ಬೆಂಗಳೂರು: ತೋಟಗಾರಿಕಾ ಕ್ಷೇತ್ರದಲ್ಲಿ ಕರ್ನಾಟಕ ಮುಂಚೂಣಿಯಲ್ಲಿದ್ದು, ತೋಟಗಾರಿಕಾ ಬೆಳೆಗಳ ಸಂಶೋಧನೆ ನಡೆಸುವ ದೇಶದ ಪ್ರಮುಖ ಸಂಸ್ಥೆಗಳಲ್ಲಿ ಬೆಂಗಳೂರಿನ ಐಸಿಎಆರ್ -ಐಐಎಚ್‌ಆರ್ ಸಹ ಒಂದಾಗಿದೆ ಎಂದು ರಾಜ್ಯಪಾಲ ಥಾವರ್ ಚಂದ್ ಗೆಹಲೋತ್ ಶ್ಲಾ ಸಿದರು.
ಹೆಸರುಘಟ್ಟದಲ್ಲಿರುವ ಬೆಂಗಳೂರಿನ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ(ಐಐಎಚ್‌ಆರ್) ಹಮ್ಮಿಕೊಂಡಿದ್ದ “ವಿದೇಶಿ ಮತ್ತು ಕಡಿಮೆ ಬಳಕೆಯ ತೋಟಗಾರಿಕಾ ಬೆಳೆಗಳು : ಆದ್ಯತೆಗಳು ಮತ್ತು ಉದಯೋನ್ಮುಖ ಪ್ರವೃತ್ತಿ’ಗಳ ಕುರಿತ ಅಂತಾರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.
ಕರ್ನಾಟಕ ರಾಜ್ಯವು ನಾಟಿ ಬೆಳೆಗಳ ಪ್ರದೇಶದಲ್ಲಿ ದೇಶದಲ್ಲೇ ಮೊದಲ ಸ್ಥಾನದಲ್ಲಿದೆ. ಇದು ಹಣ್ಣುಗಳು ಮತ್ತು ಮಸಾಲೆಗಳ ಕೃಷಿಯಲ್ಲಿ ಐದನೇ ಸ್ಥಾನದಲ್ಲಿದೆ. ಹೂವಿನ ವ್ಯಾಪಾರದಲ್ಲಿ ಆರನೇ ಸ್ಥಾನದಲ್ಲಿದೆ. ತೋಟಗಾರಿಕಾ ಕ್ಷೇತ್ರಕ್ಕೆ ವಾರ್ಷಿಕವಾಗಿ 30 ಸಾವಿರ ಕೋಟಿ ರೂ.ಗೂ ಹೆಚ್ಚು ಕೊಡುಗೆ ನೀಡುತ್ತಿರುವುದನ್ನು ತಿಳಿದು ಸಂತೋಷವಾಗಿದೆ ಎಂದು ಹೇಳಿದರು.
ಈ ಸಂಸ್ಥೆಯಲ್ಲಿ 54 ತೋಟಗಾರಿಕಾ ಬೆಳೆಗಳ ಮೇಲೆ ಸಂಶೋಧನಾ ಕಾರ್ಯ ಮಾಡಲಾಗುತ್ತಿದೆ. ಇದುವರೆಗೆ 300ಕ್ಕೂ ಹೆಚ್ಚು ಪ್ರಭೇದಗಳು ಮತ್ತು ಮಿಶ್ರತಳಿಗಳನ್ನು ಅಭಿವೃದ್ಧಿಪಡಿಸಲಾಗಿದೆ. ಈ ಸಂಸ್ಥೆಯಲ್ಲಿ ಡ್ರ್ಯಾಗನ್ ಹಣ್ಣು, ಆವಕಾಡೊ, ಮ್ಯಾಂಗೋಸ್ಟೀನ್, ರಂಬುಟಾನ್‌ಗಳ ಕುರಿತು ಸಂಶೋಧನಾ ಕಾರ್ಯ ಮಾಡಲಾಗುತ್ತಿದೆ. ಇತ್ತೀಚೆಗೆ ಡ್ರ್ಯಾಗನ್ ಫೂ›ಟ್‌ನ ಶ್ರೇಷ್ಠತೆಯ ಕೇಂದ್ರವನ್ನು ಸಹ ಉದ್ಘಾಟಿಸಲಾಗಿದೆ ಎಂದರು.
ಐಸಿಎಆರ್‌ನ ಮಾಜಿ ಡಿಡಿಜಿ ಡಾ.ಎನ್.ಕೆ.ಕೃಷ್ಣ ಕುಮಾರ್, ಐಸಿಎಆರ್ ತೋಟಗಾರಿಕೆ ಎಡಿಜಿ ಡಾ.ವಿ.ಬಿ.ಪಟೇಲ್, ಅಲಯನ್ಸ್ ಆಫ್ ಬಯೋಡೈವರ್ಸಿಟಿ ಇಂಟರ್‌ನ್ಯಾಷನಲ್‌ನ ಡಾ.ಜೆ.ಸಿ.ರಾಣಾ, ಐಸಿಎಆರ್-ಐಐಎಚ್‌ಆರ್ ನಿರ್ದೇಶಕ ಪೊ›.ಎಸ್.ಕೆ.ಸಿಂಗ್ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
400 ಪ್ರತಿನಿಧಿಗಳು ಭಾಗಿ:
ಅಮೆರಿಕ, ಆಸ್ಟ್ರೇಲಿಯಾ, ಯುಕೆ, ಇಸ್ರೇಲ್, ಮಲೇಷ್ಯಾ, ಮೆಕ್ಸಿಕೊ, ಕೊರಿಯಾ ಮತ್ತು ಜಾಂಬಿಯಾ ದೇಶಗಳ ಪ್ರತಿನಿಧಿಗಳು ಸೇರಿದಂತೆ ಒಟ್ಟು 400 ಪ್ರತಿನಿಧಿಗಳು ಸೆಮಿನಾರ್‌ನಲ್ಲಿ ಭಾಗವಹಿಸಲಿದ್ದಾರೆ. ಆನುವಂಶಿಕ ಸುಧಾರಣೆ, ಉತ್ಪಾದನೆ ನಿರ್ವಹಣೆ, ನಂತರದ ಕೊಯ್ಲು ನಿರ್ವಹಣೆ, ನ್ಯೂಟ್ರಾಸ್ಯುಟಿಕಲ್ಸ್ ಹಣ್ಣುಗಳು, ಹೂವುಗಳು, ಔಷಧೀಯ, ಸುಗಂಧ ಮತ್ತು ಮಸಾಲೆ ಬೆಳೆ ಸೇರಿದಂತೆ ವಿವಿಧ ವಿಷಯಗಳ ಕುರಿತು ಚರ್ಚಿಸಲಾಗುವುದು.