ ದೃಷ್ಟಿಯಿಂದ ಈ ತೀರ್ಮಾನವನ್ನು ಕೈಗೊಳ್ಳಲಾಗಿದೆ. ಯಾವುದೇ ಕಾರಣಕ್ಕೂ ಈ ನಿರ್ಧಾರದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ಈ ಬಗ್ಗೆ ಕೇರಳ ಹೈಕೋರ್ಟ್‌ಗೆ ಮನವರಿಕೆ ಮಾಡಿಕೊಡಲಾಗುವುದು ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಿದ್ದಾರೆ.

ಸಾಮೂಹಿಕ ನಮಾಜ್‌ಗೆ ನಿರ್ಬಂಧ: ಪ್ರಭು ಚವ್ಹಾಣ್‌
ಕೋವಿಡ್ 19 ವೈರಸ್ ಸೋಂಕು ಹರಡುವ ಭೀತಿಯಿಂದ ದೇಶವನ್ನು ಸಂಪೂರ್ಣವಾಗಿ ಲಾಕ್‌ಡೌನ್‌ ಮಾಡಲಾಗಿದ್ದು, ಎ. 14ರವರೆಗೆ ಸಾಮೂಹಿಕ ಪ್ರಾರ್ಥನೆಗೆ ನಿರ್ಬಂಧ ಹೇರಲಾಗಿದೆ ಎಂದು ಪಶುಸಂಗೋಪನೆ, ಹಜ್‌ ಮತ್ತು ವಕ್ಫ್ ಸಚಿವ ಪ್ರಭು ಚವ್ಹಾಣ್‌ ತಿಳಿಸಿದ್ದಾರೆ.

ಇತ್ತೀಚೆಗೆ ಮಸೀದಿಗಳಲ್ಲಿ ನಮಾಜ್‌ ಮಾಡುತ್ತಿರುವುದು ಮಾಧ್ಯಮಗಳ ಮೂಲಕ ಕಂಡು ಬಂದಿರುತ್ತದೆ. ಈ ಹಿನ್ನೆಲೆಯಲ್ಲಿ ರಾಜ್ಯ ವಕ್ಫ್ ಮಂಡಳಿಯ ಅಧಿಕಾರಿಗಳು ಮತ್ತು ಕಾರ್ಯದರ್ಶಿಯವರೊಂದಿಗೆ ಚರ್ಚಿಸಿ ಕ್ರಮಕೈಗೊಳ್ಳಲು ಸೂಚಿಸಲಾಗಿದೆ.

ಮುಂದಿನ ಆದೇಶ ಬರುವವರೆಗೆ ಮನೆಗಳಲ್ಲಿ ನಮಾಜ್‌ ಮಾಡಲು ತಿಳಿಸಲಾಗಿದೆ. ಯಾವುದೇ ಕಾರಣಕ್ಕೂ ನೆರೆ ಹೊರೆಯವರೊಂದಿಗೆ ಸೇರಿ ನಮಾಜ್‌ ಮಾಡಲು ಅವಕಾಶ ಇರುವುದಿಲ್ಲ. ಆದೇಶವನ್ನು ಉಲ್ಲಂಘಿಸಿ ಸಾಮೂಹಿಕವಾಗಿ ನಮಾಜ್‌ ಮಾಡುವುದು ಕಂಡುಬಂದಲ್ಲಿ ಆಯೋಜಕರ ವಿರುದ್ಧ ಕ್ರಮಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next